ನಕಲಿ ಸ್ವಾಮಿ ಬ್ಲಾಕ್ ಮೇಲ್, ಲೂಟಿ ರವಿ ಎಲ್ಲರಿಗೂ ತಕ್ಕ ಉತ್ತರ ಕೊಡುತ್ತೇನೆ: ಡಿ.ಕೆ.ಶಿವಕುಮಾರ್

3 years ago

#FakeSwami #Blackmail #LootRavi #suitable #answer #DKSivakumar #itraid

ಬೆಂಗಳೂರು: ರಾಜ್ಯದಲ್ಲಿ ನಡೆದ ಐಟಿ ದಾಳಿ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್, ನಾನು ಹೇಡಿ ಅಲ್ಲ, ಹೆದರಿ ಎಲ್ಲಿಯೂ ಓಡಿ ಹೋಗಲ್ಲ. ಮಾಜಿ ಸಿಎಂ, ನಕಲಿ ಸ್ವಾಮಿ ಬ್ಲಾಕ್ ಮೇಲ್, ಲೂಟಿ ರವಿ ಎಲ್ಲರಿಗೂ ತಕ್ಕ ಉತ್ತರ ಕೊಡುತ್ತೇನೆ. ಅವರದೆಲ್ಲ ಬಿಚ್ಚಿಡುತ್ತೇನೆ ಎಂದು ಗುಡುಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪಕ್ಷದ ಹೈಕಮಾಂಡ್, ನಾಯಕರು ಹಾಗೂ ಸಚಿವರಿಗೆ ಹಣ ಕಲೆಕ್ಷನ್ ಮಾಡುವ ಟಾಸ್ಕ್ ನೀಡಿದೆ ಎಂಬ ವಿರೋಧ ಪಕ್ಷಗಳ ಆರೋಪ ವನ್ನು ತಳ್ಳಿ ಹಾಕಿದರು.

ಈ ವಿಷಯವಾಗಿ ಯಾರಿಗೆ ಏನು ಉತ್ತರ ನೀಡಬೇಕೋ ನೀಡುತ್ತೇನೆ. ಅವರಿಗೆ ಐಟಿ ಇಲಾಖೆ ಪ್ರಕ್ರಿಯೆ ಗೊತ್ತಿಲ್ಲ. ಅವರು ಏಜೆಂಟರಂತೆ ಮಾತನಾಡುತ್ತಿದ್ದಾರೆ. ನಾನು ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಅವರಂತೆ ಮಾತನಾಡಲು ಸಾಧ್ಯವಿಲ್ಲ. ನ್ಯಾಯಾಲಯದ ವಿಚಾರದಲ್ಲಿ ಆ ರೀತಿ ಮಾತನಾಡಿದರೆ ತಪ್ಪಾಗುತ್ತದೆ. ಅವರಿಗೆ ಉತ್ತರ ನೀಡಲು ಮುಹೂರ್ತ ಫಿಕ್ಸ್ ಮಾಡುತ್ತೇನೆ ಎಂದು ತಿಳಿಸಿದರು.

ಪ್ರತಿಪಕ್ಷದವರ ಆರೋಪಕ್ಕೆ ಹೈವೋಲ್ಟೇಜೂ ಕೊಡ್ತಿನಿ, ಲೋವೋಲ್ಟೇಜೂ ಕೊಡ್ತಿನಿ, ನಕಲಿಗೂ ಕೊಡುವೆ, ಲೂಟಿಗೂ ಕೊಡುವೆ, ಸ್ವಲ್ಪ ತಾಳ್ಮೆಯಿಂದ ಕಾಯಿರಿ,ಬಿಜೆಪಿಯವರು ಪ್ರತಿಭಟನೆ ಮಾಡಬೇಕು, ಪ್ರತಿಭಟನೆ ಮಾಡಿದರೆ ಜನರಿಗೆ ಅವರ ಎಲ್ಲಾ ತರಹದ ಲೂಟಿ ಬಗ್ಗೆ ಗೊತ್ತಾಗುತ್ತದೆ, ಎಲ್ಲವನ್ನೂ ಬಿಚ್ಚಿಡುತ್ತೇವೆ” ಎಂದೂ ಹೇಳಿದರು.

ವೇಣುಗೋಪಾಲ್ ಅವರ ಆಗಮನ ಹಾಗೂ ಪಕ್ಷದ ನಾಯಕರ ಸಭೆ ಕುರಿತು ಕೇಳಿದಾಗ, ಪಕ್ಷದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ನಾನು ಪಕ್ಷದ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಲೋಕಸಭೆ ಕ್ಷೇತ್ರಗಳಿಗೆ ಹೋಗಿ ವರದಿ ನೀಡುವಂತೆ ಮಂತ್ರಿಗಳಿಗೆ ಜವಾಬ್ದಾರಿ ನೀಡಿದ್ದೆವು. ಈ ಪ್ರಕ್ರಿಯೆ ತಡವಾಗುತ್ತಿರುವುದರಿಂದ ಅದನ್ನು ತ್ವರಿತವಾಗಿ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ನಿಗಮ-ಮಂಡಳಿಗಳಲ್ಲಿ ಶಾಸಕರಿಗೆ ಮಾತ್ರ ಸ್ಥಾನವೇ? ಕಾರ್ಯಕರ್ತರಿಗೂ ಸ್ಥಾನ ಸಿಗುತ್ತದೆಯೋ ಎಂದು ಕೇಳಿದಾಗ, ಶಾಸಕರು ಹಾಗೂ ಕಾರ್ಯಕರ್ತರು ಇಬ್ಬರಿಗೂ ನೀಡಬೇಕು. ಪಕ್ಷ ಎಂದರೆ ಎಲ್ಲರೂ ಸೇರುತ್ತಾರೆ. ಎಲ್ಲರಿಗೂ ಸ್ಥಾನಮಾನ ನೀಡಬೇಕು. ಈ ವಿಚಾರವಾಗಿ ನಾನು ಹಾಗೂ ಮುಖ್ಯಮಂತ್ರಿಗಳು ಒಂದೆರಡು ದಿನದಲ್ಲಿ ಚರ್ಚೆ ಮಾಡುತ್ತೇವೆ ಎಂದರು.

Leave a Reply