ಬೆಳಗಾವಿ: ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಇರುವ ಸೌಲಭ್ಯಗಳಲ್ಲಿ ಒಂದಾದ ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೂ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ವಿಧಾನ ಪರಿಷತ್ತಿನಲ್ಲಿ ಘೋಷಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಜ್ಯೋತಿ ಸಂಜೀವಿನಿ ಯೋಜನೆ ಅನುದಾನಿತ ಸಂಸ್ಥೆಗಳ ನೌಕರರಿಗೆ ಇಲ್ಲ. ಆದರೂ, ಆರ್ಥಿಕ ಸಂಪನ್ಮೂಲಕ್ಕೆ ಅನುಗುಣವಾಗಿ ಲೆಕ್ಕಾಚಾರ ಹಾಕಿ ಅವರನ್ನೂ ಯೋಜನೆ ವ್ಯಾಪ್ತಿಗೆ ತರಲಾಗುವುದು ಎಂದರು.
ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ರ್ನಿಷ್ಟವಾಗಿ ಗುರುತಿಸಲಾಗಿರುವ ಏಳು ಮಾರಣಾಂತಿಕ ರೋಗಗಳಾದ ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡ, ಯೂರಿನರಿ ಚಿಕಿತ್ಸೆಗಳು, ನವಜಾತ ಶಿಶು ಹಾಗೂ ಚಿಕ್ಕಮಕ್ಕಳ ಖಾಯಿಲೆ, ಸುಟ್ಟಗಾಯ ಮತ್ತು ಅಪಘಾತಗಳಿಗೆ ಸಂಬಂಧಿಸಿದಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನ ವತಿಯಿಂದ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ನಗದು ರಹಿತವಾಗಿ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಸಂಜೀವಿನಿ ಯೋಜನೆಯನ್ನು 2015ರಿಂದ ಜಾರಿಗೊಳಿಸಿದೆ ಎಂದರು.
ಯೋಜನೆಯನ್ನು ಸರ್ಕಾರಿ ನೌಕರರಿಗೆ ಮಾತ್ರ ರೂಪಿಸಲಾಗಿದೆ. ಯಾವುದೇ ಅನುದಾನಿತ ನೌಕರರು ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ, ಈ ಸಂಬಂಧ ಪರಿಶೀಲನೆ ನಡೆಸಿ ಬದಲಾವಣೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿಅನುದಾನಿತ ಪ್ರಾಥಮಿಕ ಶಾಲೆಗಳು 2686ರಷ್ಟಿದ್ದು, ಅಲ್ಲಿ 11677 ಸಿಬ್ಬಂದಿಗಳಿದ್ದಾರೆ. ಪ್ರೌಢ ಶಾಲೆಗಳು 3756 ಇದ್ದು, 24383 ಸಿಬ್ಬಂದಿಗಳಿದ್ದಾರೆ.ಅದೇ ರೀತಿ ಪದವಿ ಪೂರ್ವ ಕಾಲೇಜುಗಳ ಸಂಖ್ಯೆಯೂ 831 ಇದ್ದು, 5848 ರಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇವರನ್ನು ಇದರ ವ್ಯಾಪ್ತಿಗೆ ತರಲಾಗುತ್ತದೆ ಎಂದರು.




