ದೆಹಲಿ: ಪೆಟ್ರೋಲಿಯಂ ಉತ್ಪನ್ನ ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲ ಮತ್ತು ವಿಮಾನ ಇಂಧನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಕೊರೊನಾ ನಂತರ ನಡೆಯಲಿರುವ ಮೊದಲ ದೈಹಿಕ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂಬ ವರದಿಗಳು ಕೇಳಿಬಂದಿವೆ. ಈ ವಾರ ಉತ್ತರಪ್ರದೇಶದ ಲಖ್ನೋದಲ್ಲಿ ಸೆ. 17ರಂದು ನಡೆಯಲಿರುವ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಜಿಎಸ್‌ಟಿ ಅನ್ವಯವಾಗುವ ದಿನಾಂಕವನ್ನು ಜಿಎಸ್‌ಟಿ ಕೌನ್ಸಿಲ್ ಇದುವರೆಗೆ ಘೋಷಿಸಿಲ್ಲ. ಆದರೆ ಜಿ ಎಸ್ ಟಿ ಜಾರಿಯಾದ ನಂತರ ರಾಜ್ಯಗಳ ಆದಾಯದಲ್ಲಿ ಖೋತಾ ಆಗಿದೆ. ಇದೀಗ ಇಂಧನವನ್ನೂ ಇದರ ವ್ಯಾಪ್ತಿಗೆ ತಂದಲ್ಲಿ ರಾಜ್ಯಗಳ ಆದಾಯಕ್ಕೆ ಧಕ್ಕೆಯಾಗಲಿದೆ ಎಂದು ಕೆಲವು ಪ್ರಾದೇಶಿಕ ಪಕ್ಷಗಳು ತಕರಾರು ತೆಗೆದಿವೆ.
ಇಂಧನ ಉತ್ಪನ್ನಗಳ ಮೇಲೆ ಏಕರೂಪದ ಜಿಎಸ್ಟಿ ವಿಧಿಸಲು ಕೌನ್ಸಿಲ್ ಸಿದ್ಧವಿಲ್ಲ ಎಂದು ಕೂಡ ಸರ್ಕಾರಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. 2019-20ರ ವಿತ್ತೀಯ ವರ್ಷದಲ್ಲಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳಿಂದ ಬರೋಬ್ಬರಿ 5.55 ಲಕ್ಷ ಕೋಟಿ ಆದಾಯ ಗಳಿಸಿದೆ. ಇದು ಸರ್ಕಾರಗಳ ಪ್ರಮುಖ ಆದಾಯದ ಮೂಲವಾಗಿದೆ.
ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನಸಾಮಾನ್ಯರು ಇಂಧನವನ್ನು ಜಿ ಎಸ್ ಟಿ ವ್ಯಾಪ್ತಿಗೆ ತರಲು ಒತ್ತಾಯಿಸಿದರೆ, ಕೆಲವು ರಾಜಕೀಯ ಪಕ್ಷಗಳು ಜಿ ಎಸ್ ಟಿ ವ್ಯಾಪ್ತಿಗೆ ತರುವುದನ್ನು ವಿರೋಧಿಸಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತನ್ನಿ ಎಂದು ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಜಿ ಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆದು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.



