ಸರ್ಕಾರದ ಜಾಹಿರಾತಿನಲ್ಲಿ ನೆಹರು ಭಾವಚಿತ್ರ, ವಿವರ ನೀಡದೆ ಬಿಜೆಪಿ ಜನರ ಮುಂದೆ ಬೆತ್ತಲಾಗಿದೆ: ರಮೇಶ್ ಬಾಬು

4 years ago

ಬೆಂಗಳೂರು: 75ನೇ ಸ್ವಾತಂತ್ರ್ಯ ಮಹೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ  ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ನೀಡಿದ್ದ ಜಾಹೀರಾತು ವಿವಾದಕ್ಕೀಡಾಗಿದೆ. ಇದರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಭಾವಚಿತ್ರ ಮತ್ತು ವಿವರವನ್ನು ಕಡೆಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪರವಾಗಿ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಬಹಿರಂಗ ಪತ್ರ ಬರೆದಿದ್ದು, ಈ ಕ್ರಮವನ್ನು ಖಂಡಿಸಿದ್ದಾರೆ. ಸರ್ಕಾರದ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮವನ್ನು ಬಹಿಷ್ಕರಿಸಿ, ಕಾಂಗ್ರೆಸ್ ವತಿಯಿಂದ ಅದ್ಧೂರಿಯಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲು ಕರೆನೀಡಿದ್ದಾರೆ. ಪತ್ರದ ಪೂರ್ಣ ಪಾಠ ಈ ಕೆಳಗಿನಂತಿದೆ.

ಒಂದು ಬಹಿರಂಗ ಪತ್ರ

ಡಿ ಕೆ ಶಿವಕುಮಾರ್, ಅಧ್ಯಕ್ಷರು ಪ್ರದೇಶ ಕಾಂಗ್ರೆಸ್ ಸಮಿತಿ ಕರ್ನಾಟಕ

ಸಿದ್ದರಾಮಯ್ಯ,ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು, ಕರ್ನಾಟಕ

ಮಾನ್ಯರೆ,

ಯಾವುದೇ ರಾಜಕೀಯ ಪಕ್ಷ ಅಧಿಕಾರ ನಡೆಸುವಾಗ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರಾಜಧರ್ಮ ಪಾಲಿಸಬೇಕು. ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ವಚನಕ್ಕೆ ವಿರುದ್ಧವಾಗಿ ಸರಕಾರ ನಡೆಸುವುದು ಲಜ್ಜೆಗೆಡಿತನದ ಪರಮಾವಧಿ.

ರಾಜ್ಯ ಬಿಜೆಪಿ ಸರ್ಕಾರ ಈ ದಿನ 75ನೇ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ ಜಾಹಿರಾತು ನೀಡಿರುತ್ತದೆ. ಈ ಜಾಹಿರಾತಿನಲ್ಲಿ ಸ್ವತಂತ್ರ ಸೇನಾನಿ ಮಾಜಿ ಪ್ರಧಾನಿ ಪಂಡಿತ್ ಜವಹರ್ ಲಾಲ್ ನೆಹರು ಅವರ ಭಾವಚಿತ್ರ ಮತ್ತು ವಿವರವನ್ನು ಪ್ರಜ್ಞಾಪೂರ್ವಕವಾಗಿ ಕೈಬಿಡಲಾಗಿದೆ. ಇದು ಈ ದೇಶದ ಸ್ವತಂತ್ರ ಹೋರಾಟಕ್ಕೆ ಮಾಡಿದ ಅತಿ ದೊಡ್ಡ ಅಪಚಾರ. ನೆಹರು ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರ. ಇತಿಹಾಸ ತಿರುಚುವ ಸಂಚು.

ಕಾಶ್ಮೀರ ಪಂಡಿತ್ ಕುಟುಂಬದ  ನೆಹರು 1912ರಲ್ಲಿ ವ್ಯಾಸಂಗ ಮುಗಿಸಿ ಭಾರತಕ್ಕೆ ಬಂದು ಸ್ವತಂತ್ರ ಚಳುವಳಿಯಲ್ಲಿ ತೊಡಗಿಸಿಕೊಂಡರು. ನೆಹರು ಮಹಾತ್ಮಾ ಗಾಂಧೀಜಿಯವರ ಪ್ರತಿ ಹೋರಾಟದ ಭಾಗವಾಗಿದ್ದರು. 1916ರ  ಸ್ವದೇಶೀ ಚಳುವಳಿ, 1920ರ ಅಸಹಕಾರ ಚಳುವಳಿ, 1930ರ ಉಪ್ಪಿನ ಸತ್ಯಾಗ್ರಹ, 1940 ನಾಗರಿಕ ಅವಿಧೇಯತೆ ಹೋರಾಟ, 1943-45ರ ಜೈಲು ವಾಸದ ಮೂಲಕ ಸ್ವತಂತ್ರ ಚಳುವಳಿಯ ಗಾಂಧೀಜಿ ನಂತರದ ಮುಂಚೂಣಿ ನಾಯಕರಾಗಿದ್ದರು. ಆರು ವರ್ಷ ವಿವಿಧ ಅವಧಿಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನೆಹರು, 18 ವರ್ಷ ಈ ದೇಶದ ಪ್ರಧಾನಿ ಆಗಿ ದೇಶದ ಉನ್ನತಿಗೆ ಅಪ್ರತಿಮ ಕೊಡುಗೆ ನೀಡಿದ್ದಾರೆ. ಅವರ ಪ್ರಗತಿಪರ ಚಿಂತನೆಗಳು ಸಂಸದೀಯ ಮೌಲ್ಯಗಳು ಜನತಂತ್ರದ ಆಶಯಗಳು ಗಾಂಧೀಜಿ ಚಿಂತನೆಗಳೊಂದಿಗೆ ಸಮೀಕರಣಗೊಂಡಿದ್ದು, ಭಾರತ ನಿರಂತರ ಅಭಿವೃದ್ಧಿಯತ್ತ ಮುಖ ಮಾಡಲು ಕಾರಣವಾಗಿದೆ. ಇಂತಹ ಮಹಾನ್ ಚೇತನ ಪಂಡಿತ್ ಜವಾಹರ್ ನೆಹರು ಅವರ ಭಾವಚಿತ್ರ ಮತ್ತು ವಿವರಣೆ ಸರ್ಕಾರದ ಜಾಹಿರಾತಿನಲ್ಲಿ ನೀಡದೆ ಬಿಜೆಪಿ ಜನರ ಮುಂದೆ ಬೆತ್ತಲಾಗಿದೆ! ಲಜ್ಜೆಗೆಟ್ಟವರಿಗೆ ಬೆತ್ತಲಾಗುವುದು ಸಾಮಾನ್ಯ ಕ್ರಿಯೆ ಇರಬಹುದು?

ರಾಜ್ಯ ಬಿಜೆಪಿ ಸರ್ಕಾರದ ಈ ಲಜ್ಜೆಗೇಡಿ ಕೃತ್ಯವನ್ನು ಕಾಂಗ್ರೆಸ್ ಮತ್ತು ನಾಡಿನ ಸಮಸ್ತ ಜನ ಖಂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಾಳೆ ನಡೆಯುವ ರಾಜ್ಯ ಬಿಜೆಪಿ ಸರ್ಕಾರದ 75ನೇ ಸ್ವಾತಂತ್ರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ಬಹಿಷ್ಕರಿಸಲು ಮನವಿ ಮಾಡುತ್ತೇನೆ. ಸರ್ಕಾರದ ಕಾರ್ಯಕ್ರಮ ಬಹಿಷ್ಕಾರ ಮಾಡಿ ಇಡೀ ರಾಜ್ಯದಲ್ಲಿ ಪಕ್ಷದ ವತಿಯಿಂದ 75ನೇ ಅಮೃತ ಮಹೋತ್ಸವ ಅದ್ದೂರಿಯಾಗಿ ಆಚರಿಸಲು ಕರೆ ನೀಡಿ. ಪಕ್ಷದ ಶಾಸಕರು, ಸಂಸದರು ಸರ್ಕಾರದ ಕಾರ್ಯಕ್ರಮ ಬಹಿಷ್ಕಾರ ಮಾಡಿ ಪಕ್ಷದ ಪ್ರತಿಭಟನೆ ದಾಖಲಿಸಬೇಕಾಗಿ ಮನವಿ ಮಾಡುತ್ತೇನೆ. ಇದು ಈ ಸಂದರ್ಭದ ಅನಿವಾರ್ಯತೆ  ಎಂದು ಭಾವಿಸುತ್ತೇನೆ.

– ರಮೇಶ್ ಬಾಬು, ವಕ್ತಾರ, ಕೆಪಿಸಿಸಿ Ex MLC

Leave a Reply