ಚುನಾವಣಾ ಆಯೋಗದ ಹದ್ದಿನ ಕಣ್ಣು: ಮಾಲೀಕರಿಲ್ಲದ ಆಭರಣ, ಹಣ, ವಸ್ತುಗಳ ವಶ

3 years ago

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಅಕ್ರಮಗಳು ನಡೆದಂತೆ ಹದ್ದಿನ ಕಣ್ಣಿರಿಸುವ ಆಯೋಗದ ಅಧಿಕಾರಿಗಳು ಚೆಕ್ ಪೋಸ್ಟ್ ಗಳಲ್ಲಿ ಅನುಮಾನಾಸ್ಪದ ವಾಹನಗಳನ್ನು ತಪಾಸಣೆಗೆ ಒಳಪಡಿಸಿ ಕೋಟ್ಯಾಂತರ ರೂಪಾಯಿ ನಗದು ಚಿನ್ನ ಬೆಳ್ಳಿಯ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ನಡುವೆ ದಾವಣಗೆರೆ ಸಮೀಪದ ಹೆಬ್ಬಾಳ ಚೆಕ್ ಪೋಸ್ಟ್ ನಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್‌ಗೆ ಸೇರಿದ್ದೆಂದು ಹೇಳಲಾದ 39 ಲಕ್ಷ ಮೌಲ್ಯದ 66 ಕೆ.ಜಿ. ಬೆಳ್ಳಿ ಸಾಮಗ್ರಿಯನ್ನು ವಶಪಡಿಸಿಕೊಂಡಿದ್ದಾರೆ. ಚೆನ್ನೈಯಿಂದ ಮುಂಬೈನತ್ತ  ಬಿಎಂಡಬ್ಲ್ಯೂ ಕಾರ್‌ನಲ್ಲಿ ಐದು ಬಾಕ್ಸ್‌ಗಳಲ್ಲಿ ಬೆಳ್ಳಿ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದರು.

ಹೆಬ್ಬಾಳ ಚೆಕ್ಪೋಸ್ಟ್ ನಲ್ಲಿ ಬೀಡುಬಿಟ್ಟಿದ್ದ ವಿಚಕ್ಷಣಾ ದಳದ ಅಧಿಕಾರಿ ರಘುನಾಥ ನೇತೃತ್ವದ ವಿಚಕ್ಷಣಾ ದಳ ಬೆಳ್ಳಿಯ  ಬಟ್ಟಲು, ಚಮಚ, ನೀರಿನ ಜಗ್ ಹಾಗೂ ತಟ್ಟೆಗಳನ್ನು ವಶಪಡಿಸಿಕೊಂಡಿದೆ. ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ಹರಿಸಿಂಗ್, ಚಾಲಕ ಸುಲ್ತಾನ್ ಖಾನ್ ವಿರುದ್ಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ಳಿ ಸಾಮಗ್ರಿಗಳು ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರ ಕುಟುಂಬಕ್ಕೆ ಸೇರಿವೆ ಎಂದು ಹರಿಸಿಂಗ್ ಹೇಳಿಕೆ ನೀಡಿದ್ದಾರೆ. ಆದರೆ ಬೆಳ್ಳಿ ಸಾಮಗ್ರಿಗಳಿಗೆ ಪೂರಕ ದಾಖಲೆ ತೋರಿಸದಿದ್ದರಿಂದ ಅವುಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದು, ನಿರ್ಮಾಪಕ ಬೋನಿ ಕಪೂರ್‌ಗೆ ಸೇರಿದ್ದೆ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

8 ಕೋಟಿ ನಗದು ಜಪ್ತಿ: ಚುನಾವಣಾ ಅಕ್ರಮದ ಮೇಲೆ ನಿಗಾ ವಹಿಸಿರುವ ಚುನಾವಣಾ ಆಯೋಗವು 8.04 ಕೋಟಿ ರೂ.ಗಿಂತ ಅಧಿಕ ನಗದನ್ನು ಜಪ್ತಿ ಮಾಡಿದೆ. ಈ ಮೂಲಕ ಈವರೆಗೆ 35.42 ಕೋಟಿ ರು. ನಗದನ್ನು ವಶಕ್ಕೆ ಪಡೆದುಕೊಂಡಂತಾಗಿದೆ.

ಆನೇಕಲ್‌ ವಿಧಾನಸಭಾ ಕ್ಷೇತ್ರದಲ್ಲಿ 4.71 ಕೋಟಿ ರು. ನಗದು, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ 2.66 ಕೋಟಿ ರು. ಮೌಲ್ಯದ 5.58 ಕೆಜಿ ಚಿನ್ನ, ಬೀದರ್‌ ಜಿಲ್ಲೆಯ ಔರಾದ್‌ ಕ್ಷೇತ್ರದಲ್ಲಿ 1.05 ಕೋಟಿ ರು. ಮೌಲ್ಯದ 141.959 ಕೆಜಿ ಬೆಳ್ಳಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಚಿನ್ನ ವಶ: ಬಾಗೇಪಲ್ಲಿ ಚೆಕ್‌ಪೋಸ್ಟ್‌ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ₹ 2.66 ಕೋಟಿ ಮೌಲ್ಯದ 5.585 ಕೆ.ಜಿ ಚಿನ್ನವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆಂಧ್ರಪ್ರದೇಶದ ಕರ್ನೂಲಿನ ಚಿನ್ನಾಭರಣ ಮಾರಾಟ ಅಂಗಡಿಯಿಂದ ವಿಜಯವಾಡದ ಚಿನ್ನಾಭರಣ ಮಾರಾಟ ಅಂಗಡಿಗೆ ಈ ಚಿನ್ನ ಸಾಗಿಸಲಾಗುತ್ತಿತ್ತು ಎಂದು ಸಾಗಾಣಿಕೆದಾರರು ತಿಳಿಸಿದ್ದಾರೆ. ಆದರೆ, ಗಡಿ ಭಾಗದ ಬಾಗೇಪಲ್ಲಿ ಚೆಕ್‌ ಪೋಸ್ಟ್‌ಗೆ ಏಕೆ ಬಂದರು ಎಂದು ಅಧಿಕಾರಿಗಳು ಅನುಮಾನಿಸಿದ್ದಾರೆ.

ನಮ್ಮ ಗಡಿ ಭಾಗದ ಚೆಕ್‌ಪೋಸ್ಟ್‌ಗೆ ಬಂದಿದ್ದರಿಂದ ಚಿನ್ನ ವಶಕ್ಕೆ ಪಡೆದು ದೂರು ದಾಖಲಿಸಲಾಗಿದೆ. ಸದ್ಯಕ್ಕೆ ಚಿನ್ನವನ್ನು ನ್ಯಾಯಾಲಯದ ವಶಕ್ಕೆ ನೀಡಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹ 3 ಲಕ್ಷ ಮೌಲ್ಯದ 4.9 ಕೆ.ಜಿ ತೂಕದ ಬೆಳ್ಳಿ ಬಿಸ್ಕತ್‌ ಹಾಗೂ ₹ 5 ಲಕ್ಷ ನಗದನ್ನು ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಧ್ಯ ವಶ: ಕಳೆದ ರಾತ್ರಿ  ಚಿಕ್ಕಮಗಳೂರು ಸಮೀಪದ ದೇವರಹಳ್ಳಿ ಚೆಕ್ ಪೋಸ್ಟ್ ಬಳಿ 9,10,920 ರೂ ಮೌಲ್ಯದ 6250 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಲಾರಿಯಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದು, ವಾಹನ ತಪಾಸಣಾ ವೇಳೆ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ವಾಹನವನ್ನು ಪರಿಶೀಲಿಸಿದಾಗ ಮದ್ಯ ಸಾಗಾಟ ಬೆಳಕಿಗೆ ಬಂದಿದೆ. ಕೂಡಲೇ ಲಾರಿಯನ್ನು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ

ತವಾ ಕುಕ್ಕರ್ ವಶ: ಬೆಂಗಳೂರಿನ ಬ್ಯಾಡರಹಳ್ಳಿಯ ಗೋದಾಮಿನಲ್ಲಿ  ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಒಂದೂವರೆ ಕೋಟಿ‌ ಮೌಲ್ಯದ ತವಾ ಕುಕ್ಕರ್ ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ 4533 ಕುಕ್ಕರ್ ಗಳು 11 ಸಾವಿರ ತವಾಗಳು ಪತ್ತೆಯಾಗಿವೆ. ಇವುಗಳನ್ನು ಯಾರ ಪರವಾಗಿ ಹಂಚಲು ಶೇಖರಿಸಲಾಗಿತ್ತು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ತವಾ ಕುಕ್ಕರ್ ಎಲ್ಲಿಂದ ತರಲಾಗಿದ್ದು, ಯಾರಿಗೆ? ಹಂಚಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎನ್ನುವುದನ್ನು ಪೊಲೀಸರ ಸಹಯೋಗದಲ್ಲಿ ದಾಳಿ ಮಾಡಿದ್ದ ಚುನಾವಣಾ ಅಧಿಕಾರಿಗಳು ತನಿಖೆಯನ್ನು ಕೈಗೊಂಡಿದ್ದಾರೆ.

51,628 ಶಸ್ತ್ರಾಸ್ತ್ರ ಜಮೆ: ನೀತಿ ಸಂಹಿತೆ ಜಾರಿಯಾದ ಬಳಿಕ ಇಲ್ಲಿಯರೆಗೆ ಆಯೋಗವು 35.42 ಕೋಟಿ ರು. ನಗದು, 27.04 ಕೋಟಿ  ಮೌಲ್ಯದ 4.45 ಲಕ್ಷ ಲೀಟರ್‌ ಮದ್ಯ, 1.19 ಕೋಟಿ ರು. ಮೌಲ್ಯದ 146.20 ಕೆಜಿ ಮಾದಕವಸ್ತುಗಳು ಸೇರಿದಂತೆ 93.40 ಕೋಟಿ‌ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ. ಒಟ್ಟು 697 ಎಫ್‌ಐಆರ್‌ ದಾಖಲಿಸಿ 51,628 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಂಡು 10 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 11 ಶಸ್ತ್ರಾಸ್ತ್ರಗಳ ಪರವಾನಗಿ ರದ್ದುಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 2,238 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ 3,439 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 6137 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ.

Leave a Reply