ಬೆಂಗಳೂರು: ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಮ್ಮ ಊರು – ನಮ್ಮ ಕೆರೆ, ಪರಿಸರ ಜಾಗೃತಿ ಮತ್ತು ಕೆರೆ ಸಂರಕ್ಷಣೆ ಅಭಿಯಾನ ಹಮ್ಮಿಕೊಳ್ಳಲಾಯಿತು.
75ನೇ ವರ್ಷದ ಅಮೃತ ಮಹೋತ್ಸವ ಸ್ವಾಂತಂತ್ರ್ಯ ದಿನಾಚರಣೆ ಸಂಭ್ರಮಾಚರಣೆ ಪ್ರಯುಕ್ತ ನೆಲಮಂಗಲ, ದಾಬಸ್ ಪೇಟೆ ಬಳಿ ಇರುವ ಇಮಿಚೇನಹಳ್ಳಿ ಕೆರೆ ಸ್ವಚ್ಚತೆ ಮತ್ತು ಸಸಿ ನೆಡುವ ಕಾರ್ಯಕ್ರಮ ಹಾಗೂ ಕೆರೆ ಹೂಳುಗಳನ್ನು ತೆಗೆಯುವ ಕಾರ್ಯಕ್ರಮ ಜರುಗಿತು.
ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೆ.ಎಸ್.ಶ್ರೀಧರ್ ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯೆ ಜಯರತ್ನ, ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಥಾರನ್ ಬಾನು ಸಾದಿಕ್ ಪಾಷ ಮತ್ತು ಕಾರ್ಯದರ್ಶಿ ನರಸಾಪುರ ಗ್ರಾಮ ಪಂಚಾಯಿತಿ ಕೆ.ಶ್ರೀನಿವಾಸ್ ಮತ್ತು ಸಹಾಯಕ ಕಂದಾಯ ಅಧಿಕಾರಿ ವಸಂತ್, ಬಿ.ಎಮ್.ಟಿ.ಸಿ. ಅಧಿಕಾರಿ ಅಬ್ದುಲ್ ಕುದ್ದುಸ್ ಮತ್ತು ನೂರಾರು ಪರಿಸರ ಪ್ರೇಮಿಗಳು ಕೆರೆ ಸಂರಕ್ಷಣಾ ಅಭಿಯಾನಕ್ಕೆ ಕೈ ಜೋಡಿಸಿದರು.
ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೆ.ಎಸ್.ಶ್ರೀಧರ್ ಮಾತನಾಡಿ, ಆರೋಗ್ಯ, ಪರಿಸರ ಮತ್ತು ಮಾನವ ಕಲ್ಯಾಣದ ಬಗ್ಗೆ ಉದ್ದೇಶ ಹೊಂದಿರುವ ನಮ್ಮ ಸಂಘಟನೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ, ಸಸಿ ನೆಡುವ ಕಾರ್ಯಕ್ರಮಗಳನ್ನು ಸತತವಾಗಿ ನಡೆಸುತ್ತ ಬಂದಿದೆ ಎಂದರು.
ನಾಡಪ್ರಭು ಕೆಂಪೇಗೌಡ ಆಡಳಿತ ಅವಧಿಯಲ್ಲಿ ಬೆಂಗಳೂರುನಗರ ಸುತ್ತಮುತ್ತಲು 400ಕ್ಕೂ ಹೆಚ್ಚು ಕೆರೆಗಳು ಇದ್ದವು. ಆದರೆ ಇಂದು ಕೆರೆಗಳು ಮಾಯವಾಗಿ ಕ್ರಾಂಕ್ರೀಟ್ ನಗರವಾಗಿದೆ. ಉಳಿದಿರುವ ಕೆರೆಗಳನ್ನ ಸಂರಕ್ಷಣೆ ಮಾಡಬೇಕು ಎಂದು ಎಮಿಚೇನಹಳ್ಳಿ ಕೆರೆ ಸ್ವಚ್ಚತಾ ಕಾರ್ಯ ಮಾಡಲಾಗಿದೆ. ಕೆರೆಗಳ ಸಂರಕ್ಷಣೆಯಾದರೆ ಅಂತರ್ಜಲ ವೃದ್ದಿಸಿ ಪರಿಸರ ಉತ್ತಮವಾಗಿರುತ್ತದೆ. ಪರಿಸರ ಉಳಿದರೆ ಮನುಷ್ಯ ಉಳಿಯುತ್ತಾನೆ ಎಂದರು.




