ಪಣಜಿ: ಗೋವಾದಲ್ಲಿ ಹಿರಿಯ ನಾಯಕ ಮುಕುಲ್ ವಾಸ್ನಿಕ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 11 ಕಾಂಗ್ರೆಸ್ ಶಾಸಕರ ಪೈಕಿ 10 ನಾಯಕರು ಭಾಗವಹಿಸಿದ್ದಾರೆ. ಸೋಮವಾರ ರಾತ್ರಿ ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಮಾಜಿ ಸಿಎಂ ದಿಗಂಬರ್ ಕಾಮತ್ ಹೊರತುಪಡಿಸಿ, ಮೈಕೆಲ್ ಲೋಬೋ ಸೇರಿದಂತೆ ಕಾಂಗ್ರೆಸ್ ಶಾಸಕರು ಹಾಜರಿದ್ದರು. ಸಭೆಯಲ್ಲಿ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್, ಪಕ್ಷದ ರಾಜ್ಯಾಧ್ಯಕ್ಷ ಅಮಿತ್ ಪಾಟ್ಕರ್ ಕೂಡ ಇದ್ದರು.
ತಪ್ಪು ಉದ್ದೇಶದಿಂದ ಕೆಲವರು ಗೋವಾ ಕಾಂಗ್ರೆಸ್‌ನಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿದ್ದು, ಶಾಸಕರು ಒಗ್ಗಟ್ಟು ಪ್ರದರ್ಶಿಸಿ ಅದನ್ನು ವಿಫಲಗೊಳಿಸಿದ್ದಾರೆ ಎಂದು ಮುಕುಲ್ ವಾಸ್ನಿಕ್ ಹೇಳಿದ್ದಾರೆ. ಈ ಕುರಿತ ಪ್ರತಿಕ್ರಿಯಿಸಿರುವ ಅವರು, ಸಭೆಯಲ್ಲಿ ಶಾಸಕರ ಜತೆಗೂಡಿ ವಿಧಾನಸಭೆಯಲ್ಲಿ ಹುರುಪಿನಿಂದ ಕೆಲಸ ಮಾಡಿ ಕರಾವಳಿ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಲಾಯಿತು ಎಂದರು.
ಭಾನುವಾರ, ದಿಗಂಬರ್ ಕಾಮತ್ ಮತ್ತು ಮೈಕೆಲ್ ಲೋಬೋ ಸೇರಿದಂತೆ 5 ಕಾಂಗ್ರೆಸ್ ಶಾಸಕರೊಂದಿಗೆ ಸಂಪರ್ಕವಿಲ್ಲ ಎಂದು ವರದಿಯಾಗಿದೆ. ಆದರೆ, ಈ ಶಾಸಕರು ಸೋಮವಾರ ಗೋವಾ ವಿಧಾನಸಭೆಯ ಮುಂಗಾರು ಅಧಿವೇಶನದ ಮೊದಲ ದಿನದ ಕಲಾಪಕ್ಕೆ ಹಾಜರಾಗಿ, ಎಲ್ಲವೂ ಸರಿಯಾಗಿದೆ ಮತ್ತು ಪಕ್ಷದೊಂದಿಗಿದ್ದೇವೆ ಎಂದು ಹೇಳಿಕೊಂಡರು.
ಪಕ್ಷದ ಶಾಸಕರ ನಡುವೆ ಒಡಕು ಮೂಡಿಸಲು ರಾಜ್ಯದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಮೈಕೆಲ್ ಲೋಬೋ ಮತ್ತು ದಿಗಂಬರ್ ಕಾಮತ್ ಅವರು “ಸಂಚು ಮತ್ತು ಒಳಸಂಚು” ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಸೋಮವಾರ ರಾತ್ರಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೈಕೆಲ್ ಲೋಬೊ, ನಾನು ಕಾಂಗ್ರೆಸ್ ಜೊತೆಗಿದ್ದೇನೆ. ಭಾನುವಾರ ಕರೆದಿದ್ದ ಪತ್ರಿಕಾಗೋಷ್ಠಿಗೆ ಬಾರದೆ ಪಕ್ಷದಲ್ಲಿ ತಪ್ಪು ತಿಳುವಳಿಕೆ ಉಂಟಾಗಿದೆ. ಕಾಂಗ್ರೆಸ್‌ನ ಎಲ್ಲ ಶಾಸಕರು ಪಕ್ಷದೊಂದಿಗಿದ್ದಾರೆ. ನಾನು ಪ್ರತಿಪಕ್ಷ ನಾಯಕನಾಗಿ ಮುಂದುವರಿಯಲಾರೆ, ಹುದ್ದೆಗೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದೇನೆ ಎಂದರು.
ಸದ್ಯಕ್ಕೆ ಗೋವಾದಲ್ಲಿ ಶಿವಸೇನೆ ಮಾದರಿಯ ಬಂಡಾಯವನ್ನು ಕಾಂಗ್ರೆಸ್ ತಡೆದಿರುವಂತೆ ತೋರುತ್ತಿದೆ. ಆದರೆ ಸಂಭಾವ್ಯ ಪಕ್ಷಾಂತರಿಗಳು ರಾಜ್ಯದ ಆಡಳಿತಾರೂಢ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.




