ನಡೆ ಮತ್ತು ನುಡಿಯಲ್ಲಿ ಮೋದಿ ಮತ್ತು ಅಮಿತ್ ಷಾ ಇಬ್ಬರನ್ನೂ ಮೀರಿಸುವ ಮಣಿಪುರದ ಮುಖ್ಯಮಂತ್ರಿ ಬೀರೇನ್ ಸಿಂಗ್ ಇದೀಗ ಮಣಿಪುರದ ಘಟನೆಯ ಕುರಿತಂತೆ ತಮ್ಮ ತನಿಖಾ ವರದಿಯಲ್ಲಿ ಸತ್ಯಾಂಶವನ್ನು ಪ್ರಕಟಿಸಿದ ಇಂಡಿಯನ್ ಎಡಿಟರ್ಸ್ ಗಿಲ್ಡ್ ( ಭಾರತೀಯ ಸಂಪಾದಕರ ಒಕ್ಕೂಟ) ಸಂಸ್ಥೆಯ ನಾಲ್ವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾನೆ.
ಕಳೆದ ಆಗಸ್ಟ್ 7 ರಿಂದ 10 ರವರೆಗೆ ಮಣಿಪುರದಲ್ಲಿ ಪ್ರವಾಸ ಮಾಡಿದ್ದ ಹಿರಿಯ ಪತ್ರಕರ್ತರಾದ ಸೀಮಾ ಗುಹಾ, ಭರತ್ ಭೂಷಣ್ ಹಾಗೂ ಸಂಜಯ್ ಕಪೂರ್ ಅವರು ಸರ್ಕಾರದ ದೌರ್ಬಲ್ಯಗಳನ್ನು ಎತ್ತಿ ಹಿಡಿದು ಸುಮಾರು 24 ಪುಟಗಳಷ್ಟು ವರದಿಯನ್ನು ಮೊನ್ನೆ ಶನಿವಾರ ಸೆಪ್ಟಂಬರ್ 2 ರಂದು ಬಿಡುಗಡೆ ಮಾಡಿದ್ದರು.
ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ಮಣಿಪುರ ಸರ್ಕಾರವು ಈ ಮೂವರು ಪತ್ರಕರ್ತರೂ ಸೇರಿದಂತೆ ಭಾರತೀಯ ಸಂಪಾದಕರ ಒಕ್ಕೂಟದ ಅಧ್ಯಕ್ಷರಾದ ಸೀಮಾ ಮುಸ್ತಫಾ ಅವರ ಮೇಲೆ ಮೊಕದ್ದಮೆ ದಾಖಲಿಸಿದೆ. ಸಮುದಾಯಗಳ ನಡುವೆ ದ್ವೇಷ ಹರಡುವ ಮೊಕದ್ದಮೆಯನ್ನು ಹಾಕಲಾಗಿದೆ. ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ವಿಶೇಷವಾಗಿ ವಿಭಜನೆಯ ದುರಂತದಲ್ಲಿ ಹಾಗೂ 1984 ರ ಅಕ್ಟೋಬರ್ ತಿಂಗಳಿನಲ್ಲಿ ಇಂದಿರಾಗಾಂಧಿಯವರು ಹತ್ಯೆಯಾದಾಗ ದೆಹಲಿಯಲ್ಲಿ ನಡೆದ ಸಿಖ್ ಸಮುದಾಯದ ಮೇಲೆ ನಡೆದ ಹತ್ಯೆಯನ್ನು ನೆನಪಿಸುವಂತಹ, ಮೇ ತಿಂಗಳಿನಲ್ಲಿ ನಡೆದ ಮಣಿಪುರದ ಅತ್ಯಾಚಾರ, ಕೊಲೆ ಘಟನೆ ಇವೆಲ್ಲವೂ ಎಲ್ಲಾ ನಾಗರೀಕರನ್ನು ತಲೆ ತಗ್ಗಿಸುವಂತೆ ಮಾಢಿತು.
ಮಣಿಪುರದಲ್ಲಿ ಗಲಭೆ ನಡೆಯುತ್ತಿದ್ದರೆ, ದೇಶದ ಪ್ರಧಾನಿ ಮತ್ತು ಗೃಹ ಸಚಿವರಿಬ್ಬರೂ ಕರ್ನಾಟಕದ ನಗರದ ಬೀದಿಗಳಲ್ಲಿ ತೆರದ ವಾಹನದಲ್ಲಿ ಜನರಿಗೆ ದರ್ಶನ ನೀಡುತ್ತಾ ಮತಕ್ಕಾಗಿ ಅಂಗಲಾಚುತ್ತಿದ್ದರು. ಎಡಿಟರ್ಸ್ ಗಿಲ್ಡ್ ನ ಪತ್ರಕರ್ತರು ಮಣಿಪುರ ಸರ್ಕಾರದ ಕುತಂತ್ರಗಳನ್ನು ಬಯಲಿಗೆಳದಿದ್ದಾರೆ.
ಮಣಿಪುರದಲ್ಲಿರುವ ಕುಕಿ ಬುಡಕಟ್ಟು ಸಮುದಾಯ ಇತ್ತೀಚೆಗೆ ಬಂದ ಅಕ್ರಮ ವಲಸಿಗರಲ್ಲ ಜೊತೆಗೆ ಇವರು ಬಂಡುಕೋರರ ಬಣಕ್ಕೆ ಸೇರಿದವರಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. 1991 ರಿಂದ 2011 ರವರೆಗೆ ನೆರೆಯ ಮ್ಯಾನ್ಮಾರ್ ( ಬರ್ಮಾ) ರಾಷ್ಟ್ರದಲ್ಲಿ ನಡೆದ ಜನಾಂಗೀಯ ಘರ್ಷಣೆಯಲ್ಲಿ ಜೀವಭಯದಿಂದ ನಲವತ್ತು ಸಾವಿರ ಮಂದಿ ಕುಕಿ ಸಮುದಾಯದ ಜನರು ಮಿಜೋರಾಂ ರಾಜ್ಯಕ್ಕೆ ಬಂದು ನೆಲೆಸಿದರೆ, ಕೇವಲ ನಾಲ್ಕು ಸಾವಿರ ಮಂದಿ ಮಣಿಪುರ ರಾಜ್ಯಕ್ಕೆ ವಲಸೆ ಬಂದು ನೆಲಸಿದ್ದಾರೆ.
ಮಣಿಪುರದಲ್ಲಿ ಮೈತಿ ಮತ್ತು ಕುಕಿ ಸಮುದಾಯಗಳ ಬಿಕ್ಕಟ್ಟಿಗೆ ಪರೋಕ್ಷವಾಗಿ ಇದೇ ಮುಖ್ಯಮಂತ್ರಿ ಕಾರಣನಾಗಿದ್ದಾನೆ. ಈ ವ್ಯಕ್ತಿಯನ್ನು ಅಧಿಕಾರದಲ್ಲಿ ಉಳಿಸಿಕೊಂಡು, ಭಾರತದಲ್ಲಿ ಜಾತಿಯತೆ, ಕೋಮುಗಲಭೆ ಇಲ್ಲವೆಂದು ಹೇಳುವ ಪ್ರಧಾನಿಯ ವರ್ತನೆಯು ಯಕ್ಷಗಾನದ ವಿಧೂಷಕನ ಮಾತುಗಳನ್ನು ಮೀರಿಸುವಂತಿವೆ.
ಮಣಿಪುರದಲ್ಲಿ ದಂಗೆ ನಡೆಯುವಾಗ ಮೌನವಾಗಿದ್ದ ಪೊಲೀಸರು, ಹಾಗೂ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ದೂರುಗಳನ್ನು ನಿರಾಕರಿಸಿದ್ದು ಹಾಗೂ ಈ ವಿಷಯವನ್ನು ಹೊರ ಜಗತ್ತಿಗೆ ತಲುಪದಂತೆ ಅಂತರ್ಜಾಲವನ್ನು ಬಂದ್ ಮಾಡಿದ್ದು ಎಲ್ಲಾ ವಿವರಗಳು ತನಿಖಾ ವರದಿಯಲ್ಲಿ ಬಹಿರಂಗಗೊಂಡಿವೆ.
ಮಣಿಪುರ ಸರ್ಕಾರದ ಈ ಕ್ರಮವನ್ನು ದೆಹಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಮಾತ್ರ ಈವರಗೆ ಬಹಿರಂಗವಾಗಿ ಖಂಡಿಸಿದೆ. ಹಣ ಮತ್ತು ಆಸ್ತಿ ಸಿಗುವುದಾದರೆ ಎಂತಹ ಕಾರ್ಯಕ್ಕೂ ಸಿದ್ಧ ಎನ್ನುವ ರೀತಿಯಲ್ಲಿ ಮಣಿಪುರದ ಕಾರ್ಯ ಮರೆತ ಪತ್ರಕರ್ತ ಸಂಘವು ಎಡಿಟರ್ಸ್ ಗಿಲ್ಡ್ ಮೇಲೆ ಹಾಕಿರುವ ಮೊಕದ್ದಮೆಯನ್ನು ಬೆಂಬಲಿಸಿದೆ
ಇನ್ನೂ ದೇಶದ ಮೋದಿ ಮೀಡಿಯಾ ಬಳಗದ ಮಾಧ್ಯಮಗಳ ಪತ್ರಕರ್ತರು ಈ ಕುರಿತಂತೆ ಇನ್ನೂ ಬಾಯಿ ಬಿಟ್ಟಿಲ್ಲ. ಅವರುಗಳ ಕೆಳಗಿನ ಮತ್ತು ಮೇಲಿನ ಬಾಯಿಗಳಿಂದ ಉಸಿರು ಹೊರ ಹೋಗದಂತೆ ಬಂದ್ ಮಾಡಲಾಗಿದೆ. ಅಘೋಷಿತ ತುರ್ತುಪರಿಸ್ಥಿತಿ ಎಂದರೆ ಏನು? ಎಂದು ಕೇಳುವವರಿಗೆ ವರ್ತಮಾನದ ಭಾರತದ ಸ್ಥಿತಿ ಉತ್ತರವಾಗಬಲ್ಲದು.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




