ಕುಟಂಬ ರಾಜಕಾರಣ ಹಾಗೂ ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು: ಮೋದಿ

3 years ago

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ರಾಜ್ಯದ ಅಭಿವೃದ್ಧಿಗಿಂತ ಸಮಾಜ ಒಡೆಯುವುದೇ ಮುಖ್ಯವಾಗಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಗೆ ಬಹುಮತ ನೀಡುವಂತೆ ಮನವಿ ಮಾಡಿದ್ದಾರೆ.

ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹತ್ತು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ  ಮಾತನಾಡಿದ ಅವರು, ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರದ ಸಾಧನೆ ಸ್ಮರಿಸುತ್ತಲೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ದುರಾಡಳಿತಕ್ಕೆ ಭದ್ರಾ ಮೇಲ್ದಂಡೆ ಯೋಜನೆಯ ನಿರ್ಲಕ್ಷ್ಯವೇ ಸಾಕ್ಷಿ. ಕುಟಂಬ ರಾಜಕಾರಣ ಹಾಗೂ ಭ್ರಷ್ಟಾಚಾರ ಪೋಷಣೆ ಮಾಡುವ ಒಂದೇ ನಾಣ್ಯದ ಎರಡು ಮುಖಗಳು. ಪಕ್ಷ ಎರಡದಾರೂ ಹೃದಯ ಮಾತ್ರ ಒಂದೇ ಆಗಿದ್ದು, ಕರ್ನಾಟಕದ ಜನರು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.

ಅಭಿವೃದ್ಧಿ ಮತ್ತು ವಿಕಾಸವನ್ನು ಕರ್ನಾಟಕ ಬಯಸುತ್ತಿದೆ. ಆದರೆ, ಕಾಂಗ್ರೆಸ್‌ ಸಮಾಜ ಒಡೆಯುವ ಕಾರ್ಯದಲ್ಲಿ ತಲ್ಲೀನವಾಗಿದೆ. ದ್ವೇಷ ಹುಟ್ಟಿಸುವ ಭಾಷಣ ಮಾಡಿ ಆತಂಕ ಸೃಷ್ಟಿಸುತ್ತಿದೆ. ಕಾಂಗ್ರೆಸ್‌ ನಾಯಕರು ಪ್ರಧಾನಿಯನ್ನು 90ಕ್ಕಿಂತ ಹೆಚ್ಚು ಬಾರಿ ನಿಂದನೆ ಮಾಡಿದ್ದಾರೆ. ಕಾಂಗ್ರೆಸ್‌ ನಿಜ ಬಣ್ಣ ಜನರಿಗೆ ಅರ್ಥವಾಗಿದೆ. ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಕರ್ನಾಟಕವನ್ನು ದೇಶದ ನಂಬರ್‌ 1 ರಾಜ್ಯ ಮಾಡುವ ಸಂಕಲ್ಪ ಮಾಡಬೇಕಿದೆ. ಮುಂದಿನ 25 ವರ್ಷಗಳ ಕಾಲದಲ್ಲಿ ಕರ್ನಾಟಕ ಎತ್ತ ಸಾಗಬೇಕಿದೆ ಎಂಬ ಅಭಿವೃದ್ಧಿಯ ಎಂಜಿನ್‌ಗೆ ಚುನಾವಣೆಯಲ್ಲಿ ಚಾಲನೆ ನೀಡಬೇಕಿದೆ ಎಂದು ಹೇಳಿದರು.

ಕಾಂಗ್ರೆಸ್‌ ಇತಿಹಾಸ ಗಮನಿಸಿದರೆ ಆತಂಕ ಮುತ್ತು ಆತಂಕವಾದಿ ತುಷ್ಟೀಕರಣ ಮಾಡುವುದೇ ಆಗಿದೆ. ದೆಹಲಿಯಲ್ಲಿ ಉಗ್ರಗಾಮಿಗಳ ಎನ್‌ಕೌಂಟರ್‌ ಆದಾಗ ಕಾಂಗ್ರೆಸ್‌ ನಾಯಕರು ಕಣ್ಣೀರು ಹಾಕಿದ್ದಾರೆ. ಸರ್ಜಿಕಲ್‌ ಸ್ಟ್ರೈಕ್‌ ಸಂದರ್ಭದಲ್ಲಿ ದೇಶವನ್ನು ಅವಮಾನ ಮಾಡಿದ್ದಾರೆ. ಕರ್ನಾಟಕದಲ್ಲಿ ಆತಂಕವಾದಿಗಳ ಬೆಂಬಲಕ್ಕೆ ನಿಲ್ಲುವ ಕೆಲಸ ಮಾಡಿದ್ದಾರೆ. ಅಭಿವೃದ್ಧಿಯಲ್ಲಿ ರಾಜ್ಯ ಮೊದಲ ಸ್ಥಾನಕ್ಕೆ ಏರಬೇಕಾದರೆ ಉಗ್ರವಾದ ಮಟ್ಟಹಾಕಬೇಕಿದೆ ಎಂದು ಮನಸೋಇಚ್ಛೆ ಆಧಾರರಹಿತ ಆರೋಪ ಮಾಡಿದರು.

ಕಾಂಗ್ರೆಸ್‌ ಎಂದಿಗೂ ಬಿಜೆಪಿ ಅಭಿವೃದ್ಧಿಯ ವೇಗವನ್ನು ಊಹಿಸಲು ಸಾಧ್ಯವಿಲ್ಲ. 2014ಕ್ಕೂ ಮೊದಲು ದೇಶದಲ್ಲಿ ಎಷ್ಟು ವೈದ್ಯಕೀಯ ಕಾಲೇಜು ಸ್ಥಾಪಿಸಲಾಗಿತ್ತೊ ಬಿಜೆಪಿ ಅದರ ಎರಡು ಪಟ್ಟು ವೈದ್ಯಕೀಯ ಕಾಲೇಜುಗಳನ್ನು 9 ವರ್ಷದಲ್ಲಿ ಸ್ಥಾಪಿಸಿದೆ. ಇದರಿಂದ ಬಡಜನರಿಗೆ ಅನುಕೂಲವಾಗುತ್ತಿದೆ. ಸರ್ಕಾರದ ವತಿಯಿಂದ ನರ್ಸಿಂಗ್ ಕಾಲೇಜು ಪ್ರಾರಂಭಿಸಲಾಗುತ್ತಿದೆ. ಕರ್ನಾಟಕದ ಯುವಜನರು ಎಲ್ಲೆಡೆ ಉದ್ಯೋಗ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.

ದೇಶದಲ್ಲಿ ಕಾಂಗ್ರೆಸ್‌ ಸಮಯ ಮುಗಿದಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಗ್ಯಾರಂಟಿ ಇಲ್ಲ. ಅವರ ವ್ಯಾರಂಟಿ ಎಲ್ಲೆಡೆ ಮುಗಿದು ಹೋಗಿದೆ. ಹೀಗಾಗಿ, ಅವರು ಸುಳ್ಳು ಗ್ಯಾರಂಟಿಗಳನ್ನು ನೀಡುತ್ತಿದ್ದಾರೆ. 2012ರಲ್ಲಿ ಗುಜರಾತ್‌ ಚುನಾವಣೆಯಲ್ಲಿ ವಸತಿ ನಿರ್ಮಾಣದ ಗ್ಯಾರಂಟಿ ನೀಡಿದ್ದರು. ಆದರೆ, ಆ ಸಂದರ್ಭದಲ್ಲಿ ಗ್ಯಾರಂಟಿ ಕಾರ್ಡ್‌ ಭರ್ತಿ ಮಾಡಲು  500 ರೂಪಾಯಿ ಲಂಚ ಪಡೆದಿದ್ದರು ಎಂದು ಆರೋಪಿಸಿದರು.

ರಾಜ್ಯದ ಜನರು ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ತರುವುದಿಲ್ಲ ಎಂಬ ಭರವಸೆ ಸಿಕ್ಕಿದೆ. ಹೀಗಾಗಿ ಅವರು ಗ್ಯಾರಂಟಿ ಕಾರ್ಡ್‌ ನೀಡುತ್ತಿದ್ದಾರೆ. ಇವುಗಳ ಮೌಲ್ಯ ಎಷ್ಟಿದೆ ಎಂದರೆ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಸ್ಥಗಿತಗೊಳಿಸಬೇಕಾಗುತ್ತದೆ. ಇದು ಅಕ್ಷರಶಃ ದಾರಿತಪ್ಪಿಸುವ ಕಾರ್ಯ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಯೋಜನೆಗಳನ್ನು ರಿವರ್ಸ್‌ ಗೇರ್‌ನಲ್ಲಿ ತೆಗೆದುಕೊಂಡು ಹೋಗುತ್ತಾರೆ. ಜನರಿಗೆ ನೀಡಿದ ಕೊಡುಗೆಗಳು ಸ್ಥಗಿತಗೊಳ್ಳಲಿವೆ ಎಂದು ದೂರಿದರು.

ಬಿಜೆಪಿ ಬಡವರ ಮಕ್ಕಳನ್ನು ಗಮನದಲ್ಲಿ ಇಟ್ಟುಕೊಂಡು ವೈದ್ಯಕೀಯ, ಎಂಜಿನಿರಿಂಗ್‌ ಪರೀಕ್ಷೆಗಳನ್ನು ಸ್ಥಳೀಯ ಭಾಷೆಯಲ್ಲಿ ಪರಿಚಯ ಮಾಡಿದೆ. ಹಳ್ಳಿಗಳ ಮಕ್ಕಳಿಗೂ ಅವಕಾಶ ಪಡೆಯಲು ಇದರಿಂದ ಅನುಕೂಲವಾಗಲಿದೆ. ರೈತ ವಿದ್ಯಾನಿಧಿಯ ಮೂಲಕ ಗ್ರಾಮೀಣ ಮಕ್ಕಳಿಗೆ ನೆರವು ನೀಡುತ್ತಿದೆ ಎಂದರು.

ಎಲ್ಲಿ ನೋಡಿದರು ಜನಸಾಗರ. ಇಷ್ಟು ದೊಡ್ಡ ಜನ ಸಾಗರ ನೆರೆದಿರುವುದನ್ನು ನೋಡಿದರೆ ಬಿಜೆಪಿ ಬಹುಮತದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಕರ್ನಾಟಕವನ್ನು ದೇಶದ ನಂಬರ್‌ 1 ರಾಜ್ಯ ಮಾಡುವ ಚುನಾವಣೆ ಇದಾಗಿದೆ ಎಂದು ಹೇಳಿದರು.

Leave a Reply