ಮಂಗಳೂರು: ಕರ್ನಾಟಕ ರಾಜ್ಯ ಸರಕಾರವು ತಾರೀಕು 1-4-2018 ರಿಂದ ಬೀಡಿ ಕಾರ್ಮಿಕರಿಗೆ 5(1)ಎ ಸಮಿತಿ ಸುದೀರ್ಘ ಸಭೆಯ ನಂತರ ಸರ್ವಾನುಮತದಿಂದ ಸಾವಿರ ಬೀಡಿಗೆ ಕನಿಷ್ಠ 210 ರೂಪಾಯಿ ಕೊಡಬೇಕೆಂದು ತೀರ್ಮಾನಿಸಿದೆ ಎಂದು ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನಿನ ಸಿಐಟಿಯು ಪ್ರಧಾನ ಕಾರ್ಯದರ್ಶಿ ಜೆ.ಬಾಲಕೃಷ್ಣ ಶೆಟ್ಟಿ ಹೇಳಿದರು.
ಬಂಟ್ವಾಳ ತಾಲೂಕು ಬೀಡಿ ಕೆಲಸಗಾರರ ಸಂಘದ 34ನೇ ವಾರ್ಷಿಕ ಮಹಾಸಭೆಯು ಬಂಟ್ವಾಳ ಲಯನ್ಸ್ ಸಭಾಂಗಣದಲ್ಲಿ ಸಂಘದ ಹಿರಿಯ ಮುಖಂಡರಾದ ಗಿರಿಜಾರವರ ಅಧ್ಯಕ್ಷತೆಯಲ್ಲಿ ಸೇರಿತ್ತು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜೆ.ಬಾಲಕೃಷ್ಣ ಶೆಟ್ಟಿ, ಬೀಡಿ ಕಾರ್ಖಾನೆ ಮಾಲೀಕರು ಕುಂಟು ನೆಪವೊಡ್ಡಿ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಕಾರ್ಮಿಕರಿಗೆ ಅನ್ಯಾಯವೆಸಗಿದ್ದಾರೆ. ಕಳೆದ 5 ವರ್ಷಗಳಿಂದ ಉಚ್ಛ ನ್ಯಾಯಾಲಯದ ತೀರ್ಮಾನವಾಗದೆ ಬಾಕಿ ಇದೆ ಎಂದು ಆರೋಪಿಸಿದರು.
ಬೀಡಿ ಕಾರ್ಮಿಕರು ನಮ್ಮ ರಾಜ್ಯದಲ್ಲಿ ಅತಿ ಕಡಿಮೆ ಸಂಪಾದನೆಯಲ್ಲಿ ದುಡಿಯುವ ಮಹಿಳಾ ಕಾರ್ಮಿಕರು. ಸರಕಾರದ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿದ್ದಾರೆ. ಕರ್ನಾಟಕ ರಾಜ್ಯ ಸರಕಾರವು ಕೂಡಲೇ 2018ರಿಂದ ಜಾರಿಯಾಗಬೇಕಿದ್ದ ಕನಿಷ್ಠ ಕೂಲಿಯನ್ನು ಜ್ಯಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕೇಂದ್ರ ಸರಕಾರದ ನೀತಿಯಿಂದಾಗಿ ಬೀಡಿ ಕೈಗಾರಿಕೆಯಲ್ಲಿ ದೇಶದಾದ್ಯಂತ ದುಡಿಯುವ 3 ಕೋಟಿಗೂ ಹೆಚ್ಚು ಕಾರ್ಮಿಕರು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಸರಕಾರದ ನೀತಿಯನ್ನು ಬದಲಾಯಿಸಲು ಕಾರ್ಮಿಕರು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಸಿಐಟಿಯು ಜಿಲ್ಲಾ ನಾಯಕ ಸುಕುಮಾರ್ ಶುಭಕೋರಿ ಮಾತನಾಡಿದರು. ಮಹಾಸಭೆಯಲ್ಲಿ ಮುಂದಿನ ವರ್ಷಕ್ಕೆ ಚಂದ್ರ ಪೂಜಾರಿಯವರನ್ನು ಅಧ್ಯಕ್ಷ, ಗಿರಿಜಾ, ಸರಸ್ವತಿ ಉಪಾಧ್ಯಕ್ಷರು, ಲೋಲಾಕ್ಷಿ ಪ್ರಧಾನ ಕಾರ್ಯದರ್ಶಿ, ಗಾಯತ್ರಿ, ಸುಜಾತ ಜೊತೆ ಕಾರ್ಯದರ್ಶಿ, ಉದಯ ಕುಮಾರ್ ಕೋಶಾಧಿಕಾರಿಯಾಗಿ ಹಾಗೂ 14 ಮಂದಿಯ ಕಾರ್ಯಕಾರಿ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಪ್ರಾರಂಭದಲ್ಲಿ ಸಂಘದ ಕೋಶಾಧಿಕಾರಿ ಉದಯ ಕುಮಾರ್ ಸ್ವಾಗತಿಸಿದರು. ಲೋಲಾಕ್ಷಿ ಧನ್ಯವಾದ ಸಲ್ಲಿಸಿದರು.




