ಬೆಂಗಳೂರು: 2024ರ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ತಂತ್ರ ರೂಪಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೊಸ ತಂಡ ಪ್ರಕಟಿಸಿದ್ದಾರೆ. ಇದು ಪಕ್ಷದಲ್ಲಿ ಮತ್ತೊಂದು ಸುತ್ತಿನ ಅಸಮಾಧಾನ ವ್ಯಕ್ತವಾಗಿದೆ.
ಬಿಜೆಪಿ ಪದಾಕಾರಿಗಳ ನೇಮಕಾತಿ ಪಟ್ಟಿ ಬಿಡುಗಡೆಯಾಗಿದ್ದು, ಪದಾಕಾರಿಗಳ ಪಟ್ಟಿಯಲ್ಲಿ 14ಕ್ಕೂ ಹೆಚ್ಚು ಯಡಿಯೂರಪ್ಪ ಆಪ್ತರಿಗೆ ಸ್ಥಾನ ನೀಡಲಾಗಿದೆ ಹಾಗೂ ಮೂವರು ವಿಜಯೇಂದ್ರ ಆಪ್ತರಿಗೆ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.
ಯಡಿಯೂರಪ್ಪ ವಿರೋಧಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಎದುರೇಟು ನೀಡುವ ದೃಷ್ಟಿಯಿಂದ ಅವರ ಕಡು ವಿರೋಧಿ ಮುರುಗೇಶ್ ನಿರಾಣಿ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ಹಾಗೂ ಎ.ಎಸ್.ಪಾಟೀಲ್ ನಡಹಳ್ಳಿ ಅವರಿಗೆ ರೈತ ಮೋರ್ಚಾ ರಾಜ್ಯಾಧ್ಯಕ್ಷ ಸ್ಥಾನಗಳನ್ನು ಕೊಡಲಾಗಿದೆ.
ಯುವ ಮುಖಗಳಾದ ಪಿ.ರಾಜೀವ್, ಜೆ.ಪ್ರೀತಮ್ ಗೌಡ, ಡಿ.ಎಸ್.ಅರುಣ್, ವಿನಯ್ ಬಿದರೆ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಧೀರಜ್ ಮುನಿರಾಜು, ಶೈಲೇಂದ್ರ ಬೆಲ್ದಾಳೆ, ಸಿಮೆಂಟ್ ಮಂಜು ಅವರಿಗೆ ಅವಕಾಶ ಒದಗಿಸಲಾಗಿದೆ. ಜೊತೆಗೆ, ಆಪರೇಷನ್ ಕ’ಮಲ’ದ ಮೂಲಕ ಪಕ್ಷ ಸೇರಿರುವ ಬೈರತಿ ಬಸವರಾಜ್, ಎನ್. ಮಹೇಶ್, ವರ್ಷದ ಹಿಂದೆ ಪಕ್ಷಕ್ಕೆ ಬಂದಿರುವ ಮಂಡ್ಯದ ಲಕ್ಷ್ಮಿ ಅಶ್ವಿನಿ ಗೌಡ ಅವರಿಗೂ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್,, ಈ ಪಟ್ಟಿಯ ಆಯುಷ್ಯ 2024ರ ಲೋಕಸಭೆ ಚುನಾವಣೆ. 28 ಸೀಟ್ ತರುತ್ತೇನೆ ಅಂತಾ ಹೇಳಿದ್ದಾರೆ. 28ರಲ್ಲಿ ಒಂದು ಕಡಿಮೆ ಬಿದ್ದರೂ ಚಿಕ್ಕಮಕ್ಕಳು ಹೇಗೆ ಸಿಗರೇಟ್ ಪ್ಯಾಕ್ ಮನೆ ಮಾಡಿರ್ತಾರೆ ಆ ರೀತಿಯಾಗಿ ಈ ಪಟ್ಟಿ ಹಾಗೆ ಬಿದ್ದು ಹೋಗುತ್ತದೆ ಎಂದರು.
ಯಡ್ಡಿಯೂರಪ್ಪನವರದ್ದು ಕೆಜೆಪಿ 1, ಈಗ ಕೆಜೆಪಿ 2 ಆಗಿದೆ, ಮುಂದೆ ಅವರ ಮೊಮ್ಮಗ ಬಂದರೆ ಕೆಜೆಪಿ 3 ಆಗುತ್ತದೆ. ಈಗ ರಾಜಕೀಯದಲ್ಲಿ ಏನಾಗಿದೆ ಎಂದರೆ ಲಂಪಟರು ಬಹಳ ಇದ್ದಾರೆ. ಅವರೆಲ್ಲ ಹಲ್ಕಾ ಕೆಲಸ ಮಾಡುತ್ತಾರೆ. ಇವತ್ತು ಮೌಲ್ಯಾಧಾರಿತ ರಾಜಕಾರಣ ಇಲ್ಲ. ಎಲ್ಲಾ ಕಳ್ಳರು, ಲಫಂಗರು ಹೆಚ್ಚು ಸೇರುತ್ತಿದ್ದಾರೆ. ಒಳ್ಳೆಯವರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಾರೆ. 2024ರ ಚುನಾವಣೆಯ ನಂತರ ಮೇಜರ್ ಆಪರೇಷನ್ ಮಾಡದೇ ಇದ್ದರೆ ಮುಂದಿನ ನಿರ್ಣಯ ನಾನು ಮಾಡುತ್ತೇನೆ ಎಂದರು.
ಈ ಕುರಿತು ಬಿಜೆಪಿ ಸಂಸದ ಸದಾನಂದಗೌಡ ಪ್ರತಿಕ್ರಿಯಿಸಿ, ಈ ತಂಡವನ್ನು ಅಸಮರ್ಥ ತಂಡ ಎಂದು ಹೇಳಲ್ಲ. ಆದರೆ ಅಲ್ಲೋ ಇಲ್ಲೋ ಸ್ವಲ್ಪ ವ್ಯತ್ಯಾಸಗಳು ಇವೆ. ಇದನ್ನೆಲ್ಲ ಮಾಡುವ ಮುನ್ನ ಕೇಂದ್ರದ ನಾಯಕರು ಬಂದು ರಾಜ್ಯದ ಹಿರಿಯರ ಜೊತೆ ಕುಳಿತು ತಿಳಿದುಕೊಳ್ಳಬೇಕಿತ್ತು ಎಂದರು.
ಈ ತಂಡ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋದರೆ ಖಂಡಿತ ಯಶಸ್ವಿಯಾಗುತ್ತದೆ. ಮತ್ತೆ ಏನಾದರೂ ಹಳೆಯ ಚಾಳಿ ಮುಂದುವರಿಸಿದರೆ ಅದು ಪಕ್ಷದ ಮೇಲೆ ಸಮಸ್ಯೆ ಆಗುತ್ತದೆ. ದಕ್ಷಿಣ ಭಾಗಕ್ಕೆ ಹೆಚ್ಚು ಆದ್ಯತೆ ಸಿಕ್ಕಿದೆ, ಉತ್ತರ ಭಾಗಕ್ಕೆ ಸರಿಯಾಗಿ ಸಿಕ್ಕಿಲ್ಲ ಎಂಬ ಮಾತುಗಳು ಇವೆ. ಈ ತಂಡವನ್ನು ಅಸಮರ್ಥ ತಂಡ ಅಂತಾ ಹೇಳಲ್ಲ. ಆದರೆ ಅಲ್ಲೋ ಇಲ್ಲೋ ಸ್ವಲ್ಪ ವ್ಯತ್ಯಾಸಗಳು ಇವೆ. ಇದನ್ನೆಲ್ಲ ಮಾಡುವ ಮುನ್ನ ಕೇಂದ್ರದ ನಾಯಕರು ಬಂದು ರಾಜ್ಯದ ಹಿರಿಯರ ಜೊತೆ ಕುಳಿತು ತಿಳಿದುಕೊಳ್ಳಬೇಕಿತ್ತು. ಅವರಿಂದ ಹೊಸ ವಿಷಯ ತೆಗೆದುಕೊಂಡು ತಂಡವನ್ನು ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಇವತ್ತು ಅವರನ್ನು ಕರೆದು ಮಾತಾಡಿದ್ದರೆ ಈ ಅತೃಪ್ತರ ಸಮಸ್ಯೆ ಇರುತ್ತಿರಲಿಲ್ಲ. ಇವತ್ತಿನ ತಂಡದಲ್ಲಿ ಅಧ್ಯಕ್ಷರನ್ನು ಕ್ರಿಯಾಶೀಲರನ್ನು ನೇಮಕ ಮಾಡಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ನೇಮಕ ಆಗುವಾಗ ಸಮಾನವಾಗಿ ನೇಮಕ ಆಗಬೇಕು. ಒಂದು ತಂಡ ಅಂದರೆ ಅದು ಒಂದು ಗುಂಪಿಗೆ ಸೀಮಿತ ಆಗಬಾರದು. ಈಗಲಾದರೂ ಕರ್ನಾಟಕಕ್ಕೆ ವರಿಷ್ಠರು ಬರಬೇಕು ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿ, ಅಳೆದು, ತೂಗಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಎರಡು ಮಾತಿಲ್ಲ. ಒಳ್ಳೆಯ ಪದಾಧಿಕಾರಿಗಳ ಆಯ್ಕೆ ಆಗಿದೆ. ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಬಗ್ಗೆ ಏನೂ ಹೇಳಲ್ಲ. ಅವರ ವಿರುದ್ಧ ಹೈಕಮಾಂಡ್ಗೆ ದೂರು ನೀಡುವ ಪ್ರಯತ್ನ ಸಹ ಮಾಡಲ್ಲ. ಎಲ್ಲವೂ ಸರಿ ಹೋಗುತ್ತದೆ ಎಂದರು.
ಪಟ್ಟಿ ಬಿಡುಗಡೆ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಬೇರೆಬೇರೆ ಸಮಾಜಗಳು, ಪಂಗಡಗಳು, ಮುಂಬೈ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ಎಲ್ಲ ಭಾಗಗಳನ್ನು ಗುರುತಿಸಿ ಪದಾಧಿಕಾರಿಗಳನ್ನು ಮಾಡಲಾಗಿದೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವುದು ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಒಂದಾಗಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸಬೇಕಾದ ದೊಡ್ಡ ಸವಾಲಿದೆ. ಇದಕ್ಕಾಗಿ ಪಟ್ಟಿಯಲ್ಲಿ ಹೆಚ್ಚು ಯುವಕರಿಗೆ ಆದ್ಯತೆ ಕೊಡಲಾಗಿದೆ. ಹಿರಿಯರಿಗೂ ಅವಕಾಶ ಮಾಡಿಕೊಟ್ಟಿದೆ ಎಂದರು.
ಮಂಗಳವಾರ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಎಲ್ಲ ನೂತನ ಪದಾಧಿಕಾರಿಗಳ ಸಭೆ ಕರೆದಿದ್ದೇನೆ. ಮುಂದಿನ ಲೋಕಸಭಾ ಚುನಾವಣೆವರೆಗೆ ನಾವು ವಿಶ್ರಾಂತಿ ಪಡೆಯುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿ, ಒಂದಾಗಿ ಪಕ್ಷದ ಸಂಘಟನೆಗೆ ಬಲ ತುಂಬಬೇಕೆಂಬ ಸಂದೇಶ ಕೊಡಲಿದ್ದೇವೆ ಎಂದರು.




