ಚುನಾವಣಾ ಆಯೋಗದ ನಿಯಮಗಳನ್ನು ಪ್ರಜಾಪ್ರತಿನಿಧಿಗಳು ಚಾಚೂ ತಪ್ಪದೇ ಪಾಲಿಸಬೇಕು: ದಿವ್ಯ ಪ್ರಭು

2 years ago

ಧಾರವಾಡ: ಚುನಾವಣಾ ಆಯೋಗವು ಮೇ. 5, 2024 ರ ಸಾಯಂಕಾಲ 6 ಗಂಟೆಯಿಂದ ಮತದಾನ ದಿನವಾದ ಮೇ. 07, 2024ರಂದು ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಚುನಾವಣಾ ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಾವಳಿಗಳನ್ನು ಹಾಗೂ ನಿಷೇಧಿಸಲಾಗಿರುವ ವಿಷಯಗಳ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಅವುಗಳನ್ನು ಚಾಚು ತಪ್ಪದೇ ಪಾಲಿಸಬೇಕೆಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ಥಾಪಿಸಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ, 11-ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾ ಸಾಮಾನ್ಯ ವೀಕ್ಷಕರು, ಚುನಾವಣಾ ಲೆಕ್ಕವೀಕ್ಷಕರು, ಪೊಲೀಸ ವೀಕ್ಷಕರ ಉಪಸ್ಥಿತಿಯಲ್ಲಿ ಎಲ್ಲ ಚುನಾವಣಾ ಅಭ್ಯರ್ಥಿಗಳ, ರಾಜಕೀಯ ಪಕ್ಷಗಳ ಹಾಗೂ ಸಹಾಯಕ ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳ ಸಭೆ ಜರುಗಿಸಿ, ಮಾತನಾಡಿದರು.

ಕೇಂದ್ರ ಚುನಾವಣಾ ಆಯೋಗವು ಮತದಾನವನ್ನು ಶಾಂತಿಯುತವಾಗಿ, ನಿರ್ಭಯ, ಮುಕ್ತ ಮತ್ತು ಪಾರದರ್ಶಕವಾಗಿ ಜರುಗಿಸಲು ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರಸ್ನೇಹಿ ವಾತಾವರಣ ರೂಪಿಸಲು ವಿವಿಧ ಕ್ರಮಗಳನ್ನು ವಿಧಿಸಿದೆ. ಅದರಲ್ಲಿ ಮತದಾನ ಮುಕ್ತಾಯವಾಗುವ ಪೂರ್ವದ 72 ಮತ್ತು 48 ಗಂಟೆಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ತಪ್ಪದೇ ಪಾಲಿಸಬೇಕಾದ ನಿಯಮಗಳು ಮುಖ್ಯವಾಗಿವೆ. ಈ ಸೂಚಿತ 72 ಮತ್ತು 48 ಗಂಟೆಗಳ ಅವಧಿಯಲ್ಲಿ ಜರುಗುವ ರಾಜಕೀಯ ಕಾರ್ಯಚಟುವಟಿಕೆಗಳನ್ನು ನಿಗಾವಹಿಸಲು ಹೆಚ್ಚುವರಿ ತಪಾಸಣಾ ತಂಡಗಳನ್ನು ರಚಿಸಲಾಗಿದ್ದು, ಉಲ್ಲಂಘನೆ ಕಂಡುಬಂದಲ್ಲಿ ತಕ್ಷಣ ಚುನಾವಣಾ ಆಯೋಗದ ಮತ್ತು ಪ್ರಜಾಪ್ರತಿನಿಧಿ ಕಾಯ್ದೆ ಅನುಸಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.

ಈ ಕುರಿತು ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ಮಾದರಿ ನೀತಿ ಸಂಹಿತೆ ನಿಗಾ ತಂಡಗಳು, ಎಫ್.ಎಸ್.ಟಿ, ಎಸ್.ಎಸ್.ಟಿ ತಂಡಗಳು ರಾಜಕೀಯ ಚಟುವಟಿಕೆಗಳ ಹಾಗೂ ಚುನಾವಣಾ ನಿಯಮಗಳ ಉಲ್ಲಂಘನೆ ಬಗ್ಗೆ ತೀವ್ರವಾಗಿ ನಿರಂತರ ನಿಗಾವಹಿಸಬೇಕೆಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಮುಖ್ಯವಾಗಿ ಮತದಾನದ ಮುಕ್ತಾಯದ ಸಮಯದೊಂದಿಗೆ ಕೊನೆಗೊಳ್ಳುವ 48 ಗಂಟೆಗಳ ಅವಧಿಯಲ್ಲಿ ಯಾವುದೇ ಧ್ವನಿವರ್ಧಕವನ್ನು ಬಳಸಲು ಅನುಮತಿಸಲಾಗುವುದಿಲ್ಲ. ಸಾರ್ವತ್ರಿಕ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ಆ ಪ್ರಚಾರವನ್ನು ಉತ್ತೇಜಿಸಲು ರಾಜಕೀಯ ಪಕ್ಷಗಳು ಚುನಾವಣಾ ಕ್ಷೇತ್ರದ ಹೊರಗಿನಿಂದಲೂ ತಮ್ಮ ಬೆಂಬಲಿಗರನ್ನು ಸಜ್ಜುಗೊಳಿಸುತ್ತವೆ. ಚುನಾವಣಾ ಪ್ರಚಾರದ ಅವಧಿ ಮುಗಿದ ನಂತರ, ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಪ್ರಚಾರ ನಡೆಸುವಂತಿಲ್ಲ. ಮತ್ತು ಪ್ರಚಾರಕ್ಕಾಗಿ ಜಿಲ್ಲೆಯಲ್ಲಿ ಇದ್ದ ರಾಜಕೀಯ ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು, ಕ್ಷೇತ್ರದ ಹೊರಗಿನಿಂದ ಕರೆತಂದಿರುವ ಕಾರ್ಯಕರ್ತರು, ಮೆರವಣಿಗೆಯ ಪದಾಧಿಕಾರಿಗಳು ಧಾರವಾಡ ಲೋಕಸಭಾ ಮತಕ್ಷೇತ್ರದ ಮತದಾರ ಆಗಿರದಿದ್ದಲ್ಲಿ ಅವರೆಲ್ಲರೂ ಜಿಲ್ಲೆಯಿಂದ ಹೊರಹೋಗಬೇಕು.

ಚುನಾವಣಾ ಪ್ರಚಾರದ ನಂತರ ಅವರ ನಿರಂತರ ಉಪಸ್ಥಿತಿಯು ಮುಕ್ತ ಮತ್ತು ನ್ಯಾಯಸಮ್ಮತವಾದ ಮತದಾನದ ವಾತಾವರಣವು ಹಾಳುಗೆಡಬಹುದಾದ್ದರಿಂದ ಕ್ಷೇತ್ರದಲ್ಲಿ ಉಳಿಯುವುದನ್ನು ಆಯೋಗದ ನಿಯಮಗಳ ಪ್ರಕಾರ ನಿರ್ಬಂಧಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು.

ಪ್ರಜಾ ಪ್ರತಿನಿಧಿ ಕಾಯ್ದೆಯ ಪರಿಚ್ಛೇದ 126(1)(ಬಿ) ಪ್ರಕಾರ ಮತದಾನ ಪೂರ್ಣಗೊಳ್ಳುವ 48 ಗಂಟೆ ಪೂರ್ವದಲ್ಲಿ ಯಾವುದೇ ವ್ಯಕ್ತಿ ಯಾವುದೇ ಮತದಾನದ ಪ್ರದೇಶದಲ್ಲಿ ಸಿನಿಮಾಟೋಗ್ರಾಫ್, ದೂರದರ್ಶನ ಅಥವಾ ಇತರ ರೀತಿಯ ಉಪಕರಣಗಳ ಮೂಲಕ ಯಾವುದೇ ಚುನಾವಣಾ ವಿಷಯವನ್ನು ಸಾರ್ವಜನಿಕರಿಗೆ ಪ್ರದರ್ಶಿಸಲು ಅವಕಾಶವಿಲ್ಲ. ಇದನ್ನು ಚುನಾವಣಾ ಆಯೋಗ ನಿರ್ಬಂಧಿಸಿದ್ದು, ಉಲ್ಲಂಘಿಸಿದಲ್ಲಿ ನಿಯಮಾವಳಿ ಪ್ರಕಾರ ಕ್ರಮ ಜರುಗಿಸುವದಾಗಿ ಅವರು ತಿಳಿಸಿದರು.

48 ಗಂಟೆಗಳ ಅವಧಿಯಲ್ಲಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆಗಳು, ಮೆರವಣಿಗೆಗಳು ಇತ್ಯಾದಿಗಳನ್ನು ನಡೆಸಬಾರದು. ಅಲ್ಲದೆ, ಆರ್.ಪಿ ಆಕ್ಟ್ 1951 ರ ಸೆಕ್ಷನ್ 126 ರಲ್ಲಿ ಉಲ್ಲೇಖಿಸಲಾದ ಕಳೆದ 48 ಗಂಟೆಗಳ ಅವಧಿಯಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಯಾವುದೇ ಚುನಾವಣಾ ವಿಷಯವನ್ನು ಪ್ರಕಟಿಸಬಾರದು.

ಆಯೋಗವು ನೇಮಿಸಿದ ಸಮಿತಿಯಿಂದ ಪೂರ್ವ-ಪ್ರಮಾಣೀಕರಣವಿಲ್ಲದೆ ಟಿವಿ ಚಾನೆಲ್, ಕೇಬಲ್ ಟಿವಿ ಅಥವಾ ರೇಡಿಯೊದಲ್ಲಿ ಯಾವುದೇ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಬಾರದು. ಮುದ್ರಣ ಮಾಧ್ಯಮದಲ್ಲಿ ಅಂತಹ ಜಾಹೀರಾತುಗಳು ಸಮಿತಿಯ ಪ್ರಮಾಣೀಕರಣವನ್ನು ಹೊಂದಿರಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕ ಅಜಯ ಗುಪ್ತಾ,ಪೊಲೀಸ ವೀಕ್ಷಕ ಬನ್ವರಲಾಲ ಮೀನಾ, ವೇಚ್ಚ ವೀಕ್ಷಕರಾದ ಭೂಷನ ಪಾಟೀಲ ಹಾಗೂ ಕೆ.ಪಿ ಜಯ್ಕರ, ಮಹಾನಗರ ಪೊಲೀಸ ಆಯುಕ್ತರಾದ ರೇಣುಕಾ ಸುಕುಮಾರ, ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೇರಿದಂತೆ ವಿವಿಧ ಚುನಾವಣಾ ನೋಡಲ್ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಪಕ್ಷೇತರ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಏಜೆಂಟರು ಭಾಗವಹಿಸಿದ್ದರು.

Leave a Reply