ರಾಜ್ಯ ಕಾಂಗ್ರೆಸ್ ನಲ್ಲಿ ಒಳ‌ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ: ವಿಜಯೇಂದ್ರ

1 year ago

ಬೆಂಗಳೂರು: ಇಶಾ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಶಿವರಾತ್ರಿ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಪಾಲ್ಗೊಂಡಿರುವ ವಿಚಾರ ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿರುವ ಬೆನ್ನಲ್ಲೇ ಇದು ಕ್ಷಿಪ್ರ ರಾಜಕೀಯ ಬೆಳವಣಿಗೆಯ ಮುನ್ಸೂಚನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ್ಣಿಸಿದ್ದಾರೆ.

83ನೇ ವಸಂತಕ್ಕೆ ಕಾಲಿಟ್ಟ ತಮ್ಮ ತಂದೆ ಹಾಗೂ ಮಾಜಿ ‌ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಹುಟ್ಟು ಹಬ್ಬ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಈ ಹಿಂದೆಯೇ ಕಾಂಗ್ರೆಸ್ ಪಕ್ಷದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದೆ. ಅದು ಈಗ ಸತ್ಯವಾಗುವ ಕಾಲ ಹತ್ತಿರ ಬರುತ್ತಿದೆ ಎಂದರು.

ರಾಜ್ಯ ಕಾಂಗ್ರೆಸ್ ನಲ್ಲಿ ಒಳ‌ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಧಿಕಾರಕ್ಕಾಗಿ ನಾಯಕರಲ್ಲಿ ಕಚ್ಚಾಟ ಆರಂಭವಾಗಿದ್ದು ಯಾವುದೇ ಕ್ಷಣದಲ್ಲಿ ಅದು ಸ್ಪೋಟವಾಗಲಿದೆ ಎಂದರು.

ಪ್ರತಿಕ್ಷಗಳ ಕ್ಷೇತ್ರದ ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಬಾರದು ಹಾಗೂ ಗ್ರೇಟರ್ ಬೆಂಗಳೂರು ಪ್ರಸ್ತಾಪ ಕೈ ಬಿಟ್ಟು ತಕ್ಷಣವೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವಂತೆ ಒತ್ತಾಯಿಸಲು ಬಿಜೆಪಿ ಶಾಸಕರ ನಿಯೋಗದಲ್ಲಿ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತಿರುವುದಾಗಿ ತಿಳಿಸಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಗೃಹ ಸಚಿವ ಅಮಿತ್ ಷಾ ಜತೆ ಡಿ ಕೆ ಶಿವಕುಮಾರ್ ವೇದಿಕೆ ಹಂಚಿಕೊಂಡಿದ್ದಕ್ಕೆ ಕೇಳಿ ಬರುತ್ತಿರುವ ಆಕ್ಷೇಪಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಡಿ.ಕೆ ಶಿವಕುಮಾ‌ರ್ ಅವರು, ಅಮಿತ್ ಷಾ ಜತೆ ರಾಜಕೀಯ ವೇದಿಕೆ ಹಂಚಿಕೊಳ್ಳಲಿಲ್ಲ. ರಾಜಕೀಯೇತರ ವೇದಿಕೆಯಲ್ಲಿ ಪಾಲ್ಗೊಂಡಿದ್ದರು. ಅವರು, ಸದ್ಗುರು ಆಹ್ವಾನ ಮೇರೆಗೆ ಹೋಗಿದ್ದಾರೆ. ಅದಕ್ಕೆ ಕಾಂಗ್ರೆಸ್ ನಲ್ಲಿ ಆಕ್ಷೇಪ ಬರುತ್ತಿರುವುದು ಸರಿಯಲ್ಲ ಎಂದರು.

ಡಿ ಕೆ ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರು, ಆದರೆ ಅಮಿತ್ ಷಾ ಬಿಜೆಪಿ ಅಧ್ಯಕ್ಷರಲ್ಲ.‌ ಶಿವಕುಮಾರ್ ಅವರನ್ನು ಕಾಂಗ್ರೆಸ್ ಒಳಗೇ ಟಾರ್ಗೆಟ್ ಮಾಡಲಾಗುತ್ತಿದೆ. ಅವರನ್ನು ಗುರಿಯಾಗಿಟ್ಟುಕೊಂಡು ಅಂಚಿಗೆ ಕಳಿಸುವ ಕೆಲಸ ಕಾಂಗ್ರೆಸ್ ನಲ್ಲಿ ಆಗುತ್ತಿದೆ. ಅವರೊಬ್ಬ ಹಿಂದೂವಾದಿ ಅನ್ನೋದು ಸಾಬೀತಾಗಿದೆ. ಹಾಗಾಗಿಯೇ ಕಾಂಗ್ರೆಸ್ ನಲ್ಲಿ ಅವರನ್ನು ಅಂಚಿಗೆ ಸರಿಸುವ ಕೆಲಸ ಶುರುವಾಗಿದೆ ಎಂದರು.

ಅಮಿತ್ ಷಾ ಭೇಟಿ ಆದರೂ ಎಂಬ ಕಾರಣಕ್ಕಾಗಿಯೇ ಬಿಜೆಪಿ ಸೇರುತ್ತಾರೆ ಎಂಬು ಭಾವಿಸಬೇಕಾಗಿಲ್ಲ, ಡಿ ಕೆ ಶಿವಕುಮಾರ್ ಬಿಜೆಪಿಗೆ ಬರುತ್ತಾರೆ ಎನ್ನುವುದು ಎನ್ನುವುದು ಊಹಾಪೋಹ ಅಷ್ಟೇ. ಆದರೆ ಆ ವಿಷಯವನ್ನು ತಳ್ಳಿ ಹಾಕಲೂ ಆಗುವುದಿಲ್ಲ. ಈ ಹಿಂದೆಯೂ ಈಥರದ ಬೆಳವಣಿಗೆ ಆಗಿದೆ. ಬಿಜೆಪಿಗೆ ಬರುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆಗೆ ಡಿಕೆ ಶಿವಕುಮಾರ್ ಅವರೇ ಉತ್ತರ ಕೊಡಬೇಕು ಎಂದರು.

Leave a Reply