ಸನ್ಮಾನ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಂವಿಧಾನ ಓದು ಸಿದ್ಧಾಂತ ತಿಳಿಸುವ ವಿಧಾನ ಆಗಬಾರದು ಎಂದು ಠರಾವು ಪಾಸ್ ಮಾಡಿದ್ದಾರೆ. ಸಂವಿಧಾನದ ಬಗ್ಗೆ ಜನರಿಗೆ ವಿದ್ಯಾರ್ಥಿಗಳಿಗೆ ತಿಳಿಸುವಾಗ ರಾಗ ದ್ವೇಷ ಇರಬಾರದು. ಸಂವಿಧಾನವನ್ನು ಓದಿ ಎಂದು ಹೇಳುವುದು ಯಾವುದೋ ಸಿದ್ಧಾಂತವನ್ನು ತಿಳಿಸುವ ವಿಧಾನ ಆಗಬಾರದು ಎಂದು ಅವರು ಹೇಳಿದ್ದಾರೆ ಎಂದು ದಿನಾಂಕ 14.03.2021ರ ದಿನಪತ್ರಿಕೆಗಳಲ್ಲಿ ವರದಿಯಾಗಿದೆ.
ಚಾಮರಾಜನಗರದಲ್ಲಿ ನಡೆದ ನ್ಯಾ. ನಾಗಮೋಹನ್ ದಾಸ್ ಅವರ ಸಂವಿಧಾನ ಓದು ಕೃತಿಯನ್ನು ಪಿಯುಸಿ ವಿದ್ಯಾರ್ಥಿಗಳಿಗೆ ಕೊಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ ಹೀಗೆ ಹೇಳಿರುವುದನ್ನು ವಿಶೇಷವಾಗಿ ನಾವು ಗಮನಿಸಬೇಕು.
ಸುರೇಶ್ ಕುಮಾರ್ ಅವರು ಚಡ್ಡಿ ಹಾಕಿಕೊಂಡು, ಲಾಠಿ ಬೀಸುತ್ತ ನಮಸ್ತೆ ಸದಾ ವತ್ಸಲೆ ಕಲಿತ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸುಳ್ಳು ಸಿದ್ಧಾಂತಗಳನ್ನು ಮಾತ್ರ ಕಲಿಸಲಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಸಮಾನತೆ ನೀಡುತ್ತದೆ.
ಅಸಮಾನತೆ ನಂಬಿರುವ ಸಂಘ ಪರಿವಾರಕ್ಕೆ ಸರ್ವರಿಗೂ ಸಮಾನ ಅವಕಾಶ ನೀಡುವ ಸಂವಿಧಾನ ಅರಗದ ಕಹಿ ಗುಳಿಗೆ. ಮನು ಸ್ಮೃತಿ ಪ್ರಕಾರ ಸಕಲ ಆಸ್ತಿ, ಸಂಪತ್ತು, ಎಲ್ಲ ವರ್ಗದ ಮಹಿಳೆಯರು ಕೂಡ ಬ್ರಾಹ್ಮಣರ ಒಡೆತನಕ್ಕೆ ಸೇರಿದ್ದು. ಸಂವಿಧಾನದ ಪ್ರಕಾರ ಇವೆಲ್ಲ ಅಮಾನ್ಯ. ಆದ್ದರಿಂದಲೇ ಸಂಘ ಪರಿವಾರದವರು ಸಂವಿಧಾನ ಸುಡುತ್ತಾರೆ. ಸಂವಿಧಾನ ಸರಿ ಇಲ್ಲ, ಬದಲಿಸುವ ಸಲುವಾಗಿಯೇ ನಾವು ಬಂದಿದ್ದೇವೆ ಎನ್ನುತ್ತಾರೆ. ಇವರಿಗೆ ಸಂವಿಧಾನ ಬದಲಿಸಿ, ಮನು ಸ್ಮೃತಿಯನ್ನು ಅದರ ಜಾಗದಲ್ಲಿ ಪ್ರತಿಷ್ಠಾಪಿಸುವ ಬಯಕೆ ಇದೆ.
ಇವರು ಅಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ನಂಬಿರುವ ಸಿದ್ಧಾಂತ ಅಸಮಾನತೆ. ಇವರ ಪ್ರಕಾರ ಮನು ಸಂವಿಧಾನವೇ ಶ್ರೇಷ್ಠ. ಅದರಲ್ಲಿ ಇರುವುದಾದರೂ ಏನು? ಶೂದ್ರರು (ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರನ್ನು ಹೊರತುಪಡಿಸಿ ಉಳಿದ ಎಲ್ಲ ಶ್ರಮಿಕ ವರ್ಗ, ಜಾತಿಯ ಜನ) ಮತ್ತು ಮಹಿಳೆಯರಿಗೆ ಓದುವ, ಜ್ಞಾನ, ಸಂಪತ್ತು, ಆಸ್ತಿಗಳನ್ನು ಹೊಂದುವ ಹಕ್ಕಿಲ್ಲ. ಇದಕ್ಕೆ ಸಂಪೂರ್ಣ ತದ್ವಿರುದ್ಧವಾಗಿ ಅವಕಾಶ ಕೊಟ್ಟದ್ದು ಸಂವಿಧಾನ. ಇಲ್ಲಿ ಎಲ್ಲರೂ ಸಮಾನರು. ರಾಷ್ರಪತಿಗೂ ಒಂದೇ ವೋಟು, ಭಿಕ್ಷುಕನಿಗೂ ಒಂದೇ ವೋಟು. ಸಂವಿಧಾನ ನ್ಯಾಯಯುತ ಮಾರ್ಗದಲ್ಲಿ ದುಡಿದು ಗೌರವಯುತ ಬದುಕು ಸಾಗಿಸಲು ಅವಕಾಶ ನೀಡಿತು. ಕಷ್ಟಪಟ್ಟು ದುಡಿದು ಕಾರು, ಮನೆ, ಬೈಕ್, ಹೆಲಿಕಾಪ್ಟರ್, ವಿಮಾನ ಕೊಳ್ಳುವ ಅವಕಾಶವನ್ನು ಎಲ್ಲರಿಗೂ ನೀಡಿದ್ದು ಸಂವಿಧಾನ.
ಸನ್ಮಾನ್ಯ ಸುರೇಶ್ ಕುಮಾರ್ ಅವರ ಸಂಘ ಪರಿವಾರದ ನಂಬಿಕೆಯ ಮನುವಾದದ ಪ್ರಕಾರ, ಶೂದ್ರರಿಗೆ ನಾಗರಿಕ ಸೌಕರ್ಯಗಳನ್ನು ಹೊಂದುವ ಹಕ್ಕಿಲ್ಲ. ಇದರ ಭಾಗವಾಗಿಯೇ ಅವರು ಎನ್.ಆರ್.ಸಿ., ಸಿಎಎ, ವಿವಾದಾಸ್ಪದ ರೈತ ಮಸೂದೆಗಳನ್ನು ಜಾರಿಗೆ ತರುತ್ತಿದ್ದಾರೆ. ಗರಿಷ್ಠ ಮುಖಬೆಲೆ ನೋಟು ನಿಷೇಧ, ತರಾತುರಿಯಲ್ಲಿ ಅವೈಜ್ಞಾನಿಕ ಜಿ.ಎಸ್.ಟಿ. ಜಾರಿ, ಖಾಸಗೀಕರಣಗಳೆಲ್ಲಿ ಇದರ ಮುಂದುವರೆದ ಭಾಗ.
ಮನುವಾದದ ಪ್ರಕಾರ, ಬ್ರಾಹ್ಮಣರು ಆನಂದದಾಯಕ, ಕ್ಷತ್ರಿಯರು ಬಲಸೂಚಕ, ವೈಶ್ಯರು ಧನಸೂಚಕ, ಶೂದ್ರರು ಅಸಹ್ಯಸೂಚಕ ಹೆಸರುಗಳನ್ನು ಇಟ್ಟುಕೊಳ್ಳಬೇಕು. ಇಂತಹ ಜೀವವಿರೋಧಿಯಾದ ಸಿದ್ಧಾಂತ ಇವರದು.
ಸುರೇಶ್ ಕುಮಾರ್ ಅವರು ಸಂವಿಧಾನ ಓದು ಸಿದ್ಧಾಂತ ತಿಳಿಸುವ ವಿಧಾನ ಆಗಬಾರದು ಎಂದಿದ್ದಾರೆ. ಇವರ ಸಂಘ ಪರಿವಾರದ ಶಾಖೆಯಲ್ಲಿ ಎಂದಾದರೂ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಇವರಂತಹ ಜೀವಪರ ಚಿಂತನೆಗಳ ಪ್ರಸ್ತಾಪವಾಗಿರುವುದೋ? ಈ ಪ್ರಶ್ನೆ ಏಕೆಂದರೆ ಅವರು ಸದಾ ಸುಳ್ಳುಗಳನ್ನು ಬಿತ್ತಿ, ಸುಳ್ಳುಗಳ ಮೂಟೆಗಳನ್ನು ಬೆಳೆದು, ಎಲ್ಲ ಜನರ ಮೇಲೆ ಸವಾರಿ ಮಾಡುವ ಸಿದ್ಧಾಂತದವರು. ಸಂವಿಧಾನ ಎಲ್ಲ ಜಾತಿಯವರಿಗೂ ನಿರ್ದಿಷ್ಟ ತಪ್ಪಿಗೆ ನಿರ್ದಿಷ್ಟ ಶಿಕ್ಷೆ ವಿಧಿಸಲು ಅವಕಾಶ ನೀಡಿದೆ. ಮನುಸ್ಮೃತಿ ಪ್ರಕಾರ ಬ್ರಾಹ್ಮಣ ಶಿಕ್ಷೆಯಿಂದ ಹೊರಗೆ. ಅಲ್ಲದೆ ಅವನಿಗೆ ಎಲ್ಲ ಶಿಕ್ಷೆಗಳಲ್ಲು ವಿಶೇಷ ವಿನಾಯಿತಿ ಇದೆ. ಅದಕ್ಕಾಗಿಯೇ ಇವರಿಗೆ ಸಂವಿಧಾನ ಕಂಡರೆ ಉರಿ. ಅವರ ಮನದಲ್ಲಿರುವ ವಿಷವನ್ನು ಹೀಗೆ ಕಕ್ಕಿದ್ದಾರೆ ಅಷ್ಟೇ. ಇವರ ಪ್ರಕಾರ, ಜಾತ್ಯತೀತ, ಸಮಾನತೆಯನ್ನು ಬೋಧಿಸುವುದು ದೇಶದ್ರೋಹದ ಕೆಲಸ.
ಸಂಘ ಪರಿವಾರದ್ದು ಕೊಲೆಗಡುಕ, ಜೀವ ವಿರೋಧಿ ಸಿದ್ಧಾಂತ. ಏಕೆಂದರೆ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧಿಯನ್ನು ಕೊಂದವರು ಅವರು. ಕೊಲೆಗೆ ಸಮರ್ಥನೆ ಮಾಡುವ ಏಕೈಕ ಸಿದ್ಧಾಂತ ಎಂದರೆ ಅದು ಸಂಘ ಪರಿವಾರದ ಚಡ್ಡಿ ಸಿದ್ಧಾಂತ ಮಾತ್ರ.
ಅದಕ್ಕಿಂತ ಮಿಗಿಲಾಗಿ ದೇಶದ ಸಕಲ ಆಸ್ತಿ ಒಂದು ಜಾತಿಗೆ ಸೇರಿದ್ದು, ಉಳಿದ ಎಲ್ಲ ಜಾತಿಯವರು ನಮ್ಮ ಸೇವೆಗಾಗಿ ಹುಟ್ಟಿದ್ದಾರೆ ಎಂಬ ಪ್ರಾಚೀನ ಮೂಢನಂಬಿಕೆಯಲ್ಲೇ ಕಾಲ ಹಾಕುತ್ತಿರುವ, ಹಳೆಯ ಕೊಳೆಯನ್ನೇ ಪವಿತ್ರ ಎಂದು ನಂಬಿರುವವರಲ್ಲಿ ಮೆದುಳು ಇದೆಯೋ? ಅಥವಾ ರಕ್ತದ ಕಣಕಣದಲ್ಲೂ ಇನ್ನುಳಿದ ಜಾತಿಯ ಜನರ ಮೇಲೆ ಕ್ರೌರ್ಯವೇ ತುಂಬಿದೆಯೋ? ಆಲೋಚಿಸಬೇಕಿದೆ.
ಎಷ್ಟೇ ಆಗಲಿ ನೀವು ಕೊಂದಾದರೂ ನಿಮ್ಮ ವೈದಿಕ ಅಧಿಪತ್ಯ ಸ್ಥಾಪಿಸಬೇಕು ಎಂದು ಬಯಸುವವರು. ಆದರೆ ಸಂವಿಧಾನ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುತ್ತದೆ. ನಿಮ್ಮ ಸಿದ್ಧಾಂತ ನಿಮ್ಮನ್ನು ಹೊರತುಪಡಿಸಿ ಉಳಿದವರೆಲ್ಲರೂ ಅಪರಾಧಿಗಳು, ದೇಶದ್ರೋಹಿಗಳು, ಅವರನ್ನು ದೇಶದಿಂದ ಹೊರಹಾಕಬೇಕು ಎಂಬ ಬಹಿಷ್ಕಾರದ ಸಿದ್ಧಾಂತ. ಎನ್.ಆರ್.ಸಿ., ಸಿಎಎ ವಿರುದ್ಧ ಪ್ರತಿಭಟಿಸಿದವರನ್ನು, ವಿವಾದಿತ 3 ಕೃಷಿ ಮಸೂದೆಗಳನ್ನು ವಿರೋಧಿಸಿದ ರೈತರನ್ನು ದೇಶದ್ರೋಹಿಗಳು ಎಂದವರು ನೀವಲ್ಲವೇ? ಆದರೆ, ಸಂವಿಧಾನದ್ದು ಭ್ರಾತೃತ್ವವನ್ನು ಬೆಳೆಸುವ ಸಿದ್ಧಾಂತ.
ಸಂವಿಧಾನ ಓದು ಕೃತಿಯಲ್ಲಿ ತುರ್ತುಪರಿಸ್ಥಿತಿ ಕುರಿತು ಉಲ್ಲೇಖ ಏಕಿಲ್ಲ? ಎಂದು ಸನ್ಮಾನ್ಯ ಸುರೇಶ್ ಕುಮಾರ್ ಅವರು ಪ್ರಶ್ನಿಸಿದ್ದಾರೆ. ಸರಿ. ಈಗ ಭಾರತ ಚುನಾಯಿತ ನಿರಂಕುಶಪ್ರಭುತ್ವದತ್ತ ಚಲಿಸುತ್ತಿರುವ ಕುರಿತು ಅವರು ಮಾತಾಡಬೇಕಲ್ಲವೇ? ಸಂಗ ಪರಿವಾರದಲ್ಲಿ ಸತ್ಯಕ್ಕೆ ಸ್ಥಾನವಿಲ್ಲ. ಅವರು ಸುಳ್ಳು, ದ್ವೇಷ, ನಯವಂಚಕತೆಯ ಜನಕರು. ಅವರಿಗೆ ಜಾಣಕುರುಡು, ಜಾಣಕಿವುಡು, ಜಾಣಮೂಗತನ ಆಜನ್ಮಸಿದ್ಧ ಹಕ್ಕು. ಇಂತಹ ಜನರನ್ನು ಯಾವುದೇ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಕ್ಕೆ ಹೋಲಿಸಿದರೆ, ಇವರ ಹೊಲಸು ಸಿದ್ಧಾಂತ ಅವುಗಳಿಗೆ ಗೊತ್ತಾದರೆ, ಅವುಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಖಂಡಿತ. ಅಥವಾ ಅವುಗಳಿಗೆ ನಮ್ಮಂತೆ ಮಾತು ಬಂದಲ್ಲಿ, ಸಂಘಪರಿವಾರದವರಿಗೆ ಹೋಲಿಸಿದವರ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡಬಹುದೋ ಏನೋ?
ಸುರೇಶ್ ಕುಮಾರ್ ಅವರೇ, ನಿಮ್ಮ ಚಡ್ಡಿ ಶಾಖೆಯಲ್ಲಿ ಹೇಳಿಕೊಡುವ ಸಿದ್ಧಾಂತಕ್ಕಿಂತ ಸಂಪೂರ್ಣ ತದ್ವಿರುದ್ಧವಾದ, ಭಿನ್ನವಾದ ಸಮಾನತೆಯ ಸಿದ್ಧಾಂತವನ್ನು ಸಂವಿಧಾನದ ಓದು ಹೆಸರಿನಲ್ಲಿ ಹೇಳಿಕೊಟ್ಟರೆ ತಪ್ಪೇನಿದೆ?
ಇರಲಿ, ಸಂಘ ಪರಿವಾರದ ಸಂಗದಲ್ಲಿ ಧರ್ಮದ ಹೆಸರಿನಲ್ಲಿ ಮೈ ಮರೆತಿರುವ, ಧರ್ಮದ ಅಮಲಿನಲ್ಲಿ ತೇಲುತ್ತಿರುವ ಶೂದ್ರರು ಈ ಸಂಗತಿಯನ್ನು ಶೀಘ್ರವಾಗಿ ಅರಿಯಬೇಕು. ಸಂಗದಿಂದ ಹೊರಬರಬೇಕು.
- ಡಾ. ಪ್ರದೀಪ್ ಮಾಲ್ಗುಡಿ, ಸಂಶೋಧಕ, ಪತ್ರಕರ್ತ




