ವಿಜಯೇಂದ್ರ ವಿರುದ್ಧ ಮಾತಾಡುವವರನ್ನು ಬಿಜೆಪಿಯಿಂದ ಉಚ್ಛಾಟಿಸಲು ಆಗ್ರಹ

2 years ago

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕುತೂಹಲ ಮೂಡಿಸಿವೆ. ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರ ನಾಯಕತ್ವ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರನ್ನು ಬದಲಾಯಿಸಬೇಕು ಎಂದು ಹೇಳಿದ ನಾಯಕರನ್ನು ಪಕ್ಷದಿಂದ ಹೊರಹಾಕಬೇಕು ಎಂಬ ಆಗ್ರಹ ಕೇಳಿಬಂದಿದೆ.

ಮಾಜಿ ಸಚಿವ ಪಕ್ಷದ ಹಿರಿಯ ನಾಯಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ನಿವಾಸದಲ್ಲಿ ಸಭೆ ಸೇರಿದ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ರವೀಂದ್ರನಾಥ್, ಹರತಾಳು ಹಾಲಪ್ಪ, ಸಿ ಸಿ ಪಾಟೀಲ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ನಾಯಕರು ಬಿಜೆಪಿ ಭಿನ್ನಮತೀಯರ ವಿರುದ್ಧ ಸಮರ ಘೋಷಿಸಿದರು.

ವಿಜಯೇಂದ್ರ ನಾಯಕತ್ವ ಬದಲಾವಣೆಗೆ ಆಗ್ರಹಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಂಸದರಾದ ಅಣ್ಣ ಸಾಹೇಬ್ ಜೊಲ್ಲೆ, ಪ್ರತಾಪ ಸಿಂಹ, ಜಿ ಎಂ ಸಿದ್ದೇಶ್ವರ್ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಹೈಕಮಾಂಡ್ ಗೆ ದೂರು ನೀಡಲು ತೀರ್ಮಾನಿಸಿದ್ದಾರೆ.

ವಾಲ್ಮೀಕಿ ಮುಡಾ ಹಗರಣ ಸೇರಿದಂತೆ ರಾಜ್ಯ ಸರ್ಕಾರದ ಹಲವು ಅಕ್ರಮಗಳ ವಿರುದ್ಧ ವಿಜಯೇಂದ್ರ ನೇತೃತ್ವದಲ್ಲಿ ಪಕ್ಷ ಸಂಘಟನಾತ್ಮಕವಾಗಿ ಉತ್ತಮ ಕೆಲಸ ಮಾಡುತ್ತಿದೆ. ಆದರೆ ಈ ನಾಯಕರು ಅಪಪ್ರಚಾರ ಮಾಡುವ ಮೂಲಕ ರಾಜ್ಯ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಸೇರಿದ್ದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತಿದ್ದಾರೆ. ಪಕ್ಷದ ಹಿರಿಯರು ಮತ್ತು ಯುವ ನಾಯಕರು ಇವರ ನೇತೃತ್ವದಲ್ಲಿ ಹೊಸ ಉತ್ಸಾಹದಿಂದ ಮುಂದಡಿ ಇಡುತ್ತಿದ್ದಾರೆ. ಆದರೆ ಭಿನ್ನಮತೀಯ ನಾಯಕರು ಎನಿಸಿಕೊಂಡ ಇವರು ಅನಗತ್ಯವಾಗಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವೈಯಕ್ತಿಕ ಕಾರಣಕ್ಕಾಗಿ ವಿಜಯೇಂದ್ರ ವಿರುದ್ಧ ಅನಗತ್ಯ ಟೀಕೆ ಮಾಡುವ ಮೂಲಕ ಗೊಂದಲ ಮೂಡಿಸುತ್ತಿರುವ ಈ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ವರಿಷ್ಠರನ್ನು ಆಗ್ರಹಿಸಲು ಸದ್ಯದಲ್ಲೇ ದೆಹಲಿಗೆ ತೆರಳಲು ಈ ನಾಯಕರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹರತಾಳು ಹಾಲಪ್ಪ, ಬರುವ ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಇದೇ ರೀತಿ ಮಾತನಾಡಿದರೆ ನಾವು ಇನ್ನು ಮುಂದೆ ಹಾದಿಬೀದಿಯಲ್ಲಿ ನಿಂತು ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾವು ಈವರೆಗೂ ಮಾತನಾಡಬಾರದೆಂದು ಸುಮನಿದ್ದೆವು. ಆದರೆ ಕೆಲವರು ಪಕ್ಷಕ್ಕಿಂತಲೂ ನಾವೇ ದೊಡ್ಡವರು ಎಂಬ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದೇ ರೀತಿ ಅವರ ಪ್ರವೃತ್ತಿ ಮುಂದುವರೆದರೆ ನಾವು ಕೂಡ ಅದೇ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ವಿಜಯೇಂದ್ರ ಅವರನ್ನು ಹಾದಿಬೀದಿಯಲ್ಲಿ ಮಾತನಾಡುವವರು ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ. ಅವರ ಸಾಮರ್ಥ್ಯವನ್ನು ಕಂಡು ಪಕ್ಷದ ವರಿಷ್ಠರು ಈ ಹುದ್ದೆಯನ್ನು ಕೊಟ್ಟಿದ್ದಾರೆ. ಮುಡಾ ಪ್ರಕರಣದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಿ ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾದರು. ಈಗ ಮಾತನಾಡುವವರು ಪಾದಯಾತ್ರೆ ನಡೆಯುವಾಗ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು. 

ಮೊದಲ ಬಾರಿ ಶಾಸಕರಾಗಿ ಸಚಿವರಾದವರು, ಮುಖ್ಯಮಂತ್ರಿಯಾದವರನ್ನೂ ನೋಡಿದ್ದೇವೆ. ರಾಜ್ಯದಲ್ಲಿ ಈಗೇನೂ ಚುನಾವಣೆ ಬರುತ್ತಿಲ್ಲ. ಸಂಘಟನೆಯನ್ನು ನಿರಂತರವಾಗಿ ಕಟ್ಟುವ ಪ್ರಯತ್ನ ಮಾಡುತ್ತಿರುವಾಗ ಯತ್ನಾಳ್ ಮತ್ತು ಅವರ ತಂಡ ಕೊಂಕು ನುಡಿಯುವುದನ್ನು ಬಿಡಬೇಕು ಎಂದರು.

Leave a Reply