ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಅವ್ಯವಹಾರ ಕುರಿತು ಇಡಿ ತನಿಖೆ

2 years ago

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣವನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಪ್ರತ್ಯೇಕ ತನಿಖೆಯನ್ನು ಕೈಗೊಂಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ತನಿಖೆ ಆರಂಭಿಸಿ ಹಗರಣ ಸಂಬಂಧ ಈಗಾಗಲೇ ಜೈಲಿನಲ್ಲಿರುವ ಆರೋಪಿಗಳ ವಿಚಾರಣೆಯನ್ನು ಇಡಿ ಅಧಿಕಾರಿಗಳು ನಡೆಸಿದ್ದಾರೆ.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜೆ ಪದ್ಮನಾಭ್ ಮತ್ತು ಪರುಶರಾಮ್ ಇಬ್ಬರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಮತ್ತೊಂದೆಡೆ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ ಕೂಡ ತನ್ನದೇ ಆಯಾಮದಲ್ಲಿ ತನಿಖೆ ನಡೆಸುತ್ತಿದೆ.

ಇದುವರೆಗೆ 9 ಆರೋಪಿಗಳ ಸೆರೆ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣದಲ್ಲಿ ಈವರೆಗೆ ಎಸ್‌ಐಟಿಯಿಂದ ಒಟ್ಟು 9 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಒಟ್ಟು 94.73 ಕೋಟಿ ಅವ್ಯವಹಾರ ನಡೆದಿದೆ ಎನ್ನಲಾಗಿದ್ದು, ಈ ಪೈಕಿ ಎಸ್‌ಐಟಿ ಅಧಿಕಾರಿಗಳು 14.5 ಕೋಟಿ ನಗದು ಹಣ ವಶಕ್ಕೆ ಪಡೆದುಕೊಂಡಿದ್ದಾರೆ.

ಏನಿದು ಅವ್ಯವಹಾರ ಪ್ರಕರಣ?: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಕೆಲದಿನಗಳ ಹಿಂದೆ ಶಿವಮೊಗ್ಗದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‌ನೋಟ್‌ನಲ್ಲಿ ಮೂವರ ಹೆಸರು ಹಾಗೂ ಬಹುಕೋಟಿ ಹಗರಣ ನಡೆದಿರುವ ಬಗ್ಗೆ ಉಲ್ಲೇಖಿಸಿದ್ದರು. ಈ ಬೆನ್ನಲ್ಲೇ ಬ್ಯಾಂಕ್‌ನಿಂದ 94 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ. ಹಣ ವರ್ಗಾವಣೆಯಾದ ಬಗ್ಗೆ ಯಾವುದೇ ಮೇಲ್, ಮೆಸೇಜ್ ಬಂದಿಲ್ಲ ಎಂದು ಬರೆದಿದ್ದರು.

ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬ್ಯಾಕ್‌ನ 6 ಮಂದಿ ಸಿಬ್ಬಂದಿ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ನಂತರ ಬಹುಕೋಟಿ ಹಗರಣದ ಹಿನ್ನೆಲೆಯಲ್ಲಿ ಸಿಬಿಐ, ಇಡಿ ಸಹ ತನಿಖೆ ಕೈಗೊಂಡಿವೆ. ಇದೇ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದಾರೆ.

Leave a Reply