ಸಿದ್ದರಾಮಯ್ಯ ಮೈಸೂರಿನಲ್ಲಿ ನಿರ್ಮಿಸಿರುವ ಬೃಹತ್ ಬಂಗಲೆಯ ಜಾಗ ಅಕ್ರಮ: ಆರೋಪ

3 years ago

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೂಚಕ್ರದ ಸುಳಿಗೆ ಸಿಲುಕಿದ್ದಾರೆ. ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ನಿರ್ಮಿಸಿರುವ ಬೃಹತ್ ಬಂಗಲೆಯ ಜಾಗ ಅಕ್ರಮವಾಗಿದೆ ಎಂದು ಬಿಜೆಪಿ ವಕ್ತಾರರ ಎನ್.ಆರ್. ರಮೇಶ್ ಮತ್ತು ಮಹೇಶ್ ಆಪಾದಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿರುವ ಅವರು, ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವೆಸಗಿದ್ದಾರೆ ಎಂದು ದೂರಿದ್ದಾರೆ.

ಮೈಸೂರಿನ ಹಿನಕಲ್ ಗ್ರಾಮದ ಸಾಕಮ್ಮ ಎಂಬುವವರ ಮಾಲೀಕತ್ವದ ಸರ್ವೆ ನಂ. 70/4ಅ ರ ಜಮೀನು ಸೇರಿದಂತೆ ಹಲವು ಜಮೀನುಗಳನ್ನು 1985 ರಲ್ಲಿ ವಿಜಯನಗರ 2ನೇ ಹಂತದ ಬಡಾವಣೆ ನಿರ್ಮಾಣಕ್ಕೆಂದು ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ ಭೂಸ್ವಾಧಿನ ಮಾಡಿಕೊಂಡು ಬಡಾವಣೆ ನಿರ್ಮಿಸಲಾಗಿತ್ತು ಎಂದಿದ್ದಾರೆ.

ಸ್ವಾಧಿನ ಪಡಿಸಿಕೊಂಡ ಸರ್ವೇ ನಂಬರ್ 70/4ರಲ್ಲಿ 3160, 3161, 3162 ಹಾಗೂ 3163 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಸುಂದರ್‍ ರಾಜ್ ಎಂಬುವರು ತಮಗೆ ಹಂಚಿಕೆಯಾಗಿದ್ದ 3161 ನಂಬರಿನ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡಿದ್ದರು ಎಂದಿದ್ದಾರೆ.

ಈ ನಡುವೆ, ಭೂಮಿ ಕಳೆದುಕೊಂಡ ಭೂ ಮಾಲಿಕರು ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವಂತೆ ಮಾಡಿಕೊಂಡಿದ್ದ ಮನವಿಯವನ್ನು ಮೂಡಾ ಆಯುಕ್ತರು ತಿರಸ್ಕರಿಸಿದ್ದರು. ಇದಾದ ನಂತರ 1997ರಲ್ಲಿ ಮೂಡಾ ಅಧ್ಯಕ್ಷರಾಗಿ ನೇಮಕರಾದ ಸಿದ್ದರಾಮಯ್ಯ ಅವರ ಆಪ್ತ ಬಸವೇಗೌಡ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಸರ್ವೇ ನಂಬರ್ 70/4ರ ಜಮೀನನ್ನು ಡಿನೋಟಿಫಿಕೇಷನ್ ಮಾಡಿದ್ದರು. ಮಾತ್ರವಲ್ಲ ಡಿನೋಟಿಫಿಕೇಷನ್ ಆಗಿದ್ದ 3161ನೆ ಸಂಖ್ಯೆಯ ನಿವೇಶನವನ್ನು ಸಿದ್ದರಾಮಯ್ಯ ಅವರು ಸಾಕಮ್ಮ ಎಂಬುವರಿಂದ ಖರೀದಿಸಿದ್ದಾರೆ ಎಂದಿದ್ದಾರೆ.

3161ರ ನಿವೇಶನದಲ್ಲಿ ಸುಂದರ್‍ ರಾಜ್ ಅವರು ಕಾನೂನುಬದ್ಧವಾಗಿ ನಿರ್ಮಿಸಿಕೊಂಡಿದ್ದ ಮನೆಯನ್ನು ಕೆಡವಿ ಹಾಕಿ ಸಿದ್ದರಾಮಯ್ಯ ಅವರು ಭವ್ಯ ಬಂಗಲೆ ಕಟ್ಟಿಸಿಕೊಂಡಿದ್ದಾರೆ ಎಂದು ರಮೇಶ್ ದೂರಿದ್ದಾರೆ.

ತಾವು ಸಾಚಾ ರಾಜಕಾರಣಿ ಎಂದು ಬಿಂಬಿಸಿಕೊಳ್ಳುವ ನೀವು ನಿವೇಶನವನ್ನು ಖರೀದಿಸಿರುವುದು ನಿಜವೇ ಸುಳ್ಳೆ, ನಂತರ ಆ ಭೂಮಿಯನ್ನು ಒಂದು ಕೋಟಿ ರೂ.ಗಳಿಗೆ ಮಾರಾಟ ಮಾಡಿಲ್ಲವೆ ಎಂದು ರಮೇಶ್ ಹಾಗೂ ಮಹೇಶ್ ಅವರು ಸಿದ್ದರಾಮಯ್ಯ ಅವರಿಗೆ 10 ಪ್ರಶ್ನೆಗಳನ್ನು ಕೇಳಿ ಸೂಕ್ತ ಉತ್ತರ ನೀಡುವಂತೆ ಒತ್ತಾಯಿಸಿದ್ದಾರೆ.

ಅಲ್ಲದೆ ಇದೊಂದು ದೊಡ್ಡ ಭೂ ಹಗರಣವಾಗಿದ್ದು, ಈ ಬಗ್ಗೆ ಲೋಕಾಯುಕ್ತ ಅಥವಾ ಉನ್ನತ ಮಟ್ಟದ ತನಿಖಾ ಸಂಸ್ಥೆಯಿಂದ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Leave a Reply