ಸರ್ಕಾರಿ ನೌಕರರು ಸಾರ್ವಜನಿಕರ ಹಕ್ಕುಬಾಧ್ಯತೆಗಳನ್ನು ರಕ್ಷಿಸುವ ಕರ್ತವ್ಯ ನಿರ್ವಹಿಸಬೇಕು: ನ್ಯಾ ಕೆ.ಎನ್.ಫಣೀಂದ್ರ

11 months ago

ಹಾಸನ: ಅಧಿಕಾರಿಗಳು ಬಹಳ ಉತ್ಸಾಹದಿಂದ ಈ ಪ್ರಕರಣಗಳ ಇತ್ಯರ್ಥದಲ್ಲಿ ಭಾಗವಹಿಸಿರುವುದು ಇದೇ ಮೊದಲ ಜಿಲ್ಲೆ. ನಿಜಕ್ಕೂ ಯಾವಾಗಲು ನೆನಪಿನಲ್ಲಿ ಇಟ್ಟುಕೊಳ್ಳುವ ದಿನವಾಗಿದೆ ಎಂದು ಉಪ ಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕುಂದುಕೊರತೆಗಳು, ದೂರುಗಳ ನಿವಾರಣೆ ಹಾಗೂ ಪ್ರಕರಣಗಳ ವಿಲೇವಾರಿ ವಿಚಾರಣೆಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ದೂರುದಾರರು ಮತ್ತು ಎದುರುದಾರರುಗಳ ಸಭೆಯಲ್ಲಿ ವಿಚಾರಣೆ ನಡೆಸಿ ಅವರು ಮಾತನಾಡಿದರು.

ಲೋಕಾಯುಕ್ತ ಕಚೇರಿಯಲ್ಲಿ ದಾಖಲಾಗಿರುವ 400 ಪ್ರಕರಣಗಳಲ್ಲಿ ಆಯ್ದ 83 ಪ್ರಕರಣಗಳನ್ನು ರಾತ್ರಿ 8.30ರ ಸಮಯಕ್ಕೆ ಇತ್ಯರ್ಥ ಮಾಡಲು ಸಹಕಾರ ನೀಡಿದ ತಮ್ಮೆಲ್ಲರಿಗೂ ಹೃದಯ ಪೂರ್ವಕ ಅಭಿನಂದನೆಗಳು ಎಂದರು.

ಪ್ರಕರಣಗಳ ಇತ್ಯರ್ಥಕ್ಕೆ ಜಿಲ್ಲೆಯ ಮೂವರು ಮಹಿಳಾ ಅಧಿಕಾರಿಗಳು ಪುರುಷ ಅಧಿಕಾರಿಗಳಿಗಿಂತ ಹೆಚ್ಚು ಸಹಕಾರ ನೀಡಿದ್ದಾರೆ. ಇವರ ಪರಿಪೂರ್ಣತೆ ಕೆಲಸ ಮಾಡಲು ಅನುವು ಮಾಡಿಕೊಟ್ಟಿತು ಎಂದರು.

ರಾಜ್ಯದಲ್ಲಿರುವ 8 ರಿಂದ 9 ಕೋಟಿ ಜನಸಂಖ್ಯೆಗೆ ರಾಜ್ಯದ 8 ರಿಂದ 9 ಲಕ್ಷ ಸರ್ಕಾರಿ ನೌಕರರು ಸಾರ್ವಜನಿಕರ ಹಕ್ಕುಬಾಧ್ಯತೆಗಳನ್ನು ರಕ್ಷಣೆಮಾಡುವ ಮೂಲಕ ಕರ್ತವ್ಯ ನಿರ್ವಹಿಸಬೇಕು ಎಂದರು.

ತಾವು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ದೇವರು ನಿಮಗೆ ಈ ಅವಕಾಶ ಕಲ್ಪಿಸಿದ್ದಾರೆ. ಈ ನಿಟ್ಟಿನಲ್ಲಿ ತಾವು ಆತ್ಮ ವಂಚನೆ ಮಾಡದಂತೆ ಕೆಲಸ ಮಾಡಬೇಕು ಎಂದರು.

ದೂರುದಾರರಿಗೆ ಲೋಕಾಯುಕ್ತ ಸಂಸ್ಥೆಯ ಮೇಲೆ ನಂಬಿಕೆ ಇದೆ. 83 ಪ್ರಕರಣಗಳಲ್ಲಿ ಯಾವುದೇ ಅಧಿಕಾರಿಗೆ ಶಿಕ್ಷೆವಿಧಿಸಿ ಆದೇಶಿಸದೇ ಯಾರಿಗೂ ಅಸಮಾಧಾನವಾಗದಂತೆ ಉತ್ತಮ ರೀತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದರು.

ಈಗಾಗಲೇ ಒಂದು ತಿಂಗಳ ಮೊದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಕರಣ ಕುರಿತು ಮಾಹಿತಿ ನೀಡಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇಂದು ಸದರಿ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು ಎಂದರು.

ಉಪ ಲೋಕಾಯುಕ್ತರು ಪ್ರತಿಯೊಂದು ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವಿಲೇವಾರಿ ಮಾಡಿದರು. ಸರ್ಕಾರಿ ಆಸ್ತಿ ಕಬಳಿಕೆ ಮಾಡಲು ಪ್ರಯತ್ನಿಸಿದ್ದರೆ, ಹಕ್ಕು ಪತ್ರ ಸುಳ್ಳು ಎಂದಾದರೆ ಅಧಿಕಾರಿಗಳು ಏಕೆ ಅಂತಹವರ ವಿರುದ್ಧ ಮೊಕದ್ದಮೆ ದಾಖಲೆ ಮಾಡುವುದಿಲ್ಲ ಎಂದು ಪ್ರಶ್ನಿಸಿದರು.

ಸಾರ್ವಜನಿಕರು ಕಚೇರಿಗೆ ಬಂದ ಸಂದರ್ಭದಲ್ಲಿ ಸ್ಪಂದಿಸಿ ಶೀಘ್ರವಾಗಿ ಕೆಲಸ ಮಾಡಬೇಕು ಸಾರ್ವಜನಿಕರನ್ನು ಒಂದೇ ಕೆಲಸಕ್ಕೆ ಅಲೆಸಬಾರದು. ಬಂದಂತಹ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಲು ನಿಗಾವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ದೂರುದಾರರು ಸುಳ್ಳು ಹೇಳಬಾರದು. ನ್ಯಾಯಾಲಯದಲ್ಲಿ ಪ್ರಕರಣ ಇದ್ದರೆ ಲೋಕಾಯುಕ್ತ ಗಮನಕ್ಕೆ ತರಬೇಕು. ವಿಷಯನ್ನು ಮುಚ್ಚಿಡಬಾರದು ಎಂದು ಸಲಹೆ ನೀಡಿದರು.

ದೂರುದಾರರು ಮೇಲ್ಮನವಿ ಮಾಡಿದಾಗ ಉಪ ವಿಭಾಗಾಧಿಕಾರಿಗಳು ಕೂಲಂಕಷವಾಗಿ ಸತ್ಯಾಸತ್ಯತೆ ಪರಿಶೀಲಿಸಿ ಏನು ತಪ್ಪು ಮಾಡಿದ್ದಾರೆ ಎಂದು ಕಂಡುಹಿಡಿಯಿರಿ. ಕೆಳಹಂತದ ಸಿಬ್ಬಂದಿಗೆ ಎಚ್ಚರಿಕೆ ಮೂಡಿಸಿದಂತಾಗುತ್ತದೆ. ಜೊತೆಗೆ ಸಕ್ಷಮ ಪ್ರಾಧಿಕಾರ ತೀರ್ಮಾನ ಕೈಗೊಳ್ಳಲು ನೆರವಾಗುತ್ತದೆ ಎಂದರು.

ಪಹಣಿಕಲ್ಲು ಕಿತ್ತು ಹಾಕಿದ್ದರೆ ತಹಸೀಲ್ದಾರ್ ಕ್ರಮ ಕೈಗೊಳ್ಳಬಹುದು. ಪಕ್ಕದ ಜಮೀನಿನವರು ಒತ್ತುವರಿ ಮಾಡಿದ್ದರೆ ನ್ಯಾಯಾಲಯದಲ್ಲಿ ದಾವೆ ಹಾಕಬೇಕು ಎಂದು ದೂರುದಾರರಿಗೆ ತಿಳಿಸಿದರು.

ಹಣ ದುರುಪಯೋಗವಾದ ಬಗ್ಗೆ ದೂರು ಬಂದರೆ ಇಲಾಖೆ ವಿಚಾರಣೆ ಆಗಬೇಕು. ಅರ್ಜಿಗಳನ್ನು ವಿಲೇವಾರಿ ಮಾಡಲು ತಾಂತ್ರಿಕವಾಗಿ ತೊಡಕುಗಳಿದ್ದರೆ ಪರಿಶೀಲಿಸಿ, ಅರ್ಜಿದಾರರಿಗೆ ಹಿಂಬರಹ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರಲ್ಲದೆ, ಉದಾಸೀನ ಮಾಡದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮಾಜಿ ಸೈನಿಕರಿಗೆ ಆದಷ್ಟು ಬೇಗ ಒಂದು ಎಕರೆ ಜಮೀನು ನೀಡಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರಿಗೆ ಸಂಬಂಧಿಸಿದ ರಸ್ತೆ ಪ್ರಕರಣಗಳನ್ನು ವಿಳಂಬ ಮಾಡದೆ ಸಾರ್ವಜನಿಕರ ಹಿತದೃಷ್ಟಿಯಿಂದ ಶೀಘ್ರವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಒಂದೆರೆಡು ಪ್ರಕರಣಗಳನ್ನು ದಾಖಲೆ ಪರಿಶೀಲನೆ ಮಾಡುವುದರ ಜೊತೆಗೆ ಅಗತ್ಯ ಟಿಪ್ಪಣಿ ಪಡೆದು ಆದೇಶ ನೀಡಲು ನಿಗದಿತ ದಿನಾಂಕಕ್ಕೆ ಉಪ ಲೋಕಾಯುಕ್ತರು ಮುಂದೂಡಿದರು.

ರಾಜಾ ಕಾಲುವೆ ಕುರಿತ ದೂರಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸುವುದಾಗಿ ತಿಳಿಸಿದರು.

ಲಂಚ ಕೇಳುತ್ತಿದ್ದಾರೆ ಎಂದು ದೂರು ಸಲ್ಲಿಸಿರುವ ಪ್ರಕರಣ ಲೋಕಾಯುಕ್ತ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಲು ತಿಳಿಸಿದರು.

ಜಮೀನಿಗೆ ಹೋಗಿ ಬರಲು ಸರ್ಕಾರಿ ಗೋಮಾಳದಲ್ಲಿ ರಸ್ತೆ ಮಾಡಿಕೊಡುವ ಸಂಬಂಧ ಈಗಾಗಲೇ ಉಚ್ಛ ನ್ಯಾಯಾಲಯಕ್ಕೆ ಹೋಗಿರುವುದರಿಂದ ಒಂದೇ ವಿಷಯಕ್ಕೆ ಎರಡು ಕಡೆ ಆದೇಶ ಮಾಡಲು ಅವಕಾಶವಿಲ್ಲದ ಕಾರಣ ಪ್ರಕರಣ ಕಾಯ್ದಿರಿಸಿದರು.

ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಲಸ ಮಾಡಲು ತಿಳಿಸಿದರು.

ಇದೇ ವೇಳೆ ದೂರುದಾರರಿಂದಲೂ ಕೂಡ ಹೇಳಿಕೆ ಪಡೆದು ಪ್ರಕರಣಗಳನ್ನು ಇತ್ಯರ್ಥ ಪಡಿಸಿದರು. ಕೆಲವು ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಮುಂದುವರೆಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಸತ್ಯಭಾಮ ಮಾತನಾಡಿ, ದೇಶಸೇವೆ ಎಂದರೆ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡುವುದು ಎಂಬುದನ್ನು ನ್ಯಾಯಾಮೂರ್ತಿ ಅವರು ಇಂದು ಸಂಯಮದಿಂದ ಎಲ್ಲಾ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಮೂಲಕ ತಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದರು.

ಕರ್ನಾಟಕ ಲೋಕಾಯುಕ್ತದ ವಿಚಾರಣೆಗಳು 07 ಅಪರ ನಿಬಂಧಕ ಪೃಥ್ವಿರಾಜ್ ವರ್ಣೇಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಲೋಕಾಯುಕ್ತ ಅಧಿಕ್ಷಕರಾದ ಸ್ನೇಹ ಹಾಜರಿದ್ದರು.

Leave a Reply