ದೌರ್ಜನ್ಯ ತಡೆಗೆ ಜಿಲ್ಲೆಗೊಂದು ವಿಶೇಷ ನ್ಯಾಯಾಲಯ: ಆರಗ ಜ್ಞಾನೇಂದ್ರ

3 years ago

ಬೆಳಗಾವಿ: ಮಕ್ಕಳ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ತಡೆಗಟ್ಟುವ ದೃಷ್ಟಿಯಿಂದ ಇಂತಹ ಪ್ರಕರಣಗಳನ್ನು ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಲು ಪ್ರತಿ ಜಿಲ್ಲೆಗೊಂದರಂತೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿಂದು ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಪೊಕ್ಸೋ ಕಾಯ್ದೆನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಪ್ರಕರಣಗಳಲ್ಲಿ ನೊಂದವರ ಪರವಾಗಿ ನ್ಯಾಯಾಲಯಗಳಲ್ಲಿ ಸಮರ್ಥವಾಗಿ ವಾದ ಮಂಡಿಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಲಾಗಿದೆ ಎಂದರು.

ಈಗಾಗಲೇ ಮಹಿಳಾ ಸಹಾಯವಾಣಿ, ಮಕ್ಕಳ ಸಹಾಯವಾಣಿ, ಸ್ಪಂದನಾ ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿವೆ. ಪೊಲೀಸರ ಗಸ್ತು ಪ್ರಮಾಣ ಹೆಚ್ಚಿಸಲಾಗಿದೆ. ಎಫ್ ಐಆರ್ ದಾಖಲಿಸಿದ ಬಳಿಕ ವಿಳಂಬ ಮಾಡದೇ ಛಾರ್ಜ್ ಶೀಟ್ ಸಲ್ಲಿಸಲು ಸೂಚಿಸಲಾಗಿದೆ. ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಕೆಎಸ್‌ಆರ್‌ಪಿಯಿಂದ ಕರಾಟೆ ಕಲಿಸಲಾಗುತ್ತಿದೆ. ಚೆನ್ನಮ್ಮ ಪಡೆ, ಓಬವ್ವ ಪಡೆ, ಶರಾವತಿ ಪಡೆ ಹೆಸರಲ್ಲಿ ಕರಾಟೆ ತರಬೇತಿ ನೀಡಲಾಗುತ್ತಿದೆ ಎಂದರು.

ರೀಲ್ಸ್ ಬಗ್ಗೆ ಇರಲಿ ಎಚ್ಚರ: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ರೀಲ್ಸ್, ಬ್ಯಾಂಕ್ ಅಪರಾಧ ಸೇರಿದಂತೆ ಇನ್ನಿತರ ಸೈಬರ್ ಅಪರಾಧ ಚಟುವಟಿಕೆಗಳ ಬಗ್ಗೆ ಪೊಲೀಸರು ನಿರ್ಲಕ್ಷ್ಯವಹಿಸಿದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಶ್ಲೀಲ ವಿಡಿಯೋ ವೈರಲ್ ಮಾಡುವುದು ಸಾಮಾಜಿಕ ಪಿಡುಗು ಇದ್ದಂತೆ ಎಂದರು.

ಸೈಬರ್ ಅಪರಾಧ ನಿಲ್ಲಿಸಲು ಪೊಲೀಸ್, ಕಾಯ್ದೆಗಿಂತ ಸಾರ್ವಜನಿಕರೇ ನೇರವಾಗಿ ವಿರೋಧಿಸಲಿ. ಅಲ್ಲದೆ, ಒಂದು ವೇಳೆ ಸೈಬರ್ ಅಪರಾಧ ಕುರಿತು ಜನರು ದೂರು ನೀಡಿದರೂ, ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಶ್ಲೀಲ ರೀಲ್ಸ್‌ಗಳು ವಿದ್ಯಾರ್ಥಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹಾಗಾಗಿ, ಸೈಬರ್ ಅಪರಾಧಗಳನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಸೈಬರ್ ಅಪರಾಧ ವಂಚನೆಗೊಳಗಾದವರ ಅನುಕೂಲಕ್ಕಾಗಿ ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ ಒಂದೊಂದು ಸೈಬರ್ ಠಾಣೆಗಳನ್ನು ತೆರೆಯಲಾಗಿದೆ. ಹಾಗೇ, ರಾಜಧಾನಿ ಬೆಂಗಳೂರು ಸೇರಿದಂತೆ ಎಂಟು ವಿಭಾಗಗಳಲ್ಲಿ ಸಹ ಸೈಬರ್ ಪೊಲೀಸ್ ಠಾಣೆಗಳನ್ನು ಆರಂಭಿಸಲಾಗಿದೆ ಎಂದರು.

Leave a Reply