ಬೆಂಗಳೂರು: ಚುನಾವಣಾ ಪೂರ್ವಭಾವಿ ಸಭೆ ನಡೆಯುತ್ತಿದ್ದ ವೇಳೆ ಏಕಾಏಕಿ ಪ್ರವೇಶಿಸಿ ಗದ್ದಲ ಎಬ್ಬಿಸಿ ಚುನಾವಣಾ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದವನ ವಿರುದ್ಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿದೆ.
ಏಪ್ರಿಲ್ 3 ರಂದು ದೊಡ್ಡಬಳ್ಳಾಪುರ ತಾಲೂಕಿನ ಗಡ್ಡಂಬಚ್ಚಹಳ್ಳಿ ನಿವಾಸಿ ಜಿ.ಎಂ ರಾಜಣ್ಣ ಎಂಬುವವರ ಮೇಲೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಭೆ ನಡೆಯುತ್ತಿದ್ದ ವೇಳೆ ಏಕಾಏಕಿ ಕಚೇರಿಗೆ ನುಗ್ಗಿದ ರಾಜಣ್ಣ, ನಿಮ್ಮ ನ್ಯಾಯಾಲಯದಲ್ಲಿ ನನ್ನ ಪ್ರಕರಣವಿದೆ. ಪ್ರಕರಣದ ಆದೇಶವನ್ನು ನನ್ನ ಪರ ಮಾಡಿಕೊಡಬೇಕು ಎಂದು ಉಪವಿಭಾಗಧಿಕಾರಿಗಳಾದ ತೇಜಸ್ ಕುಮಾರ್ ಅವರ ಮೇಲೆ ಕೂಗಾಡಿದ್ದಾನೆ. ಅಲ್ಲದೇ ನಾನೊಬ್ಬ ಪತ್ರಕರ್ತ. ನನ್ನ ಪರವಾಗಿ ಆದೇಶ ಮಾಡಿಕೊಡದಿದ್ದರೆ ಕರ್ತವ್ಯ ಲೋಪದ ಆಪಾದನೆಯ ಅಪಪ್ರಚಾರ ಮಾಡಿ ಚುನಾವಣಾ ಆಯೋಗಕ್ಕೆ ನಿಮ್ಮ ವಿರುದ್ಧ ದೂರು ನೀಡುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಉಪವಿಭಾಗಾಧಿಕಾರಿ ತೇಜಸ್ ಕುಮಾರ್ ಅವರು ಪರಿಪರಿಯಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದು, ಇದು ಚುನಾವಣಾ ಪೂರ್ವಭಾವಿ ಸಭೆಯಾಗಿದೆ. ಸಭೆ ಮುಗಿದ ಬಳಿಕ ನಿಮ್ಮ ಸಮಸ್ಯೆಯನ್ನು ಪರಿಶೀಲಿಸಿ ಪರಿಹರಿಸುವುದಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಅಧಿಕಾರಿಗಳ ಮಾತಿಗೂ ಬೆಲೆ ಕೊಡದ ಆತ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಭಾವಚಿತ್ರವನ್ನು ಗೌಪ್ಯವಾಗಿ ಚಿತ್ರೀಕರಣ ಮಾಡಿ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಉಪವಿಭಾಗಾಧಿಕಾರಿ ತೇಜಸ್ ಕುಮಾರ್ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚುನಾವಣಾಧಿಕಾರಿಗಳ ದೂರಿನ ಅನ್ವಯ ಆರೋಪಿ ಜಿ ಎಂ ರಾಜಣ್ಣ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿರುವ ಪೊಲೀಸರು, ಆತನ ಮೇಲೆ ಐಪಿಸಿ ಸೆಕ್ಷನ್ 186, 189, 506, 504, ಮತ್ತು 353 ರಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ



