ಬೆಳಗಾವಿ: ರಾಜ್ಯದಲ್ಲಿ ಎಲ್ಲರಿಗೂ ಸೂರು ಕಲ್ಪಿಸುವ ಮೂಲಕ ಗುಡಿಸಲು ಮುಕ್ತ ಕರ್ನಾಟಕಕ್ಕೆ ಪಣ ತೊಟ್ಟಿರುವ ಸರ್ಕಾರ ವಸತಿ ರಹಿತರ ಮನೆ ನಿರ್ಮಾಣಕ್ಕೆ ನೀಡಲಾಗುತ್ತಿರುವ ಆರ್ಥಿಕ ನೆರವಿನ ಪ್ರಮಾಣ ಹೆಚ್ಚಳ ಮಾಡಲು ತೀರ್ಮಾನಿಸಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ವಿಧಾನಸಭೆಯಲ್ಲಿ ಪ್ರಕಟಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಕೆ.ಜೆ. ಬೋಪಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಸತಿ ರಹಿತರು ನಿರ್ಮಿಸಿಕೊಳ್ಳುವ ಮನೆಗಳಿಗೆ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಮೂರು ಲಕ್ಷ ರೂಪಾಯಿ ನಗರ ಪ್ರದೇಶಗಳಲ್ಲಿ ಐದು ಲಕ್ಷ ರೂಪಾಯಿ ನೀಡಲಾಗುವುದು. ಕಡು ಬಡವರು ನಿರ್ಮಾಣ ಮಾಡುವ ಮನೆಗಳಿಗೆ ನೀಡುತ್ತಿರುವ ಹಣ ಸಾಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಹಾಯ ಧನವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು.
ಈ ಮೊದಲು ಗ್ರಾಮೀಣ ಪ್ರದೇಶದಲ್ಲಿ ಕಡು ಬಡವರಿಗೆ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ನೀಡಲಾಗುತ್ತಿತ್ತು. ಇದರಿಂದ ಮನೆ ನಿರ್ಮಾಣ ಸಾಧ್ಯವಾಗದೆ ಅರ್ಧಕ್ಕೆ ನಿಂತು ಹೋಗುವ ಪರಿಸ್ಥಿತಿ ಉಂಟಾಗುವುದನ್ನು ಗಂಭೀರವಾಗಿ ಪರಿಗಣಿಸಿ ಸಹಾಯ ಧನವನ್ನು ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.
ರಾಜ್ಯಾದ್ಯಂತ ಐದು ಲಕ್ಷ ಹೊಸದಾಗಿ ಮನೆಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಆದರೆ ಸಹಾಯ ಧನವನ್ನು ಹೆಚ್ಚಳದಿಂದ ಐದು ಲಕ್ಷ ಮನೆ ನಿರ್ಮಾಣದ ಗುರಿಯನ್ನು ಮೂರು ಲಕ್ಷಕ್ಕೆ ಇಳಿಸಲಾಗಿದೆ ಎಂದರು.
ಕಡುಬಡವರಿಗೆ ಮನೆ ನಿರ್ಮಿಸಿಕೊಡುವ ಜವಾಬ್ದಾರಿಯನ್ನು ಆಯಾ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳಿಗೆ ವಹಿಸಲಾಗಿದೆ. ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಾಣ ಯೋಜನೆಯನ್ನು ಇಬ್ಬರೂ ಸೇರಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಮನೆ ನಿರ್ಮಾಣಕ್ಕೆ ನೀಡಲಾಗುವ ಸಹಾಯಧನ ಕಡಿಮೆ ಇರುವುದರಿಂದ ಆರೇಳು ವರ್ಷಗಳ ಹಿಂದೆ ಮಂಜೂರಾತಿಯಾಗಿದ್ದರೂ ಅವುಗಳ ನಿರ್ಮಾಣ ಸಾಧ್ಯವಾಗಿಲ್ಲ. ಮತ್ತೆ ಅಂತಹ ಫಲಾನುಭವಿಗಳಿಗೆ ಹೊಸ ಮನೆಗಳ ನಿರ್ಮಾಣ ಕಷ್ಟವಾಗುತ್ತಿದ್ದು, ಇದನ್ನು ಬಗೆಹರಿಸುವ ಕಡೆ ಗಮನ ಹರಿಸಲಾಗಿದೆ ಎಂದರು.



