ಎನ್.ಡಿ.ಎ ವಿರುದ್ಧ ಹೋರಾಡಲು ಇಂಡಿಯಾ ಮೈತ್ರಿಕೂಟ ರಚನೆ

3 years ago

#Formation #India #alliance #fight #against #NDA

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ 26 ಪ್ರತಿಪಕ್ಷಗಳ ನಾಯಕರ ಸಭೆ ಒಕ್ಕೊರಲಿನಿಂದ ತೀರ್ಮಾನಿಸಿದೆ. ತಮ್ಮ ಈ ಒಕ್ಕೂಟಕ್ಕೆ ತಮ್ಮ ಮೈತ್ರಿಕೂಟವನ್ನು ‘INDIA’ ಎಂದು ಕರೆದುಕೊಂಡಿವೆ. INDIA ಎಂದರೆ I–Indian N–National D–Developmental I–Inclusive A–Alliance (ಇಂಡಿಯನ್ ನ್ಯಾಷನಲ್ ಡೆವೆಲಪ್ಮೆಂಟಲ್ ಇನ್ಕ್ಲೂಸಿವ್ ಅಲಯನ್ಸ್) ಎಂದರ್ಥ.

ಸಭೆ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ INDIA ಹೆಸರು ಘೋಷಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರತಿ ಪಕ್ಷಗಳ ಮೈತ್ರಿಕೂಟಕ್ಕೆ INDIA ಎಂದು ಹೆಸರಿಡಲಾಗಿದೆ. ಇದಕ್ಕೆ ಎಲ್ಲ ಪಕ್ಷಗಳು ಒಪ್ಪಿಗೆ ಸೂಚಿಸಿವೆ ಎಂದು ಹೇಳಿದರು.

ಬೆಂಗಳೂರಿನ ಈ ಸಭೆ ಅತ್ಯಂತ ಪ್ರಮುಖ ಸಭೆಯಾಗಿತ್ತು. ಪ್ರಜಾಪ್ರಭುತ್ವ ರಕ್ಷಣೆಗೆ ದೇಶದ ಜನರ ರಕ್ಷಣೆಗೆ ಅತ್ಯಗತ್ಯವಾಗಿತ್ತು. ಹೀಗಾಗಿ ನಾವೆಲ್ಲ ಒಂದುಗೂಡಿದ್ದೇವೆ. ಒಂದೇ ಧ್ವನಿಯಲ್ಲಿ ನಿರ್ಣಯ ಕೈಗೊಂಡಿದ್ದೇವೆ ಎಂದರು.

ಮುಂದೆ ನಡೆಸಬೇಕಾದ ಹೋರಾಟಗಳ ಬಗ್ಗೆ ತೀರ್ಮಾನಿಸಲು ಈ ಒಕ್ಕೂಟದಿಂದ 11 ಜನರ ಸಮನ್ವಯ ಸಮಿತಿ ಮಾಡಲು ತೀರ್ಮಾನ ಮಾಡಲಾಗಿದೆ. ಮುಂದಿನ ಸಭೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆಯಲಿದೆ. ಅಲ್ಲಿ ಈ ಸಮಿತಿಯಲ್ಲಿ ಯಾರು ಯಾರು ಇರುತ್ತಾರೆ ಎಂಬುದನ್ನು ಹೇಳಲಾಗುವುದು ಎಂದು ಹೇಳಿದರು.

ವಿರೋಧ ಪಕ್ಷಗಳ ನಡುವೆ ಕೆಲವು ಕಡೆಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೂ ನಾವೆಲ್ಲಾ ಅದನ್ನು ಬದಿಗಿಟ್ಟು ದೇಶದ ಹಿತಾಸಕ್ತಿಗಾಗಿ ಒಂದಾಗಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ಹುದ್ದೆಯ ಬಗ್ಗೆ ಯಾವುದೇ ಆಸಕ್ತಿಯಿಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಈ ಸಭೆ ನೋಡಿ ಪ್ರಧಾನಿ ಮೋದಿ 30 ಪಕ್ಷಗಳ ಎನ್ಡಿಎ ಸಭೆಯನ್ನು ಕರೆದಿದ್ದಾರೆ. ಇಷ್ಟೊಂದು ಪಕ್ಷಗಳು ಎನ್ಡಿಎನಲ್ಲಿ ಎಲ್ಲಿವೆ? ಇವು ಚುನಾವಣಾ ಆಯೋಗದಲ್ಲಿ ನೋಂದಾಯಿತ ಪಕ್ಷಗಳೇ? ನಿಜಕ್ಕೂ ಇದು ನನಗೆ ಗೊತ್ತಿಲ್ಲ ಎಂದು ಹೇಳಿದರು.

ನಮ್ಮ ಒಗ್ಗಟ್ಟು ನೋಡಿ ಪ್ರಧಾನಿ ಮೋದಿ ಬೆದರಿದ್ದಾರೆ. ಮೊದಲು ಎನ್ಡಿಎ ಬಗ್ಗೆ ಮೋದಿಗೆ ನೆನಪಿರಲಿಲ್ಲ. ಅವರೇ ತುಕಡೇ ತುಕಡೇ ಆಗಿದ್ದರು. ಈಗ ಅವರು ಅವೆಲ್ಲವನ್ನೂ ಜೋಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ, ಸಂವಿಧಾನ ನಾಶ ಮಾಡಲು ಹೊರಟಿದೆ. ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ವಿಪಕ್ಷಗಳ ವಿರುದ್ಧ ಆಯುಧವಾಗಿ ಬಳಸುತ್ತಿದ್ದಾರೆ. ದೇಶದ ರಕ್ಷಣೆ ನಮ್ಮ ಹೊಣೆ., ಅದೇ ನಮ್ಮ ಮೊದಲ ಆದ್ಯತೆ, ಎಲ್ಲ ಪಕ್ಷಗಳ ನಾಯಕರು ಇದಕ್ಕೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.

ಸಭೆ ಫಲಪ್ರದ: ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,ಇದು ನಮ್ಮ ಎರಡನೇ ಸಭೆಯಾಗಿದ್ದು, ಇದು ಫಲಪ್ರದವಾಗಿದೆ. ಬಿಜೆಪಿ ವಿಚಾರ ಧಾರೆ ವಿರುದ್ಧ ಅದರ ಯೋಚನೆ ವಿರುದ್ಧ ನಮ್ಮ ಹೋರಾಟ ಇರಲಿದೆ ಎಂದು ಹೇಳಿದರು

ದೇಶದ ಜನರ ಪೂರ್ಣ ಹಣ ಪ್ರಧಾನಿ ಮೋದಿಯವರಿಗೆ ಹತ್ತಿರವಾಗಿರುವ ಕೆಲವೇ ಉದ್ಯಮಿಗಳ ಕೈಗೆ ಹೋಗುತ್ತಿದೆ. ನಮ್ಮ ಹೋರಾಟ ಬಿಜೆಪಿ ವಿರುದ್ಧವಲ್ಲ. ದೇಶದ ಧ್ವನಿ ಹತ್ತಿಕ್ಕುತ್ತಿರುವುದರ ವಿರುದ್ಧವಾಗಿದೆ. ನಾವು ಈಗ ಇಂಡಿಯಾ ರಚಿಸಿಕೊಂಡಿದ್ದೇವೆ. ಹೋರಾಟ ಎನ್ ಡಿ ಎ ಮತ್ತು ಮೋದಿ ಇಂಡಿಯಾ ವಿರುದ್ಧವಾಗಿದೆ. ಫಲಿತಾಂಶ ಏನಾಗಬಹುದೆಂದು ಯೋಚಿಸಬೇಕಿಲ್ಲ. ಮುಂದೆ ನಮ್ಮ ಆಕ್ಷನ್ ಪ್ಲಾನ್ ಸಿದ್ಧವಾಗಲಿದೆ. ಎಲ್ಲರೂ ಒಟ್ಟಾಗಿ ಹೋಗಲಿದ್ದೇವೆ ಎಂದರು.

ಆಪತ್ತಿನಲ್ಲಿದೆ: ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಪ್ರತಿಪಕ್ಷಗಳ ಎರಡನೇ ಸಭೆ ಯಶಸ್ವಿಯಾಗಿದೆ. ರಾಜಕೀಯದಲ್ಲಿ ವಿಭಿನ್ನ ವಿಚಾರಧಾರೆಗಳು ಸಹಜ. ಅದೇ ಪ್ರಜಾಪ್ರಭುತ್ವದ ಸೌಂದರ್ಯ. ಈ ದೇಶ ನಮ್ಮ ಕುಟುಂಬ, ಅದನ್ನು ಉಳಿಸಲು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ದೇಶವೇ ನಮ್ಮ ಪರಿವಾರವಾಗಿದೆ. ನಾವು ಪಕ್ಷಕ್ಕಾಗಿ, ಅಧಿಕಾರಕ್ಕಾಗಿ ಹೋರಾಡುತ್ತಿಲ್ಲ. ದೇಶಕ್ಕಾಗಿ ಹೋರಾಡುತ್ತೇವೆ. ಇದೊಂದು ಸ್ವಾತಂತ್ರ್ಯ ಹೋರಾಟ ಇದ್ದಂತೆ. 26 ಪಕ್ಷಗಳ ಸೇರಿಕೊಂಡು ಭಯದಲ್ಲಿರುವ ಪ್ರತಿಯೊಬ್ಬರಿಗೆ ಧೈರ್ಯ ತುಂಬಲು ನಾವಿದ್ದೇವೆ ಎಂದು ತಿಳಿಸಿದರು.

ದೇಶದ ಸ್ವಾತಂತ್ರ್ಯ ಆಪತ್ತಿನಲ್ಲಿದೆ, ಅದನ್ನು ನಾವು ಉಳಿಸಬೇಕಾಗಿದೆ. ಒಂದು ಪಕ್ಷ ಮಾತ್ರ ದೇಶವಲ್ಲ, ಇಡೀ ಜನರು ದೇಶವಾಗಿದ್ದಾರೆ ಎಂದು ಠಾಕ್ರೆ ಹೇಳಿದರು.

ಒಗ್ಗಟ್ಟಾಗಿದ್ದೇವೆ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ, ನಮ್ಮ ಮೈತ್ರಿಯ 26 ಪಕ್ಷಗಳ ಸಭೆ ನಡೆದಿದೆ. ಮುಂದಿನ ಸಭೆ ಮಹಾರಾಷ್ಟ್ರದಲ್ಲಿ ನಡೆಯಲಿದೆ. ಅಲ್ಪಸಂಖ್ಯಾತರು, ದಲಿತರು, ಹಿಂದೂಗಳು, ಸಿಖ್ಖರು, ಮಣಿಪುರದ, ದಿಲ್ಲಿಯ, ಬಂಗಾಳದ, ಮಹಾರಾಷ್ಟ್ರದ ಎಲ್ಲಾ ಜನರಿಗಾಗಿ ನಾವು ಒಂದುಗೂಡಿದ್ದೇವೆ ಎಂದು ಅವರು ಹೇಳಿದರು.

ಸರ್ಕಾರವನ್ನು ಖರೀದಿಸಿ ಉರುಳಿಸುವ ವಿರುದ್ಧ ಸವಾಲು ಹಾಕಲು INDIA ರೂಪುಗೊಂಡಿದೆ. ಈ ಇಂಡಿಯಾವನ್ನು ಬಿಜೆಪಿ ಎದುರಿಸುತ್ತದೆಯೇ? ಮುಂದಿನ ಎಲ್ಲಾ ಕಾರ್ಯಕ್ರಮಗಳು INDIA ದ ಅಡಿಯಲ್ಲಿ ನಡೆಯುತ್ತವೆ, ಸಾಧ್ಯವಿದ್ದರೆ ನಮ್ಮನ್ನು ತಡೆಯಿರಿ ಎಂದು ಬಿಜೆಪಿಗೆ ಸವಾಲು ಹಾಕಿದರು.

ಕೇಂದ್ರದ ಆಡಳಿತವು ಇಂದು ಮಾಡುತ್ತಿರುವ ಏಕೈಕ ಕೆಲಸವೆಂದರೆ ಸರ್ಕಾರಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ಎಂದು ಕಿಡಿಕಾರಿದರು.

ʼಸೇವ್ ಇಂಡಿಯಾ, ಸೇವ್ ದ ಪೀಪಲ್ ಆಫ್ ಇಂಡಿಯಾʼ ಎಂದು ಕರೆ ನೀಡಿದ ಅವರು, ಇಂಡಿಯಾವನ್ನು ಉಳಿಸುವುದು ದೇಶವನ್ನು ಉಳಿಸಿದಂತೆ, ಸರ್ಕಾರಗಳನ್ನು ಖರೀದಿಸಿ ಉರುಳಿಸುವುದರಿಂದ ದೇಶವನ್ನು ಉಳಿಸಬೇಕು, ಇಂಡಿಯಾ ಗೆದ್ದರೆ ದೇಶ ಗೆಲ್ಲಲಿದೆ ಎಂದು ಹೇಳಿದರು.

ನಾವು ನಮ್ಮ ತಾಯಿ ನಾಡನ್ನು ಪ್ರೀತಿಸುತ್ತೇವೆ, ಜನರಿಗಾಗಿ ದೇಶಕ್ಕಾಗಿ ನಾವು ಕೆಲಸ ಮಾಡುತ್ತೇವೆ. ಮುಂದಿನ ನಮ್ಮ ಎಲ್ಲಾ ಹೋರಾಟ ಇಂಡಿಯಾ ಹೆಸರಿನಲ್ಲಿ ನಡೆಯಲಿದೆ ನಮ್ಮನ್ನು ಎದುರಿಸಲು ಸಾಧ್ಯವಾಗುವುದೇ? ನಾವು ಭಾರತವನ್ನು ಉಳಿಸಬೇಕಿದೆ. ಬಿಜೆಪಿ ದೇಶವನ್ನು ಮಾರಾಟ ಮಾಡಲು ಮುಂದಾಗಿದೆ. ಪ್ರಜಾಪ್ರಭುತ್ವವನ್ನು ಖರೀದಿಸುವ ಪ್ರಯತ್ನ ನಡೆಸುತ್ತಿದೆ, ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇಂಡಿಯಾಗೆ ಗೆಲುವಾಗುತ್ತದೆ ಹಾಗೂ ಬಿಜೆಪಿಗೆ ಸೋಲಾಗುತ್ತದೆ ಎಂದರು.

ಮೋದಿ ವಿರುದ್ಧ ಸಿಟ್ಟು: ದೇಶದ ಮುಕ್ಕಾಲು ಭಾಗ ಜನ ಕೇಂದ್ರ ಸರ್ಕಾರದ ವಿರುದ್ಧ ಸಿಟ್ಟಾಗಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ತೊಡೆದುಹಾಕಲಾಗುತ್ತದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದರು.

ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶ ಮತ್ತು ನಾಗರಿಕರನ್ನು ರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಈ ಸಭೆ ಅಗತ್ಯವಿತ್ತು. ಚುನಾವಣೆಯಲ್ಲಿ ಬಿಜೆಪಿ ಪಡೆದಿರುವ ಮತಗಳ ಪ್ರಮಾಣ ಕಡಿಮೆಯಿದೆ. ಅದರ ವಿರುದ್ಧವಾದ ಶಕ್ತಿಗಳ ಸಂಖ್ಯೆ ಹೆಚ್ಚಾಗಿತ್ತು. ಆದರೆ ಒಗ್ಗಟ್ಟಿನ ಕೊರತೆಯಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಬಾರಿ ಅದಕ್ಕೆ ಅವಕಾಶ ನೀಡುವುದಿಲ್ಲ. ನಾವೆಲ್ಲಾ ಒಂದಾಗಿದ್ದು, ಒಟ್ಟಾಗಿ ಹೋರಾಟ ಮಾಡಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ತಿಳಿಸಿದರು.

ಕಲುಷಿತ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಪ್ರತಿಯೊಂದು ವ್ಯವಸ್ಥೆಯನ್ನು ಕಲುಷಿತಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 10 ವರ್ಷಗಳ ಹಿಂದೆ ದೇಶದ ಆಡಳಿತ ನಡೆಸಲು ನರೇಂದ್ರ ಮೋದಿಯವರಿಗೆ ಅವಕಾಶ ಸಿಕ್ಕಿತ್ತು. ಆದರೆ ಅವರು ಅದನ್ನು ಸದುಪಯೋಗಪಡಿಸಿಕೊಳ್ಳುವ ಬದಲಾಗಿ ವ್ಯವಸ್ಥೆಯನ್ನು ಕಲುಷಿತಗೊಳಿಸಲು ಬಳಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಜನರ ನಡುವೆ ದ್ವೇಷ ಬೆಳೆಸಲು, ಆರ್ಥಿಕತೆಯನ್ನು ಕುಗ್ಗಿಸಲು, ಹಣದುಬ್ಬರದ ಮೂಲಕ ಗರಿಷ್ಠ ಪ್ರಮಾಣದ ಬೆಲೆ ಏರಿಕೆಯನ್ನು ದಾಖಲಿಸಲು ಮೋದಿ ಕೊಡುಗೆ ನೀಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ನಿರುದ್ಯೋಗ ತಾಂಡವವಾಡುತ್ತಿದೆ. ಈ ಸಂದರ್ಭದಲ್ಲಿ ಸಮಾನ ಮನಸ್ಕ ಪಕ್ಷಗಳು ಒಗ್ಗೂಡಿ ಕಲುಷಿತ ವ್ಯವಸ್ಥೆಯನ್ನು ತೊಲಗಿಸುವ ಅಗತ್ಯ ಹೆಚ್ಚಿದೆ ಎಂದು ಹೇಳಿದರು.

Leave a Reply