ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಮತದಾರರಿಗೆ ಹಣದ ಆಮಿಷ ಒಡ್ಡಿರುವ ಬಗ್ಗೆ ಬಹಿರಂಗವಾದ ಹಿನ್ನಲೆಯಲ್ಲಿ ಅವರನ್ನು ಕೂಡಲೇ ಇಲ್ಲಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಮಸ್ಕಿಯ ಚುನಾವಣಾಧಿಕಾರಿಗಳ ಕಚೇರಿಯ ಮುಂದೆ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಮಸ್ಕಿ ಕ್ಷೇತ್ರದಲ್ಲಿ ಕರ್ನಾಟಕ ಬಿಜೆಪಿ ನಡೆಸುತ್ತಿರುವ ಅಕ್ರಮಗಳು ಕಣ್ಣಮುಂದಿದ್ದರೂ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ, ತಹಶೀಲ್ದಾರ್, ಪೊಲೀಸ್ ಮತ್ತು ಚುನಾವಣಾ ಆಯೋಗ ಕಣ್ಣುಮುಚ್ಚಿ ಕುಳಿತಂತಿದೆ ಎಂದು ಮಾಜಿ ಗೃಹ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು.
ಭ್ರಷ್ಟ ಬಿಜೆಪಿ ಸರ್ಕಾರದಲ್ಲಿ ಮತದಾರರಿಗೆ ಬೆಲೆ ಎಲ್ಲಿದೆ? ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂತೆ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಕೆಲವು ಅಧಿಕಾರಿಗಳು ಸರ್ಕಾರಿ ಕೆಲಸ ಬಿಟ್ಟು, ಬಿಜೆಪಿ ಪಕ್ಷ ಸೇರಿದರೆ ಉತ್ತಮ ಎಂದು ಅವರು ವಾಗ್ದಾಳಿ ನಡೆಸಿದರು.
ಈ ವೇಳೆ ಮಾಜಿ ಸಂಸದ ಆರ್.ಧ್ರುವನಾರಾಯಣ್, ಮಾಜಿ ಸಚಿವರಾದ ಕೃಷ್ಣಬೈರೇಗೌಡ, ಎಚ್.ಆಂಜನೇಯ, ಎಚ್.ಎಂ.ರೇವಣ್ಣ, ಬಸವರಾಜ ರಾಯರೆಡ್ಡಿ, ಶಿವರಾಜ್ ತಂಗಡಗಿ, ಶಾಸಕ ರಿಜ್ವಾನ್ ಅರ್ಷದ್, ಬೋಸರಾಜ್, ಭೈಯಪುರ್, ಶರಣಪ್ಪ ಮೇಟಿ, ಎಸ್.ಮನೋಹರ್, ಸಲೀಂ, ಶಂಕರ್ ಸೇರಿದಂತೆ ರಾಯಚೂರು ಕಾಂಗ್ರೆಸ್ ಮುಖ೦ಡರು ಇದ್ದರು.



