ವಂಚಕ ಕಂಪೆನಿಗಳು ಜನರನ್ನು ದೋಚಲು ಸರಕಾರಗಳ ನೀತಿಗಳೇ ಕಾರಣ
ಮಂಗಳೂರು: ಜನಸಾಮಾನ್ಯರ ಮುಗ್ದತೆ, ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ವಂಚಿಸುವ ಹಣಕಾಸು, ಮಾರ್ಕೆಟಿಂಗ್, ಚೈನ್ ಲಿಂಕ್, ಸ್ಕೀಮ್ ಕಂಪೆನಿಗಳು ಕಾನೂನಿನ ಭಯವಿಲ್ಲದೆ ದಿನಕ್ಕೊಂದರಂತೆ ಮಂಗಳೂರು ನಗರದಲ್ಲಿ ತಲೆ ಎತ್ತುತ್ತಿವೆ ಎಂದು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.
PACL ನಿಂದ ವಂಚಿತ ಸಂತ್ರಸ್ತ ಏಜಂಟರು, ಹೂಡಿಕೆದಾರರ ದ.ಕ.ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಕಂಪೆನಿಗಳ ವೈಭವೋಪೇತ ಕಾರ್ಯಕ್ರಮಗಳಲ್ಲಿ ರಾಜಕೀಯ ನೇತಾರರು, ಧಾರ್ಮಿಕ ಕ್ಷೇತ್ರದ ಗಣ್ಯರು ಮುಂದಾಲೋಚನೆ ಇಲ್ಲದೆ ಕಾಣಿಸಿಕೊಳ್ಳುವುದು ವಂಚಕ ಕಂಪೆನಿಗಳಿಗೆ ಜನಸಾಮಾನ್ಯರ ನಡುವೆ ವಿಶ್ವಾಸಾರ್ಹತೆಯನ್ನು ಗಳಿಸಲು ಸಹಾಯ ಮಾಡುತ್ತದೆ ಎಂದರು.
ಇಂತಹ ಕಂಪೆನಿಗಳು ಬಾಗಿಲು ಮುಚ್ಚಿ ಪರಾರಿಯಾಗುವವರೆಗೆ ಕಾನೂನು ಜಾರಿ ಸಂಸ್ಥೆಗಳು ಸಕ್ರಿಯಗೊಳ್ಳದಿರುವುದು ವಿಷಾದನೀಯ. ಮಾತ್ರವಲ್ಲದೆ ಇಂತಹ ವಂಚನೆಗಳಿಗೆ ಸರಕಾರದ ನೀತಿಗಳೂ ಕೂಡ ಕಾರಣವಾಗಿದೆ. PACL, ಆದೀಶ್ವರ್ ಮುಂತಾದ ಬ್ಲೇಡ್ ಕಂಪೆನಿಗಳಿಂದ ವಂಚನೆಗೊಳಗಾದ ಸಂತ್ರಸ್ತರಿಗೆ ನ್ಯಾಯ ಒದಗಿಸಲು, ವಂಚಕ ಕಂಪೆನಿಗಳ ಜಾಲಕ್ಕೆ ಕಡಿವಾಣ ಹಾಕುವ ನಿಯಮ ರೂಪಿಸಲು ಜಿಲ್ಲೆಯ ಸಂಸದ ಶಾಸಕರು ಮುಂದಾಗಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ DYFI ಜಿಲ್ಲಾ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್, CITU ಜಿಲ್ಲಾ ನಾಯಕ ಯೋಗೀಶ್ ಜಪ್ಪಿನಮೊಗರು, DYFI ಮಂಗಳೂರು ನಗರ ಅಧ್ಯಕ್ಷ ನವೀನ್ ಕೊಂಚಾಡಿಯವರು ಮಾತನಾಡಿ, ಜನಸಾಮಾನ್ಯರ ಸಂಕಷ್ಟಗಳನ್ನು,ಏಜೆಂಟರ ಬವಣೆಗಳನ್ನು ವಿವರಿಸುತ್ತಾ ಇಂತಹ ಮೋಸದಾಟಗಳನ್ನು ನಿಲ್ಲಿಸಲು ಸರಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯ ಅಧ್ಯಕ್ಷತೆಯನ್ನು PACL ಏಜೆಂಟರ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ವಹಿಸಿದ್ದರು. ವೇದಿಕೆಯಲ್ಲಿ ಹೋರಾಟ ಸಮಿತಿಯ ಮುಖಂಡರಾದ ತೆಲ್ಮಾ ಮೊಂತೆರೋ, ಅಸುಂತ ಡಿಸೋಜ, ಶಾಲಿನಿ ಡಿಸೋಜ, ಜೇಮ್ಸ್ ಪ್ರವೀಣ್, ಜನಾರ್ಧನ ಪುತ್ತೂರು ಉಪಸ್ಥಿತರಿದ್ದರು.
ಸಮಾವೇಶದಲ್ಲಿ ನೂತನ ಸಮಿತಿಯನ್ನು ಪುನರ್ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಜೇಮ್ಸ್ ಪ್ರವೀಣ್, ಪ್ರಧಾನ ಕಾರ್ಯದರ್ಶಿಯಾಗಿ ತೆಲ್ಮಾ ಮೊಂತೆರೋ, ಖಜಾಂಚಿಯಾಗಿ ಶಾಲಿನಿ ಡಿಸೋಜ ಸರ್ವಾನುಮತದಿಂದ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಸುನಿಲ್ ಕುಮಾರ್ ಬಜಾಲ್, ಗೌರವ ಸಲಹೆಗಾರರಾಗಿ ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ನವೀನ್ ಕೊಂಚಾಡಿಯವರು ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಅಸುಂತ ಡಿಸೋಜ, ಜನಾರ್ದನ ಪುತ್ತೂರು, ದೇವಿಕಾ, ರಾಮಚಂದ್ರ ಭಟ್, ಜನಾರ್ದನ ಸುಳ್ಯ, ಕಾರ್ಯದರ್ಶಿಗಳಾಗಿ ವಾಯಿಲೆಟ್ ಪಿಂಟೋ, ಯಶೋಧಾ ಬೆಳ್ತಂಗಡಿ, ಮೋಲಿ ಡಿಸೋಜ, ಅರುಣಾ ಕೋಟ್ಯಾನ್, ಸುನೀತಾ ರೋಡ್ರಿಗಸ್ ರವರನ್ನು ಆಯ್ಕೆಗೊಳಿಸಲಾಯಿತು. ಕಾರ್ಯಕಾರಿ ಸಮಿತಿಗೆ ಸುಮಾರು 15 ಮಂದಿಯನ್ನು ಆರಿಸಲಾಯಿತು.




