ಬೆಂಗಳೂರು: ಉತ್ತರ ಕರ್ನಾಟಕದ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಕಳಸಾ ಬಂಡೂರಿ ಯೋಜನೆಗೆ ಸಹಕರಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಗೋವಾ ಅರಣ್ಯ ಸಚಿವ ವಿಶ್ವಜಿತ್ ರಾಣೆ ಅವರಿಗೆ ಮನವಿ ಮಾಡಿದ್ದಾರೆ.
- ಕಲಾಗ್ರಾಮದಲ್ಲಿ ಸ್ಪರ್ಶ ಮಕ್ಕಳ ನಾಟಕೋತ್ಸವ
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
ವಿಕಾಸಸೌಧದಲ್ಲಿಂದು ತಮ್ಮನ್ನು ಭೇಟಿ ಮಾಡಿದ್ದ ಗೋವಾ ಅರಣ್ಯ ಸಚಿವರ ನಿಯೋಗದೊಂದಿಗೆ ನಡೆದ ಮಾತುಕತೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಂಡ್ರೆ, ಅಭಿವೃದ್ಧಿ ಮತ್ತು ಮೂಲಸೌಕರ್ಯ ವಿಚಾರದಲ್ಲಿ ನೆರೆ ರಾಜ್ಯಗಳು ಪರಸ್ಪರ ಔದಾರ್ಯದಿಂದ ಇರಬೇಕು ಎಂದರು.
ಗೋವಾದಲ್ಲಿ ಶೇ.60ರಷ್ಟು ಅರಣ್ಯ ಪ್ರದೇಶವಿದ್ದರೂ ಆನೆ ಸಮಸ್ಯೆ ಇರಲಿಲ್ಲ. ಈಗ ಓಂಕಾರ ಎಂಬ ಪುಂಡಾನೆಯೊಂದು ಉಪಟಳ ನೀಡುತ್ತಿದ್ದು, ಬೆಳೆ ಹಾನಿ ಆಗುತ್ತಿದೆ. ಹೀಗಾಗಿ ಅದರ ಸೆರೆಗೆ ತರಬೇತಿ ಪಡೆದ ಕುಮ್ಕಿ ಆನೆಗಳು ಹಾಗೂ ತಜ್ಞರನ್ನು ಕಳುಹಿಸಿ ಸಹಕಾರ ನೀಡುವಂತೆ ಗೋವಾ ಸರ್ಕಾರ ಮನವಿ ಮಾಡಿದೆ ಎಂದರು.
ಆನೆ ಸೆರೆ ಕಾರ್ಯಾಚರಣೆಯ ಪ್ರಾವೀಣ್ಯತೆ ರಾಜ್ಯದ ಅರಣ್ಯ ಇಲಾಖೆಗೆ ಇದೆ. ನಮ್ಮಲ್ಲಿ ಪಳಗಿಸಿದ ಕುಮ್ಕಿ ಆನೆಗಳೂ ಇವೆ. ಗೋವಾ ಮನವಿ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು, ಆನೆ ಸೆರೆಗೆ ಸಹಕರಿಸುವ ಸಂಬಂಧ ಗೋವಾ ಅರಣ್ಯ ಪ್ರದೇಶ ಮಹಾರಾಷ್ಟ್ರ ಗಡಿಯನ್ನೂ ಹಂಚಿಕೊಂಡಿರುವ ಕಾರಣ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೂ ಚರ್ಚಿಸುವ ಅಗತ್ಯವಿದೆ ಎಂದರು.
ಅಂತಾರಾಜ್ಯ ಸಂಬಂಧವರ್ಧನೆಗಾಗಿ ನಾವು ನೆರೆಯ ರಾಜ್ಯದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ತಾವು ಸಚಿವರಾದ ಬಳಿಕ ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಅರಣ್ಯ ಸಚಿವರೊಂದಿಗೆ ಸಭೆ ನಡೆಸಿದ್ದಲ್ಲದೆ, ಮಾನವ-ಆನೆ ಸಂಘರ್ಷ ಕುರಿತಂತೆ ಅಂತಾರಾಷ್ಟ್ರೀಯ ಸಮಾವೇಶವನ್ನೂ ಯಶಸ್ವಿಯಾಗಿ ಆಯೋಜಿಸಿದ್ದಾಗಿ ತಿಳಿಸಿದರು.
ಆನೆ ಕೊಡುವುದಿಲ್ಲ: ಪ್ರಸ್ತುತ ದಸರಾ ಮಹೋತ್ಸವ ನಡೆಯುತ್ತಿದ್ದು, ವಿಜಯದಶಮಿಯ ಬಳಿಕ, ಗೋವಾದ ಕಾನನದಲ್ಲಿ ಕಾರ್ಯಾಚರಣೆ ನಡೆಸಲಾಗುವುದು. ಗೋವಾ ರಾಜ್ಯಕ್ಕೆ ಪುಂಡಾನೆ ಹಿಡಿಯಲು ನಾವು ಸಹಕಾರ ನೀಡುತ್ತೇವೆಯೇ ಹೊರತು ಕುಮ್ಕಿ ಆನೆಗಳನ್ನು ನೀಡುತ್ತಿಲ್ಲ ಎಂದರು.
ಗೋವಾ ಅರಣ್ಯ ಸಚಿವ ವಿಶ್ವಜಿತ್ ರಾಣೆ ಮಾತನಾಡಿ, ಓಂಕಾರ ಎಂಬ ಪುಂಡಾನೆ ಸೆರೆಗೆ ಸಹಕಾರ ನೀಡುವ ಭರವಸೆ ನೀಡಿರುವ ಕರ್ನಾಟಕಕ್ಕೆ ಮತ್ತು ಈಶ್ವರ ಖಂಡ್ರೆ ಅವರಿಗೆ ಧನ್ಯವಾದ ಅರ್ಪಿಸಿದರು. ಈ ಸಂಬಂಧ ಕರ್ನಾಟಕದೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳುವ ಕುರಿತು ಚರ್ಚಿಸಲಾಯಿತು. ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಈ ಸಂಬಂಧ ಇಂದೇ ಮಾತನಾಡುವುದಾಗಿ ಹೇಳಿದರು.
ಕರ್ನಾಟಕ ಅರಣ್ಯ ಇಲಾಖೆ ಆನೆ ಸೆರೆ ಕಾರ್ಯಾಚರಣೆಯಲ್ಲಿ ನೈಪುಣ್ಯತೆ ಹೊಂದಿದೆ. ಗೋವಾ ಪುಟ್ಟ ರಾಜ್ಯ. ನಾವು ನೆರೆಯ ರಾಜ್ಯದೊಂದಿಗೆ ಸಹಬಾಳ್ವೆಯಿಂದ ಇದ್ದೇವೆ. ಮಹಾದಾಯಿ ನದಿ ವಿಚಾರದ ಬಗ್ಗೆ ಗೋವಾ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ, ಆನೆ ಯೋಜನೆಯ ಎಪಿಸಿಸಿಎಫ್ ಮನೋಜ್ ರಾಜನ್ ಮತ್ತಿತರರು ಉಪಸ್ಥಿತರಿದ್ದರು.




