ಕೆ.ಆರ್.ಎಸ್. ಪಕ್ಷದಿಂದ ಗುಜರಿ ವಾಹನ ತೆರವು ಅಭಿಯಾನ

4 years ago

ಕೆ.ಆರ್.ಎಸ್. ಪಕ್ಷದಿಂದ ಗುಜರಿ ವಾಹನ ತೆರವು ಅಭಿಯಾನ

ಬೆಂಗಳೂರಿನಾದ್ಯಂತ ಇಂತಹ ಹತ್ತಾರು ಸಾವಿರ ವಾಹನಗಳನ್ನು ಅವುಗಳ ಮಾಲೀಕರು ರಸ್ತೆ ಬದಿಯಲ್ಲಿ ನಿಲ್ಲಿಸಿ ಅವುಗಳನ್ನು ತೊರೆದಿದ್ದಾರೆ. ಇವುಗಳನ್ನು ಖಾಲಿ ಮಾಡಿಸುವ ಜವಾಬ್ದಾರಿ ಪೊಲೀಸರದು ಮತ್ತು BBMP’ಯವರದು. ಆದರೆ ಇಲ್ಲಿ ದುಡ್ಡು ಇಲ್ಲದಿರುವ ಕಾರಣ ಅವರು ಆ ಕರ್ತವ್ಯ ಮಾಡುವುದಿಲ್ಲ.

ಇವು ಆ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಮಾತ್ರ ಅಡ್ಡಿಯಾಗಿಲ್ಲ. ಕಿಡಿಗೇಡಿಗಳು ಇಂತಹ ವಾಹನಗಳ ಕಿಟಕಿ ಗಾಜುಗಳನ್ನು ಒಡೆದು, ಒಳಗೆ ನಾನಾ ತರಹದ ವಸ್ತುಗಳನ್ನು ಎಸೆದಿದ್ದಾರೆ. ಯಾರಾದರೂ ಆಕಸ್ಮಿಕವಾಗಿ ಅಥವ ಉದ್ದೇಶಪೂರ್ವಕವಾಗಿ ಸರಿಯಾಗಿ ಆರಿಸದ ಸಿಗರೇಟ್/ಬೀಡಿ ತುಂಡನ್ನು ಇವುಗಳ ಒಳಗೆ ಎಸೆದರೂ ಈ ವಾಹನಗಳು ಬಗ್ಗೆಂದು ಹತ್ತಿ ಉರಿಯುತ್ತವೆ. ಅಮಾಯಕರಿಗೆ ಪ್ರಾಣಾಪಾಯ ಆಗುತ್ತದೆ.

ಇನ್ನು ಪೊಲೀಸ್ ಠಾಣೆಗಳ ಮುಂದೆ ನಿಂತಿರುವ ಲಕ್ಷಾಂತರ ದ್ವಿಚಕ್ರ ಮತ್ತು ನಾಲ್ಕುಚಕ್ರದ ವಾಹನಗಳಿಗೆ ಲೆಕ್ಕವೇ ಇಲ್ಲ. ಬಹುಶಃ ರಾಜ್ಯಾದ್ಯಂತ ಅದು ಲಕ್ಷಗಳ ಸಂಖ್ಯೆಯಲ್ಲಿ ಇರಬಹುದು. ಇದಕ್ಕೆ ಕೇವಲ ಭ್ರಷ್ಟ ಅಥವ ಅದಕ್ಷ ಪೊಲೀಸರಷ್ಟೆ ಕಾರಣವಲ್ಲ, ನಮ್ಮ ಅದಕ್ಷ ಮತ್ತು ನಿಧಾನಗತಿಯ ನ್ಯಾಯಾಂಗವೂ ಕಾರಣ. ಇದೆಲ್ಲದರಿಂದಾಗಿ ಸಾವಿರಾರು ಕೋಟಿ ರೂಪಾಯಿಗಳ ರಾಷ್ಟ್ರೀಯ ಸಂಪತ್ತು ಹೀಗೆ ಗುಜರಿ ಸಾಮಾನಾಗಿ ಪರಿವರ್ತನೆಯಾಗಿ ಹಾಳಾಗಿ ಹೋಗುತ್ತಿದೆ.

ಸಾರ್ವಜನಿಕ ರಸ್ತೆಗಳಲ್ಲಿ ವರ್ಷಗಳಿಂದ ಹೀಗೆ ಕೆಟ್ಟು ನಿಂತ ಅಥವ ಮಾಲೀಕರು ಬೇಕಂತಲೇ ತೊರೆದಿರುವ ಇಂತಹ ವಾಹನಗಳ ಕುರಿತು ಮತ್ತು ಅವುಗಳ ಬಗ್ಗೆ ಏನೂ ಕ್ರಮ ಕೈಗೊಳ್ಳದೆ ಕೇವಲ ದಂಡ ಮತ್ತು ಲಂಚ ವಸೂಲಿಯಲ್ಲಿ ಹಾಗೂ ಸುಲಿಗೆಯಲ್ಲಿ ಮಗ್ನರಾಗಿರುವ ಪೊಲೀಸ್ ಮತ್ತು ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯತೆಯ ವಿಚಾರವಾಗಿ ಇನ್ನು ಮುಂದೆ KRS ಪಕ್ಷವು ಬೆಂಗಳೂರಿನಲ್ಲಿ ಅಭಿಯಾನ ಆರಂಭಿಸಲಿದೆ. ಕರ್ತವ್ಯಲೋಪ ಮತ್ತು ಭ್ರಷ್ಟಾಚಾರವನ್ನು ಪ್ರಶ್ನಿಸುವ ವಿಚಾರದಲ್ಲಿ ಚಿಕ್ಕದು ಅಥವ ದೊಡ್ಡದು ಅಂತಿಲ್ಲ.

ನಿಮಗೆ ಇಂತಹ ವಾಹನಗಳು ಎಲ್ಲಿಯೇ ಕಂಡುಬಂದರೂ ಅದರ ಫೋಟೋ ತೆಗೆದು ಸ್ಥಳದ ಮಾಹಿತಿಯೊಂದಿಗೆ ಇಲ್ಲಿ ಕಾಮೆಂಟ್ ವಿಭಾಗದಲ್ಲಿ ಹಾಕಿ ಅಥವ ನಮಗೆ ಟ್ಯಾಗ್ ಮಾಡಿ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

– ರವಿ ಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

Leave a Reply