ನಕಲಿ ಅಂಕಪಟ್ಟಿ ಜಾಲ ಪತ್ತೆ: ಬಂಧನ

1 year ago

ಬೆಂಗಳೂರು: ಎಸ್‌‍ಎಸ್‌‍ಎಲ್‌ಸಿ ಮತ್ತು ಪಿಯುಸಿಗೆ ತತ್ಸಮಾನ ಎಂದು ನಮೂದಿಸಿ ನೀಡುತ್ತಿದ್ದ ನಕಲಿ ಅಂಕಪಟ್ಟಿ ಜಾಲವನ್ನು ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು ಮೂವರು ವಂಚಕರನ್ನು ಬಂಧಿಸಿದ್ದಾರೆ.

ಧಾರವಾಡದ ಪ್ರಶಾಂತ್‌ ಗುಂಡುಮಿ(41), ಬನಶಂಕರಿ ಮೂರನೇ ಹಂತ ಶ್ರೀನಿವಾಸ್‌‍ ನಗರದ ಮೊನಿಷ್‌(26) ಮತ್ತು ಗದಗ ಜಿಲ್ಲೆಯ ಲಕ್ಷ್ಮೀಶ್ವರ ಸಿಟಿ ರಾಜಶೇಖರ್‌ ಎಚ್‌. ಬಳ್ಳಾರಿ(41) ಬಂಧಿತ ಆರೋಪಿಗಳಾಗಿದ್ದು, ಬೆಳಗಾವಿ ಮೂಲದ ಮತ್ತೋರ್ವ ನಾಪತ್ತೆಯಾಗಿದ್ದು ಆತನಿಗಾಗಿ ಹುಡುಕಾಟ ನಡೆದಿದೆ.

ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ದೂರ ಶಿಕ್ಷಣದ ಮೂಲಕ ಎಸ್‌‍ಎಸ್‌‍ಎಲ್‌ಸಿ ಮತ್ತು ಪಿಯುಸಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ನಮ್ಮ ಅಕಾಡೆಮಿಯು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ಎಂದು ನಂಬಿಸಿ, ಒಬ್ಬೊಬ್ಬರಿಂದಲೂ 5 ರಿಂದ 10 ಸಾವಿರ ರೂ. ಪಡೆದು, ಸುಮಾರು 350 ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳನ್ನು ಆರೋಪಿಗಳು ವಿತರಣೆ ಮಾಡುತ್ತಿದ್ದರು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಬನಶಂಕರಿಯಲ್ಲಿ ಅಕಾಡೆಮಿ ನಡೆಸುತ್ತಿದ್ದ ಮಾಲೀಕ ಹಾಗೂ ಧಾರವಾಡ ಇಬ್ಬರು ವಂಚಕರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಈ ನಕಲಿ ಅಂಕಪಟ್ಟಿಯನ್ನು ಸಾರಿಗೆ ಇಲಾಖೆ ಹಾಗೂ ಶಿಶು ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ನೀಡಿ ಕೆಲವರು ಉದ್ಯೋಗ ಪಡೆದುಕೊಂಡಿದ್ದಾರೆಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಘಟನೆ ವಿವರ: ಕತ್ರಿಗುಪ್ಪೆ ಮುಖ್ಯರಸ್ತೆಯ ರಾಮ್‌ರಾವ್‌ ಲೇಔಟ್‌ನಲ್ಲಿರುವ ಅಕಾಡೆಮಿಯೊಂದರ ಮಾಲೀಕರನ್ನು ಭೇಟಿ ಮಾಡಿ, ವ್ಯಕ್ತಿಯೊಬ್ಬರು ತಮ ಅಣ್ಣನ ಮಗನನ್ನು ದೂರ ಶಿಕ್ಷಣದ ಮೂಲಕ ಪಿಯುಸಿಗೆ ದಾಖಲು ಮಾಡಿಸಿದ್ದಾರೆ.

ದಾಖಲಾದ ಕೆಲವೇ ದಿನಗಳಲ್ಲಿ ಈತನಿಗೆ ಯಾವುದೇ ಪರೀಕ್ಷೆಯನ್ನು ಬರೆಸದೆ ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆಯ ಹೆಸರಿನಲ್ಲಿ ಎಸ್‌‍ಎಸ್‌‍ಎಲ್‌ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ಅಂಕಪಟ್ಟಿಯನ್ನು ನೀಡಿದ್ದು, ಅಂಕಪಟ್ಟಿಯನ್ನು ಅವರು ಪರಿಶೀಲನೆ ಮಾಡಿದಾಗ ನಕಲಿ ಅಂಕಪಟ್ಟಿ ಎಂದು ಗೊತ್ತಾಗಿದೆ.

ತಕ್ಷಣ ಅವರು ಸಿಸಿಬಿಯ ಆರ್ಥಿಕ ಅಪರಾಧ ದಳಕ್ಕೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಿಸಿಬಿ ಪೊಲೀಸರು ಬನಶಂಕರಿಯಲ್ಲಿರುವ ಅಕಾಡೆಮಿ ಮೇಲೆ ದಾಳಿ ನಡೆಸಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದಾರವಾಡ ಹಾಗೂ ಬೆಳಗಾವಿಯ ವ್ಯಕ್ತಿ ಹಾಗೂ ಇತರರೊಂದಿಗೆ ಸೇರಿಕೊಂಡು ಸಂಸ್ಥೆಯ ಹೆಸರಿನಲ್ಲಿ ಹಣ ಪಡೆದು, ಅಕಾಡೆಮಿ ವತಿಯಿಂದ ಕಳಿಸುವ ದಾಖಲಾತಿಗಳ ಆಧಾರದ ಮೇಲೆ 10 ಮತ್ತು 12ನೇ ತರಗತಿಯ ಅಂಕಪಟ್ಟಿಗಳನ್ನು ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.

ಅಲ್ಲದೇ ಸುಮಾರು 25 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಹೆಸರಿನಲ್ಲಿ ಅಂಕಪಟ್ಟಿಗಳನ್ನು ಕೊಡಿಸಿರುವುದಾಗಿ ಹೇಳಿದ್ದಾನೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿ ಕಛೇರಿಯಲ್ಲಿದ್ದ ಶಿಕ್ಷಣ ಮಂಡಳಿಗೆ ಸೇರಿದ 1 ಅಸಲಿ ಪಿಯುಸಿ ಅಂಕಪಟ್ಟಿ, ಅಸಲಿ ಲೀವಿಂಗ್‌ ಸರ್ಟಿಪಿಕೇಟ್‌, ಅಸಲು ಪ್ರಾವಿಷನಲ್‌ ಮಾರ್ಕ್ಸ್ ಕಾರ್ಡ್‌, ಅಸಲಿ ಹಾಲ್‌ ಟಿಕೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Leave a Reply