ಜಿ.ಕೆ.ಗೋವಿಂದರಾವ್ ಕಾಲವಶ

5 years ago

ಹುಬ್ಬಳ್ಳಿ/ಬೆಂಗಳೂರು: ಹಿರಿಯ ಸಾಹಿತಿ, ಅನುವಾದಕ, ನಟ, ಪ್ರಾಧ್ಯಾಪಕ ಜಿ.ಕೆ.ಗೋವಿಂದರಾವ್ (84) ಕಾಲವಶರಾಗಿದ್ದಾರೆ. ರಂಗಭೂಮಿ, ಚಿತ್ರರಂಗದಲ್ಲಿ ಅಭಿನಯಿಸಿದ್ದ ಇವರು, ಇಂಗ್ಲಿಷ್ ನಿಂದ ಕನ್ನಡ ಭಾಷೆಗೆ ಕೆಲವು ಕೃತಿಗಳನ್ನು ಅನುವಾದಿಸಿದ್ದರು. ಇಂಗ್ಲಿಷ್ ಪ್ರಾಧ್ಯಾಪಕಾಗಿದ್ದ ಇವರು ಬಹುಶ್ರುತ ವಿದ್ವಾಂಸರಾಗಿದ್ದರು.

ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ ಅವರು ಕಾಲವಶರಾಗಿದ್ದಾರೆ. ಗೋವಿಂದರಾವ್ ಅವರ ಮೊಮ್ಮಗಳು ಡಾ.ಅಪೂರ್ವ ಮುಂಜಾನೆ 4.45ರ ಹೊತ್ತಿಗೆ ಕೊನೆಯುಸಿರೆಳೆದಿದ್ದು, ಹುಬ್ಬಳ್ಳಿಯ ಮುಕ್ತಿಧಾಮದಲ್ಲಿ ಬೆಳಗ್ಗೆ 8.30 ಸುಮಾರಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಗೋವಿಂದರಾವ್, ಮಾಲ್ಗುಡಿ ಡೇಸ್, ಮಹಾಪರ್ವ ಮೊದಲಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಅವರು 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಪ್ರಜಾಸತ್ತಾತ್ಮಕ ಆಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಈಶ್ವರ ಅಲ್ಲಾ (ಕಿರುಕಾದಂಬರಿ), ಶೇಕ್ಸ್‌ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್‌ಪಿಯರ್ ಸಂವಾದ (ವಿಮರ್ಶಾ ಲೇಖನಗಳು), ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? ಇವು ಅವರ ಕೃತಿಗಳು.

ಜಿ.ಕೆ.ಗೋವಿಂದರಾವ್ ಅವರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.

Leave a Reply