ಗೃಹಲಕ್ಷ್ಮೀ ಯೋಜನೆಗೆ ನಾಳೆ ಚಾಲನೆ

3 years ago

Grilahakshmi Yojana will be launched tomorrow

ಮೈಸೂರು:  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಗೆ ನಾಳೆ ಚಾಲನೆ ಸಿಗಲಿದೆ.


ಮೈಸೂರಿನ ಮಹಾರಾಜಾ ಕಾಲೇಜು ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯೋಜನೆಗೆ ಚಾಲನೆ ನೀಡಲಿದ್ದು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಾಕ್ಷಿಯಾಗಲಿದ್ದಾರೆ. ಇದೇ ವೇಳೆ ರಾಜ್ಯದ ಎಲ್ಲಾ ಪಂಚಾಯಿತಿಗಳಲ್ಲೂ ಝೂಮ್ ಮೂಲಕ ಆನ್ ಲೈನ್‌ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಮಾಜ ಕಲ್ಯಾಣ ಸಚಿವ ಡಾ.ಮಹಾದೇವಪ್ಪ ನಾಡಿನ ಅಧಿದೇವತೆ ಬೆಟ್ಟದ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮದ ಯಶಸ್ವಿಗೆ ಪ್ರಾರ್ಥಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ 1.10 ಕೋಟಿ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ತಿಳಿಸಿದರು.

ಚುನಾವಣೆಗೂ ಮುನ್ನ ಮೇ 9ರಂದು ಚುನಾವಣೆಯ ಹಿಂದಿನ ದಿನ ನಾನು ಮತ್ತು ಡಿಕೆ ಶಿವಕುಮಾರ್ ಅವರು ಐದು ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಹರಕೆ ಹೊತ್ತಿದ್ದೆವು. ಹಾಗಾಗಿ ಇಂದು ದೇವಿ ಸನ್ನಿಧಾನಕ್ಕೆ ಬಂದು ಹರಕೆ ತೀರಿಸಿದ್ದೇವೆ ಎಂದರು.

ಗ್ಯಾರಂಟಿಗಳನ್ನು ಜಾರಿ ಮಾಡುವುದು  ಸವಾಲು ಎನಿಸಲಿಲ್ಲ. ಆದರೆ ನಮ್ಮ ಸರ್ಕಾರಕ್ಕೆ ಅವುಗಳನ್ನು ಜಾರಿ ಮಾಡಬೇಕೆಂಬ  ಎಂಬ ರಾಜಕೀಯ ಇಚ್ಛಾಶಕ್ತಿ ಇತ್ತು. ವಿಪಕ್ಷಗಳು ಹಾಗೂ ದೇಶದ ಪ್ರಧಾನಿಗಳೇ ಗ್ಯಾರಂಟಿ ಅನುಷ್ಠಾನ ವಾದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದ್ದರು. ಆದರೆ ನಾವು ಯಶಸ್ವಿಯಾಗಿ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆಯಿಂದ ಜನತೆ ಸಂಕಷ್ಟದಲ್ಲಿದ್ದಾರೆ. ಅಗತ್ಯ ವಸ್ತುಗಳು ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಬಡವರ ಬಳಿ ಹಣ ಇದ್ದರೆ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ ಇದಲ್ಲದೆ ಪ್ರಣಾಳಿಕೆಯಲ್ಲಿ ನೀಡಿರುವ 76 ಭರವಸೆಗಳನ್ನು ಜಾರಿ ಮಾಡುತ್ತೇವೆ ಎಂದರು.

ಕೇಂದ್ರ ಸರ್ಕಾರ ಆಹಾರ ಪದಾರ್ಥಗಳ ಬೆಲೆಯೇರಿಕೆ  ಮತ್ತು ಹಣದುಬ್ಬರ ತಡೆಯಲು ವಿಫಲವಾಗಿದೆ. ಸಾಮಾನ್ಯ ಜನರು, ಮಧ್ಯಮ ವರ್ಗದವರು ಮತ್ತು ಬಡ ಕುಟುಂಬದವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಒಂದು ಕುಟುಂಬ ಕ್ಕೆ ತಿಂಗಳಿಗೆ ಕನಿಷ್ಠ 4-6 ಸಾವಿರ ರೂಗಳು ದೊರೆಯಲಿವೆ. ಬಡಬರ ಬಳಿ ಹಣವಿದ್ದರೆ ಮಾತ್ರ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ ಎಂದರು.

ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಜನಪರ ಕಾರ್ಯಕ್ರಮ ಜಾರಿಗೊಳಿಸುತ್ತಿದೆ‌‌‌ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಏನೂ ಮಾಡದೆ ಈಗ ನಮ್ಮನ್ನು ಟೀಕಿಸುತ್ತಾರೆ ಎಂದು ಆಪಾದಿಸಿದರು.

ಸರ್ಕಾರದ ತಪ್ಪುಗಳ ಬಗ್ಗೆ   ಚಾರ್ಜ್ ಶೀಟ್ ತರಲು ಆ ಪಕ್ಷಕ್ಕೆ  ನೈತಿಕ ಹಕ್ಕಿಲ್ಲ.ಅವರ ಸರ್ಕಾರದ ಅವಧಿಯಲ್ಲಿನ ಹಗರಣಗಳ ತನಿಖೆ ಆರಂಭವಾಗುತ್ತಿವೆ ತನಿಖೆ ಕೈಗೊಂಡಿರುವ ಬಗ್ಗೆ ಮೊದಲು ಉತ್ತರಿಸಲಿ ಎಂದು ಸವಾಲು ಹಾಕಿದರು.

ಬಿಜೆಪಿ ಸರ್ಕಾರದ ಹಗರಣಗಳ ತನಿಖೆಯ ಬಗ್ಗೆ ನಾವು ಮೊದಲೇ ಹೇಳಿದ್ದೆವು. ಅಧಿಕಾರಕ್ಕೆ ಬರುವ ಮುನ್ನವೇ ಅವರ ಎಲ್ಲಾ ಹಗರಣಗಳ ಬಗ್ಗೆ ತನಿಖೆ ಮಾಡಿಸುವುದಾಗಿ ಹೇಳಿದ್ದೆವು.ಅದರಂತೆ ಪಿ.ಎಸ್.ಐ ಹಗರಣವನ್ನು ನಿವೃತ್ತ ನ್ಯಾ. ಬಿ.ವೀರಪ್ಪ ಅವರು, 40% ಹಗರಣವನ್ನು ನಿವೃತ್ತ ನ್ಯಾ. ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗ ತನಿಖೆ ಮಾಡಿದ್ದೇವೆ ಕೋವಿಡ್ ಕಾಲದ ಹಗರಣವನ್ನು ನಿವೃತ್ತ ನ್ಯಾ. ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ತನಿಖೆ ನಡೆಯುತ್ತಿದೆ. ಇದರಲ್ಲಿ ದ್ವೇಷ ಎಲ್ಲಿದೆ? ರಾಜ್ಯದ ಜನರ ಹಿತಾಸಕ್ತಿ ಇದರಲ್ಲಿದೆ ಎಂದು ಸಮರ್ಥಿಸಿದರು.

ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಅವರು ಅಧಿಕಾರದಲ್ಲಿದ್ದಾಗ 40 ಪರ್ಸೆಂಟ್ ಗೆ ಒತ್ತಾಯ ಮಾಡಿರಲಿಲ್ಲವೇ? ತನಿಖೆಗೆ ನಾವು ಆಗಲೇ ಒತ್ತಾಯ ಮಾಡಿದ್ದೆವು. ಅಧಿಕಾರಕ್ಕೆ ಬಂದ ನಂತರ ತನಿಖೆಗೆ ಕ್ರಮ ಕೈಗೊಂಡಿದ್ದೇವೆ. ಹಾಗಾದರೆ ಜನರ ದುಡ್ಡನ್ನು  ತಿಂದುಕೊಂಡು ಹೋಗಿ ಎಂದು ಬಿಡಬೇಕಿತ್ತೆ ಎಂದು ಪ್ರಶ್ನಿಸಿದರು.

ವಿರೋಧ ಪಕ್ಷಗಳು ಮುಖ್ಯಮಂತ್ರಿ ಹಾಗೂ  ಉಪಮುಖ್ಯಮಂತ್ರಿಗಳ ಸಂಬಂಧದ ಬಗ್ಗೆಯೇ  ಅನುಮಾನ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಹೇಳಿದಷ್ಟೂ ನಮ್ಮ ಸಂಬಂಧ ಉತ್ತಮಗೊಳ್ಳುತ್ತಿದೆ ಎಂದು ತಿಳಿ ಹೇಳಿದರು.

Leave a Reply