ಕೃಷ್ಣ ಬೈರೇಗೌಡರಿಂದ “ಭೂಮಿ ಕ್ರಾಂತಿ”
‘ಊಳುವವನೇ ನೆಲದ ಒಡೆಯ’ – ದೇವರಾಜ ಅರಸು
‘ಈ ದೇಶದ ಸಂಪತ್ತು ಸರ್ವರಿಗೂ ಸಮನಾಗಿ ಹಂಚಿಕೆ ಆಗಬೇಕು’.
– ಸಿದ್ದರಾಮಯ್ಯ
‘ವಾಸಿಸುವವನೇ ಭೂಮಿಯ ಒಡೆಯ’
– ಕಾಗೋಡು ತಿಮ್ಮಪ್ಪ
….. ಹೀಗೆ ಉಳುವ ಭೂಮಿಗಳಿಗೆ, ವಾಸಿಸುವ ಮನೆಗಳಿಗೆ, ಹಕ್ಕು ಪತ್ರಗಳನ್ನು ನೀಡಿ, ಈಗ ನೊಂದಣಿ ದಾಖಲೆಗಳನ್ನು ನೀಡಿ, ಬಡವರನ್ನು ಆ ಭೂಮಿಯ “ಮಾಲೀಕ”ರನ್ನಾಗಿ ಮಾಡಿದ (ಮೇಲಿನ) ರಾಜಕೀಯ ದುರೀಣರ ಮತ್ತಷ್ಟು ಕನಸುಗಳನ್ನು ನನಸು ಮಾಡುವ ದಿಕ್ಕಿನಲ್ಲಿ; ಜೊತೆಗೆ, ಅಂದಿನ ಸಮಾಜವಾದದ ಶಾಂತವೇರಿ ಗೋಪಾಲಗೌಡ, ಬಂಗಾರಪ್ಪ, ರೈತ ಸಂಘದ ಪ್ರೊಫೆಸರ್ ನಂಜುಂಡಸ್ವಾಮಿರಿಂದ ಇಂದಿನ ತೀ.ನ. ಶ್ರೀನಿವಾಸ್, ಅರಗ ಜ್ಞಾನಂದ್ರ ರವರಿಗಿನ ಭೂಮಿ ಹೋರಾಟಗಾರರ ಹೋರಾಟಗಳಿಗೆ ನ್ಯಾಯ ನೀಡುವ ಸಲುವಾಗಿ, ಕಂದಾಯ ಸಚಿವ ಶ್ರೀ ಕೃಷ್ಣ ಭೈರೇಗೌಡರು ರಾಜ್ಯದಲ್ಲಿ ಇಡುತ್ತಿರುವ ಕ್ರಾಂತಿಕಾರಿ ಹೆಜ್ಜೆಗಳು, ಸುಧಾರಣೆಗಳು, ಭೂ ಹಂಚಿಕೆಗಳು, ರಾಜ್ಯದಲ್ಲಿ ಕ್ರಾಂತಿಯನ್ನೇ ಮಾಡಲು ಹೊರಟಿವೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಪಾರಂಪರಿಕ ಅರಣ್ಯ ವಾಸಿಗಳ 20,296 ಎಕರೆಗಳ ಸಾಗುವಳಿ ಭೂಮಿ ಸಕ್ರಮ: 2006ರಲ್ಲಿ ಮನಮೋಹನ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ, ಅನಾದಿ ಕಾಲದಿಂದ ಅರಣ್ಯದ ಒಳಗೆ ವಾಸವಿರುವ ಪರಿಶಿಷ್ಟ ಪಂಗಡ ಮತ್ತು ಪಾರಂಪರಿಕ ಅರಣ್ಯ ವಾಸಿಗಳು, ಸಾಗುವಳಿ ಮಾಡುತ್ತಿದ್ದ ಅರಣ್ಯ ಭೂಮಿಗಳನ್ನು ಸಕ್ರಮ ಮಾಡಲು, “ಅರಣ್ಯ ಹಕ್ಕುಗಳ ಮಾನ್ಯತೆ(ಪರಿಶಿಷ್ಟ ಪಂಗಡ ಮತ್ತು ಪಾರಂಪರಿಕ ಅರಣ್ಯ ವಾಸಿಗಳು) ಕಾಯ್ದೆ 2006” ಕಾನೂನು ರಾಷ್ಟ್ರವ್ಯಾಪಿ ಜಾರಿಗೆ ತಂದಿದ್ದರು. ಈ ಕಾನೂನು ಅವಕಾಶಗಳಡಿ ರಾಜ್ಯದಲ್ಲಿ ಈವರೆಗೆ 20,296 ಎಕರೆಗಳಷ್ಟು ಅರಣ್ಯ ವಾಸಿಗಳ ಸಾಗುವಳಿ ಭೂಮಿಯನ್ನು ಸಕ್ರಮ ಮಾಡಲಾಗಿದೆ. ಬಾಕಿ ಇರುವ 16,061 ಅರ್ಜಿಗಳ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ. ಪ್ರಕ್ರಿಯೆಗಳು ಮುಗಿಯುವವರೆಗೂ ಯಾರನ್ನು ಒಕ್ಕಲಿಬ್ಬಿಸಬಾರದೆಂದು ಈ ಹಿಂದೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಇವರು ದಿನಾಂಕ 21.09.2015ರಂದು ಹೊರಡಿಸಿದ ಸರ್ಕಾರಿ ಆದೇಶದಲ್ಲಿ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಹಾಲಿ ಸರ್ಕಾರ ಕೂಡ ಈ ಆದೇಶವನ್ನು ಮುಂದುವರಿಸಿದೆ.
ಈ ಕಾನೂನು ಮತ್ತು ಸರ್ಕಾರಗಳ ಕ್ರಮಗಳಿಂದ ಲಕ್ಷಾಂತರ ಪರಿಶಿಷ್ಟ ಪಂಗಡ ಮತ್ತು ಪಾರಂಪರಿಕ ಅರಣ್ಯ ವಾಸಿಗಳಿಗೆ ಭೂಮಿ ಸಿಕ್ಕಿದೆ. ಅವರ ಸಾಗುವಳಿಗೆ ರಕ್ಷಣೆ ಸಿಕ್ಕಿದೆ. ಅನುಕೂಲವಾಗಿದೆ.
ಸಣ್ಣ ಹಿಡುವಳಿದಾರರ 14,848.83 ಹೆಕ್ಟರ್ ಅರಣ್ಯ ಭೂಮಿ ಒತ್ತುವರಿ ಸಕ್ರಮ: ಕರ್ನಾಟಕ ರಾಜ್ಯ 1,91,791 ಚಕಿಮೀ ಭೌಗೋಳಿಕ ಭೂ ಪ್ರದೇಶವನ್ನು ಹೊಂದಿದೆ. ಆ ಪೈಕಿ 40,678 ಚಕಿಮೀ ಅರಣ್ಯ ಪ್ರದೇಶವಿದೆ. ಈ ಪೈಕಿ 2,15,393 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿರುವ ಮಾಹಿತಿಗಳಿವೆ. ಅನಾದಿಕಾಲದಿಂದ ಈ ಅರಣ್ಯ ಭೂಮಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಾ , ಕೆಲವರು ಮನೆ ಕಟ್ಟಿಕೊಂಡು ವಾಸಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಹೀಗೆ ಅನಧಿಕೃತ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವವರ ಪೈಕಿ, 3 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿರುವ ಸಣ್ಣ ಹಿಡುಳಿದಾರರ ಸಾಗುವಳಿ ಭೂಮಿಯನ್ನು ‘ಅರಣ್ಯ (ಸಂರಕ್ಷಣಾ) ಕಾಯ್ದೆ 1980’ರ ಅವಕಾಶಗಳಡಿ, ಭಾರತ ಸರ್ಕಾರದ ಅನುಮತಿ ಪಡೆದು, ಸಕ್ರಮ ಮಾಡಲು ಈ ಹಿಂದೆ ಮಾನ್ಯ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ದಿನಾಂಕ:21-9-2025ರಂದು ಸರ್ಕಾರಿ ಆದೇಶದ(No. ಅಪಜೀ. 45 ಎಫ್ ಜಿಎಲ್ 2015) ಮುಖೇನ ಆದೇಶ ಮಾಡಿದ್ದರು. ಹಾಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಕೂಡ ಸಣ್ಣ ಹಿಡುವಳಿದಾರರ ಈ ಅರಣ್ಯ ಭೂಮಿಗಳ ಸಕ್ರಮ ಪ್ರಕ್ರಿಯೆಗಳನ್ನು ಮುಂದುವರಿಸಿದ್ದಾರೆ. ಪ್ರಕ್ರಿಯೆಗಳು ಮುಗಿಯುವವರೆಗೆ ಸಣ್ಣ ಹಿಡುವಳಿದಾರರನ್ನು ಒಕ್ಕಲೆಬ್ಬಿಸಬಾರದೆಂದು ಸದರಿ ಆದೇಶದಲ್ಲಿಯೇ ಸೂಚನೆಗಳನ್ನು ನೀಡಿದ್ದಾರೆ. 1978ರ ಪೂರ್ವದಲ್ಲಿ ರಾಜ್ಯದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿರುವ ಅನಧಿಕೃತ ಸಾಗುವಳಿಗಳನ್ನು ಸಕ್ರಮ ಮಾಡಲು ಭಾರತ ಸರ್ಕಾರದಿಂದ ಕರ್ನಾಟಕ ಸರ್ಕಾರ ಈಗಾಗಲೇ 14,848.83 ಹೆಕ್ಟರ್ ಅರಣ್ಯ ಭೂಮಿ ಸಕ್ರಮ ಮಾಡಲು ಅನುಮತಿ ಪಡೆದಿದೆ. ಇನ್ನುಳಿದ ಪ್ರಕರಣಗಳಿಗೆ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಇದರಿಂದ ರಾಜ್ಯದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿರುವ ಲಕ್ಷಾಂತರ ಸಣ್ಣ ಹಿಡುವಳಿದಾರರಿಗೆ ಭೂಮಿ, ಸಾಗುವಳಿಗೆ ರಕ್ಷಣೆ ಸಿಕ್ಕಿದೆ. ಅನುಕೂಲವಾಗಿದೆ.
ವಾಸಿಸುವವನೇ ನೆಲದ ಒಡೆಯ: ರಾಜ್ಯದ ಗ್ರಾಮೀಣ / ನಗರ ಪ್ರದೇಶಗಳ ಸರ್ಕಾರಿ ಭೂಮಿ, ಹಾಡಿ, ಹಟ್ಟಿ, ಕ್ಯಾಂಪ್,… ಇತ್ಯಾದಿ ಭೂಮಿಗಳಲ್ಲಿ ಅನಧಿಕೃತವಾಗಿ ಮನೆ, ಗುಡಿಸಲು ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ಬಡವರಿಗೆ ಆ ವಾಸದ ಭೂಮಿಯ ಮಾಲೀಕತ್ವವನ್ನು ಕೊಡಲು 2015ರಲ್ಲಿ ಕಂದಾಯ ಸಚಿವರಾಗಿದ್ದ ಶ್ರೀ ಕಾಗೋಡು ತಿಮ್ಮಪ್ಪ ಇವರು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಾನೂನಿಗೆ ತಿದ್ದುಪಡಿ ತಂದು, ಹೆಚ್ಚುವರಿಯಾಗಿ ಸೆಕ್ಷನ್ 94ಸಿ ಮತ್ತು 94ಸಿಸಿ ಸೇರ್ಪಡೆ ಮಾಡಿದರು. ಈ ಕಾನೂನಿನಡಿ ಲಕ್ಷಾಂತರ ಬಡವರಿಗೆ ತಾವು ವಾಷಿಸುತ್ತಿದ್ದ ಮನೆಗಳಿಗೆ ಹಕ್ಕುಪತ್ರಗಳನ್ನು ನೀಡಲಾಯಿತು. ಆ ಮೂಲಕ ಆ ಬಡವರನ್ನು ‘ವಾಸಿಸುವವನೇ ಭೂಮಿ ಒಡೆಯ’ ಎಂದು ಘೋಷಣೆ ಮಾಡಲಾಯಿತು.
ಈ ಕಾನೂನನ್ನು ಬೆಂಬಲಿಸಿ, ಬಾಕಿ ಉಳಿದಿರುವ ಅನಧಿಕೃತ ವಾಸದ ಮನೆಗಳಿಗೆ ಹಕ್ಕು ಪತ್ರಗಳನ್ನು ನೀಡುವ ಜೊತೆಗೆ ನೊಂದಣಿ ಮಾಡಿಸಿ ಕೊಡುವ ಪ್ರಕ್ರಿಯೆಗಳನ್ನು ಹಾಲಿ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಮುಂದುವರಿಸಿದ್ದಾರೆ. ಲಕ್ಷಾಂತರ ಗುಡಿಸಲು, ಮನೆ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿರುವ ಬಡವರು ಆಯಾ ನಿವೇಶನಗಳ ಒಡೆಯರಾಗಿದ್ದಾರೆ. ಅವರೆಲ್ಲರಿಗೂ ಮತ್ತು ಅವರ ಕುಟುಂಬಗಳಿಗೆ ಅನುಕೂಲವಾಗಿದೆ.
ಫೋಡಿ ಮುಕ್ತ ಗ್ರಾಮ ಅಭಿಯಾನ ಯೋಜನೆ, 3,43,610 ಅರ್ಜಿಗಳ ವಿಲೆ: ರಾಜ್ಯದಲ್ಲಿ, ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರ ಅವಧಿ ಸೆಪ್ಟೆಂಬರ್ 2015ರಿಂದ ಬಹು ಮಾಲೀಕತ್ವ ಖಾಸಗಿ/ ಹಿಡುವಳಿ ಜಮೀನುಗಳನ್ನು ಏಕ ಮಾಲೀಕತ್ವಕ್ಕೆ ಪರಿವರ್ತಿಸುವ ಉದ್ದೇಶದಿಂದ ಫೋಡಿ ಮುಕ್ತ ಗ್ರಾಮ ಅಭಿಯಾನ ಯೋಜನೆ ಯನ್ನು ರಾಜ್ಯದ ಸುಮಾರು 174 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾರಂಭಿಸಲಾಗಿದೆ.
ಸಾರ್ವಜನಿಕರು ದೈನಂದಿನ ಅಳತೆ ಕೋರಿ ಸ್ವೀಕೃತಿಯಾದ ಅರ್ಜಿಗಳಿಗೆ ಮೊದಲ ಆದ್ಯತೆ ನೀಡಿ; ಹೆಚ್ಚಿನ ಸಾರ್ವಜನಿಕರ ಅರ್ಜಿಗಳು ಬಾಕಿ ಇಲ್ಲದಿರುವ ತಾಲೂಕುಗಳಲ್ಲಿ, ಈ ಪೋಡಿ ಮುಕ್ತ ಗ್ರಾಮ ಅಭಿಯಾನ ಯೋಜನೆಯಡಿ ಗ್ರಾಮ ಗ್ರಾಮಗಳನ್ನೇ ಹಂತ ಹಂತವಾಗಿ ಆಯ್ಕೆ ಮಾಡಿಕೊಂಡು, ಅಳತೆ ಕಾರ್ಯ ಮಾಡಲಾಗುತ್ತಿದೆ.
ದಿನಾಂಕ 31-7-2025ಕ್ಕೆ ಕೊನೆಗೊಂಡಂತೆ, ರಾಜ್ಯದಲ್ಲಿ ಅಂದಾಜು 4,03,413 ಫೋಡಿ ಅರ್ಜಿಗಳು ಸ್ವೀಕಾರಗೊಂಡಿವೆ. ಆ ಪೈಕಿ 3,43,610 ಅರ್ಜಿಗಳು ವಿಲೇ ಆಗಿವೆ. 59,803 ಅರ್ಜಿಗಳು ಬಾಕಿ ಇವೆ. ಹಾಗೆಯೇ 8,034 ಗ್ರಾಮಗಳನ್ನು ಯೋಜನೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಆ ಪೈಕಿ 2,639 ಗ್ರಾಮಗಳ ಅಳತೆ ಕಾರ್ಯ ಪೂರ್ಣಗೊಂಡಿದೆ.
ಶೀಘ್ರ ವಿಲೇವಾರಿ ಮತ್ತು ಫೋಡಿ ಮುಕ್ತ ಗ್ರಾಮ ಅಭಿಯಾನ ಯೋಜನೆಯಿಂದ ವರ್ಷಾನುಗಟ್ಟಲೆಯಿಂದ ಭೂಮಿಗಳ ಪೋಡಿಗಾಗಿ ಅಲೆಯುತ್ತಿದ್ದ ಲಕ್ಷಾಂತರ ರೈತರಿಗೆ ಅನುಕೂಲವಾಗಿದೆ. ಅವರ ಸಾಗುವಳಿ ಭೂಮಿಗೆ, ಹದ್ದುಬಸ್ತು, ಪ್ರತ್ಯೇಕ ಕಂದಾಯ ದಾಖಲಾತಿಗಳು ಸಿಕ್ಕಿವೆ.
ಬಗರ್ ಹುಕುಂ ಸಾಗುವಳಿಯ 6,07,659 ಅರ್ಜಿಗಳ ಭೂಮಿ ಸಕ್ರಮ: ಸರ್ಕಾರದ ಕಂದಾಯ ಭೂಮಿಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಕೃಷಿ ಭೂಮಿಯನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 94ಎ, 94ಬಿ, 94ಎ(4) ಗಳಲ್ಲಿ ಅನುಕ್ರಮವಾಗಿ ನಮೂನೆ 50, 53, 57ರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ, ಸ್ಥಳೀಯ ಕಂದಾಯ ಅಧಿಕಾರಿಗಳು ಪರಿಶೀಲಿಸಿ ಸಕ್ರಮಗೊಳಿಸಲು ಕಾನೂನುಗಳಲ್ಲಿ ಅವಕಾಶ ಕಲ್ಪಿಸಿದೆ.
ಕೃಷ್ಣ ಬೈರೇಗೌಡರವರು ಕಂದಾಯ ಸಚಿವರಾದ ಕೂಡಲೇ ಸಲ್ಲಿಸಿರುವ ಬಗರ್ ಹುಕುಂ ಈ ಅರ್ಜಿಗಳನ್ನು ಆದಷ್ಟು ಬೇಗ ಇತ್ಯರ್ಥ ಮಾಡಲು ಸುತ್ತೋಲೆ ಸಂಖ್ಯೆ: ಅರ್‌ಡಿ 45 ಎಲ್ ಜಿಪಿ 2023 ದಿನಾಂಕ 1.12. 2023ರಂದು ರಾಜ್ಯದ ಕಂದಾಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಅದರಂತೆ ರಾಜ್ಯದಲ್ಲಿ, ದಿನಾಂಕ: 18-8-2025ಕ್ಕೆ ಕೊನೆಗೊಂಡಂತೆ: ನಮೂನೆ 50ರಲ್ಲಿ 10,87,880 ಅರ್ಜಿಗಳು ಸ್ವೀಕಾರಗೊಂಡಿವೆ. ಆ ಪೈಕಿ 3,80,085 ಅರ್ಜಿಗಳ ಅಕ್ರಮ ಸಾಗುವಳಿ ಭೂಮಿಯನ್ನು ಸಕ್ರಮ ಮಾಡಲಾಗಿದೆ. 7,03,051 ಅರ್ಜಿಗಳು ತಿರಸ್ಕೃತಗೊಂಡಿವೆ. 4754 ಅರ್ಜಿಗಳು ವಿಲೇಗೆ ಬಾಕಿ ಇವೆ.
ಹಾಗೆಯೇ ನಮೂನೆ 53 ರಲ್ಲಿ, 11,01,204 ಅರ್ಜಿಗಳು ಸ್ವೀಕಾರಗೊಂಡಿವೆ. ಆ ಪೈಕಿ 2,18,850 ಅರ್ಜಿಗಳ ಅಕ್ರಮ ಸಾಗುವಳಿ ಭೂಮಿಯನ್ನು ಸಕ್ರಮಗೊಳಿಸಲಾಗಿದೆ. 7,97,176 ಅರ್ಜಿಗಳು ತಿರಸ್ಕೃತಗೊಂಡಿವೆ. 85,178 ಅರ್ಜಿಗಳು ವಿಲೇಗೆ ಬಾಕಿ ಇವೆ.
ಹಾಗೆಯೇ, ನಮೂನೆ 57ರಲ್ಲಿ 12,80,462 ಅರ್ಜಿಗಳು ಸ್ವೀಕಾರಗೊಂಡಿವೆ. ಆ ಪೈಕಿ 8724 ಅರ್ಜಿಗಳ ಅಕ್ರಮ ಸಾಗುವಳಿ ಭೂಮಿಯನ್ನು ಸಕ್ರಮ ಮಾಡಲಾಗಿದೆ. 5,48,205 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇನ್ನು 7,23,533 ಅರ್ಜಿಗಳು ವಿಲೇಗೆ ಬಾಕಿ ಇವೆ.
ಸಾಮಾನ್ಯವಾಗಿ ಕೆಳಕಂಡ ಕಾರಣಗಳಿಂದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ:
1. ಕರ್ನಾಟಕ ಭೂ ಕಂದಾಯ ನಿಯಮಾವಳಿಗಳು 1966, ನಿಯಮ 108ಎಫ್ ರಲ್ಲಿ ನಿಗದಿಪಡಿಸಿದ ಅರ್ಹತೆಗಳನ್ನು ಅರ್ಜಿದಾರ ಹೊಂದಿಲ್ಲ
2. ಅರ್ಜಿದಾರರು ಮಂಜುರಾತಿ ಕೋರಿ ಸಲ್ಲಿಸಿರುವ ಜಮೀನು, ಪಟ್ಟಣ ಪಂಚಾಯಿತಿ ಗಡಿ ವ್ಯಾಪ್ತಿಯಲ್ಲಿದೆ.
3. ಸೊಪ್ಪಿನ ಬೆಟ್ಟ, ಕಾನು, ಅರಣ್ಯ, ಕುಮ್ಕಿ, ಬಾಣೆ, ಕಾಣೆ, ಜಮ್ಮ… ಇತ್ಯಾದಿ ಭೂಮಿಯಾಗಿದೆ.
4. ಅರ್ಜಿದಾರನಿಗೆ ಹಿಡುವಳಿ ಜಮೀನು, ಮಿತಿಗಿಂತ ಜಾಸ್ತಿ ಇದೆ.
5. ಹಿಸ್ಟಾರಿಕಲ್ ಮ್ಯಾಪ್ ನಲ್ಲಿ ನಿಗದಿತ ಅವಧಿ ಪೂರ್ವದಿಂದ ಸಾಗುವಳಿ ಮಾಡಿಲ್ಲ.
6. ಗೋಮಾಳ ಕೊರತೆ
ಇಷ್ಟಾಗಿಯೂ ತಿರಸ್ಕೃತಗೊಂಡ ಅರ್ಜಿದಾರರಿಗೆ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಹೇಗೆ ಸಹಾಯ ಮಾಡಬಹುದೆಂದು ಕೂಡ ಪ್ರಯತ್ನಿಸಿದ್ದಾರೆ.
ಕಾನೂನು ಮತ್ತು ಕಂದಾಯ ಸಚಿವರ ಪ್ರಯತ್ನಗಳಿಂದ ಹಲವಾರು ದಶಕಗಳಿಂದ ಉಳಿಮೆ ಮಾಡುತ್ತಿದ್ದ ಲಕ್ಷಾಂತರ ಭಗರ್ ಹುಕುಂ ಸಾಗುವಳಿದಾರರಿಗೆ ರಾಜ್ಯದಲ್ಲಿ ಭೂಮಿ ಸಿಕ್ಕಿದೆ. ಸಕ್ರಮದ ಜಮೀನುಗಳನ್ನು ನೊಂದಣಿ ಮಾಡಿಕೊಡಲಾಗಿದೆ. ಅನುಕೂಲವಾಗಿದೆ.
ಭೂ ಮಾಲೀಕರೇ, ಭೂ ಪರಿವರ್ತನೆ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ: ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 95ರಲ್ಲಿ ರೈತರ ಕೃಷಿ ಜಮೀನು ಭೂ ಬಳಕೆಯನ್ನು ಇತರ ಉದ್ದೇಶಗಳಿಗೆ ಭೂ ಪರಿವರ್ತನೆ ಮಾಡಿಕೊಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಹಿಂದೆ ನೀಡಲಾಗಿತ್ತು. ಇದರಿಂದ ಭ್ರಷ್ಟಾಚಾರ, ವಿಳಂಬಗಳಿಂದ ಬಹಳಷ್ಟು ರೈತರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆಂಬ ಆರೋಪಗಳಿದ್ದವು.
ಭೂ ಪರಿವರ್ತನೆಯಲ್ಲಿ ಸರ್ಕಾರಿ ಅಧಿಕಾರಿಗಳಿಂದ ಆಗುವ ವಿಳಂಬ ಅಥವಾ ಭ್ರಷ್ಟಾಚಾರವನ್ನು ತಪ್ಪಿಸುವ ಸಲುವಾಗಿ ಹಾಲಿ ಶ್ರೀ ಸಿದ್ದರಾಮಯ್ಯ ಸಚಿವ ಸಂಪುಟದ ಕಂದಾಯ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಅವರು, ಸದರಿ ಕಾಯ್ದೆಗೆ 2023 ರಲ್ಲಿ ತಿದ್ದುಪಡಿ ತಂದು, ಕೃಷಿ ಜಮೀನನ್ನು ಭೂಮಿಯ ಅದಿಬೋಗದಾರನು ಅಂಥ ಭೂಮಿಯನ್ನು ಅಥವಾ ಅದರ ಯಾವುದೇ ಭಾಗವನ್ನು ಯಾವುದೇ ಇತರ ಉದ್ದೇಶಕ್ಕಾಗಿ ಬದಲಿಸಲು ಇಚ್ಛಿಸಿದರೆ, ಆತನು ನಿಯಮಿಸಬಹುದಾದಂತ ರೀತಿಯಲ್ಲಿ ಒಂದು ಅಫಿಡಾವಿಟ್ ಜೊತೆಗೆ ಜಿಲ್ಲಾಧಿಕಾರಿಗೆ ಅರ್ಜಿಯನ್ನು ನೀಡಿ, ಭೂ ಪರಿವರ್ತನೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸದರಿ ಭೂ ಪರಿವರ್ತನೆಯು, ‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ 1961’ರ ಅವಕಾಶಗಳಡಿ ಘೋಷಣೆ ಮಾಡಿದ ಮಾಸ್ಟರ್ ಪ್ಲಾನ್ ನಲ್ಲಿ ಸದರಿ ಭೂಮಿಯನ್ನು ನಿರ್ದಿಷ್ಟ ಪಡಿಸಿದ ಬಳಕೆಗೆ ಅನುಗುಣವಾಗಿ ಬದಲಾವಣೆಗೆ ಕೋರಬಹುದಾಗಿದೆ.
ಒಂದು ವೇಳೆ ಜಿಲ್ಲಾಧಿಕಾರಿಗಳು ಕೇವಲ ಏಳು ದಿನಗಳ ಒಳಗೆ ರೈತರ ಅರ್ಜಿಯ ಬಗ್ಗೆ ಆದೇಶ ಮಾಡದಿದ್ದಲ್ಲಿ,”ಜಿಲ್ಲಾಧಿಕಾರಿಯು ಬಳಕೆ ಬದಲಾವಣೆಗಾಗಿ ಅನುಮೋದನೆ ನೀಡಿದ್ದಾರೆ” ಎಂದು ಭಾವಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇದರಿಂದ ಭೂ ಪರಿವರ್ತನೆ ವಿಷಯದಲ್ಲಿ ಲಕ್ಷಾಂತರ ರೈತರಿಗೆ ಅನುಕೂಲವಾಗಿದೆ. ಭ್ರಷ್ಟಾಚಾರ, ವಿಳಂಬಕ್ಕೆ ಕೃಷ್ಣ ಬೈರೇಗೌಡರು ಇತಿಶ್ರೀ ಹಾಡಿದ್ದಾರೆ.
ಆಸ್ತಿಗಳ ಕಾನೂನುಬಾಹಿರ ನೋಂದಣಿ ತಡೆಯಲು ಕ್ರಮ: ರಾಜ್ಯದಲ್ಲಿ ಬಡವರು, ಅನಕ್ಷರಸ್ಥರು, ದುರ್ಬಲರು, ಹೊಂದಿದ್ದ ಅಥವಾ ಪಿತ್ರಾರ್ಜಿತವಾಗಿ ಬಂದಿದ್ದ ಆಸ್ತಿಗಳನ್ನು, ಹಣವಂತರು, ತೋಳ್ಬಲ ಇರುವವರು, ಕ್ರಿಮಿನಲ್ ಗಳು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ, ಕಾನೂನು ಬಾಹಿರವಾಗಿ ಬೇರೆಯವರಿಗೆ ಮಾರಾಟ/ ನೊಂದಣಿ ಮಾಡಿಸಿ ವಂಚನೆ ಮಾಡುತ್ತಿದ್ದರು ಎಂಬ ಆರೋಪಗಳಿದ್ದವು. ಮತ್ತಷ್ಟು ಕೋರ್ಟು, ಕಚೇರಿಗಳ ವ್ಯಾಜ್ಯದಲ್ಲಿ ವರ್ಷಾನುಗಟ್ಟಲೆ ಮುಂದುವರಿಯುವಂತೆ ಮಾಡುತ್ತಾರೆಂಬ ಆರೋಪಗಳೂ ಬರುತ್ತಿದ್ದವು.
ಇಂತಹ ವಂಚನೆಗಳಿಗೆ ಕಡಿವಾಣ ಹಾಕಲು, ಬಡವರು, ಅನಕ್ಷರಸ್ಥರು, ದುರ್ಬಲರ ಆಸ್ತಿಗಳನ್ನು ರಕ್ಷಣೆ ಮಾಡುವ ಸಲುವಾಗಿ, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ರವರು ‘ನೊಂದಣಿ ಕಾಯ್ದೆ 1908’ ಕ್ಕೆ ಅಗತ್ಯ ತಿದ್ದುಪಡಿಗಳನ್ನು ತಂದು, ಸಾರ್ವಜನಿಕ ಹಿತದೃಷ್ಟಿಯಿಂದ ಸಬ್ ರಿಜಿಸ್ಟರ್ ರವರು ಸ್ವತ್ತಿನ ನೋಂದಣಿ ಸಮಯದಲ್ಲಿ ಕೈಗೊಳ್ಳಬೇಕಾದ ಯುಕ್ತ ಕಾರ್ಯ ತತ್ಪರತೆಯನ್ನು ಖಚಿತಪಡಿಸಿದ್ದಾರೆ; ನಗರ ಪ್ರದೇಶಗಳಲ್ಲಿ ಆಸ್ತಿಗಳ ಕಾನೂನುಬಾಹಿರ ನೋಂದಣಿಯನ್ನು ತಡೆಯಲು ಮತ್ತು ಸ್ವತ್ತಿನ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲು ಸ್ವತ್ತು ತಂತ್ರಾಂಶಗಳನ್ನು ವಿದ್ಯುನ್ಮಾನ ವ್ಯವಸ್ಥೆಗಳ ಮೂಲಕ ಸಂಯೋಜಿಸಿದ್ದಾರೆ; ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಪಕ್ಷಕಾರರು ಖುದ್ದಾಗಿ ಹಾಜರಾಗದೆ ಕೆಲವು ಕಡ್ಡಾಯ ನೋಂದಣಿಯಾಗಬೇಕಾದ ದಸ್ತವೇಜುಗಳ ಇ-ನೋಂದಣಿ/ ರಿಮೋಟ್ ನೋಂದಣಿಯನ್ನು ಜಾರಿಗೊಳಿಸಿದ್ದಾರೆ; ವಿಳಂಬವನ್ನು ತಪ್ಪಿಸಲು ಕೇಂದ್ರೀಕೃತ ವರ್ಚುಯಲ್ ವಿತರಣಾ ವ್ಯವಸ್ಥೆಯ ಮೂಲಕ ಪ್ರಾಮಾಣಿಕೃತ ಪ್ರತಿಗಳನ್ನು ಪಡೆಯಲು ಅವಕಾಶ ಕಲ್ಪಿಸಿದ್ದಾರೆ; ಮುಂದುವರೆದು, ಮಾರಾಟ ಮಾಡಲು ಉದ್ದೇಶಿಸಿದ ಸ್ವತ್ತು ಅಥವಾ ಭೂಮಿಯ ವಿದ್ಯುನ್ಮಾನ ಖಾತೆ ಹಕ್ಕುಪತ್ರ ಮತ್ತು ಸಬ್ ರಿಜಿಸ್ಟರ್ ನಿಯಮಿಸಿದ ವಿವಿಧ ದಾಸ್ತಾವೇಜುಗಳು ಇಲ್ಲದಿದ್ದಾಗ ಆ ಸ್ವತ್ತಿನ ನೋಂದಣಿಯನ್ನು ನಿರಾಕರಿಸಲು ಸಬ್ ರಿಜಿಸ್ಟರ್ ರವರಿಗೆ ಅಧಿಕಾರ ನೀಡಿದ್ದಾರೆ.
ಬಲಯುತವಾದ ಈ ಕಾನೂನುಗಳಿಂದ ಕೃಷ್ಣ ಬೈರೇಗೌಡರ ಎದೆಗಾರಿಕೆಗಳಿಂದ ದಲ್ಲಾಳಿಗಳು, ಹಣವಂತರು, ತೋಳ್ಬಲ ಇರುವವರು, ಬಡವರ, ದುರ್ಬಲರ, ಅನಕ್ಷರಸ್ಥರ, ಆಸ್ತಿಗಳನ್ನು ವಂಚನೆಗಳಿಂದ ಕಬಳಿಸಲು, ಮಾರಾಟ ಮಾಡಲು, ಅವಕಾಶವಿಲ್ಲವಾಗಿದೆ. ನಿಯಂತ್ರಣವಾಗಿದೆ.
ಕೊಡಗು ಜಿಲ್ಲೆಯಲ್ಲಿನ ಜಮ್ಮಾ ಬಾಣೆ ಭೂಮಿ ವಿವಾದಗಳ ಪರಿಹಾರ: ಕೊಡಗು ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದ ಉತ್ತರಾಧಿಕಾರ ಮತ್ತು ವಿಶೇಷ ಸವಲತ್ತುಗಳ ಕುರಿತು ಹಲವಾರು ವಿವಾದಗಳು ಉದ್ಭವಿಸಿವೆ. ಇದರಿಂದ ವ್ಯಾಜ್ಯಗಳು ಮತ್ತು ಆಡಳಿತಾತ್ಮಕ ವಿಳಂಬಗಳಿಗೆ ಕಾರಣವಾಗಿವೆ.
ಜಮ್ಮು ಬಾಣೆ ಭೂ ಹಿಡುವಳಿ ವ್ಯವಸ್ಥೆಯು, ಕೊಡಗು ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ರಾಜ್ಯದ ಇತರೆ ವರ್ಗಗಳ ಭೂಮಿಗಿಂತ ಭಿನ್ನವಾದ ವಿಶೇಷ ರೀತಿಯ ಹಿಡುವಳಿಯಾಗಿದೆ. ಹಕ್ಕುಗಳ ದಾಖಲೆಗಳಲ್ಲಿ ಸ್ಪಷ್ಟ ನಮೂದುಗಳು ಇಲ್ಲದೆ, ಐತಿಹಾಸಿಕವಾಗಿ ಈ ಭೂಮಿಗಳನ್ನು ಅವಿಭಕ್ತ ಕುಟುಂಬಗಳ ಸದಸ್ಯರು ಸಾಂಪ್ರದಾಯಿಕ ಹಕ್ಕುಗಳ ಆಧಾರದ ಮೇಲೆ ಹೊಂದಿ, ಅನುಭವಿಸುತ್ತಿದ್ದಾರೆ. ಕಾಲಾಂತರದಲ್ಲಿ ಜಮ್ಮ ಬಾಣೆ ಹಿಡುವಳಿಗಳಿಗೆ ಸಂಬಂಧಿಸಿದಂತೆ ಮಾಲೀಕತ್ವ, ವಾರಸು, ಉತ್ತರ ಜೀವಿತಾದಿಕಾರ ಮತ್ತು ಪರಭಾರೆಗಳ ನಿಖರವಾದ ದಾಖಲೆಗಳನ್ನು ನಿರ್ವಹಿಸುವಲ್ಲಿ ತೊಡಕುಗಳು ಗೊಂದಲಗಳು ಉದ್ಭವಿಸಿವೆ.
ಆದ್ದರಿಂದ ಕೊಡಗು ಜಿಲ್ಲೆಯಲ್ಲಿ ಜಮ್ಮಾ ಬಾಣೆ ಭೂಹಿಡುವಳಿಯ ವಿಶಿಷ್ಟ ಸ್ವರೂಪವನ್ನು ಶಾಸನಬದ್ಧವಾಗಿ ಗುರುತಿಸುವುದು ಮತ್ತು ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರ ಹಕ್ಕುಗಳನ್ನು ಹಕ್ಕು-ಬದಲಾವಣೆ ಮತ್ತು ಕಂದಾಯ ರಿಜಿಸ್ಟರ್ ಗಳಲ್ಲಿ ಯುಕ್ತವಾಗಿ ದಾಖಲಿಸುವುದು, ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಅದಕ್ಕಾಗಿ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರು ಕರ್ನಾಟಕ ಭೂ ಕಂದಾಯ ಕಾಯ್ದೆ 1964ಕ್ಕೆ ಕೆಲವು ತಿದ್ದುಪಡಿಗಳನ್ನು ತಂದಿದ್ದಾರೆ.
ಜಮ್ಮಾ ಬಾಣೆ ಹಿಡುವಳಿಗಳಿಗೆ ಸಂಬಂಧಿಸಿದಂತೆ ಅವಿಭಕ್ತ ಕುಟುಂಬದ ಸದಸ್ಯರ ವಿವರಗಳನ್ನು ಹಕ್ಕು ಬದಲಾವಣೆ ರಿಜಿಸ್ಟರ್ ನಲ್ಲಿ ಸೇರಿಸುವುದನ್ನು ಕಡ್ಡಾಯಗೊಳಿಸುವುದು. ಅಂಥ ಭೂಮಿಯಲ್ಲಿ ಅವಿಭಕ್ತ ಕುಟುಂಬದ ಸದಸ್ಯರಾಗಿ ಹಕ್ಕುಗಳನ್ನು ಸ್ವಾದಿನ ಪಡಿಸಿಕೊಂಡ ವರದಿಯನ್ನು ಅಗತ್ಯಪಡಿಸುವುದು.ಅಂಥ ಹಕ್ಕುಗಳ ವಿಚಾರಣೆಯನ್ನು ನಡೆಸಲು ಮತ್ತು ಅನುಮತಿಸಲು ಕಂದಾಯ ಅಧಿಕಾರಿಗಳಿಗೆ ಅಧಿಕಾರವನ್ನು ನೀಡುವುದು. ಹಕ್ಕು-ಬದಲಾವಣೆ ರಿಜಿಸ್ಟರ್ ನಲ್ಲಿ ಅಂಥ ಹಕ್ಕುಗಳ ಸೂಕ್ತ ನೊಂದಣಿಗಾಗಿ ಉಪಬಂಧ ಕಲ್ಪಿಸುವುದು ಮತ್ತು ವಂಶವೃಕ್ಷ ಉತ್ತರ ಜೀವಿತಾಧಿಕಾರ, ವಾರಸು ಮತ್ತು ವಿಶೇಷ ಸವಲತ್ತುಗಳಿಗೆ ಸಂಬಂಧಿಸಿದ ಸುಸಂಗತ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವುದು. ಒಟ್ಟಾರೆ ಸ್ಪಷ್ಟತೆಯನ್ನು ತರಲು; ವ್ಯಾಜ್ಯಗಳನ್ನು ಕಡಿಮೆ ಮಾಡಲು; ಮತ್ತು ಜಮ್ಮಾ ಬಾಣೆ ಭೂಮಿಗಳ ಎಲ್ಲಾ ಪಾಲುದಾರರ ಹಕ್ಕುಗಳನ್ನು ರಕ್ಷಿಸಲು; ಈ ಕಾನೂನಿಗೆ ತಿದ್ದುಪಡಿಗಳನ್ನು ಮಾನ್ಯ ಸಚಿವರು ತಂದಿರುತ್ತಾರೆ. ಇದರಿಂದ ಅನಾದಿಕಾಲದಿಂದ ಇದ್ದ ಗೊಂದಲಗಳು, ತೊಡಕುಗಳು, ವಿವಾದಗಳು, ವ್ಯಾಜ್ಯಗಳು, ಬಗೆಹರಿಸಲು ಮತ್ತು ಆಡಳಿತಾತ್ಮಕ ವಿಳಂಬ ತಪ್ಪಿಸಲು ಅನುಕೂಲವಾಗಿದೆ.
ಶಾಸಕಾಂಗ ಪತ್ರಿಕೆ: ರಾಜ್ಯದ ಭವಿಷ್ಯವನ್ನೇ ರೂಪಿಸುವ “ರಾಜ್ಯ ಶಾಸಕಾಂಗ”ಕ್ಕೆ ಭಾರತ ಸಂವಿಧಾನ ನಿಗದಿಪಡಿಸಿರುವ ಕರ್ತವ್ಯಗಳ ಪೈಕಿ, ‘ಶಾಸನಗಳ ರಚನೆ’ ಒಂದು ಮೂಲ ಕರ್ತವ್ಯ. ಯಾವುದೇ ಶಾಸನಗಳನ್ನು ರಾಜ್ಯದ ಸಾರ್ವಜನಿಕ ಹಿತದೃಷ್ಟಿಯಿಂದ ರಚನೆ ಮಾಡಲಾಗುತ್ತದೆ. ಈ ಶಾಸನಸಭೆಗಳಲ್ಲಿ ರಚನೆಗೊಳ್ಳುವ ಪ್ರತಿ ಶಾಸನದ ಪ್ರತಿಯನ್ನು ರಚನೆ ಪೂರ್ವದಲ್ಲಿ ಮತ್ತು ರಚನೆ ತರುವಾಯ ‘ಕರ್ನಾಟಕ ರಾಜ್ಯಪತ್ರ’ ದಲ್ಲಿ ಪ್ರಕಟಿಸುವ ವ್ಯವಸ್ಥೆ ಹಾಲಿ ಇದೆ.
‘ರಾಜ್ಯಪತ್ರ’ಗಳನ್ನು ಓದುವ ಹವ್ಯಾಸ ಸಾರ್ವಜನಿಕರಲ್ಲಿ ಇಲ್ಲ. ಈ ವ್ಯವಸ್ಥೆಯಿಂದ ಈವರೆಗೂ ರಚನೆ ಮಾಡಿರುವ ಕಾನೂನುಗಳು ರಾಜ್ಯದ ಬಹುತೇಕ ನಾಗರಿಕರಿಗೆ ಪೂರ್ಣ ಪ್ರಮಾಣದಲ್ಲಿ ಲಭ್ಯವಿಲ್ಲ ಅಥವಾ ಆ ಕಾನೂನುಗಳ ಬಗ್ಗೆ ಅರಿವು, ಮಾಹಿತಿಗಳಿಲ್ಲ. ಈ ಅರಿವು ಮತ್ತು ಮಾಹಿತಿಗಳ ಕೊರತೆಯಿಂದ ಏನಾದರೂ ವ್ಯಾಜ್ಯಗಳಾದಾಗೆಲ್ಲ ವಕೀಲರನ್ನು ಸಾರ್ವಜನಿಕರು ಸಂಪರ್ಕಿಸಬೇಕಿದೆ. ಅದಕ್ಕಾಗಿ ಹಣ ಪಾವತಿಸಿ ಇರುವ ಆಸ್ತಿಪಾಸ್ತಿಗಳನ್ನು ಕಳೆದುಕೊಂಡ ಉದಾಹರಣೆಗಳಿವೆ.
ಜನಪ್ರತಿನಿಧಿಗಳ ಮೂಲಕ ರಾಜ್ಯ ಶಾಸಕಾಂಗದಲ್ಲಿ ರಚನೆಗೊಳ್ಳುವ ಪ್ರತಿ ಶಾಸನಗಳು, ಈ ರಾಜ್ಯದ ನಾಗರಿಕರು ತಿಳಿದುಕೊಳ್ಳುವ ಅಥವಾ ಅವರಿಗೆ ತಿಳಿಸುವ ಅರಿವು, ಜಾಗೃತಿ ಮೂಡಿಸುವ ಅಗತ್ಯತೆ ಇದೆ. ಮತ್ತು ಅದು ಅವರ ಹಕ್ಕು ಎಂದು ಪರಿಭಾವಿಸಿ, ನಾನು 2016/2017ರಲ್ಲಿ ‘ಕಾರ್ಯದರ್ಶಿ ಕರ್ನಾಟಕ ವಿಧಾನಸಭೆ’ ಹುದ್ದೆಯಲ್ಲಿ ಇದ್ದಾಗ, ಅಂದಿನ ಶಾಸಕಾಂಗದ ಉಭಯ ಪೀಠಗಳ ಸಭಾಧ್ಯಕ್ಷರುಗಳ ಅನುಮತಿ ಪಡೆದು, ಭಾರತ ಸರ್ಕಾರದ ‘ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ’ ನೋಂದಣಿ ಮತ್ತು ಅನುಮತಿ ಕೂಡ ಪಡೆದು, ರಾಜ್ಯ ಶಾಸಕಾಂಗದವತಿಯಿಂದ ‘ಶಾಸಕಾಂಗ ಪತ್ರಿಕೆ’ ಪ್ರಾರಂಭಿಸಲು ಪ್ರಯತ್ನಿಸಿದ್ದೆ. ಆದರೆ 2018ರ ಅವಧಿಯಲ್ಲಿ ನಾನು ದಲಿತ ಎಂಬ ಕಾರಣಕ್ಕೆ ಕೆಲವು ಮನುವಾದಿಗಳು ಹಲವು ಸಂಚುಗಳನ್ನು ರೂಪಿಸಿ, ಹಿಂದೆ ಸಭಾಧ್ಯಕ್ಷರಾಗಿದ್ದ ಶ್ರೀ ಕೆ ಬಿ ಕೋಳಿವಾಡ ಇವರು 2016/ 2017ರ ಸಾಲಿನಲ್ಲಿ ಬೆಳಗಾಂ ಅಧಿವೇಶನಕ್ಕಾಗಿ ವೆಚ್ಚ ಮಾಡಿದ ಕೆಲವು ಕಡತಗಳಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿದ್ದ ನಾನು ‘ ಸರಿಯಾಗಿ ಸಲಹೆ ನೀಡಿಲ್ಲ ‘ ಎಂಬ ಸುಳ್ಳು ಆರೋಪಗಳನ್ನು ನನ್ನ ವಿರುದ್ಧ ಹೊರಿಸಿ, ಕಾರ್ಯದರ್ಶಿ ಹುದ್ದೆಯನ್ನು ನನ್ನಿಂದ ಕಸಿದುಕೊಂಡರು. ನನ್ನ ಹುದ್ದೆಗೆ ಕಿರಿಯ ಬ್ರಾಹ್ಮಣ ಜಾತಿಯ ಮಹಿಳಾ ಅಧಿಕಾರಿಯನ್ನು ತಂದು ಕೂರಿಸಿದರು. ಆ 2016/2017 ವರ್ಷಗಳಲ್ಲಿ ಬೆಳಗಾಂನಲ್ಲಿ ಜರಗಿದ ವಿಧಾನ ಮಂಡಲದ ಅಧಿವೇಶನಗಳು ಯಶಸ್ವಿಯಾಗಿವೆ. ನೀಡಿದ ಅನುದಾನದ ಮಿತಿ ಒಳಗೆ ವೆಚ್ಚಗಳನ್ನು ಅಂದಿನ ಸಭಾಧ್ಯಕ್ಷ ರಾಗಿದ್ದ ಶ್ರೀ ಕೆ ಬಿ ಕೋಳಿವಾಡ ವೆಚ್ಚ ಮಾಡಿದ್ದಾರೆ ಮತ್ತು ಹಣ ಉಳಿಸಿದ್ದಾರೆ. CAG audit ಮಾಡಿದೆ. ಯಾವುದೇ ದೂರುಗಳಿಲ್ಲ. ಕಾರ್ಯದರ್ಶಿ ಹುದ್ದೆ ಸಲಹೆಗಾರ ಹುದ್ದೆ ಅಲ್ಲ. ಅಂದಿನ ಸಭಾಧ್ಯಕ್ಷರ ಆದೇಶಗಳನ್ನು ಪಾಲನೆ ಮಾಡಲಾಗಿದೆ. ಆ ಸಭಾಧ್ಯಕ್ಷರಿಂದ ಯಾವುದೇ ದೂರುಗಳಿಲ್ಲ. ಇಲಾಖಾ ವಿಚಾರಣೆಯಲ್ಲಿ ಯಾವುದೇ ಸಾಕ್ಷಾಧಾರಗಳೂ ಇಲ್ಲ. ಆದಾಗ್ಯೂ ದಂಡನೆ ವಿಧಿಸಿ, ನಾನು ದಲಿತ ಎಂಬ ಕಾರಣಕ್ಕೆ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಹುದ್ದೆಯಲ್ಲಿ ಜಾಸ್ತಿ ಅವಧಿಗೆ ಕೂರಲು ಬಿಟ್ಟಿಲ್ಲ ಕಸಿದುಕೊಂಡರು. ನಾನು ಹೊರತರಲು ಉದ್ದೇಶಿಸಿದ್ದ “ಶಾಸಕಾಂಗ ಪತ್ರಿಕೆ” ಕತ್ತುಹಿಸುಕಿದರು.
ಕೃಷ್ಣ ಬೈರೇಗೌಡ, ಕಂದಾಯ ಸಚಿವರು ಸಾರ್ವಜನಿಕ ಹಿತದೃಷ್ಟಿಯಿಂದ, ನಿಷ್ಠೆ, ಪ್ರಾಮಾಣಿಕತನ, ಎದೆಗಾರಿಕೆಯಿಂದ ತಂದಂತಹ ಶಾಸನಗಳ ತಿದ್ದುಪಡಿಗಳು ಸಾರ್ವಜನಿಕರಿಗೆ ತಿಳಿಸಬೇಕು, ಅವರಲ್ಲಿ ಅರಿವು, ಜಾಗೃತಿಗಳನ್ನು ಮೂಡಿಸಬೇಕು ಎನ್ನುವ ಏಕೈಕ ಕಾರಣ ಮತ್ತು ಸದ್ಭಾವನೆಯ ಕಾರಣಕ್ಕಾಗಿ, ನಾನು ವೈಯಕ್ತಿಕವಾಗಿ ಅನ್ಯಾಯಕ್ಕೆ ಒಳಗಾಗಿದ್ದರೂ, ಒಬ್ಬ ದೇಶದ ಪ್ರಜೆಯಾಗಿ, ಭಾರತೀಯನಾಗಿ, ಈ ಕಾನೂನು ವಿವರಗಳನ್ನು ಕರ್ತವ್ಯಗಳೆಂದು ಬರೆದಿದ್ದೇನೆ. ಸ್ವೀಕರಿಸಿ. ಇನ್ನು ಮುಂದೆಯೂ ಶಾಸನಸಭೆ ರಚನೆ ಮಾಡುವ ಉತ್ತಮ ಕಾನೂನು/ಶಾಸನಗಳ ಬಗ್ಗೆ ಬರೆಯುತ್ತೇನೆ.
– ಕೃಷ್ಣ ಬೈರೇಗೌಡ, ಕಂದಾಯ ಸಚಿವ




