ಚಿಕ್ಕಬಳ್ಳಾಪುರ: ಮುಂದಿನ ಡಿಸೆಂಬರ್ ವೇಳೆಗೆ ಗ್ರಾಮೀಣ ಪ್ರದೇಶದ 10 ಸಾವಿರ ಮತ್ತು ನಗರ ವ್ಯಾಪ್ತಿಯ 5 ಸಾವಿರ ಸೇರಿ ಒಟ್ಟು 15 ಸಾವಿರ ಮಂದಿಗೆ ಉಚಿತ ನಿವೇಶನಗಳನ್ನು ಹಂಚಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರಕಟಿಸಿದರು.
ತಾಲೂಕಿನ ಚಲಕಾಯಲಪರ್ತಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಲಜೀವನ್ ಮಿಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಮತ್ತು ಜಿಪಂ ಕಾರ್ಯನಿರ್ವಹಣಾಧಿಕಾರಿಗಳು ನಿವೇಶನ ಹಂಚಿಕೆಗೆ ಅಗತ್ಯವಿರುವ ಕ್ರಮಗಳನ್ನು ಈಗಾಗಲೇ ಕೈಗೊಳ್ಳುತ್ತಿದ್ದಾರೆ ಎಂದರು.
ಡಿಸೆಂಬರ್ ವೇಳೆಗೆ ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ 15 ಸಾವಿರ ಮಂದಿ ಬಡವರಿಗೆ ಉಚಿತ ನಿವೇಶನ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ನೀರು, ರಸ್ತೆ ಮನೆ ಸೇರಿದಂತೆ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಕಳೆದ 54 ವರ್ಷಗಳ ಕಾಲ ಆಡಳಿತ ನಡೆಸಿದ ಸರ್ಕಾರಗಳು ವಿಫಲವಾಗಿರುವುದು ತೀವ್ರ ನೋವು ತರುವ ವಿಚಾರವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಜಾತಿ, ಧರ್ಮದ ಹೊರತಾಗಿ ಅಭಿವೃದ್ಧಿ ಯೋಜನೆಗಳು ಎಲ್ಲರಿಗೂ ತಲುಪುತ್ತಿವೆ ಎಂದರು.
ಮಹಿಳೆಯರಿಗೆ ಸ್ವಾಭಿಮಾನದ ಪ್ರಶ್ನೆಯಾಗಿರುವ ಶೌಚಾಲಯ ನಿರ್ಮಾಣಕ್ಕೂ ಈ ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ವಿಫಲವಾಗಿದ್ದವು, ನರೇಂದ್ರಮೋದಿ ಅವರು ಪ್ರಧಾನಿಯಾದ ನಂತರ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ದೇಶದ 10 ಕೋಟಿ ಕುಟುಂಬಗಳಿಗೆ ಶೌಚಾಲಯ ನಿರ್ಮಿಸುವ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದರೂ ಕನಿಷ್ಠ ಮೂಲಸೌಕರ್ಯಗಳಾದ ನೀರು, ಶೌಚಾಲಯ, ರಸ್ತೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸದ ಕಾರಣ ಗ್ರಾಮೀಣ ಮಹಿಳೆಯರ ಸಂಕಷ್ಟ ತೀವ್ರವಾಗಿತ್ತು. ಇದನ್ನು ಅರಿತ ಪ್ರಧಾನಿ ನರೇಂದ್ರಮೋದಿ ಅವರು, ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೊಳಿಸಿ ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನೀರು ನೀಡುವ ಕೆಲಸ ಮಾಡಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ತಾಲೂಕಿನ ಲಕ್ಕನಾಯಕನಹಳ್ಳಿ, ರಾಯಪ್ಪನಹಳ್ಳಿ ಗ್ರಾಮಗಳಿಗೆ 51.8 ಲಕ್ಷ, ಮತ್ತೊಂದು ಗ್ರಾಮಕ್ಕೆ 51.8 ಲಕ್ಷ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸ್ವಾತಂತ್ರ್ಯ ಬಂದ 10 ವರ್ಷದಲ್ಲಿ ಆಗಬೇಕಿದ್ದ ಈ ಕೆಲಸಗಳು ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವ ಸಮಯದಲ್ಲಿ ಮಾಡಬೇಕಾದ ಸ್ಥಿತಿ ಎದುರಾಗಿದೆ ಎಂದು ಪ್ರತಿಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಜಲಜೀವನ್ ಮಿಷನ್ ಯೋಜನೆಯಿಂದಾಗಿ ದೇಶದ ಪ್ರತೀ ಗ್ರಾಮದ, ಪ್ರತಿ ಮನೆಗೆ ನಲ್ಲಿ ನೀರು ನೀಡಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಈ ಹಿಂದೆ ಈ ಯೋಜನೆಯನ್ನು ಜಾರಿಗೊಳಿಸಲು ಈ ಪ್ರದೇಶದಲ್ಲಿ ನೀರಿನ ತೀವ್ರ ಕೊರತೆ ಇತ್ತು. ಆದರೆ ಎಚ್ಎನ್ ವ್ಯಾಲಿ ಮೂಲಕ ಶುದ್ಧೀಕರಿಸಿದ ನೀರು ಈ ಭಾಗದ ಕೆರೆಗಳಿಗೆ ತುಂಬಿಸಿದ ನಂತರ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗಿದ್ದು, ಈಗ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಎತ್ತಿನಹೊಳೆ ನೀರು ಜಿಲ್ಲೆಗೆ ಆಗಮಿಸಲಿದೆ. ಪ್ರಸ್ತುತ ಕೊಳವೆ ಬಾವಿಗಳಲ್ಲಿ ಯಥೇಚ್ಛವಾಗಿ ನೀರು ಇರುವ ಕಾರಣ ಎಲ್ಲ ಗ್ರಾಮಗಳಿಗೆ ನೀರು ನೀಡಲಾಗುತ್ತಿದೆ. ಮಂಚೇನಹಳ್ಳಿ ನೂತನ ತಾಲೂಕು ವ್ಯಾಪ್ತಿಯ 54 ಗ್ರಾಮಗಳಿಗೆ ಒಂದೇ ಯೋಜನೆ ಮೂಲಕ 44 ಕೋಟಿ ವೆಚ್ಚದಲ್ಲಿ ನಲ್ಲಿ ನೀರು ಒದಗಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.
ವಿಶ್ವೇಶ್ವರಯ್ಯ ಜಲಭಾಗ್ಯ ನಿಗಮದ ಮೂಲಕ ಬೂದುಗೊಂಡ್ಲು ಡ್ಯಾಂ ನಿರ್ಮಿಸಲು ಈಗಾಗಲೇ ಯೋಜನೆ ರೂಪಸಿದ್ದು, ಈ ಅಣೆಕಟ್ಟು ನಿರ್ಮಾಣವಾದರೆ ಮಂಡಿಕಲ್ ಹೋಬಳಿಯ ಎಲ್ಲ ಗ್ರಾಮಗಳ ಪ್ರತಿ ಮನಗೂ ನಲ್ಲಿ ನೀರು ನೀಡಲು ಸಹಕಾರಿಯಾಗಲಿದೆ. 52 ಕೋಟಿ ರೂಪಾಯಿ ವೆಚ್ಚದಲ್ಲಿ ಬೂದುಗೊಂಡ್ಲು ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದ್ದು, ಶೀಘ್ರವೇ ಈ ಕಾಮಗಾರಿ ಆರಂಭಿಸುವುದಾಗಿ ಸಚಿವರು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಎಚ್ಎನ್ ವ್ಯಾಲಿ, ಎತ್ತಿನಹೊಳೆ ಜೊತೆಗೆ ಕೃಷ್ಣಾ ಕೊಳ್ಳದಿಂದಲೂ ಅಗತ್ಯ ನೀರು ತಂದು ಕುಡಿಯಲು ಮತ್ತು ಕೃಷಿ ಬಳಕೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಮಹಿಳೆಯರ ಸ್ವಾವಲಂಭನೆಗಾಗಿ ಅಗತ್ಯ ಕ್ರಮಗಳನ್ನು ಈಗಾಗಲೇ ವಹಿಸಲಾಗಿದ್ದು, ಇನ್ನೂ ಹಲವು ಯೋಜನೆಗಳನ್ನು ರೂಪಿಸಲಾಗುವುದು. ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುವುದಾಗಿ ಅವರು ಹೇಳಿದರು.
ಉದ್ಯೋಗ ಸೃಷ್ಟಿಗೆ ಕೈಗಾರಿಕೆಗಳ ಸ್ಥಾಪನೆ
ಮೂಲ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಮಹಿಳಾ ಸಬಲೀಕರಣದಂತಹ ಕಾರ್ಯಕ್ರಮಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನುಷ್ಠಾನಗೊಳಿಸುತ್ತಿದ್ದು, ಉದ್ಯೋಗ ಅರಿಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಯುವಕರಿಗೆ ಉದ್ಯೋಗ ಸೃಷ್ಟಿಗಾಗಿ ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ತರುವ ಕೆಲಸ ಶೀಘ್ರದಲ್ಲಿ ಮಾಡುವುದಾಗಿ ಹೇಳಿದರು.
ಕೈಗಾರಿಕೆಗಳ ಸ್ಥಾಪನೆಗಾಗಿ ಕ್ಷೇತ್ರದಲ್ಲಿ 3 ಸಾವಿರ ಎಕರೆ ಪ್ರದೇಶ ಗುರ್ತಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ಕೈಗಾರಿಕಾ ಪ್ರದೇಶಕ್ಕೆ ಜಮೀನು ನೀಡಿ, ಕೈಗಾರಿಕೆಗಳನ್ನು ತಂದು ಯುವಕರಿಗೆ ಉದ್ಯೋಗವಕಾಶ ಕಲ್ಪಿಸಲು ಕ್ರಮ ವಹಿಸಲಾಗುವುದು. ಗಡಿ ಪ್ರದೇಶದಲ್ಲಿರುವ ಮತ್ತು ಹೆಚ್ಚು ಬಡವರನ್ನೇ ಹೊಂದಿರುವ ಗ್ರಾಮಗಳಿಗೆ ಕುಡಿಯುವ ನೀರು ನಲ್ಲಿ ಮೂಲಕ ಮನೆ ಮನೆಗೆ ತಲುಪಿಸುತ್ತಿರುವುದು ಖುಷಿ ತಂದಿದೆ ಎಂದರು.
ಉಜ್ವಲ ಯೋಜನೆಯಲ್ಲಿ ದೇಶದ 3 ಕೋಟಿ ಜನರಿಗೆ ಮನೆ ನಿರ್ಮಿಸುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನುಷ್ಠಾನಗೊಳಿಸಿದ್ದು, ಜಿಲ್ಲೆಯಲ್ಲಿ 15 ಸಾವಿರ ಕುಟುಂಬಗಳಿಗೆ ಉಚಿತ ನಿವೇಶನ ಮತ್ತು ಉಚಿತ ಮನೆ ನಿರ್ಮಿಸಿಕೊಡುವ ಕೆಲಸವನ್ನು ರಾಜ್ಯ ಸರ್ಕಾರದಿಂದ ಮಾಡಲು ಶ್ರಮಿಸಲಾಗುತ್ತಿದೆ ಎಂದರು.
ಕ್ಷೇತ್ರಗಳಲ್ಲಿ ನಡೆಯುತ್ತಿರುವ ಎಲ್ಲ ಕೆಲಸಗಳಲ್ಲಿಯೂ ಗುಣಮಟ್ಟ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಜಲಜೀವನ್ ಮಿಷನ್ ಯೋಜನೆಗೆ ಬಳಸುವ ಪೈಪ್ ಗುಣಮಟ್ಟದಿಂದ ಕೂಡಿರಬೇಕು ಮತ್ತು ಭೂಮಿಯಲ್ಲಿ ಹಾಕುವ ಪೈಪ್ ಎರಡೂವರೆ ಅಡಿ ಆಳದಲ್ಲಿಯೇ ಹಾಕಬೇಕು. ಶಾಶ್ವತವಾಗಿ ಉಳಿಯುವ ಕಾರ್ಯಕ್ರಮವಾಗಬೇಕು ಹಾಗಾಗಿ ಗುಣಮಟ್ಟದಲ್ಲಿ ರಾಜಿಯಾಗದಂತೆ ಎಚ್ಚರವಹಿಸಬೇಕು ಎಂದು ಸಂಬಂಧಿಸಿದ ಅಕಾರಿಗಳಿಗೆ ಎಂದರು.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತ್ತು ತಮ್ಮ ಮೇಲೆ ವಿಶ್ವಾಸವಿಟ್ಟು ಇತರೆ ಪಕ್ಷಗಳ ಅನೇಕ ಮಂದಿ ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿಗೆ ಸೇರುತ್ತಿರುವುದು ಪಕ್ಷದ ಮುಂದಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಆರೋಗ್ಯ ಸಚಿವ ಡಾ,ಕೆ. ಸುಧಾಕರ್ ಅಭಿಪ್ರಾಯಪಟ್ಟರು.
ತಾಲೂಕಿನ ಗಂಗರೇಕಾಲುವೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ಕೊಠಡಿಗಳ ಭೂಮಿಪೂಜೆ ಮತ್ತು ಅಂಬೇಡ್ಕರ್ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷ ಸೇರಿದ ಎಲ್ಲ ನಾಯಕರಿಗೆ ಆತ್ಮೀಯವಾಗಿ ಸ್ವಾಗತಿಸಿದರು.
ನಿಮ್ಮ ಅಭಿಪ್ರಾಯಗಳಿಗೆ ಧಕ್ಕೆಯಾಗದಂತೆ ಪಕ್ಷದಲ್ಲಿ ನಡೆಸಿಕೊಳ್ಳಲಾಗುವುದು. 80ರ ದಶಕದಲ್ಲಿ ಬಿಜೆಪಿಯಿಂದ ಕೇವಲ ಇಬ್ಬರು ಸಂಸದರು ಮಾತ್ರ ಇದ್ದರು. ಆದರೆ ಈಗ 303 ಸಂಸದರು ಜಯಗಳಿಸುವ ಜೊತೆಗೆ ದೇಶದ ಅಧಿಕಾರ ಹಿಡಿಯಲಾಗಿದೆ. ಇದಕ್ಕೆ ಕಾರ್ಯಕರ್ತರ ಶ್ರಮವೇ ಕಾರಣವಾಗಿದೆ. ಹಾಗಾಗಿ ಗ್ರಾಮ ಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತಿರುವುದು ಸಂತಸದ ವಿಷಯವಾಗಿದ್ದು, ಮುಂದಿನ ಚುನಾವಣೆಗಳಲ್ಲಿ ಮುಖಂಡರೇ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ಹೊರಬೇಕಿದೆ ಎಂದರು.
ಮುಂದಿನ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಆದರೆ ಚುನಾವಣಾಧಿಕಾರಿಗಳು ಅವಧಿಗೂ ಮುನ್ನವೇ ಚುನಾವಣೆ ನಡೆಸುವ ಸಾಧ್ಯತೆಯೂ ಇಲ್ಲದಿಲ್ಲ. ಹಾಗಾಗಿ ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾದರೂ ಸನ್ನದ್ಧರಾಗಿರುವಂತೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಕರೆ ನೀಡಿದರು.
ಕೋವಿಡ್ ನಿಂದಾಗಿ ರಾಜ್ಯದ ಜನತೆಯನ್ನು ರಕ್ಷಿಸುವ ಹೊಣೆ ನೀಡಿದ್ದು ಈ ಕ್ಷೇತ್ರದ ಜನತೆ. ಕ್ಷೇತ್ರದ ಜನತೆಯ ಆಶೀರ್ವಾದದಿಂದಾಗಿ ದೇಶದಲ್ಲಿಯೇ ಅತ್ಯುತ್ತಮ ಕೋವಿಡ್ ನಿರ್ವಹಣೆ ಮಾಡಿದ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಇದಕ್ಕಾಗಿ ಪ್ರಶಸ್ತಿಯನ್ನೂ ನೀಡಲಾಗಿದೆ ಎಂದರು.
ಕ್ಷೇತ್ರದಲ್ಲಿ ರಸ್ತೆ, ಶಾಲಾ ಕೊಠಡಿಗಳು, ಅಂಗನವಾಡಿಗಳ ನಿರ್ಮಾಣವಾಗಿದೆ. ದಿಬ್ಬೂರು ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳ ಪಟ್ಟಿ ನೀಡಲಾಗಿದ್ದು, ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಳಸಿ ಅಭಿವೃದ್ಧಿ ಪಡಿಸಲಾಗುವುದು. ಗ್ರಾಮೀಣ ಪ್ರದೇಶದ ಬಡವರಿಗೆ ಉಚಿತ ನಿವೇಶನ ಹಂಚುವ ಜೊತೆಗೆ ಉಚಿತ ಮನೆ ನಿರ್ಮಾಣ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರಸ್ತುತ ತಾವು ಸಚಿವರಾಗಿರುವ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರ ಮಾತ್ರವಲ್ಲದೆ, ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕಿದೆ. ಹಾಗಾಗಿ ಕ್ಷೇತ್ರದ ಅಭ್ಯರ್ಥಿ ನಾನೇ ಆದರೂ ಸ್ಥಳೀಯ ಮುಖಂಡರು ತಾವೇ ಅಭ್ಯರ್ಥಿ ಎಂದು ಭಾವಿಸಿ ಚುನಾವಣೆ ಎದುರಿಸಬೇಕು. ತಾವು ಇತರೆ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗುವುದರಿಂದ ಇನ್ನಷ್ಟು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಪಕ್ಷ ಸೇರಿದ ಹತ್ತಾರು ಮುಖಂಡರು ಇದೇ ಸಂದರ್ಭದಲ್ಲಿ ಗಂಗರೇಕಾಲುವೆ ವ್ಯಾಪ್ತಿಯ ಹಲವಾರು ಮುಖಂಡರು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಆರೋಗ್ಯ ಸಚಿವರ ಸಮ್ಮುಖದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ಮುಖಂಡರಾದ ಕವಿನ್, ಗ್ರಾಪಂ ಮಾಜಿ ಉಪಾಧ್ಯಕ್ಷ ಟಿ. ಮಂಜುನಾಥ್, ವಿಎಸ್ಎಸ್ಎನ್ ಸದಸ್ಯ ನಾಗರಾಜ್, ಗ್ರಾಪಂ ಮಾಜಿ ಸದಸ್ಯ ಆಂಜಿನಪ್ಪ, ಎಸ್ ಡಿಎಂಸಿ ಅಧ್ಯಕ್ಷ ಮಂಜುನಾಥ್, ಗ್ರಾಪಂ ಮಾಜಿ ಸದಸ್ಯ ಅವುಲಪ್ಪ, ಬೋರ್ ವೆಲ್ ಹನುಮಂತಪ್ಪ, ಎಂಪಿಸಿಎಸ್ ಅಧ್ಯಕ್ಷ ಶಿವಪ್ಪ, ವೆಂಕಟಸ್ವಾಮಿ, ಪ್ರಭಾಕರ್, ಪ್ರಕಾಶ್, ಶೇಖರ್, ನಾರಾಯಣಪ್ಪ, ಸುದರ್ಶನ್, ನಾಗರಾಜ್, ರಮೇಶ್, ಭೈರಪ್ಪ, ಅಪ್ಪಾಜಪ್ಪ, ವೆಂಕಟೇಶ್, ಶಂಕರ್, ರಮೇಶ್, ಮುನಿರಾಜು, ಹರೀಶ್, ನಾಗರಾಜ್, ಲಕ್ಷ್ಮೀನಾರಾಯಣ, ನಾಗರಾಜ್, ವೆಂಕಟೇಶಪ್ಪ, ಶಿವಕುಮಾರ್, ರಮೇಶ್, ನವೀನ್, ಶ್ಯಾಮ ಸುಂದರ್, ವೆಂಕಟರೆಡ್ಡಿ, ವೆಂಕಟೇಶ್, ಶಿವರಾಮ್, ಮುನಿರಾಜು, ರಾಮಚಂದ್ರ, ಲಕ್ಷ್ಮೀನಾರಾಯಣ, ಮಧು ಸೇರಿದಂತೆ ಇತರರು ಪಕ್ಷ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣ ಮೂರ್ತಿ, ಗಂಗರೇಕಾಲುವೆ ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.



