ನಾವು ಸಣ್ಣವರಿದ್ದಾಗ, ಹರೆಯಕ್ಕೆ ಕಾಲಿಡುತ್ತಿದ್ದಂತೆ, ಹೆಣ್ಣು ಗಂಡನ್ನು ನೋಡುತ್ತಿರಲಿಲ್ಲ, ಗಂಡು ಹೆಣ್ಣನ್ನು ನೋಡುತ್ತಿರಲಿಲ್ಲ. ಮನೆಯವರೇ ಎಲ್ಲಾ ಮಾತಾಡಿಕೊಂಡು ಮದುವೆಯನ್ನು ಗೊತ್ತು ಮಾಡಿರುತ್ತಿದ್ದರು. ಮದುವೆಯಲ್ಲಿ ಅಂತರಪಟ ತೆರೆದಾಗಲೇ ಮೊದಲಬಾರಿಗೆ ಗಂಡು ಮತ್ತು ಹೆಣ್ಣು ಪರಸ್ಪರ ನೋಡಿಕೊಳ್ಳುತ್ತಿದ್ದದ್ದು. ಹಾಗೆ ನೋಡಿದಾಗ ಆನಂದಕ್ಕೆ ಅಥವಾ ಭಯಕ್ಕೆ ಮೂರ್ಚೆ ಹೋಗಿಬಿಡುತ್ತಿದ್ದರೋ ಅಥವಾ ಪಿತ್ತ ಕೆರಳಿ ತಲೆಸುತ್ತು ಬಂದುಬಿಡುತ್ತಿತ್ತೋ! ಒಟ್ಟಾರೆ ಪಿತ್ತವನ್ನು ಉಪಶಮನ ಮಾಡಲು ಜೀರಿಗೆ ಬೆಲ್ಲದ ನೀರು ಆಗಲೇ ಕುಡಿಸುತ್ತಿದ್ದರು. ಅದೇ ಸಾಂಕೇತಿಕವಾಗಿ ಮುಂದುವರಿದು, ಜೀರಿಗೆ ಬೆಲ್ಲ ನೆತ್ತಿಗೆ ಹಾಕಿಸುವುದೂ ಇದೆ.
ಇರಲಿ, ತಾನು ಮದುವೆಯಾಗುವ ಹೆಂಡತಿ ಅಥವಾ ಗಂಡನನ್ನು ಮದುವೆಯ ದಿನವೇ ನೋಡುವುದು ಎಂದರೆ, ಛೇ! ಅಬ್ಸರ್ಡ್!! ರೆಡಿಕ್ಯುಲಸ್!!! ವ್ಹಾಟ್ ನಾನ್ಸೆನ್ಸ್, ಇನ್ನೂ ಯಾವ ಕಾಲದಲ್ಲಿದ್ದೀವಿ!!!!
ಸರಿ, ನನಗೆ ತಕ್ಕನಾದ ಜೋಡಿಯನ್ನು ನಾನು ನೋಡಬೇಕು. ಅಲ್ಲಿ ಇಲ್ಲಿ ಹುಡುಕಬೇಕು. ಸಿಕ್ಕಿರುವವರಲ್ಲೇ ಹುಡುಕಬೇಕು ಇದ್ಯೋ ಇಲ್ವೋಂತ. ಪರಸ್ಪರ ಪರಿಚಿತರಾದ ಮೇಲೆ ಒಂದಿಷ್ಟು ಓಡಾಡಬೇಕು. ಹಾಗೆ ಓಡಾಡುವಾಗ ಒಬ್ಬರಿಗೊಬ್ಬರು ಗುಣಸ್ವಭಾವಗಳು ಅರ್ಥವಾಗುತ್ತವೆ. ಆಮೇಲೆ ಮೆಲ್ಲನೆ ತಾಳೆ ಹಾಕಿಕೊಂಡು ಈ ವ್ಯಕ್ತಿ ನನಗೆ ಸೂಟ್ ಆಗತ್ತೋ ಇಲ್ಲವೋ ಅಂತ ನೋಡಿಕೊಂಡು ಒಪ್ಪಿಕೊಳ್ಳಬೇಕು. ಇರುವ ಕಂಡೀಷನ್‌ಗಳನ್ನು ಒಬ್ಬರಿಗೊಬ್ಬರು ಹೇಳಬೇಕು. ಒಪ್ಪಿಗೆಯಾದರೆ ನಂತರ ಮದುವೆಯಾಗಬೇಕು. ಅದುವರೆಗೂ ಬಾಯ್/ಗರ್ಲ್ ಫ್ರೆಂಡ್‌ಗಳನ್ನ ಚೇಂಜ್ ಮಾಡುತ್ತಿರಬೇಕು. ಈಗ ಯಾರೋ ಸಿಕ್ಕಿದರು ಅಂತ ತಗಲಾಕಿಕೊಂಡುಬಿಟ್ಟರೆ ಕಾರ್ತಿಕ್ ಗೌಡ, ಮತ್ತೆ ಮೈತ್ರೇಯಿ ಕೇಸ್ ಆಗಿಬಿಡಲ್ವೇ!
ಒಂದು ವೇಳೆ ಅರೇಂಜ್ ಮ್ಯಾರೇಜೇ ಆಗೋದಾದ್ರೆ, ಮನೆ ಮನೆ ಸುತ್ತಿಕೊಂಡು, ಉಪ್ಪಿಟ್ಟು, ಚೌ ಚೌ ಜೊತೆಗೆ ಕಾಫಿ, ಟೀ ಕುಡ್ಕೊಂಡು ಹೆಣ್ಣು ನೋಡಿಕೊಂಡು, ನಿಮ್ಮ ಜೊತೆ ಸ್ಪಲ್ಪ ಮಾತಾಡಬೇಕು ಅಂತ ಮನೆಯವರು ಒಪ್ಪಿದ ಮೇಲೆ ಒಂದು ಮಾತು ಹೇಳಿ, ಯಾವುದೋ ದೇವಸ್ಥಾನವೋ, ಕಾಫಿಡೇಗೋ ಒಂದು ಸಲ ಹೋಗಿ ಸ್ವಲ್ಪ ಎಕ್ಸ್ಪೆನ್ಸಿವ್ ಆದ್ರೂ ನನ್ನಿಷ್ಟ ಇದು, ನಿನ್ನಿಷ್ಟ ಅಂತೆಲ್ಲಾ ಹೇಳಿ, ಒಂದಷ್ಟು ದಿನ ಎಸ್ ಎಂ ಎಸ್, ಫೋನ್‌ಗಳನ್ನು ಮಾಡಿಕೊಂಡು, “ಮ್, ಮತ್ತೆ, ಏನು ಸಮಾಚಾರ, ಎಲ್ಲಾ ನೀವೇ ಹೇಳ್ಬೇಕು, ಈಗೆಲ್ಲಿದ್ದೀರಾ, ಮನೆಗಿನ್ನೂ ಹೋಗಿಲ್ವಾ? ಅಲ್ಲಿ ಯಾರಿದ್ದಾರೆ? ಮಾತಾಡಬೋದಾ? ಮತ್ತೆ? ಏನು ಸಮಾಚಾರ? ಎಲ್ಲಾ ನೀವೇ ಹೇಳ್ಬೇಕು. ಈ ಶನಿವಾರ ಫ್ರೀ ರ‍್ತೀರಾ? ಹೂಂ, ನೀವು? ಮಾಡ್ಕೊಳ್ತೀನಿ. ಹಾಗಾದ್ರೆ ಸಿಗೋಣಾ? ಎಲ್ಲಿ? ನೀವೇ ಹೇಳಿ. ಸರಿ. ನೋಡ್ಬಿಟ್ಟು ಫೋನ್ ಮಾಡ್ತೀನಿ. ಮ್, ಮತ್ತೆ, ಏನ್ ಸಮಾಚಾರ, ಎಲ್ಲಾ ನೀವೇ ಹೇಳ್ಬೇಕು” ಎಂದು ಎಂದೂ ತಮಗೇ ಅರ್ಥವಾಗದಂತಹ ಸಂಭಾಷಣೆಗಳನ್ನು ಗಂಟೆಗಟ್ಟಲೆ ಜರುಗಿಸಿ ಅದೇನೋ ಮದ್ವೇಂತ ಆಗೋಕೆ ಒಪ್ಪುವುದು ಸಾಮಾನ್ಯವಾಗಿರುವಾಗ ಒಂದು ಆಫ್ರಿಕಾದ ಕಡೆಯ ಬುಡಕಟ್ಟಿನ ಸಂಪ್ರದಾಯ ಹೇಳುತ್ತೇನೆ.
ಬುಡಕಟ್ಟು ಸಂಪ್ರದಾಯದವರು ಅಂದ್ರೆ ಪ್ರಾಣಿ ಸಂಕೇತ (ಟೋಟಮಿಸಂ) ಇರುವಂತಹ ಕಪ್ಪು ಚರ್ಮದವರೇ. ಅವರ ಲಾಂಛನ ಹದ್ದು. ಅವರ ದೇವರೂ ಹದ್ದು (ಹುಂಗ್ವೇ?). ಅವರಲ್ಲಿ ಹೆಣ್ಣು ಅಥವಾ ಗಂಡು ಮದುವೆಯ ವಯಸ್ಸಿಗೆ ಬಂದರು ಎಂದರೆ, ಅವರ ವಸ್ತ್ರವನ್ನು ತಮ್ಮ ದೇವರಾದ ಹದ್ದಿನ ಕಾಲೂ, ಕೈಯೂ ಎರಡೂ ಒಂದಾಗಿರುವ ಆ ಉಗುರಿನ ಹಿಡಿತಕ್ಕೆ ಕೊಡುತ್ತಾರೆ. ಅದನ್ನೆತ್ತಿ ಒಯ್ಯುವ ಹದ್ದು ಆ ವಸ್ತ್ರವನ್ನು ಎತ್ತ ಒಗೆಯುತ್ತದೆಯೋ ಆ ಭಾಗದಲ್ಲಿರುವ ಯಾವುದೇ ವ್ಯಕ್ತಿ ಈ ವಸ್ತ್ರದ ಒಡೆಯನಿಗೆ ವಯಸ್ಸಿನಲ್ಲಿ ಹೊಂದುತ್ತಾರೆಂದರೆ, ಅವರಿಗೆ ಮದುವೆ ಮಾಡಿಕೊಡುತ್ತಾರೆ. ಅದರಂತೆ, ಒಂದು ವೇಳೆ ಶತ್ರುಪಾಳ್ಯದ ಮೇಲೆ ಹದ್ದು ಬಟ್ಟೆಯನ್ನು ಒಗೆದುಬಿಟ್ಟರೆ, ದೇವರು ನಮ್ಮನ್ನು ಶತ್ರುತ್ವವನ್ನು ಮುಂದುವರಿಸಬೇಡಿ ಎಂದು ತಿಳಿದು ಮದುವೆಯ ಸಂಬಂಧವನ್ನು ಬೆಳೆಸುತ್ತಾರೆ.
ದಕ್ಷಿಣ ಕೊರಿಯಾದಲ್ಲಿ ಸನ್ ಮ್ಯೂಂಗ್ ಮೂನ್ ಎಂಬ ಕ್ರೈಸ್ತ ಧರ್ಮೀಯ ನಾಯಕರಿದ್ದು, ಅವರು 03/09/2012ರಲ್ಲಿ ತಮ್ಮ 92ನೆಯ ವಯಸ್ಸಿನಲ್ಲಿ ತೀರಿಕೊಂಡರು. ಅವರು ಕ್ರೈಸ್ತ ಧರ್ಮೀಯರೇ ಆಗಿದ್ದರೂ ಅವರಿಗಿದ್ದದ್ದು, ಅಂತರರಾಷ್ಟ್ರೀಯ ಮತ್ತು ಅಂತರ್ ಸಾಂಸ್ಕೃತಿಕವಾಗಿ ಎಲ್ಲಾ ಜನಾಂಗಗಳೂ ಒಂದಾಗಿ ಇಡೀ ಮಾನವಕುಲವೇ ಒಂದಾಗಿರಬೇಕು ಎಂಬುದಾಗಿತ್ತು. ಅದಕ್ಕೆ ಅವರು ಕಂಡುಕೊಂಡಿದ್ದು, ಬ್ಲೆಸ್ಸಿಂಗ್ ಸರ್ಮೊನಿ ಎಂಬುದು. ಅದರಂತೆ, ವಿವಿಧ ದೇಶಗಳಿಂದ, ವಿವಿಧ ಸಂಸ್ಕೃತಿಗಳಿಂದ ಏನೂ ತಿಳಿಯದೇ ವಿವಾಹಾಕಾಂಕ್ಷಿಗಳು ತಮ್ಮ ಅರ್ಜಿ ಸಲ್ಲಿಸಿ, ಹಿಂದೆಂದೂ ನೋಡಿರದ, ಭೇಟಿ ಮಾಡಿರದ ವ್ಯಕ್ತಿಯನ್ನು ಮದುವೆಯಾಗುವುದು.
ಜಪಾನಿನವಳಿಗೆ ಶ್ರೀಲಂಕಾದವನೋ, ಭಾರತೀಯನಿಗೆ ಆಸ್ಟ್ರೇಲಿಯಾದವಳೋ, ಬೌದ್ಧನಿಗೆ ಮುಸಲ್ಮಾನಳೋ- ಹೀಗೆ ಯಾರೇ ಆಗಿರಬಹುದು. ಇಂತಹದ್ದೊಂದು ಸಾವಿರಾರು ಜೋಡಿಗಳ ಮದುವೆ ಆಗುತ್ತಿತ್ತು. ನೆನಪಿರಲಿ, ಆಗ ಮದುವೆಯಾಗುವ ಅವರಿಗೆ ತಾವು ಯಾವ ಧರ್ಮ, ದೇಶ, ಭಾಷೆ, ಸಂಸ್ಕೃತಿ, ವರ್ಗ ಎಂಬುದೇನೂ ತಿಳಿದಿರುತ್ತಿರಲಿಲ್ಲ. ಎಂಥಾ ಸೌಂದರ್ಯವೋ, ಯಾವ ವಿದ್ಯಾಭ್ಯಾಸವೋ, ಏನು ವೃತ್ತಿಯೋ, ಎಲ್ಲಿರುವುದೋ, ಹೇಗಿರುವುದೋ ಏನೊಂದೂ ತಿಳಿಯದೇ ಆ ಕ್ಷಣದಲ್ಲಿ ಒಬ್ಬರನ್ನೊಬ್ಬರು ನೋಡುತ್ತಿದ್ದದ್ದು, ಮದುವೆಯಾಗುತ್ತಿದ್ದದ್ದು.
ಆನಂತರ ಅವರಿಬ್ಬರೂ ಪರಸ್ಪರ ಒಂದಾಗಿ ಮುಂದಿನ ವೈವಾಹಿಕ ಬದುಕಿನ ಮಾರ್ಗವನ್ನು ನಿರ್ಧರಿಸಿಕೊಳ್ಳಬೇಕಾಗಿತ್ತು.
ಇದು ಹೇಗೆ? ಹಾಗೂ ಏಕೆ?
ಸಾಮಾಜಿಕವಾಗಿ ಗಂಡು ಮತ್ತು ಹೆಣ್ಣಿನ ಸಂಬಂಧವೇ ಅತ್ಯಂತ ವ್ಯಾವಹಾರಿಕವಾದದ್ದು. ಮ್ಯಾಚ್ ಫಿಕ್ಸಿಂಗ್ ಇಲ್ಲೇ ನೋಡುವುದು. ಅಣ್ಣ ತಂಗಿಯರಲ್ಲಿ, ತಂದೆ ತಾಯಿ ಮತ್ತು ಮಕ್ಕಳ ನಡುವೆ, ಅಜ್ಜ ಅಜ್ಜಿ ಮತ್ತು ಮೊಮ್ಮಕ್ಕಳ ನಡುವೆ, ಸೋದರತ್ತೆ, ಸೋದರಮಾವ ಇತ್ಯಾದಿ ಸಹಜ ಸಂಬಂಧಗಳನ್ನು ಗುರುತಿಸಿಕೊಳ್ಳುತ್ತಾ ಅವುಗಳನ್ನು ವ್ಯಾವಹಾರಿಕವಾಗಿ ಕಡಿದುಕೊಳ್ಳುವ ವಿಚ್ಛೇದನ ಎಂಬ ವಿಧಾನವೇನೂ ಇಲ್ಲ. ಯಾವ ಸಂಬಂಧಗಳಿಗೂ ಇಲ್ಲದ ಡಿವೋರ್ಸ್ ಬರಿಯ ಗಂಡ ಹೆಂಡತಿಗೆ ಮಾತ್ರವೇ ಎಂದರೆ, ಇದು ರೆಡಿಕ್ಯುಲಸ್! ಅಬ್ಸರ್ಡ್!!
ಗಂಡ ಹೆಂಡತಿ ಸಂಬಂಧವು ಎಷ್ಟು ಅಫಿಶಿಯಲ್ ಅಂದರೆ, ಕುಂತು ಮಾತಾಡುವುದು, ಕೊಟ್ಟು ತೆಗೆದುಕೊಳ್ಳುವುದು, ಒಪ್ಪುವುದು ಬಿಡುವುದು, ಮನೆಯವರ ಸಮ್ಮತಿ ಪಡೆಯುವುದು, ಇತ್ಯಾದಿ ಇತ್ಯಾದಿಗಳನ್ನು ನೋಡಿದರೆ ಸಮಾಜವು ಅದಕ್ಕೆ ಕೊಟ್ಟಿರುವ ಮೌಲ್ಯದ ಬಗ್ಗೆ ಅನುಮಾನ ಹುಟ್ಟುತ್ತದೆ.
ಗರ್ಭದಲ್ಲಿರುವ ಮಗುವು ಗಂಡೋ ಹೆಣ್ಣೋ, ಕಪ್ಪಗಿರುವುದೋ, ಬೆಳ್ಳಗಿರುವುದೋ, ಸುಂದರವೋ, ಕುರೂಪವೋ, ಬುದ್ದಿವಂತದ್ದೋ, ದಡ್ಡತನದ್ದೋ, ಮುಂದೆ ತನ್ನ ನೋಡಿಕೊಳ್ಳತ್ತೋ, ಇಲ್ಲವೊ, ಜೊತೆಗಿರುತ್ತದೋ, ಬಿಡುತ್ತದೋ ಏನೂ ತಿಳಿಯದೇ ಮಧುರವಾದ ಭಾವದಿಂದ ಕಾಯುತ್ತಾ, ಮೃದು ಭಾವನೆಯಗಳ ರತ್ನಗಂಬಳಿ ಹಾಸಿ ಎದುರುಗೊಳ್ಳುತ್ತಾ ಸ್ವೀಕರಿಸುವಂತೆ ಒಂದು ಗಂಡನ್ನು ಹೆಣ್ಣೂ, ಒಂದು ಹೆಣ್ಣನ್ನು ಗಂಡೂ ಏಕೆ ಸ್ವೀಕರಿಸಲಾಗುವುದಿಲ್ಲ? ಹುಟ್ಟಿನಿಂದ ಬಂದ ಸಹಜ ಸಂಬಂಧಗಳಲ್ಲಿ ಧರ್ಮ, ಸಂಸ್ಕೃತಿ, ದೇಶ, ಭಾಷೆ, ವರ್ಗ, ವರ್ಣ ಏನೂ ಇರದ ಸಂಬಂಧದಲ್ಲಿ ಅವನ್ನೆಲ್ಲಾ ನೋಡುವುದು ಏಕೆ ಎಂದು ಪ್ರಶ್ನಿಸುವವರಿಗೆ ಮದುವೆಯ ದಿನ ಅಂತರಪಟ ತೆರೆದಾಗಲೇ ಪರಸ್ಪರ ನೋಡುತ್ತಿದ್ದು, ಡಜನ್ ಗಟ್ಟಲೆ ಮಕ್ಕಳನ್ನು ಹೆರುತ್ತಾ, ಡಿವೋರ್ಸಿನ ಪದವೇ ತಿಳಿಯದಿದ್ದ ನಮ್ಮ ಪೂರ್ಮಿಕರೂ, ಆಫ್ರಿಕಾದ ಹದ್ದಿನ ಬುಡಕಟ್ಟೂ, ಸನ್ ಮ್ಯೂಂಗ್ ಮೂನ್‌ನ ಬ್ಲೆಸ್ಸಿಂಗ್ ಸರ್ಮೊನಿ ಅರ್ಥವಾಗುತ್ತದೆ.
– ಯೋಗೇಶ್ ಮಾಸ್ಟರ್, ರಂಗಕರ್ಮಿ




