ಅರಣ್ಯ ಇಲಾಖೆಯ ಖಾಲಿ ಹುದ್ದೆಗಳ ಭರ್ತಿ: ಈಶ್ವರ್ ಖಂಡ್ರೆ

2 years ago

ಬೆಂಗಳೂರು: ಅರಣ್ಯಇಲಾಖೆಯಲ್ಲಿ ಸುಮಾರು 6 ಸಾವಿರ ಹುದ್ದೆಗಳು ಖಾಲಿ ಇದ್ದು, ಇವುಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಅರಣ್ಯ ವೀಕ್ಷಕರ 310 ಹುದ್ದೆಗಳ ನೇಮಕಾತಿಗೆ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ಪೂರ್ಣವಾಗಿದ್ದು, ನೀತಿ ಸಂಹಿತೆ ತೆರವಾದ ಬಳಿಕ ನೇಮಕಾತಿ ಪತ್ರಗಳನ್ನು ವಿತರಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದರ ಜೊತೆಗೆ 540 ಅರಣ್ಯ ರಕ್ಷಕರ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜೊತೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಯ ಪೂರ್ವಾನುಮತಿಯ ಅವಶ್ಯಕತೆ ಇಲ್ಲ. ಹೀಗಾಗಿ ಈ ಭಾಗದಲ್ಲಿ ಖಾಲಿ ಇರುವ 10 ವಲಯ ಅರಣ್ಯಅಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಶೀಘ್ರ ಲಿಖಿತ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದರು.

ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಿಣಿದಾರರ 143 ಹುದ್ದೆ, 45 ದ್ವಿತೀಯ ದರ್ಜೆ ಹಾಯಕರು ಮತ್ತು 18 ಪ್ರಥಮ ದರ್ಜೆ ಸಹಾಯಕರು ಸೇರಿದಂತೆ ವಿವಿಧ ವೃಂದದ ಖಾಲಿ ಹುದ್ದೆಗಳ ನೇಮಕಾತಿಗೂ ಕರಡು ಪ್ರಸ್ತಾವನೆ ಸಿದ್ಧಗೊಂಡಿದೆ ಎಂದರು.

ಕೊಡಗು, ಚಾಮರಾಜನಗರ, ಮೈಸೂರು ಭಾಗದಲ್ಲಿ ಸುಮಾರು 7500 ಎಕರೆ ಅರಣ್ಯ ಭೂಮಿಯನ್ನು ವಿವಿಧ ಕಂಪನಿಗಳಿಗೆ ಬ್ರಿಟಿಷರ ಕಾಲದಲ್ಲಿ ಗುತ್ತಿಗೆ ನೀಡಲಾಗಿದ್ದು, ಈ ಕಂಪನಿಗಳಿಂದ ಸುಮಾರು 2 ಸಾವಿರ ಕೋಟಿ ರೂ. ಬಾಕಿ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಅವಧಿ ಮುಗಿದ ಭೂಮಿ ಮರು ಪಡೆಯಲು ಕ್ರಮ ವಹಿಸಲಾಗಿದೆ ಎಂದರು.

Leave a Reply