ಒಂದೇ ಕುಟುಂದವರ ವಿಷ ಸೇವನೆ ಪ್ರಕರಣ: ಮತ್ತೊಂದು ಬಲಿ

2 years ago

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಇಂದು ಮತ್ತೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕಳೆದ ಜೂನ್ 7ರಂದು ಆತ್ಮಹತ್ಯೆ ಯತ್ನದಲ್ಲಿ ತಂದೆ ಮಹಾದೇವನಾಯಕ (65) ಸಾವನ್ನಪ್ಪಿದ್ದು ಇಂದು ಚಿಕಿತ್ಸೆ ಫಲಿಸದೇ ಅವರ ಮಗಳು ಲೀಲಾವತಿ (45 ) ಮೃತಪಟ್ಟಿದ್ದಾರೆ. ಲೀಲಾವತಿಗೆ ಮೂರು ದಿನಗಳಿಂದ ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕ್ರಿಮಿನಾಶಕ ಸೇವಿಸಿದ ತೀವ್ರತೆಗೆ ಅವರು ಕೊನೆಯುಸಿರೆಳೆದಿದ್ದಾರೆ.

ಲೀಲಾವತಿ ಅವರ ಮಗಳು ಅಪ್ರಾಪ್ತಳ ನಗ್ನ ಫೋಟೊ ತೋರಿಸಿ ಕಾಮುಕನೊಬ್ಬ ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ಇದೇ ಕಾರಣಕ್ಕೆ ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಯಲ್ಲಿ ತಂದೆ-ಮಗಳು ಮೃತಪಟ್ಟರೆ, ಅಜ್ಜಿ- ಮೊಮ್ಮಗಳ ಸ್ಥಿತಿ ಗಂಭೀರವಾಗಿದ್ದು, ಇಬ್ಬರಿಗೂ ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ, ಇಬ್ಬರು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೆಆರ್ನಗರ ಠಾಣೆ ಇನ್ಸ್ಪೆಕ್ಟರ್, ಎಎಸ್ಐ ಹಾಗೂ ಮುಖ್ಯಪೇದೆ ಅಮಾನತು ಮಾಡಲಾಗಿದೆ. ಸಂತ್ರಸ್ತೆಯ ಪೋಷಕರ ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಪಿ.ಪಿ.ಸಂತೋಷ್, ಸಹಾಯಕ ಸಬ್ ಇನ್ಸ್ಪೆಕ್ಟರ್ ಗಿರೀಶ್ ಹಾಗೂ ಮುಖ್ಯಪೇದೆ ರಾಘವೇಂದ್ರರನ್ನು ಸಸ್ಪೆಂಡ್ ಮಾಡಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಆದೇಶ ಹೊರಡಿಸಿದ್ದಾರೆ.

ಅಪ್ರಾಪ್ತೆ ಕುಟುಂಬಸ್ಥರು ನೀಡಿದ ದೂರನ್ನು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ, ಪೋಕ್ಸೋ ಕಾಯ್ದೆ ಹಾಗೂ ಐಪಿಸಿ 370 ಸೆಕ್ಷನ್ನಡಿ ದಾಖಲು ಮಾಡಿಕೊಳ್ಳದೇ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು. ಕೆಆರ್ನಗರ ತಾಲೂಕಿನ ಗ್ರಾಮವೊಂದರ ಲೋಕೇಶ್ ಎಂಬಾತ ಸಂತ್ರಸ್ತೆ ಬಾಲಕಿಯ ಖಾಸಗಿ ಫೋಟೋ, ವಿಡಿಯೋ ಮಾಡಿ ವೈರಲ್ ಮಾಡುವುದಾಗಿ ಬ್ಲಾಕ್ಮೇಲ್ ಮಾಡುತ್ತಿದ್ದ.

ಪೊಲೀಸರ ನಿರ್ಲಕ್ಷ್ಯವೇ ಕಾರಣ: ಈ ಸಂಬಂಧ ಸಂತ್ರಸ್ತೆಯ ಪೋಷಕರು ಕೆ.ಆರ್.ನಗರ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಆದರೆ ದೂರು ದಾಖಲಿಸಿಕೊಳ್ಳದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು. ತಮಗೆ ನ್ಯಾಯ ಸಿಗುವ ಭರವಸೆ ಇಲ್ಲದೆ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿತ್ತು. ಅದರಂತೆ ಕಳೆದ ಜೂನ್ 7ರಂದು ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು ವಾಪಸ್ ಬರುವಾಗ ತಾಳಬೆಟ್ಟದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಯಲ್ಲಿ ಬಾಲಕಿ ರಿಷಿತಾಳ ತಾತ ಮೃತಪಟ್ಟಿದ್ದರು. ಅಸ್ವಸ್ಥಗೊಂಡಿದ್ದ ಅಜ್ಜಿ, ತಾಯಿ, ಮೊಮ್ಮಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇದೀಗ ರಿಷಿತಾಳ ತಾಯಿ ಕೂಡ ಮೃತಪಟ್ಟಿದ್ದು, ಅಜ್ಜಿ, ಮೊಮ್ಮಗಳು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಮಹಾದೇವನಾಯಕ ಹಾಗೂ ಗೌರಮ್ಮ ದಂಪತಿ ಮಗಳು ಲೀಲಾವತಿ ಹಾಗೂ ಈಕೆ ಮಗಳು ರಿಷಿತಾ ಈ ನಾಲ್ವರು ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದಾರೆ. ಲೋಕೇಶ್ ಕೊಟ್ಟ ಟಾರ್ಚರ್ಗೆ ಬೇಸತ್ತು ಇಡೀ ಕುಟುಂಬ ಕ್ರಿಮಿ ನಾಶಕ ಸೇವಿಸಿದ್ದರು. ಅಪ್ರಾಪ್ತೆ ಬರೆದಿಟ್ಟ ಡೆತ್ನೋಟ್ ಪತ್ತೆಯಾಗಿದೆ.

ಡೆತ್ನೋಟ್ನಲ್ಲಿ ಆರೋಪಿ ಲೋಕೇಶ್ ಕೊಟ್ಟ ಹಿಂಸೆಯನ್ನು ಎಳೆಎಳೆಯಾಗಿ ಬರೆದಿಟ್ಟಿದ್ದಾಳೆ. ಲೋಕೇಶ್ ಎಲ್ಲಾ ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾನೆ. ನನ್ನನ್ನು ಸಹ ಲೋಕೇಶ್ ಕೆಟ್ಟ ದೃಷ್ಟಿಯಿಂದ ನೋಡಿದ್ದ. ನಮ್ಮ ಕುಟುಂಬದ ಮಾನ ಮರ್ಯಾದೆ ಕಳೆದು ಹಾಕಿದ್ದಾನೆ. ಲೋಕೇಶ್ನನ್ನು ಸುಮ್ಮನೆ ಬಿಡಬೇಡಿ, ಆತನನ್ನ ಸುಮ್ಮನೆ ಬಿಟ್ಟರೆ ನನ್ನಂತ ಎಷ್ಟೋ ಹೆಣ್ಣು ಮಕ್ಕಳ ಜೀವ ಹಾಳಾಗುತ್ತದೆ ಎಂದು ತನಗೆ ಆದ ಅಪಮಾನ ಹಾಗೂ ಮಾನಸಿಕ ಹಿಂಸೆಯ ಕುರಿತು ಬರೆದಿಟ್ಟಿದ್ದಾಳೆ.

ಈ ವಿಷಯ ತಿಳಿಯುತ್ತಿದ್ದ ಆಕ್ರೋಶಗೊಂಡ ಚಂದಗಾಲು ಗ್ರಾಮಸ್ಥರು ಮಹದೇವನಾಯಕರ ಮೃತದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟಿಸಿದರು. ಕೆ.ಆರ್.ನಗರ ಮುಖ್ಯರಸ್ತೆಯಲ್ಲಿ ಶವ ಇಟ್ಟು ಪ್ರತಿಭಟಿಸಿ, ಆರೋಪಿಗೆ ಉಗ್ರ ಶಿಕ್ಷೆ ಕೊಡಬೇಕೆಂದು ಆಗ್ರಹಿಸಿದರು. ನಿರ್ಲಕ್ಷ್ಯ ವಹಿಸಿದ ಪೊಲೀಸರ ಮೇಲೂ ಕಠಿಣ ಕ್ರಮ ಆಗಬೇಕು ಎಂದು ಒತ್ತಾಯಿಸಿದರು. ರಸ್ತೆ ತಡೆಯಿಂದಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.

Leave a Reply