ಎಕ್ಸಿಟ್ ಪೋಲ್: ವಿದ್ ಅ ಪಿಂಚ್ ಆಫ್ ಸಾಲ್ಟ್!

2 years ago

ಪ್ರತೀ ಬಾರಿ ಎಕ್ಸಿಟ್ ಪೋಲ್‌ಗಳು ಪ್ರಕಟಗೊಂಡಾಗಲೂ, ಬೇಸರ ತರುವ ಒಂದು ಸಂಗತಿ ಎಂದರೆ, ಸಂಕೀರ್ಣವಾದ ಭಾರತದಂತಹ ದೇಶವೊಂದರ ಸಂದರ್ಭದಲ್ಲಿ, ಒಂದು “ಪ್ರಬಲ ಸಂಖ್ಯಾಶಾಸ್ತ್ರೀಯ ಟೂಲ್” ಆಗಬಹುದಾಗಿದ್ದ “ಎಕ್ಸಿಟ್ ಪೋಲ್” ಗಳ ಸಾಧ್ಯತೆಗಳನ್ನೆಲ್ಲ ಸರ್ವನಾಶ ಮಾಡುವಂತೆ ಇರುವ ಡಿಯರ್ ಮೀಡಿಯಾ ವರ್ತನೆ.

ಯಾವುದೇ ಸಂಖ್ಯಾಶಾಸ್ತ್ರೀಯ ಸಮೀಕ್ಷೆಯ ನೈತಿಕತೆ ಇರುವುದು, ತಮ್ಮ ಪೋಲ್ ಪ್ರಕಟಿಸುವ ಮುನ್ನ, ಅದರ ಸ್ಯಾಂಪಲ್ ಗಾತ್ರ, ಅನುಸರಿಸಿದ ವಿಧಾನ ಇತ್ಯಾದಿಗಳನ್ನೆಲ್ಲ ಬಹಿರಂಗಪಡಿಸಿ, ಆ ಬಳಿಕ ಫಲಿತಾಂಶ ಪ್ರಕಟಿಸುವುದು. ಮೊದಮೊದಲು ಇದೆಲ್ಲ ನಡೆಯುತ್ತಿತ್ತು. ಈಗ ಅದು ಯಾವುದೂ ಬೇಕಾಗಿಲ್ಲ. ಫಲಿತಾಂಶದ ಎಕ್ಸೈಟ್‌ಮೆಂಟ್ ಒಂದೇ ಸಾಕು!

ಅಜ್ಜಿ ಪುಣ್ಯಕ್ಕೆ, ಯಾರಾದರೂ ಹೇಳಿದ್ದು ನಿಜ ಫಲಿತಾಂಶದ ಸಮೀಪ ಇದ್ದರೆ, ಅವರ ಕುರಿತು ಒಂದಿಷ್ಟು ದಿನ, “ಎಷ್ಟು ಸರಿಯಾಗಿ ಹೇಳಿದರು” ಎಂಬ ಸುದ್ದಿ ತಿರುಗಾಡುವುದು ಮತ್ತು ಉಳಿದ ಅಪದ್ಧ ಎಲ್ಲವನ್ನೂ ನೆನಪು ಬಿಡುವುದು ಪರಿಪಾಠ. ನಿಜಕ್ಕೂ ಸಮೀಕ್ಷೆ ನಡೆದಿದ್ದರೆ, ಅದು ಯಾಕೆ ಸರಿಯಾಯಿತು ಅಥವಾ ಯಾಕೆ ತಪ್ಪಿ ಬಿತ್ತು ಎಂದು ವಿಶ್ಲೇಷಣೆ ನಡೆಸದಿದ್ದರೆ, ಎಕ್ಸಿಟ್ ಪೋಲ್ ಒಂದು ವಿಶ್ವಾಸಾರ್ಹ ಟೂಲ್ ಆಗಿ ಬೆಳೆಯುವುದು ಸಾಧ್ಯವಿಲ್ಲ.

ನಿಜಕ್ಕೆಂದರೆ ನಮ್ಮ ಮಾಧ್ಯಮಗಳಿಗೆ ಅದೊಂದು ಟೂಲ್ ಆಗುವುದು ಬೇಕಾಗಿಯೇ ಇಲ್ಲ!

ಈ ಬಾರಿಯ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಬಹುಮತವನ್ನು ಬಹುತೇಕ ಎಲ್ಲ ಎಕ್ಸಿಟ್ ಪೋಲ್‌ಗಳು NDAಗೆ ನೀಡಿವೆ. ಪೋಲುಗಳ ಪೋಲು ನಡೆಸಿದ ಮಾಧ್ಯಮ ಪರಿಣತರು ಅಂತಿಮ ಸೀಟು ಹಂಚಿಕೆ ನಡೆಸಿದ್ದನ್ನೂ ಪ್ರಕಟಿಸಿಕೊಂಡಿದ್ದಾರೆ. ವಾಸ್ತವ ಏನು ಎಂಬುದು ಜೂ.04ರ ಸಂಜೆ ಗೊತ್ತಾಗಲಿದೆ.

ಈ ಬಾರಿ 2024ರ ಚುನಾವಣೆ ಕಾಲದಲ್ಲಿ, 2014ರ ಬದಲಾವಣೆಯ ಗಾಳಿ,  2019ರ ಮೋದಿ ಅಲೆಯ ರೀತಿಯ ಅಲೆಗಳೇನೂ ಇರಲಿಲ್ಲ ಎಂಬುದನ್ನು ಬಹುತೇಕ ಎಲ್ಲರೂ ಗುರುತಿಸಿದ್ದರು. ಹಾಗಿದ್ದೂ ಈ ಬಾರಿ NDAಗೆ ಕಳೆದ ಬಾರಿಗಿಂತ ಹೆಚ್ಚಿನ ಸೀಟುಗಳು/ಮತ ಪ್ರಮಾಣ ಸಿಗಲಿದೆ ಎಂದು ನಿನ್ನೆ ಪ್ರಕಟಗೊಂಡಿರುವ ಎಕ್ಸಿಟ್‌ಪೋಲುಗಳು ಸರ್ವಾನುಮತದಿಂದ ಗುರುತಿಸಿವೆ. ಈ ದ್ವಂದ್ವದ ನಡುವೆ, ತಳಮಟ್ಟದಲ್ಲಿ ವಾಸ್ತವ ಏನು? ಮತದಾರರ ಮನಸ್ಸಿನಲ್ಲಿ ನಿಜಕ್ಕೂ ಏನಿತ್ತು ಎಂಬುದನ್ನು ತಿಳಿಯುವ ಕುರಿತು ನನಗೆ ಆಸಕ್ತಿ ಇದೆ.

ನಾನು ಗಮನಿಸಿದಂತೆ, ಈ ಬಾರಿಯ ಚುನಾವಣೆಗಳು, ಒಂದೋ ಆಡಳಿತ ಪಕ್ಷ (NDA) ಅಥವಾ ಪ್ರತಿಪಕ್ಷಗಳು(INDI ಅಲಯನ್ಸ್) ಜನರ ನಾಡಿ ಮಿಡಿತ ತಿಳಿಯುವ, ರಾಜಕೀಯದ ಮೂಲಭೂತ “ವಿಜ್ಞಾನ”ವೊಂದನ್ನು ಸಂಪೂರ್ಣವಾಗಿ ಮರೆತುಬಿಟ್ಟಿರುವುದನ್ನು ಎತ್ತಿ ತೋರಿಸಲಿವೆ. ಅವರಿಬ್ಬರಲ್ಲಿ ಯಾರು ಮರೆತಿರುವುದು ಸಾಬೀತಾದರೂ, ಅದು ಒಟ್ಟು ದೇಶದ ದುರಂತ. ನಮ್ಮ ಜನಪ್ರತಿನಿಧಿಗಳನ್ನು ನಾವು ಆಯ್ದು ಮಣೆಹಾಕುವ ವಿಧಾನ ಸರಿ ಇಲ್ಲ ಎಂಬುದನ್ನದು ನಮಗೆ ಖಚಿತಪಡಿಸಲಿದೆ. ಇದು NDAಗೂ ಸತ್ಯ;  INDI ಅಲಯನ್ಸಿಗೂ ಸತ್ಯ.  ವಾಸ್ತವ ಫಲಿತಾಂಶ ಬಂದ ಬಳಿಕ, “ಸೋತವರು” ಈ ತಪ್ಪನ್ನು ತಿದ್ದಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸದಿದ್ದರೆ, ಸಮಕಾಲೀನ ರಾಜಕೀಯಕ್ಕೆ ಅವರು ಅಪ್ರಸ್ತುತರೆನ್ನಿಸಲಿದ್ದಾರೆ.

ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆಗಳು, ಅದರಲ್ಲೂ ಕರಾವಳಿ ರಾಜಕೀಯದ ಬಗ್ಗೆ ಸ್ವಲ್ಪ ಆಳವಾಗಿ ಕಲಿಯಲು ಪ್ರಯತ್ನಿಸುತ್ತಿರುವ ನನಗೆ, ಈ ಬಾರಿಯ ಚುನಾವಣೆ ಫಲಿತಾಂಶಗಳು, ಒಳ್ಳೆಯ ಪಾಠ ಹೇಳಲಿವೆ ಎಂಬ ನಿರೀಕ್ಷೆ ಇದೆ.

– ರಾಜಾರಾಮ್ ತಲ್ಲೂರ್, ಹಿರಿಯ ಪತ್ರಕರ್ತರು

Leave a Reply