ಜಿಮ್ಸ್ ನಲ್ಲಿ ಕೋವಿಡ್ ಮುಂಜಾಗ್ರತಾ ಪರಿಶೀಲನಾ ಸಭೆ ಡಿಸಿ

4 years ago

ಗದಗ: ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳವಾಗುತ್ತಿದೆ.  ಜಿಲ್ಲೆಯಲ್ಲಿ ಸಹ ಸೋಂಕಿತರ ಸಂಖ್ಯೆ ಅಧಿಕವಾದಲ್ಲಿ ರೋಗಿಗಳಿಗೆ ಸೂಕ್ತ ರೀತಿಯ ಚಿಕಿತ್ಸೆ ಒದಗಿಸಲು ಸರ್ವ ಸೌಲಭ್ಯಗಳೊಂದಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು  ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಹೊರವಲಯದ ಜಿಮ್ಸ್ ನಲ್ಲಿ ಕೋವಿಡ್ ಸೋಂಕು ನಿಯಂತ್ರಣ ಕುರಿತು ಸೂಕ್ತ ಚಿಕಿತ್ಸೆಗಳ ಬಗ್ಗೆ ಏರ್ಪಡಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊಸ ತಳಿಯ ಓಮಿಕ್ರಾನ್ ಸೋಂಕು ಅತೀ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದೆ ಎಂದು ತಜ್ಞರು ತಿಳಿಸಿದ್ದು  ಓಮಿಕ್ರಾನ್ ಸೋಂಕು ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಿಲ್ಲಾಸ್ಪತ್ರೆ, ಗದಗ ವೈದ್ಯಕೀಯ  ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕು. ಸೂಕ್ತ ಚಿಕಿತ್ಸೆ ನೀಡಲು ಅಗತ್ಯವಿರುವ ಔಷಧೋಪಕರಣಗಳು, ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಜರ್, ಗ್ಲೌಸ್ ಸೇರಿದಂತೆ ಅಗತ್ಯ ಸುರಕ್ಷತಾ ಸಲಕರಣೆಗಳನ್ನು ಸಂಗ್ರಹವಿಟ್ಟುಕೊಳ್ಳಬೇಕು ಎಂದರು.

ಜಿಮ್ಸ್ ಆವರಣದಲ್ಲಿ ಆರಂಭಿಸಲಾದ 13 ಕೆ.ಎಲ್. ಹಾಗೂ 20 ಕೆ.ಎಲ್. ಸಾಮರ್ಥ್ಯದ ಆಕ್ಸಿಜನ್ ಸಂಗ್ರಹಣಾ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಹಾಗೂ ಆಕ್ಸಿಜನ್ ಉತ್ಪಾದನಾ ಘಟಕಗಳ ಕಾರ್ಯನಿರ್ವಹಣೆ ಬಗ್ಗೆ ನಿಗಾ ವಹಿಸಬೆಕೆಂದು ಸೂಚಿಸಿದರು.

ಸಂಸ್ಥೆಯ ಆವರಣದಲ್ಲಿ ನಿರ್ಮಾಣ ಮಾಡಲಾಗಿರುವ 100 ಬೆಡ್‌ಗಳ ಮಾಡ್ಯುಲರ್ ಆಸ್ಪತ್ರೆ ಬಾಕಿ ಕಾರ್ಯಗಳನ್ನು ಶೀಘ್ರ ಪೂರ್ಣಗೊಳಿಸುವ ಮೂಲಕ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು. ಸೋಂಕಿತರ ಚಿಕಿತ್ಸೆಗಾಗಿ ಅಗತ್ಯವಿರುವ ಆಕ್ಸಿಜನ್ ಪೂರೈಕೆ ಮಾಡುವ ಏಜನ್ಸಿಗಳೊಂದಿಗೆ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನಿಯಮಾನುಸಾರ ಒಪ್ಪಂದ ಮಾಡಿಟ್ಟುಕೊಳ್ಳಬೇಕು ಎಂದರು.

ಆಂಬುಲನ್ಸ್ ಹಾಗೂ ಕೋವಿಡ್ ಲ್ಯಾಬ್‌ನಲ್ಲಿ ಕರ್ತವ್ಯ ನಿರ್ವಹಿಸುವ ಟೆಕ್ನಿಷಿಯನ್ ಸೇರಿದಂತೆ ಅಗತ್ಯ ಹೊರ ಸಂಪನ್ಮೂಲಗಳ ಅಗತ್ಯತೆಯನ್ನು ಸರಿದೂಗಿಸಲು ಮುಂಜಾಗ್ರತಾ ವಹಿಸಬೇಕು.  ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಸೇರಿದಂತೆ ವೆಂಟಿಲೇಟರ್ ಗಳು ಕಾರ್ಯನಿರ್ವಹಿಸಲು ಅಗತ್ಯವಿರುವ ವಿದ್ಯುತ್ ಶಕ್ತಿ ಹಾಗೂ ಜನರೇಟರ್ ಗಳ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು.  ಸೋಂಕಿತರ ಸಂಖ್ಯೆಗನುಸಾರವಾಗಿ ಆಸ್ಪತ್ರೆಯ ಸೂಕ್ತ ಭದ್ರತೆಗಾಗಿ ಅಗತ್ಯವಿದ್ದಲ್ಲಿ ಹೋಮ್ ಗಾರ್ಡ್ಸಗಳನ್ನು ನೀಡಲಾಗುವುದು  ಎಂದರು.

ಒಟ್ಟಾರೆ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಸರ್ವಸಿದ್ಧತೆ ಮುಂಜಾಗ್ರತಾ ವಹಿಸಿ ಮಾಡಿಟ್ಟುಕೊಳ್ಳಬೇಕು ಹಾಗೂ ಆಸ್ಪತ್ರೆಯ ಸ್ವಚ್ಛತೆ ಸೇರಿದಂತೆ ಕುಡಿಯುವ ನೀರಿನ ಸೌಲಭ್ಯ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಅಗತ್ಯದ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಜಿಮ್ಸ್ ನಿರ್ದೇಶಕ ಡಾ.ಬಿ.ಎಸ್. ಭೂಸರಡ್ಡಿ ಮಾತನಾಡಿ, ಕೋವಿಡೇತರ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಜಿಲ್ಲಾ ಆಸ್ಪತ್ರೆಯಲ್ಲಿ 58, ಎಮ್.ಸಿ.ಎಚ್.ನಲ್ಲಿ 100 ಸೇರಿದಂತೆ ಒಟ್ಟು 178 ಬೆಡ್ ಗಳನ್ನು ಒದಗಿಸಲಾಗಿದೆ. 445 ಕೋವಿಡ್ ಸೋಂಕಿತರಿಗೆ ಬೆಡ್ ಗಳನ್ನು ಮೀಸಲಿರಿಸಲಾಗಿದ್ದು , ಐಸಿಯು ವಿಥ್  ವೆಂಟಿಲೇಟರ್ 85, ಐಸಿಯು ವಿಥೌಟ್ ವೆಂಟಿಲೇಟರ್ 50 ಬೆಡ್ ಗಳು, ಆಕ್ಸಿಜನ್  ಸೌಲಭ್ಯ ಹೊಂದಿದ 221 ಬೆಡ್‌ಗಳು ಮೀಸಲಿರಿಸಲಾಗಿದೆ ಎಂದರು.

ಸಂಸ್ಥೆಯಲ್ಲಿ ಪಿಎಂಕೇರ್‌ನಿಂದ 1000 ಎಲ್.ಪಿ.ಎಂ. ಆಕ್ಸಿಜನ್ ಉತ್ಪಾದನಾ ಘಟಕ ಆರಂಭಿಸಲಾಗಿದೆ.    ಸೋಂಕಿತರ ಚಿಕಿತ್ಸೆಗಾಗಿ 75 ಆಮ್ಲಜನಕ ಕಾನ್ಸನ್ಟೇಟರ್‌ಗಳು ಇದ್ದು, ಇದರಲ್ಲಿ 10 ಲೀ ಸಾಮರ್ಥ್ಯದ 25 ಕಾನ್ಸನ್ಟೇಟರ್‌ಗಳು, 5 ಲೀ ಸಾಮರ್ಥ್ಯದ 50 ಕಾನ್ಸನ್ಟೇಟರ್‌ಗಳನ್ನು ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಆಕ್ಸಿಜನ್ ಸಂಗ್ರಹಣೆಗೆ 200 ಜಂಬೋ ಸಿಲೆಂಡರ್‌ಗಳು ಇವೆ. ಆವರಣದಲ್ಲಿ ಈಗಾಗಲೇ 13 ಕೆ.ಎಲ್. ಹಾಗೂ 20 ಕೆ.ಎಲ್.ಸಾಮರ್ಥ್ಯದ ಆಕ್ಸಿಜನ್ ಸಂಗ್ರಹಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. 133 ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು ಇದರಲ್ಲಿ 104 ವಯಸ್ಕರಿಗೆ, 29 ಮಕ್ಕಳಿಗೆ ಮೀಸಲಿಡಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಶಸ್ತಚಿಕಿತ್ಸಕ ಡಾ.ವಿ.ಸಿ. ಕರಿಗೌಡ್ರ, ಡಾ. ಪಲ್ಲೇದ, ಜಿಮ್ಸ್ ಅಧೀಕ್ಷಕ ಡಾ. ರಾಜಶೇಖರ್ ಮ್ಯಾಗೇರಿ, ಔಷಧಿ ಸಹಾಯಕ ನಿಯಂತ್ರಕ ಸಂಗಣ್ಣ ಶಿಳ್ಳೆ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಕೆ.ಆರ್.ಐ.ಡಿ.ಎಲ್. ಅಧಿಕಾರಿಗಳು ಸೇರಿದಂತೆ ವಿವಿಧ ವಿಭಾಗಗಳ ವೈದ್ಯರು ಇದ್ದರು.

Leave a Reply