ಪಾರದರ್ಶಕತೆ ಕಾಯ್ದುಕೊಳ್ಳಲು ಗಾಂಧಿ ಸಾಕ್ಷಿ ಕಾಯಕ 2.0

2 years ago

ಪಾರದರ್ಶಕತೆ ಕಾಯ್ದುಕೊಳ್ಳಲು ಗಾಂಧಿ ಸಾಕ್ಷಿ ಕಾಯಕ 2.0 ಲೋಕಾರ್ಪಣೆ

ಬೆಂಗಳೂರು: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದಿಂದ ಕೈಗೊಳ್ಳಲಿರುವ ಎಲ್ಲಾ ರೀತಿಯ ಕಾಮಗಾರಿಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ಇದಕ್ಕಾಗಿ ಸಿದ್ಧಪಡಿಸಿರುವ ಗಾಂಧಿ ಸಾಕ್ಷಿ ಕಾಯಕ 2.0 ಲೋಕಾರ್ಪಣೆ ಮಾಡಿದೆ.

ಸಾಕ್ಷಿ ಕಾಯಕ ಲೋಕಾರ್ಪಣೆ ಮಾಡಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಾಭಿವೃದ್ಧಿ ನಿಗಮ ನಿರ್ವಹಿಸುವ ಕಾಮಗಾರಿಗಳ ಪ್ರಗತಿಯ ಸಂಪೂರ್ಣ ಮಾಹಿತಿಗಳು, ಕಾಮಗಾರಿಗಳನ್ನು ವಹಿಸುವ ಇಲಾಖೆಗಳಿಂದ ಬಿಡುಗಡೆಯಾಗುವ ಅನುದಾನದ ಸ್ವೀಕೃತಿ ಹಾಗೂ ಬಳಕೆ, ಸೂಕ್ತ ರೀತಿಯಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಮುಂತಾದ ವಿವಿಧ ಅಂಶಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಗಾಂಧಿ ಸಾಕ್ಷಿ ಕಾಯಕ 2.0  ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ ಎಂದರು.

ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯು ರಾಜ್ಯಾದ್ಯಂತ ತನ್ನ ಜಾಲವನ್ನು ಹೊಂದಿದ್ದು, ಸರ್ಕಾರದ ವತಿಯಿಂದ ಕೈಗೊಳ್ಳಲಾಗುವ ನಿರ್ಮಾಣ ಯೋಜನೆಗಳು ಹಾಗೂ ವಿವಿಧ ಇಲಾಖೆಗಳು ವಹಿಸುವ ಕಟ್ಟಡಗಳು, ರಸ್ತೆ ಅಭಿವೃದ್ಧಿ ಮೊದಲಾದ ಕಾಮಗಾರಿಗಳನ್ನು ಕಳೆದ 51 ವರ್ಷಗಳಿಂದ ನಿಗದಿತ ಕಾಲಾವಧಿಯಲ್ಲಿ ಉತ್ತಮ ಗುಣಮಟ್ಟದಿಂದ ಅನುಷ್ಠಾನಗೊಳಿಸುತ್ತಿದೆ. ಕೆಆರ್ಐಡಿಎಲ್ ಸಂಸ್ಥೆಯ ವಹಿವಾಟನ್ನು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಸೂಕ್ತ ತಂತ್ರಾಂಶದ ಅವಶ್ಯಕತೆ ಇದ್ದ ಕಾರಣ ಇದನ್ನು ಜಾರಿಗೆ ತರಲಾಗಿದೆ ಎಂದರು.

ಈ ತಂತ್ರಾಂಶದ ಅಳವಡಿಕೆಯಿಂದ ಕಾಮಗಾರಿ ವಹಿಸುವ ಇಲಾಖೆಗಳು ಬಿಡುಗಡೆ ಮಾಡುವ ಅನುದಾನಗಳ ಯೋಜನಾವಾರು ಬಿಡುಗಡೆ, ಕಾಮಗಾರಿಗಳ ಪ್ರಗತಿಗೆ ವ್ಯಯಿಸಲಾದ ವೆಚ್ಚ, ಉಳಿಕೆ ಅನುದಾನಗಳ ನಿಖರ ಮಾಹಿತಿಯನ್ನು ಪಡೆಯಬಹುದಾಗಿದೆ.

• ಜಿಯೋ ಟ್ಯಾಗ್ ಹಾಗೂ ಜಿಯೋ ಫೆನ್ಸಿಂಗ್ ಛಾಯಾಚಿತ್ರಗಳ ಆರೋಹಣ ಮಾಡುವ ಕಾರಣದಿಂದ, ಡೂಪ್ಲಿಕೇಟ್ ಕಾಮಗಾರಿಗಳನ್ನು ನಿರ್ವಹಿಸುವ ಸಾಧ್ಯತೆಗಳನ್ನು ತಡೆಯಬಹುದು
• ಕಾಮಗಾರಿಗಳ ನಿರ್ವಹಣೆಗೆ ಅಗತ್ಯವಾದ ಸಾಮಗ್ರಿಗಳ ಖರೀದಿ, ವಿತರಣೆ ಮುಂತಾದ ವಿವರಗಳನ್ನು ದಾಖಲಿಸುವ ಕಾರಣದಿಂದ ಸಾಮಗ್ರಿಗಳ ಕೊರತೆ ಉಂಟಾಗದAತೆ ಮುನ್ನೆಚ್ಚರಿಕೆ ಪಡೆಯಲು ಅನುಕೂಲವಾಗುವುದು.
• ಪ್ರತಿ ಕಾಮಗಾರಿಯ ವಿವಿಧ ಹಂತಗಳ ಪ್ರಗತಿಯ ವಿವರಗಳು, ಛಾಯಾಚಿತ್ರಗಳು, ಆ ಕಾಮಗಾರಿಗೆ ಬಿಡುಗಡೆಯಾದ ಅನುದಾನ, ವೆಚ್ಚ ಹಾಗೂ ಉಳಿದಿರುವ ಅನುದಾನ ಲಭ್ಯತೆಯ ವಿವರಗಳು ನೈಜಸಮಯದಲ್ಲೇ ಲಭ್ಯವಾಗುವ ಕಾರಣ, ಕಾಮಗಾರಿಗಳಮೇಲ್ವಿಚಾರಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು.
• ಕಾಮಗಾರಿಗಳ ಅಂದಾಜು ಮೊತ್ತ ಹಾಗೂ ಬಿಡುಗಡೆಯಾದ ಅನುದಾನಕ್ಕಿಂತ ಹೆಚ್ಚುವರಿ ವೆಚ್ಚ ಮಾಡುವುದು ಹಾಗೂ ಆಯಾ ಕಾಮಗಾರಿಗಾಗಿ ಬಿಡುಗಡೆಯಾದ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸಲು ಸಾಧ್ಯವಾಗದಂತೆ ತಡೆಯಬಹುದಾಗಿರುತ್ತದೆ.
• ಈ ತಂತ್ರಾಂಶವು ಜಿ.ಎಸ್.ಟಿ-ವ್ಯಾಲಿಡೇಶನ್ ಆಪ್ ಹೊಂದಿರುವ ಕಾರಣ ನಕಲಿ ಅಥವಾ ಅಸಮರ್ಪಕ ಜಿ.ಎಸ್.ಟಿ ಸಂಖ್ಯೆಗಳನ್ನು ಸುಲಭವಾಗಿ ಗುರುತಿಸಬಹುದಾಗಿದ್ದು, ಜಿ.ಎಸ್.ಟಿ ಬಿಲ್ಗಳ ನಿರ್ವಹಣೆ ಸುಲಭಸಾಧ್ಯವಾಗಲಿದ್ದು, ತನ್ಮೂಲಕ ಮೊತ್ತಗಳ ನಿಗಮಕ್ಕೆ ಉಂಟಾಗುವ ಸಂಭವನೀಯ ನಷ್ಟವನ್ನು ತಪ್ಪಿಸಬಹುದಾಗಿರುತ್ತದೆ.
• ಹಣಕಾಸಿನ ವ್ಯವಹಾರದ ಸುರಕ್ಷೆತೆಗಾಗಿ DSC (Digital Signature Key) ಸೌಲಭ್ಯವನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ.
• ಲಾಗಿನ್ ಸುರಕ್ಷತೆಗಾಗಿ SMS ಮತ್ತು OTP ಸೌಲಭ್ಯವನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ.
• ಈ ತಂತ್ರಾಂಶದ ಮೂಲಕ ಪರಿಣಾಮಕಾರಿಯಾಗಿ ಲೆಕ್ಕಪತ್ರಗಳನ್ನು ನಿರ್ವಹಿಸುವ ಕಾರಣದಿಂದ ಸಂಸ್ಥೆಯ ವಾರ್ಷಿಕ ಲೆಕ್ಕಪತ್ರಗಳನ್ನು ನಿಗದಿತ ಕಾಲಾವಧಿಯೊಳಗೆ ಅಂತಿಮಗೊಳಿಸಲು ಅನುಕೂಲವಾಗುವುದು.

Leave a Reply