ಬೆಂಗಳೂರು: 2025-26 ನೇ ಸಾಲಿನ ಬಜೆಟ್ ಅನ್ನು ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿರುವ ಸಿಎಂ ಸಿದ್ದರಾಮಯ್ಯ ನಾಳೆ ಮಂಡಿಸುತ್ತಿದ್ದಾರೆ. ಇದು ಅವರ ದಾಖಲೆಯ ಬಜೆಟ್ ಮಂಡನೆಯಾಗಿದೆ. ಹಾಗೆಯೇ ಅತ್ಯಂತ ದೊಡ್ಡ ಸವಾಲು ಕೂಡ ಅವರ ಮುಂದಿದೆ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಪಂಚ ಗ್ಯಾರಂಟಿಗಳ ಭರವಸೆಯೊಂದಿಗೆ ದಾಖಲೆಯ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷಕ್ಕೆ ಜನ ತಮ್ಮ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವ ಗುರುತರ ಜವಾಬ್ದಾರಿ ಇದೆ. ಹಾಗೆಯೇ ಸಮಾಜವಾದಿ ರಾಜಕಾರಣಿ ಆರ್ಥಿಕ ಚಿಂತಕ ಎಂಬಂತಿರುವ ಸಿಎಂ ಸಿದ್ದರಾಮಯ್ಯ ಅಭಿವೃದ್ಧಿ ಯೋಜನೆಗಳು ಜನಕಲ್ಯಾಣ ಕಾರ್ಯಕ್ರಮಗಳು ಸ್ವಪಕ್ಷೀಯರೂ ಸೇರಿದಂತೆ ಎಲ್ಲ ಪಕ್ಷದ ಶಾಸಕರನ್ನು ಸಮಾಧಾನ ಪಡಿಸುವ ಅತ್ಯಂತ ದೊಡ್ಡ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದ ಗುತ್ತಿಗೆದಾರರ ಬಾಕಿ ಪಾವತಿಸುವ ವಿಷಯದಲ್ಲಿ ಮುಜುಗರಕ್ಕೆ ಒಳಗಾಗಿದೆ. ಪ್ರತಿಪಕ್ಷಗಳ ಟೀಕೆಗೆ ರಾಜಕೀಯ ಅಸ್ತ್ರ ಒದಗಿಸಿದೆ.
ಇನ್ನು ಸಿದ್ದರಾಮಯ್ಯ ತಮ್ಮ ಕಳೆದ ಬಜೆಟ್ಟನ್ನು ಮಹಿಳಾ ಕೇಂದ್ರದ ಬಜೆಟ್ ಎಂದು ಘೋಷಿಸಿ ಲಿಂಗ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಹಲ ಯೋಜನೆಗಳನ್ನು ಪ್ರಕಟಿಸಿದ್ದರು. ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡಿದ ಅನುದಾನದಲ್ಲಿ ಇಂತಿಷ್ಟು ಪ್ರಮಾಣವನ್ನು ಮಹಿಳಾ ಕೇಂದ್ರಿತ ಯೋಜನೆಗಳಿಗೆ ವಿನಿಯೋಗಿಸುವಂತೆ ಬಜೆಟ್ ನಲ್ಲಿ ಸೂಚನೆ ನೀಡಿದ್ದರೂ ಅವುಗಳು ಕಾರ್ಯರೂಪಕ್ಕೆ ಬಂದಿಲ್ಲ.
ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಮೀಸಲಾಗಿರುವ ಅನುದಾನವನ್ನು ಆ ಸಮುದಾಯಕ್ಕೆ ಖರ್ಚು ಮಾಡಬೇಕು. ತಪ್ಪಿದಲ್ಲಿ ಅದು ಕಾನೂನು ರೀತಿಯ ಶಿಕ್ಷಾರ್ಹ ಅಪರಾಧ ಎಂದು ಘೋಷಣೆ ಮಾಡಿ ಹೊಸ ಕಾನೂನು ರಚಿಸಿದ ಸಿದ್ದರಾಮಯ್ಯ ಅವರೇ ಇದೀಗ ಆ ಕಾನೂನನ್ನು ಉಲ್ಲಂಘಿಸಿರುವ ಆರೋಪದಲ್ಲಿ ಸಿಲುಕಿದ್ದಾರೆ. ಇದಕ್ಕೆಲ್ಲ ಪ್ರಮುಖ ಕಾರಣ ಪಂಚ ಗ್ಯಾರಂಟಿಗಳು ಎಂದು ತೋರಿಸಲಾಗುತ್ತಿದೆ.
2024-25 ರಲ್ಲಿ 3.71 ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಈ ಬಾರಿ ಅದರ ಗಾತ್ರವನ್ನು 4 ಲಕ್ಷ ಕೋಟಿ ರೂ.ಗಳನ್ನು ದಾಟಿಸಲಿದ್ದಾರೆ. ಕಳೆದ ಬಜೆಟ್ ನಲ್ಲಿ ಐದು ಖಾತರಿಗಳಿಗೆ ರೂ. 52,000 ಕೋಟಿ (2024-25) ಹಂಚಿಕೆ ಮಾಡಲಾಗಿತ್ತು. ಈ ಬಾರಿಯ ಬಜೆಟ್ ನಲ್ಲಿ ಇದರ ಪ್ರಮಾಣ 59,000 ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಪ್ರಮುಖ ಕಾರಣ ಗ್ಯಾರಂಟಿ ಯೋಜನೆಗಳಿಗೆ ಹೊಸ ಫಲಾನುಭವಿಗಳು ಸೇರ್ಪಡೆಯಾಗುತ್ತಿದ್ದಾರೆ.
ಅಭಿವೃದ್ಧಿಗೆ ಉತ್ತೇಜನ ನೀಡುವ ಸಲುವಾಗಿ, ಸಿದ್ದರಾಮಯ್ಯ 55,877 ಕೋಟಿ ರೂ.ಗಳ ಬಂಡವಾಳ ವೆಚ್ಚವನ್ನು ಹೆಚ್ಚಿಸಲು ತೀರ್ಮಾನಿಸಿದ್ದಾರೆ ಎಂದು ಆರ್ಥಿಕ ಇಲಾಖೆಯ ಮೂಲಗಳು ತಿಳಿಸಿದ್ದು ಒಟ್ಟಾರೆ ಬಜೆಟ್ ಗಾತ್ರ 4 ಲಕ್ಷ ಕೋಟಿಯನ್ನು ದಾಟಲಿದೆ.
ಕರ್ನಾಟಕ ಏಕೀಕರಣದ ಬಳಿಕ 1952-53ರಲ್ಲಿ ಅಂದಿನ ಸಿಎಂ ಕೆಂಗಲ್ ಹನುಮಂತಯ್ಯ ರಾಜ್ಯದ ಮೊದಲ ಮುಂಗಡ ಪತ್ರ ಮಂಡಿಸಿದ್ದರು. ಅವರು ಮಂಡಿಸಿದ್ದ ಮೊದಲ ಬಜೆಟ್ ಗಾತ್ರ 21.03 ಕೋಟಿ ರೂ. ಅವರು ಒಟ್ಟು 4 ಬಜೆಟ್ ಮಂಡಿಸಿದ್ದರು. ಕೆಂಗಲ್ ಅವರ ಕಡೆಯ ಆಯವ್ಯಯದ ಗಾತ್ರ 30 ಕೋಟಿ. ಹಾಗೆಯೇ ಈಗ ಸಿದ್ದರಾಮಯ್ಯ ಮಂಡಿಸುತ್ತಿರುವ ಬಜೆಟ್ ನ ಗಾತ್ರ 4 ಲಕ್ಷ ಕೋಟಿ ದಾಟಲಿದೆ.
ಹಿಂದಿನ ಬಜೆಟ್ನಲ್ಲಿ, ಒಟ್ಟು ರಾಜ್ಯದ ಆಂತರಿಕ ಉತ್ಪನ್ನ (GSDP) 28,09,063 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಇದರಲ್ಲಿ 1,05,246 ಕೋಟಿ ರೂ. ಸಾಲ ಪ್ರಸ್ತಾಪಿಸಲಾಗಿತ್ತು. ಇದು 2023-24 ರ ಹಣಕಾಸು ವರ್ಷಕ್ಕೆ ಹೋಲಿಸಿದರೆ (83,818 ಕೋಟಿ ರು,) ಶೇ. 23 ರಷ್ಟು ಹೆಚ್ಚಾಗಿದೆ. ಈ ಬಾರಿ, ರಾಜ್ಯದ ಆದಾಯ 32,00,000 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಸಾಲ 1.5 ಲಕ್ಷ ಕೋಟಿ ರೂ.ಗಳನ್ನು ಮೀರುತ್ತದೆ.
2024-25 ರ ಅಂತ್ಯದ ವೇಳೆಗೆ ರಾಜ್ಯದ ಬಾಕಿ ಇರುವ ಹೊಣೆಗಾರಿಕೆಗಳು ಒಟ್ಟು ದೇಶಿಯ ಉತ್ಪನ್ನದ ಶೇಕಡಾ 24 ರಷ್ಟಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಸಾಲ 6.65 ಲಕ್ಷ ಕೋಟಿ ರೂ.ಗಳಷ್ಟಿದೆ. ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಕಾಯ್ದೆ ಪ್ರಕಾರ ರಾಜ್ಯ ತನ್ನ GSDP ಯ ಶೇಕಡಾ 25 ರವರೆಗೆ ಸಾಲ ಪಡೆಯಬಹುದು.
ಸಂಪನ್ಮೂಲ ಕ್ರೂಡೀಕರಣಕ್ಕೆ ಸರ್ಕಾರದ ಮುಂದೆ ಸಾಲ ಮಾಡುವುದು ಬಿಟ್ಟರೆ ಬೇರೆ ಆಯ್ಕೆಗಳು ಇಲ್ಲ ಎಂಬಂತಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಹಿಡಿದು ರಾಜ್ಯ ಸರಕಾರದವರೆಗೆ ದುಡ್ಡಿಲ್ಲದ ಸ್ಥಿತಿ ಇದೆ. ಸ್ಥಳೀಯ ಸಂಸ್ಥೆಗಳು ಸಂಪನ್ಮೂಲಕ್ಕಾಗಿ ರಾಜ್ಯ ಸರಕಾರದ ಮೇಲೆ ಅವಲಂಬನೆ ಆಗುವ ಬದಲು ಸ್ವಾವಲಂಬನೆ ಸಾಧಿಸಬೇಕು. ಈ ನಿಟ್ಟಿನಲ್ಲಿ ಅವುಗಳಿಗೆ ಪೂರಕವಾಗುವಂತಹ ಯೋಜನೆಗಳನ್ನು ಸಿದ್ದರಾಮಯ್ಯ ಅವರು ತಮ್ಮ ಬಜೆಟ್ಟಿನಲ್ಲಿ ಪ್ರಕಟಿಸಬೇಕಾಗಿದೆ.
ಸರ್ಕಾರ ಲಭ್ಯವಿರುವ ಆರ್ಥಿಕ ಮೂಲಗಳಲ್ಲಿ ಸಂಪನ್ಮೂಲ ಕ್ರೂಡೀಕರಣಕ್ಕೆ ಪರದಾಡುವ ಬದಲಿಗೆ ಆದಾಯದ ಹೊಸ ಮೂಲಗಳನ್ನು ಹುಡುಕಿ ಕೊಳ್ಳಬೇಕಾಗಿದೆ. ತೆರಿಗೆ ಸೋರಿಕೆ ತಡೆಗಟ್ಟುವ ದೃಷ್ಟಿಯಿಂದ ಹೊಸ ಕ್ರಮಗಳು ಕೂಡ ಅನಿವಾರ್ಯವಾಗಿದೆ.
ವಾಣಿಜ್ಯ ತೆರಿಗೆ ಸಂಗ್ರಹಣೆಯಲ್ಲಿ ದಾಖಲೆ ನಿರ್ಮಾಣವಾಗುತ್ತಿದೆಯಾದರೂ ಇಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ತೆರಿಗೆ ಸಂಗ್ರಹಕ್ಕೆ ಅವಕಾಶವಿದೆ. ಬೆಂಗಳೂರಿನ ಚಿಕ್ಕಪೇಟೆ ಪ್ರದೇಶವೊಂದರಲ್ಲೇ ದಿನ ನಿತ್ಯ ನೂರಾರು ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತಿದ್ದು, ಇದರಲ್ಲಿ ಶೇಕಡ 40ಕ್ಕಿಂತ ಹೆಚ್ಚಿನ ಪ್ರಮಾಣ ಬಿಲ್ ರಹಿತವಾಗಿ ವಹಿವಾಟು ನಡೆಯುತ್ತಿದೆ. ಇದರ ಮೇಲೆ ನಿಗಾ ಇಡಬೇಕಾದ ಪ್ರಹರಿ ದಳಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿ ಮತ್ತು ವಾಹನಗಳೆ ಇಲ್ಲ. ಇರುವ ಕೆಲವೇ ಕೆಲವು ವಾಹನ ಮತ್ತು ಸಿಬ್ಬಂದಿಗೆ ಅತಿಯಾದ ಕೆಲಸದ ಒತ್ತಡ ಇರುವ ಪರಿಣಾಮ ದೊಡ್ಡ ಪ್ರಮಾಣದಲ್ಲಿ ತೆರಿಗೆ ಸೋರಿಕೆಯಾಗುತ್ತಿದೆ. ಇದೊಂದನ್ನು ತಡೆಗಟ್ಟಿದರೆ ಸಾಕು ಸರ್ಕಾರಕ್ಕೆ ದೊಡ್ಡ ಪ್ರಮಾಣದ ಆದಾಯ ಬರಲಿದೆ. ಹಾಗೆಯೇ ವಾಣಿಜ್ಯದ ಚೆಕ್ ಪೋಸ್ಟ್ ಗಳು, ಸಾರಿಗೆ ಇಲಾಖೆಯ ಚೆಕ್ ಪೋಸ್ಟ್ ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡಿದರೆ ಸಂಪನ್ಮೂಲ ಕ್ರೂಢೀಕರಣ ತಂತಾನೇ ಹೆಚ್ಚಳವಾಗಲಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಅಪಾರ ಪ್ರಮಾಣದ ಸರ್ಕಾರಿ ಆಸ್ತಿ ಅನುಪಯುಕ್ತವಾಗಿ ಬಿದ್ದಿದೆ. ಕೆಲವು ಕಡೆ ಇದು ಭೂಗಳ್ಳರ ಪಾಲಾಗಿದೆ. ಇದನ್ನು ಪತ್ತೆ ಹಚ್ಚಿ ಒತ್ತುವರಿ ತೆರವುಗೊಳಿಸಿ ಖಾಸಗಿ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ನಿರ್ಮಾಣ ನಿರ್ವಹಣೆ ಹಸ್ತಾಂತರ ಎಂಬ ನಿಯಮದೊಂದಿಗೆ ಸದ್ಬಳಕೆ ಮಾಡಿದರೆ ಸರ್ಕಾರಕ್ಕೆ ಆದಾಯ ಬರಲಿದೆ. ಸರ್ಕಾರದ ಆಸ್ತಿ ಭೂಗಳ್ಳರ ಪಾಲಾಗುವುದು ತಪ್ಪಲಿದೆ.
ಜನಸಾಮಾನ್ಯರಿಗೆ ಅತ್ಯಂತ ಅಗತ್ಯ ಇರುವುದು ಆಹಾರ, ವಸತಿ, ಶಿಕ್ಷಣ ಮತ್ತು ಆರೋಗ್ಯ. ಈ ನಾಲ್ಕು ಆದ್ಯತಾವಲಯಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡಬೇಕಾಗಿದೆ. ಈಗಾಗಲೇ ಅನ್ನಭಾಗ್ಯ ಯೋಜನೆ ಮೂಲಕ ಉಚಿತ ಪಡಿತರ ನೀಡಲಾಗುತ್ತಿದೆ. ಹಾಗೆಯೇ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಮೂಲಕ ಉಚಿತ ಶಿಕ್ಷಣವೂ ಸಾಧ್ಯವಾಗಿದೆ. ಗುಡಿಸಲು ರಹಿತ ಕರ್ನಾಟಕ ಯೋಜನೆ ಮೂಲಕ ಎಲ್ಲಾ ಕಚ್ಚಾ ಮನೆಗಳು ಪಕ್ಕಾ ಮನೆಗಳಾಗಿ ಪರಿವರ್ತನೆಯಾಗುತ್ತಿವೆ. ಇನ್ನು ಆರೋಗ್ಯ ಇಲಾಖೆಗೆ ಮಾತ್ರ ಇಂತಹ ಕ್ರಾಂತಿಕಾರಿ ಯೋಜನೆಗಳು ಜಾರಿಗೆ ಬಂದಿಲ್ಲ.
ಬಡವ ಬಲ್ಲಿದ ಎಂಬ ಭೇದ ಭಾವವಿಲ್ಲದೆ ಬರುವ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಲು ಎಲ್ಲರೂ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಆರೋಗ್ಯ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸಿ ಅದನ್ನು ಉಚಿತವಾಗಿ ನೀಡುವಂತಾದಲ್ಲಿ ಜನಸಾಮಾನ್ಯರಿಗೆ ದೊಡ್ಡ ಹೊರೆ ತಪ್ಪಲಿದೆ. ಇದರಿಂದ ಉಳಿಯುವ ಹಣ ಜನಸಾಮಾನ್ಯರು ಬೇರೆ ವಲಯಗಳಿಗೆ ವೆಚ್ಚ ಮಾಡುವ ಮೂಲಕ ಸರ್ಕಾರದ ಆದಾಯ ವೃದ್ಧಿಯಾಗುತ್ತದೆ.
ಕಳೆದ 4 ವರ್ಷದಿಂದ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಿಸದ ಕಾರಣ ನೂರಾರು ಹೆಣ್ಣು ಮಕ್ಕಳು ಪ್ರೌಢ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಈ ಆಯವ್ಯಯದಲ್ಲಿ ಬೈಸಿಕಲ್ ವಿತರಣೆ ಪುನರಾರಂಭಿಸಬೇಕು ಎಂಬ ಕೂಗಿಗೆ ಸ್ಪಂದಿಸಲೇಬೇಕಾದ ಅನಿವಾರ್ಯತೆ ಇದೆ.
ನೀರಾವರಿಗೆ ಬಜೆಟ್ ಗಾತ್ರ ದೊಡ್ಡದಾಗುತ್ತಿದೆಯೇ ಹೊರತು ನೀರಾವರಿ ಪ್ರದೇಶ ವಿಸ್ತರಣೆ ಆಗುತ್ತಿಲ್ಲ. ನೀರಾವರಿಗೆ ಹಂಚಿಕೆ ಆಗಿರುವ ಹಣ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಜಲಾಶಯಗಳು ನಿರ್ಮಾಣವಾದಂತೆ ವಿತರಣಾ ನಾಲೆಗಳು ಮತ್ತು ಕೊನೆಯ ಹಂತದ ರೈತನಿಗೆ ನೀರು ಕೊಡುವ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಗಮನಹರಿಸಬೇಕಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ ಆರಂಭದಲ್ಲಿ 2 ಸಾವಿರ ಕೋಟಿ ರೂ ಯೋಜನಾ ವೆಚ್ಚ ಇದ್ದದ್ದು ಇದೀಗ 20 ಸಾವಿರ ಕೋಟಿ ರೂಗೆ ಏರಿದೆ. ಆದರೆ ಪೂರ್ಣ ಫಲಿತಾಂಶ ಯಾರಿಗೂ ಸಿಗುತ್ತಿಲ್ಲ. ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿ ಆಂಧ್ರಪ್ರದೇಶಕ್ಕೆ ಹೆಚ್ಚಿನ ನೀರು ಹರಿದು ಹೋಗುತ್ತಿದೆ. ಆಲಮಟ್ಟಿ ಯೋಜನೆಯಿಂದ ಸಿಗಬೇಕಾದಷ್ಟು ಪ್ರಯೋಜನ ಪಡೆದುಕೊಳ್ಳಲು ವಿಫಲವಾಗಿದ್ದೇವೆ. ಮಹದಾಯಿ ವ್ಯಾಜ್ಯ ಪರಿಹಾರವಾಗುವ ಲಕ್ಷಣ ಕಾಣುತ್ತಿಲ್ಲ. ಎತ್ತಿನಹೊಳೆ ಯೋಜನೆ 8 ಸಾವಿರ ಕೋಟಿ ರೂ.ನಿಂದ ಈಗ 24 ಸಾವಿರ ಕೋಟಿ ರೂಗೆ ಹೋಗಿದ್ದು, ಈ ಯೋಜನೆ ಫಲಿತಾಂಶ ನೀಡುವ ಯಾವ ಸೂಚನೆಯೂ ಇಲ್ಲ. ಇವುಗಳಿಗೆ ಈ ಬಾರಿಯಾದರೂ ಪರಿಹಾರ ಕಲ್ಪಿಸಬೇಕಾಗಿದೆ.
ಹಿಂದಿನ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಎರಡು ಮೀಸಲಾದ ಆರ್ಥಿಕ ಕಾರಿಡಾರ್ ಗಳನ್ನು ಘೋಷಿಸಿದ್ದರು – ಹೊಸ ಮಂಗಳೂರು ಬಂದರು – ಬೆಂಗಳೂರು ಮತ್ತು ಬೀದರ್. ಮುಂಬೈ-ಚೆನ್ನೈ ಆರ್ಥಿಕ ಕಾರಿಡಾರ್ ಮಾದರಿಯಲ್ಲಿ ಪ್ರಸ್ತಾಪಿಸಲಾದ ಯೋಜನೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇಂತಹ ಕಾರ್ಯರೂಪಕ್ಕೆ ತರಲಾಗದ ಯೋಜನೆಗಳನ್ನು ಘೋಷಿಸುವ ಬದಲಿಗೆ ಈಗಾಗಲೇ ಘೋಷಣೆಯಾಗಿರುವ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಬದ್ಧತೆಯನ್ನು ತೋರಿಸಬೇಕು ಮತ್ತು ಅದಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಬೇಕು ಎನ್ನುವುದು ಜನಸಾಮಾನ್ಯರ ನಿರೀಕ್ಷೆಯಾಗಿದೆ.
ಸಾರ್ವಜನಿಕ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು, ಸಮಾಜ ಕಲ್ಯಾಣ ಇಲಾಖೆ, ಕೃಷಿ, ತೋಟಗಾರಿಕೆ, ವಸತಿ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬೇಕು ಎನ್ನುವುದು ಬಹುತೇಕರ ಆಗ್ರಹವಾಗಿದೆ.




