ಚಾಲಕರು, ನಿರ್ವಾಹಕರು ಮಹಿಳಾ ಪ್ರಯಾಣಿಕರಿಗೆ ಬಸ್ ನಿಲ್ಲಿಸದೆ ತೊಂದರೆ ಮಾಡಬಾರದು

10 months ago

ಧಾರವಾಡ – ಕಕ್ಕೇರಿ ಬೀಷ್ಠಮ್ಮ ದೇವಸ್ಥಾನಕ್ಕೆ ನೇರ ಬಸ್ ಸಂಚಾರ ಕಲ್ಪಿಸಿ

ವಿದ್ಯಾರ್ಥಿ, ಸಾರ್ವಜನಿಕರ ಅನುಕೂಲಕ್ಕಾಗಿ ನಿಗದಿತ ಸಮಯಕ್ಕೆ ಬಸ್ ಓಡಿಸಿ

ಪ್ರಾಧಿಕಾರ ಅಧ್ಯಕ್ಷ ಎಸ್.ಆರ್.ಪಾಟೀಲ ಸಲಹೆ

ಧಾರವಾಡ: ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತಿ ಶುಕ್ರವಾರ, ಮಂಗಳವಾರ ಮತ್ತು ಅಮವಾಸ್ಯೆ, ಹುಣ್ಣಿಮೆ ದಿನಗಳಂದು ಧಾರವಾಡದಿಂದ ಖಾನಾಪುರ ತಾಲೂಕಿನ ಕಕ್ಕೇರಿ ಬೀಷ್ಠಮ್ಮ ದೇವಸ್ಥಾನಕ್ಕೆ ನೇರ ಬಸ್ ಸಂಚಾರ ಕಲ್ಪಿಸುವಂತೆ ಕೋರಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳು, ಈ ಶ್ರಾವಣ ಮಾಸದಿಂದ ಬಸ್ ಸಂಚಾರ ಆರಂಭಿಸಲು ಕ್ರಮವಹಿಸಲು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸರ್ವರನ್ನು ಒಳಗೊಂಡ ಜನರು ಅಭಿವೃದ್ಧಿಯಾದರೆ ಸಮಾಜ ಸುಧಾರಣೆಯಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದರಿಂದ ನಾಡಿನ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ತಲುಪಬೇಕು, ಅವರ ಜೀವನಮಟ್ಟ ಸುಧಾರಿಸಬೇಕು ಎನ್ನುವ ಉದಾತ್ತ ಧ್ಯೇಯದೊಂದಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಶಕ್ತಿ ಯೋಜನೆ ಅನುಷ್ಠಾನದಿಂದ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ಬಸ್ ಚಾಲಕರು, ನಿರ್ವಾಹಕರು ಮಹಿಳಾ ಪ್ರಯಾಣಿಕರಿಗೆ ಕೆಲವು ಸಲ ಬಸ್ ನಿಲ್ಲಿಸದೆ ತೊಂದರೆ ಮಾಡುತ್ತಿದ್ದಾರೆ. ಇವರಿಗೆ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಾರೆಂಬ ತಾತ್ಸಾರ ಇರಬಹುದು. ಆದರೆ ಸರಕಾರ ಮಹಿಳಾ ಪ್ರಯಾಣಿಕರ ಬಸ್ ಪ್ರಯಾಣದ ಮೊತ್ತವನ್ನು ಸಾರಿಗೆ ಸಂಸ್ಥೆಗಳಿಗೆ ನಿರಂತರವಾಗಿ ನೀಡುತ್ತಿದೆ. ಸಾಕಷ್ಟು ಹೊಸ ಬಸ್‍ಗಳನ್ನು ಖರೀದಿಸಲಾಗಿದೆ. ಸಿಬ್ಬಂದಿ ನೇಮಕಾತಿ ಆಗಿದೆ. ಆದಾಯ ಹೆಚ್ಚಳದಿಂದ ತಿಂಗಳ ವೇತನ ಸರಿಯಾದ ಸಮಯಕ್ಕೆ ಆಗುತ್ತಿದೆ. ಆದ್ದರಿಂದ ಸಾರಿಗೆ ಸಂಸ್ಥೆಯವರು ಎಲ್ಲ ಪ್ರಯಾಣಿಕರನ್ನು ಗೌರವದಿಂದ ಕಂಡು, ಸ್ಪಂದಿಸಬೇಕು ಎಂದರು.

ಅಳ್ನಾವರ-ಕಕ್ಕೇರಿ, ಧಾರವಾಡ-ಕಕ್ಕೇರಿ ಮಾರ್ಗವಾಗಿ ನೇರ ಬಸ್ ಸೇವೆ ಪೂರೈಸಬೇಕು. ದೇವಸ್ಥಾನಕ್ಕೆ ಹೋಗುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇರುವ ಬಸ್‍ಗಳನ್ನು ಸರಿಯಾದ ಸಮಯಕ್ಕೆ ಮತ್ತು ಪ್ರಯಾಣಿಕರ ಒತ್ತಡ ಇರುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‍ಗಳನ್ನು ಓಡಿಸಬೇಕೆಂದು ಸೂಚಿಸಿದರು.

ಗೃಹಲಕ್ಷ್ಮಿ ಯೋಜನೆ ಮತ್ತು ಯುವ ನಿಧಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗದಂತೆ ಗಮನಿಸಿ, ಯಾವುದೇ ಅರ್ಹ ಪಲಾನುಭವಿ ಸರಕಾರದ ಯೋಜನೆಗಳಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಗೃಹಲಕ್ಷ್ಮಿ ಯೋಜನೆ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದರೂ ಸಹ ಇನ್ನು ಕೆಲವರು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದ ಕಾರಣ ಅಥವಾ ಇ-ಕೆವೈಸಿ ಸಮಸ್ಯೆಯಿಂದಾಗಿ ಕೆಲವರಿಗೆ ಹಣ ತಲುಪಿಲ್ಲ ಎಂಬ ದೂರುಗಳಿವೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪ್ರತಿ ಮನೆಗೆ ಭೇಟಿ ನೀಡಿ, ಈ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಬಗೆಹರಿಸಬೇಕು. ಮತ್ತು ಯುವ ನಿಧಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗದಂತೆ ಎಚ್ಚರವಹಿಸಬೇಕು ಎಂದರು. ಯ

ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ಮೂಗನೂರಮಠ, ಜಿಲ್ಲಾ ಪ್ರಾಧಿಕಾರದ ಉಪಾಧ್ಯಕ್ಷ ಮುರಗಯ್ಯಾ ವಿರಕ್ತಮಠ, ಸುಧೀರ .ಎಸ್. ಬೋಳಾರ, ರೇಹನ್ ರಝಾ ಐನಾಪೂರಿ, ರತ್ನಾ ತೇಗೂರಮಠ ವೇದಿಕೆಯಲ್ಲಿದ್ದರು.

ಜಿಲ್ಲಾ ಪ್ರಾಧಿಕಾರದ ಸದಸ್ಯರಾದ ಅರವಿಂದ ಏಗನಗೌಡರ, ವಿನಾಯಕ ಕುರುಬರ, ಬಸಪ್ಪ ಮಹಾಬಳೇಶ್ವರ ಬಾವಕಾರ, ವರ್ಧಮಾನಗೌಡ .ಲ. ಹಿರೇಗೌಡರ, ಶಿವಾನಂದ ಭೂಮಣ್ಣವರ, ಅಬ್ದುಲ ಗಣಿ ಅಹ್ಮದವಾಲಿ, ಸಾವಿತ್ರಿ ಬಸವರಾಜ ಭಗವತಿ ಹಾಗೂ ಇತರ ಸದಸ್ಯರು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Leave a Reply