ನಿರುದ್ಯೋಗ ಅಸಮಾನತೆ ಬಗೆಗೆ ಮೊಸಳೆ ಕಣ್ಣೀರು: ಕೆ.ಮಹಾಂತೇಶ್

4 years ago

ಧಾರವಾಡ: ದೇಶದಲ್ಲಿ ನಿರುದ್ಯೋಗ ಹಾಗೂ ಆರ್ಥಿಕ ಅಸಮಾನತೆಗಳು ತೀವ್ರಗೊಳ್ಳುತ್ತಿವೆ. ಇನ್ನೊಂದೆಡೆ ಕಾರ್ಮಿಕ ವರ್ಗದ ಬದುಕು ಅತ್ಯಂತ ದುಸ್ಥಿತಿಯತ್ತ ಸಾಗುತ್ತಿದೆ. ಇದಕ್ಕೆ ಬಿಜೆಪಿ ಸರ್ಕಾರ ಜಾರಿಗೊಳಿಸುತ್ತಿರುವ ಆರ್ಥಿಕ ನೀತಿಗಳೇ ಪ್ರಮುಖ ಕಾರಣವಾಗಿದೆ. ಆದರೆ ಇದನ್ನು ಮರೆಮಾಚಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಹೊಸನಾಟಕ ಆರಂಭಿಸಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಆರೋಪಿಸಿದರು.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಧಾರವಾಡ ಜಿಲ್ಲಾ 5 ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೋದಿ‌ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ಲಾಭ ಪಡೆದ ಅದಾನಿ ಹಾಗೂ ಅಂಬಾನಿ ಕುಟುಂಬಗಳು ದೇಶದ ಅತೀ ಶ್ರೀಮಂತ ಕಾರ್ಪೋರೆಟ್ ಕುಟುಂಬಗಳಾಗಿ ಹೊರ ಹೊಮ್ಮಿವೆ. ಈ‌ ಕಾರ್ಪೋರೆಟ್ ನೀತಿಗಳ ಪರಿಣಾಮ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ 7.6 ರಷ್ಟು ‌ದಾಟಿದೆ.‌ ಸುಮಾರು 23 ಕೋಟಿ ಜನರು ಅತ್ಯಂತ ಬಡತನದ ರೇಖೆಯ ಅಡಿಯಲ್ಲಿ ಬದುಕುವಂತಾಗಿದೆ ಎಂದರು.

ವಿಶೇಷವೆಂದರೆ ಈ ನೀತಿಗಳನ್ನು ಸ್ವದೇಶಿ ಹಾಗೂ ದೇಶಪ್ರೇಮದ ಹೆಸರಲ್ಲಿ ಜಾರಿಗೊಳಿಸಲಾಗುತ್ತಿದೆ. ಇಂತಹ ನೀತಿಗಳ ಜಾರಿ ತಡೆಯಬೇಕಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈಗ ಆರ್ಥಿಕ ಅಸಮಾನತೆ ಮತ್ತು ನಿರುದ್ಯೋಗ ಹೆಚ್ಚುತ್ತಿದೆ ಎಂದು ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು RSS ದ್ವಿಮುಖ ನೀತಿಯನ್ನು ಖಂಡಿಸಿದರು.

ದುಡಿಯುವ ಜನರ ಬದುಕನ್ನು ಅತಂತ್ರಗೊಳಿಸಿದ ನವ ಉದಾರೀಕಣ ನೀತಿಗಳು ಹಾಗೂ ಜನತೆಯ ಐಕ್ಯತೆಯನ್ನು ಒಡೆಯುವ ಕೋಮುವಾದ ಕಾರ್ಮಿಕ ವರ್ಗದ ಪ್ರಬಲ ಶತ್ರುಗಳು ಈ‌ ಎರಡರ ವಿರುದ್ಧ ಕಾರ್ಮಿಕರು ನಿರಂತರ ಹೋರಾಟ ನಡೆಬೇಕಾದುದ್ದು ಇವತ್ತಿನ ಅನಿವಾರ್ಯತೆಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ‌ ಹಿರಿಯ ಕಾರ್ಮಿಕ ಮುಖಂಡ ಆರ್.ಎಚ್.ಆಯಿ ಭಾಗವಹಿಸಿ‌ ಮಾತನಾಡಿ, ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆ ಬೆಳೆಯದೇ ತಮ್ಮ‌ ಮೇಲೆ ನಡೆಯುವ ಶೋಷಣೆ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.

ಸಿಐಟಿಯು ಜಿಲ್ಲಾ ಗೌರವಧ್ಯಕ್ಷ ಬಿ.ಎನ್.‌ಪೂಜಾರಿ ಧ್ವಜಾರೋಹಣ ನೇರವೇರಿಸಿ ಮಾತನಾಡಿ, ಶ್ರಮಿಕ ವರ್ಗ ಹೋರಾಟಗಳಿಂದ ಪಡೆದುಕೊಂಡಿದ್ದ ಹಕ್ಕುಗಳನ್ನು ಕಳೆದುಕೊಳ್ಳುತ್ತಿದೆ. ಇದರಿಂದಾಗಿ ದೇಶದಲ್ಲಿ ಕನಿಷ್ಠ ವೇತನ ಹಾಗೂ‌ ಸಾಮಾಜಿಕ ‌ಭದ್ರತೆಗಳೇ ಇಲ್ಲದಂತಹ ಕಾರ್ಮಿಕ ವರ್ಗವನ್ನು ಸೃಷ್ಟಿಸಲಾಗುತ್ತಿದೆ. ಇದರ ವಿರುದ್ಧ ‌ಹೋರಾಟ ನಡೆಸುವುದು ಮಾತ್ರವೇ ನಮ್ಮ‌ಮುಂದಿರುವ ಆಯ್ಕೆಯಾಗಿದೆ ಎಂದರು

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಬಿ.ಐ.ಈಳಿಗೇರಾ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಿಐಟಿಯು ಜಿಲ್ಲಾ ಪದಾಧಿಕಾರಿಗಳಾದ ಗುರುಸಿದ್ದ‌ ಅಂಬಿಗೇರಾ, ಬಸಣ್ಣ ನಿರಲಗಿ, ಮಂಜುನಾಥ ಹುಜರಾತಿ, ಮನೋಜ್ ತೋರಣಗಟ್ಟಿ,ಮಹೇಶ ಕುಲಗೋಡ, ಮಂಜುದೊಡ್ಡಮನಿ, ಚೆನ್ನಮ್ಮ‌ದೊಳ್ಳಿನ್, ಸುನಂದಾಚಿಗರಿ, ಅಂಜಾನ ಬಡಿಗೇರ್ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಿಐಟಿಯು 17ನೇ ಅಖಿಲ ಭಾರತ ಸಮ್ಮೇಳನಸ ಲೋಗೋ ಬಿಡುಗಡೆ ಮಾಡಲಾಯಿತು.

Leave a Reply