ಬೆಂಗಳೂರು: ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಮತದಾರ ಪಟ್ಟಿ ಪರಿಷ್ಕರಣೆಯ ಅಕ್ರಮ ನಡೆದಿದೆ. ಆದರೆ ಚುನಾವಣಾ ಆಯೋಗ ಕೇವಲ ಮೂರು ವಿಧಾನಸಭಾ ಕ್ಷೇತ್ರಗಳಿಗೆ ತನಿಖೆ ಸೀಮಿತಗೊಳಿಸಿದೆ. ಹಾಗಾದರೆ ಇನ್ನುಳಿದ 25 ಕ್ಷೇತ್ರಗಳಲ್ಲಿ ನಡೆದ ಅಕ್ರಮದ ತನಿಖೆ ಏಕಿಲ್ಲ.? ಚು.ಆಯೋಗ ಬೆಂಗಳೂರು ವ್ಯಾಪ್ತಿಯ 28 ಕ್ಷೇತ್ರಗಳ ಅಕ್ರಮದ ತನಿಖೆ ಮಾಡಲಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಅವ್ಯವಹಾರ ಸಂಬಂಧ ಇಬ್ಬರು ಹಿರಿಯ ಅಧಿಕಾರಿಗಳ ಅಮಾನತು ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, Voter ID ಹಗರಣ ಸಂಬಂಧ ಪೊಲೀಸರು BBMPಯ 4 ಅಧಿಕಾರಿಗಳನ್ನು ಬಂಧಿಸಿದ್ದಾರೆ. ಈ ಅಕ್ರಮದಲ್ಲಿ ಕೇವಲ ನಾಲ್ಕು ಅಧಿಕಾರಿಗಳು ಮಾತ್ರ ಭಾಗಿಯಾಗಿಲ್ಲ. ಸರ್ಕಾರದ ಉನ್ನತ ಅಧಿಕಾರಿಗಳು, ಪ್ರಭಾವಿ ಸಚಿವರು ಕೂಡ ಶಾಮೀಲಾಗಿದ್ದಾರೆ. ಅವರ ವಿರುದ್ಧವೂ ತನಿಖೆಯಾಗಬೇಕಲ್ಲವೆ? ಅವರ ಬಂಧನವೂ ಆಗಬೇಕಲ್ಲವೆ? ಕೇವಲ 4 ಅಧಿಕಾರಿಗಳ ಬಂಧನ ಕಣ್ಣೊರೆಸುವ ತನಿಖೆಯೇ? ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆ Voter ID ಹಗರಣ ನಡೆಯಲು ಸಾಧ್ಯವೇ ಇಲ್ಲ. ಈ ಹಗರಣದಲ್ಲಿ ಬೊಮ್ಮಾಯಿಯವರ ಪಾತ್ರ ಏನು ಎಂಬುದು ಜನರಿಗೆ ತಿಳಿಯಬೇಕು. ಆದರೆ ಈ ಸತ್ಯ ಪೊಲೀಸರ ತನಿಖೆಯಿಂದ ಹೊರಬರಲು ಸಾಧ್ಯವಿಲ್ಲ. ಪೊಲೀಸರು ಬೊಮ್ಮಾಯಿ ವಿರುದ್ಧ ನಿರ್ಭೀತ ಹಾಗೂ ಪ್ರಾಮಾಣಿಕವಾಗಿ ತನಿಖೆ ನಡೆಸಲು ಸಾಧ್ಯವೇ? ಹಾಗಾಗಿ ನ್ಯಾಯಾಂಗ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ.




