ಬೆಂಗಳೂರು: ಸರ್ವಜನಾಂಗದ ಶಾಂತಿಯ ತೋಟದ ಧ್ಯೇಯದೊಂದಿಗೆ ಕಾಂಗ್ರೆಸ್ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಧಾರ್ಮಿಕ ದ್ವೇಷ ಬಿತ್ತುವ ಸಂಘಟನೆಗಳನ್ನು ನಿಷೇಧಿಸುವ ಭರವಸೆ ನೀಡಿದೆ. ಈಗಾಗಲೇ ಕಾಂಗ್ರೆಸ್ ಗ್ಯಾರಂಟಿ ಹೆಸರಲ್ಲಿ ನೀಡಿರುವ ಎಲ್ಲಾ ಘೋಷಣೆಗಳೊಂದಿಗೆ ಹಲವು ಭರವಸೆಗಳ ‘ಸರ್ವ ಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ’ ಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಜಿ. ಪರಮೇಶ್ವರ, ಮಾಜಿ ಸಚಿವೆ ರಾಣಿ ಸತೀಶ್, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪವನ್ ಖೇರಾ ಇದ್ದರು.
ಪ್ರಣಾಳಿಕೆ ಭರವಸೆಗಳನ್ನು ಈಡೇರಿಸುವ ಪ್ರಮಾಣ ಸಂಕೇತವಾಗಿ ಪ್ರಣಾಳಿಕೆ ಹೊತ್ತಿಗೆಗೆ ಅರಿಶಿನ ಕುಂಕುಮ ಹಚ್ಚಿ, ವೀಳ್ಯದೆಲೆ ಅಡಿಕೆ ಇಟ್ಟು ಸಾಂಪ್ರದಾಯಿಕವಾಗಿ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜಸ್ಥಾನ, ಛತ್ತಿಸ್‍ಗಢ, ಹಿಮಾಚಲ ಪ್ರದೇಶಗಳಲ್ಲಿ ನೀಡಿರುವ ಕಾರ್ಯಕ್ರಮಗಳನ್ನು ಗಮನದಲ್ಲಿ ಇಟ್ಟುಕೊಂಡು ನಾಯಕರ ಜೊತೆ ಚರ್ಚಿಸಿ, ಸಾಮಾಜಿಕ ನ್ಯಾಯ, ಅಭಿವೃದ್ಧಿಗೆ ಬದ್ಧರಾಗಿ ಮುಂದಿನ ಮುಂದಿನ 25 ವರ್ಷ ದೂರದೃಷ್ಟಿಯಲ್ಲಿಟ್ಟುಕೊಂಡು ಪ್ರಣಾಳಿಕೆ ತಯಾರು ಮಾಡಿದ್ದೇವೆ ಎಂದರು.
ನಾವು ಈಗಾಗಲೇ ಗೃಹಜ್ಯೋತಿ, ಗೃಹಲಕ್ಷಿ, ಅನ್ನಭಾಗ್ಯ, ಯುವನಿಧಿ ಮತ್ತು ಎಲ್ಲ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ( ಶಕ್ತಿ ) ಭರವಸೆಗಳನ್ನು ಘೋಷಿಸಿದ್ದೇವೆ. ಇದಕ್ಕೆ ನಾನು ಗ್ಯಾರಂಟಿ ಕೊಡುತ್ತೇನೆ. ಅಧಿಕಾರಕ್ಕೆ ಬಂದ ನಂತರ ಮೊದಲ ಸಂಪುಟ ಸಭೆಯಲ್ಲೇ ಇವುಗಳನ್ನು ಘೋಷಿಸುತ್ತೇವೆ ಎಂದು ಹೇಳಿದರು.
ನಾವು ನುಡಿದಂತೆ ನಡೆಯುವ ಜನ. ಭರವಸೆ ನೀಡಿ ಹೋಗುವವರಲ್ಲ. ರಾಜ್ಯದ ಜನರಿಗೆ ಮೊದಲಿನಿಂದಲೂ ಏನು ಹೇಳಿದ್ದೇವೋ ಅದನ್ನು ಮಾಡಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದೇ ಬರಲಿದೆ. ನಮ್ಮ ಗುರಿ 150. ಇಷ್ಟು ಸ್ಥಾನಗಳನ್ನ ಗೆದ್ದೇ ಗೆಲ್ಲುತ್ತೇವೆ. ಜನರೇ ನಮ್ಮ ಗ್ಯಾರಂಟಿಗಳ ಬಗ್ಗೆ ಖುಷಿಯಾಗಿ ಮಾತನ್ನಾಡುತ್ತಿದ್ದಾರೆ. ಅವುಗಳ ಬಗ್ಗೆ ಇನ್ನಷ್ಟು ಪ್ರಚಾರ ನಡೆಸುವಂತೆ ಹೇಳುತ್ತಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ಬೆಂಗಳೂರಿನ ವಾಹನ ದಟ್ಟಣೆ ಸಮಸ್ಯೆ ಬಗೆಹರಿಸಿ ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಭರವಸೆ ನೀಡಿದ್ದೇವೆ. ಎರಡನೇ ಹಂತದ ನಗರಕ್ಕೆ ಜನ ವಲಸೆ ಬರಬಾರದೆಂದು ಅಲ್ಲಿ ಉದ್ಯೋಗ ಸೃಷ್ಟಿ ಮಾಡಲು ಭರವಸೆ ನೀಡಿದ್ದೇವೆ. ಗ್ಲೋಬಲ್ ಕರ್ನಾಟಕ ಎಂದರೆ ಕೇವಲ ಅರ್ಬನ್ ಸೆಕ್ಟರ್ ಮಾತ್ರವಲ್ಲ. ಹಿಂದುಳಿದ ವರ್ಗಗಳ ಸೇರಿದಂತೆ ಎಲ್ಲಾ ವರ್ಗಗಳ ಅಭಿವೃದ್ಧಿ ಕಾಂಗ್ರೆಸ್ ಧ್ಯೇಯ ಎಂದು ತಿಳಿಸಿದರು.
ಸಿದ್ದರಾಮಯ್ಯ ಮಾತನಾಡಿ, ‘ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣ ಶೇ 50ರಿಂದ ಶೇ 75ಕ್ಕೆ ಏರಿಕೆ ಮಾಡುತ್ತೇವೆ. ನಾವು ಸಂವಿಧಾನದ ಪ್ರಕಾರವೇ ನಡೆದುಕೊಳ್ಳುವವರು ಎಲ್ಲರಿಗೂ ಮೀಸಲಾತಿ ಕೊಡುತ್ತೇವೆ. ಪ್ರಣಾಳಿಕೆ ಮತಗಳಿಕೆಯ ಸಾಧನ ಅಲ್ಲ. ರಾಜ್ಯದ ವಿಕಾಸ, ಜನರ ಅಭಿವೃದ್ಧಿಗೆ ಇರುವ ಸಾಧನ. ಐದು ವರ್ಷಗಳ ಅವಧಿಯಲ್ಲಿ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಕಳೆದ 2013ರಲ್ಲಿ 165 ಭರವಸೆ ಕೊಟ್ಟಿದ್ದೆವು. ಇದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಬಿಜೆಪಿಯವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ 600 ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲಿ ಕೇವಲ 55 ಭರವಸೆಗಳನ್ನ ಮಾತ್ರ ಈಡೇರಿಸಿದ್ದಾರೆ ಎಂದರು.
ಕಾಂಗ್ರೆಸ್ ಭರವಸೆಗಳು:
1. ಬಿಜೆಪಿ ಸರ್ಕಾರ ರದ್ದು ಮಾಡಿರುವ ಮುಸ್ಲಿಂ ರ 2ಬಿ ಮೀಸಲಾತಿ ಶೇ. 4ರಷ್ಟು ಪುನಃ ಜಾರಿಗೆ ತರುವುದು
2. ಶಾಂತಿ ಕದಡುವ ಸಂಘಟನೆಗಳ ನಿಷೇಧ
3. ಲೋಕಾಯುಕ್ತ ಬಲವರ್ಧನೆ
4. ಸರ್ಕಾರದಲ್ಲಿ ಖಾಲಿ ಇರುವ ಎಲ್ಲಾ ಅನುಮೋದಿತ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ
5. 2006ರಿಂದ ನೇಮಕವಾದ ಪಿಂಚಣಿ ಅರ್ಹತೆಯುಳ್ಳ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಉದ್ಯೋಗಿಗಳನ್ನು ಹಳೆ ಪಿಂಚಣಿ ಯೋಜನೆಯಡಿ ತರಲು ನಿರ್ಧಾರ
6. ಆರೋಗ್ಯ ಇಲಾಖೆಯಲ್ಲಿ ಕಳೆದ 20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂಗೊಳಿಸುವ ಪ್ರಕ್ರಿಯೆ ಜಾರಿ
7. ಅಂಗನವಾಡಿ ಕಾರ್ಯಕರ್ತರ ವೇತನ 11500ರಿಂದ 15000ಕ್ಕೆ ಹೆಚ್ಚಳ, ಮಿನಿ ಅಂಗನವಾಡಿ ಕಾರ್ಯಕರ್ತರ ವೇತನ 7000ದಿಂದ 10000 ಕ್ಕೆ ಹೆಚ್ಚಳ ಮತ್ತು ವಿಶ್ರಾಂತಿ ವೇತನ 2 ಲಕ್ಷ ನಿಗದಿ
8. ಆಶಾ ಕಾರ್ಯಕರ್ತೆಯರ ಮಾಸಿಕ ನಿಶ್ಚಿತ ಗೌರವ ಧನ 5000ದಿಂದ 8000ಕ್ಕೆ ಹೆಚ್ಚಳ, ಬಿಸಿಯೂಟ ಅಡುಗೆಯವರಿಗೆ ಮಾಸಿಕ ಗೌರವ ಧನ 6000ಕ್ಕೆ ಹೆಚ್ಚಳ
9. ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಇಂಧನ ಇಲಾಖೆಗಳ ಟೆಂಡರ್‍ಗಳನ್ನು ಪಾರದರ್ಶಕ ರೀತಿಯಲ್ಲಿ ನಡೆಸಿ ಭ್ರಷ್ಟಾಚಾರ ನಿಗ್ರಹಕ್ಕೆ ಬಿಗಿ ಕಾನೂನು ರಚನೆ ಮತ್ತು ಯಾವುದೇ ಕಾಮಗಾರಿ ಪ್ರಾರಂಭಿಸಲು ಅಗತ್ಯ ಅನುಮೋದನೆ ದೊರೆತ ಮೇಲೆ 90 ದಿನಗಳೊಳಗೆ ಕಾಮಗಾರಿ ಪ್ರಾರಂಭಿಸಿ ನಿಗತ ಸಮಯದಲ್ಲಿ ಪೂರ್ಣಗೊಳ್ಳುವಂತೆ ಮತ್ತು ಬಿಲ್‍ಗಳು ಪಾವತಿಯಾಗುವಂತೆ ಪಾರದರ್ಶಕ ವ್ಯವಸ್ಥೆ ಜಾರಿ
10. ಪೊಲೀಸ್ ಇಲಾಖೆಯಲ್ಲಿ ಶೇ. 33ರಷ್ಟು ಮಹಿಳೆಯರ ನೇಮಕಾತಿ ಜೊತೆಗೆ ಶೇ. 1ರಷ್ಟು ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸಲಾಗುವುದು. ರಾತ್ರಿ ಪಾಳಿ ಸಿಬ್ಬಂದಿಗೆ 5 ಸಾವಿರ ವಿಶೇಷ ಮಾಸಿಕ ಭತ್ಯೆ ಜೊತೆಗೆ ಎಲ್ಲಾ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ. ಸೈಬರ್ ಮತ್ತು ಆರ್ಥಿಕ ಅಪರಾಧ ತನಿಖೆಗಾಗಿ ಎರಡು ಕೋಟಿ ರೂ. ಮೂಲ ನಿಧಿ ಸ್ಥಾಪನೆಗೆ ವ್ಯವಸ್ಥೆ ಕಲ್ಪಿಸಲಾಗುವುದು.
11. ಕಾನೂನು ಮತ್ತು ನ್ಯಾಯ ಇಲಾಖೆಯನ್ನು ಉನ್ನತೀಕರಿಸಲಾಗುವುದು
12. ಕನಕಪುರದಲ್ಲಿ ಅತ್ಯಾಧುನಿಕ ವಿಶ್ವದರ್ಜೆಯ ವಿ-ವಿಜ್ಞಾನ ವಿದ್ಯಾಲಯ ಸ್ಥಾಪನೆ
13. ಕರ್ನಾಟಕ ಮಾಹಿತಿದಾರರ ಸಂರಕ್ಷಣಾ ಕಾಯ್ದೆ ಜಾರಿ
14. ಕುಟುಂಬದ ರಕ್ತ ಸಂಬಂಧಿಗಳಿಗೆ ಉಡುಗೊರೆ/ ದಾನ, ವಿಲ್ ರೂಪದ ಭೂ ವರ್ಗಾವಣೆಗೆ ನೋಂದಣಿ ಶುಲ್ಕದಲ್ಲಿ ಖಡಿತ
15. ಧರ್ಮ ಹಾಗೂ ಜಾತಿ ಹೆಸರಿನಲ್ಲಿ ದ್ವೇಷ ಬಿತ್ತುವ ವ್ಯಕ್ತಿ ಹಾಗೂ ಸಂಘಟನೆಗಳ ವಿರುದ್ಧ ಕಠಿಣ ಹಾಗೂ ನಿರ್ಣಾಯಕ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧತೆ
ದಗಲಬಾಜಿ ಪ್ರಣಾಳಿಕೆ: ಈ ನಡುವೆ, ಕಾಂಗ್ರೆಸ್ಸಿನ ಪ್ರಣಾಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ನವರದ್ದು ಭಾಗ್ಯವಲ್ಲ, ದೌರ್ಭಾಗ್ಯ. ನಾವು ಈಗಾಗಲೇ ಮಾಡಿರುವ ಕೆಲಸಗಳನ್ನೇ ತಿರುಚಿ, ತಮ್ಮ ಪ್ರಣಾಳಿಕೆಯಲ್ಲಿ ನಮೂದಿಸಿದ್ದಾರೆ. ಇವರದ್ದು ದಗಲಬಾಜಿ ಪ್ರಣಾಳಿಕೆ. ಮೇ 13ರವರೆಗೆ ಮಾತ್ರ ಇವರ ಗ್ಯಾರಂಟಿ. ಆಮೇಲೆ ಬರೀ ಗಳಗಂಟೆ. ಕಾಂಗ್ರೆಸ್ ನವರದ್ದು ಅನ್ನಭಾಗ್ಯವಲ್ಲ. ಬದಲಿಗೆ, ಕನ್ನಭಾಗ್ಯ. ಬಡವರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ವಂಚಿಸುತ್ತಿದ್ದಾರೆ ಎಂದರು.




