ವಿಧಾನ ಮಂಡಲ ಅಧಿವೇಶನಕ್ಕೆ ಪ್ರಮುಖ ನಾಯಕರ ಗೈರು

3 years ago

ಬೆಂಗಳೂರು: ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡುವ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ,ಮಾಜಿ‌ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಪ್ರತಿಪಕ್ಷದ ಬಹುತೇಕ ಶಾಸಕರು ಗೈರು ಹಾಜರಾಗಿದ್ದರು.

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡುವಾಗ ಪ್ರತಿಪಕ್ಷಗಳು ಹಾಜರಿರುವುದು ರೂಢಿ ಸಂಪ್ರದಾಯ. ಮೊದಲಿನಿಂದಲೂ ಇದು ಪಾಲನೆಯಾಗುತ್ತಿದೆ. ಕೆಲವು ವೇಳೆ ರಾಜಕೀಯ ಸಂಘರ್ಷಗಳು ಸಹನೆ ಮಿತಿ ಮೀರಿದ ವೇಳೆಯಲ್ಲೂ ಪ್ರತಿಪಕ್ಷಗಳು ಸದನದಲ್ಲಿ ಹಾಜರಿದ್ದು, ಆಕ್ಷೇಪಿಸುವುದು, ಪ್ರತಿಭಟಿಸುವುದು ಅಥವಾ ಬಹಿಷ್ಕರಿಸುವುದನ್ನು ಮಾಡಿವೆ. ಇದೇ ಮೊದಲ ಬಾರಿಗೆ ಶೇ.80ರಷ್ಟು ಸದಸ್ಯರು ಗೈರು ಹಾಜರಾಗುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

ಇದು ಚುನಾವಣೆಯ ವರ್ಷವಾಗಿದ್ದು ಎಲ್ಲಾ ರಾಜಕೀಯ ಪಕ್ಷಗಳಿಗೂ ಪ್ರಚಾರದತ್ತ ಹೆಚ್ಚು ಗಮನ ಹರಿಸಿವೆ. ಕಾಂಗ್ರೆಸ್ ನಿರಂತರವಾದ ಪ್ರಜಾಧ್ವನಿ ಯಾತ್ರೆ ಮಾಡಿದರೆ, ಜೆಡಿಎಸ್ ಪಂಚರತ್ನ ಯಾತ್ರೆ ನಡೆಸುತ್ತಿದೆ.

ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್, ಕಾಂಗ್ರೆಸ್ ಹಿರಿಯ ನಾಯಕರಾದ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ರಮೇಶ್ ಕುಮಾರ್, ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಸಲೀಂ ಅಹ್ಮದ್ ಸೇರಿದಂತೆ ಆಯ್ದ ಕೆಲವು ಶಾಸಕರು ಮಾತ್ರ ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಕಲಬುರಗಿ ಜಿಲ್ಲೆಯ ಸುರಪುರ ಮತ್ತು ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿನ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಶಾಸಕರಾದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ , ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹಾಜರಾತಿಯೂ ಸದನದಲ್ಲಿ ಕಂಡುಬರಲಿಲ್ಲ.

Leave a Reply