ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸ್ತ್ರೀ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ ಇಟ್ಟಿರುವ “ಗೃಹಲಕ್ಷ್ಮೀ” ಯೋಜನೆಗೆ ಇದೇ ಜುಲೈ 19ರಂದು ಚಾಲನೆ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಯಾವುದೇ ಮಧ್ಯವರ್ತಿಗಳ ಆಮಿಷಕ್ಕೆ ಒಳಗಾಗದೇ ಉಚಿತವಾಗಿ ನೋಂದಣಿ ಮಾಡಿಕೊಳ್ಳಿರಿ’ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಬಾಪೂಜಿ ಕೇಂದ್ರಗಳಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು ಅಥವಾ ಸ್ವಯಂಸೇವಕ ಪ್ರಜಾಪ್ರತಿನಿಧಿಗಳು ಮನೆ ಮನೆಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ನೋಂದಣಿಗೆ ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಡಿತರ ಕಾರ್ಡ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ. ಇನ್ನು ಪತಿಯ ಆಧಾರ್ ಕಾರ್ಡ್ ಕೂಡ ಕಡ್ಡಾಯ ಬೇಕಾಗುತ್ತೆ. ಆಧಾರ್ ಜತೆಗೆ ಮೊಬೈಲ್ ಕೊಂಡೊಯ್ದರೆ ಸಾಕು, ಬೇರೇನೂ ಬೇಡ ಎಂದರು
ಸಹಾಯವಾಣಿ: ಯೋಜನೆಯ ಉಚಿತ ಲಾಭ ಪಡೆದುಕೊಳ್ಳಲು ಸಹಾಯವಾಣಿ 8147500500 ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು SMS ಮಾಡಿ. ಕೂಡಲೇ ಸ್ಥಳ, ಗೊತ್ತುಪಡಿಸಿದ ದಿನಾಂಕ, ಸಮಯ ಸಂದೇಶ ಹೋಗುತ್ತೆ. ಇನ್ನೂ ಗೊಂದಲವಿದ್ದರೆ ಇಲಾಖೆ 1902 ನಂಬರ್ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.
ಯೋಜನೆ ಅನುಷ್ಠಾನಕ್ಕೆ ಇಲಾಖೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಧಿಕಾರಿಗಳು, ಸಿಬ್ಬಂದಿಗೆ ತಳ ಹಂತದಿಂದ ತರಬೇತಿ ಕೊಟ್ಟಿದ್ದೇವೆ. ನಾಡಕಚೇರಿ, ಗ್ರಾಮ ಒನ್, ಬೆಂಗಳೂರು ಒನ್ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ಮನೆ ಯಜಮಾನಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಪತಿಯ ಆಧಾರ್ ಕಾರ್ಡ್ ಕೂಡ ಬೇಕಾಗುತ್ತೆ. ಆಧಾರ್ ಜತೆಗೆ ಮೊಬೈಲ್ ಕೊಂಡೊಯ್ದರೆ ಸಾಕು, ಬೇರೇನೂ ಬೇಡ ಎಂದರು.
ಗೃಹಲಕ್ಷ್ಮೀ ಯೋಜನೆ ಬಗ್ಗೆ ಯಾವುದೇ ರೀತಿಯ ಗೊಂದಲವಿಲ್ಲ. ಮನೆ ಯಜಮಾನಿ ಯಾರೆಂದು ಕುಟುಂಬದವರೇ ನಿರ್ಧರಿಸುತ್ತಾರೆ. ಗೃಹಲಕ್ಷ್ಮೀ ಯೋಜನೆಯಿಂದ 1.28 ಕೋಟಿ ಕುಟುಂಬಕ್ಕೆ ಲಾಭವಾಗುತ್ತೆ. ಈ ಯೋಜನೆಗೆ ಬಜೆಟ್ನಲ್ಲಿ 17,500 ಕೋಟಿ ರೂ. ಹಾಕಿದ್ದೇವೆ. ಆಗಸ್ಟ್ನಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಹಾಕುತ್ತೇವೆ ಎಂದು ತಿಳಿಸಿದರು.
1 ಕೋಟಿ 11 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಮೊಬೈಲ್ ಸಂಖ್ಯೆ ಆಧಾರ್ ಹಾಗೂ ಬ್ಯಾಂಕ್ ಗೆ ಲಿಂಕ್ ಆಗಿದೆ. ಒಂದು ದಿನ ಒಂದು ಕೇಂದ್ರದಲ್ಲಿ 60 ಜನ ಅರ್ಜಿಯನ್ನ ಹಾಕಬಹುದು. ಗೊಂದಲ ಆಗಬಾರದು ಅಂತ 60 ಮಂದಿಗೆ ಮಾತ್ರ ಸೀಮಿತಗೊಳಿಸಿದ್ದೇವೆ. ಸುಮಾರು 11 ಸಾವಿರ ಸೇವಾ ಕೇಂದ್ರಗಳು ರಾಜ್ಯದಲ್ಲಿದ್ದು, ಒಂದು ದಿನಕ್ಕೆ 60 ಅಂದರೆ ಒಟ್ಟಾರೆ 6.5 ಲಕ್ಷ ಜನರು ಈ ಸೇವೆಯನ್ನು ಪಡೆದುಕೊಳ್ಳುತ್ತಾರೆ ಎಂದರು.




