ಸಾಲ ಕೊಡುವಾಗ ಎಚ್ಚರವಿರಲಿ
ನೀವು ಮೃದು ಸ್ವಭಾವದವರಾಗಿದ್ದರೆ ಯಾರಿಗೂ ಹಣವನ್ನು ಸಾಲ ಕೊಡಬೇಡಿ. ನಿಮ್ಮಲ್ಲಿ ಸಣ್ಣ ಸೇವಿಂಗ್ಸ್ ಇದ್ದರೆ ಅದನ್ನು ಜೋಪಾನವಾಗಿ ಇಟ್ಟುಕೊಳ್ಳಿ. ದಯವಿಟ್ಟು ಈ ವಿಷಯದಲ್ಲಿ ಸ್ವಾರ್ಥಿಗಳಾಗಿ. ಇದು ಕೆಟ್ಟ ಉಪದೇಶ ಅಂತ ನಿಮಗೆ ಅನ್ನಿಸಬಹುದು ಅನ್ನಿಸಲಿ. ಒಮ್ಮೆ ಯೋಚಿಸಿ? ತಮ್ಮ ಕಷ್ಟ ಹೇಳಿಕೊಂಡು ಆ ಕ್ಷಣಕ್ಕೆ ನಮ್ಮಿಂದ ಸಾಲ ಪಡೆದವರು ಎಂದೂ ನಮ್ಮ ಕಷ್ಟದ ಸಮಯಕ್ಕೆ ಅದನ್ನು ಹಿಂದಿರುಗಿಸುವ ಪ್ರಾಮಾಣಿಕತೆಯನ್ನಾಗಲೀ ಬದ್ಧತೆಯನ್ನಾಗಲೀ ಉಳಿಸಿಕೊಂಡಿರುವುದಿಲ್ಲ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಕಷ್ಟಕ್ಕೆ ಆದವರಿಗೆ ಸತಾಯಿಸುವುದು, ತಿರುಗಿ ಬೀಳುವುದು, ತಪ್ಪಿಸಿಕೊಂಡು ಓಡಾಡುವುದು, ವ್ಯಂಗ್ಯವಾಗಿ ಮಾತನಾಡುವುದು, ಕಿವಿಗೆ ಹಾಕಿಕೊಳ್ಳದೆ ಇರುವುದು, ದಿವ್ಯ ನಿರ್ಲಕ್ಷ್ಯ ತೋರುವುದು, ಸಾಧ್ಯವಾದರೆ ಕೊಟ್ಟ ಹಣವನ್ನು ಮುಳುಗಿಸಿಯೇ ಬಿಡುವುದು. ಇದನ್ನೆಲ್ಲಾ ನಮ್ಮ ಮೃದುತ್ವವನ್ನು ಗಮನಿಸಿಯೇ ಅವರು ಮಾಡುತ್ತಿರುತ್ತಾರೆ. ದೂರ್ತ ಬುದ್ಧಿಯನ್ನು ನಯವಂಚಕತನವನ್ನು ಪ್ರದರ್ಶಿಸುತ್ತಾರೆ. ದಯವಿಟ್ಟು ನಿಮ್ಮಲ್ಲಿ ಮೃಧು ಸ್ವಭಾವವಿದ್ದರೆ ಸಾಲ ಕೊಟ್ಟು ಕೈ ಸುಟ್ಟುಕೊಳ್ಳಬೇಡಿ.
ಸಾಲ ಬೇಡುವವರು ಯಾರೇ ಆಗಿರಲಿ ಅದಕ್ಕಾಗಿ ಫೈನಾನ್ಸುಗಳಿವೆ, ಪತ್ತಿನ ಸಹಕಾರ ಸಂಘಗಳಿವೆ, ಬ್ಯಾಂಕುಗಳು, ಲೆವಿ ವ್ಯವಹಾರಗಾರರು, ಬಡ್ಡಿ ದಂಧೆ ನಡೆಸುವವರು ಇದ್ದಾರೆ. ಅಂತವರ ಬಳಿ ಹೋಗಿ ಸಾಲಕ್ಕೆ ಅಡಮಾನ ಇಟ್ಟು ಶ್ಯೂರಿಟಿ ಕೊಟ್ಟು ಸಾಲ ಪಡೆದುಕೊಳ್ಳಲಿ. ಅದು ಹತ್ತು ಪೈಸೆಯೇ ಆಗಿರಲಿ ಹತ್ತು ರೂಪಾಯೇ ಆಗಿರಲಿ ಸಾವಿರವೇ ಆಗಿರಲಿ. ನೀವು ಕಷ್ಟಪಟ್ಟು ದುಡಿದ ಹಣದ ನಿಮ್ಮ ಪುಟ್ಟ ಉಳಿತಾಯವನ್ನು ನಿಮಗಾಗೇ ಉಳಿಸಿಕೊಳ್ಳಿ.
ನಿಮ್ಮ ಆರೋಗ್ಯ, ಅವಶ್ಯಕತೆ, ಕರ್ಚುವೆಚ್ಚಗಳಿಗಾಗಿ, ಕಷ್ಟಕ್ಕಾಗಿ ಕೂಡಿಟ್ಟುಕೊಳ್ಳಿ. ಏಕೆಂದರೆ ನಿಮ್ಮ ಬಳಿ ‘ನಾಳೆಯೇ ಕೊಟ್ಟು ಬಿಡುತ್ತೇನೆ, ಗಂಟೆಯಲ್ಲಿ ಹಿಂತಿರುಗಿಸುತ್ತೇನೆ’ ನನ್ನ ಹಣ ಅಲ್ಲಿ ಸಿಕ್ಕಿ ಹಾಕಿಕೊಂಡಿದೆ, ಅವರು ಕೊಡಬೇಕು ಇವರು ಕೊಡಬೇಕು’ ಎಂದು ವಿನಾ ನಟಿಸುತ್ತಾರೆ. ಆ ಕ್ಷಣಕ್ಕೆ ಭರವಸೆಗಳ ಹೂಮಾಲೆ ಹಾಕಿ ಉಬ್ಬಿಸಿಬಿಡುತ್ತಾರೆ. ನೀವು ಹೆಚ್ಚು ಒತ್ತಾಯ ಮಾಡಿ ಕೇಳ ತೊಡಗಿದರೆ, “ನಾನೇನು ಊರ್ ಬಿಟ್ ಓಡೋಕ್ತೀನಾ? ನಿನ್ ಗಂಟ್ ಹಾಕ್ತೀನಾ? ಏನ್ ಕೋಟಿ ರೂಪಾಯಿ ಸಾಲಾ ಕೊಟ್ಟಿದಿಯಾ? ಕೊಟ್ಟಾಗ ಇಸ್ಕೊವಂತೆ ತಗೋ. ಈಗ ನನ್ನತ್ರ ಇಲ್ಲ ಏನಾದ್ರು ಮಾಡ್ಕೊ..” ಸಾಲ ವಾಪಸ್ ಕೇಳಿ ನೋಡಿ ಇಂತಹ ನಾಟಕ ದುರ್ವರ್ತನೆಗಳನ್ನು ಶುರುವಿಡುತ್ತಾರೆ. ಅವರಿಗೆ ನೀವು ಕಷ್ಟಪಟ್ಟು ಸಂಪಾದಿಸಿದ ಹಣದ ಬೆಲೆಯಾಗಲೀ, ಅವರ ಕಷ್ಟ ಕಾಲಕ್ಕೆ ಮರುಗಿದ ನಿಮ್ಮ ಮನುಷ್ಯತ್ವದ ಬೆಲೆಯಾಗಲೀ ಅರ್ಥವಾಗುವುದೇ ಇಲ್ಲ. ಅನುಕಂಪಕ್ಕೆ ಬಲಿಯಾಗಿ ಕೊಟ್ಟ ಹಣಕ್ಕೆ ಮೋಸಹೋಗಬೇಡಿ. “ಕೊಟ್ಟವನು ಕೋಡಂಗಿ ಇಸ್ಕೊಂಡವ ಈರಭದ್ರ” ಅಂತ ಹಿರಿಯರು ಸುಮ್ಮನೇ ಗಾದೆ ಕಟ್ಟಿಲ್ಲ.
ಸಂಬಂಧಿಕರಲ್ಲಿ ಮಾತ್ರ ಈ ಸಾಲದ ವ್ಯವಹಾರ ಮಾಡಲೇಬೇಡಿ. ಟೈಟಾನಿಕ್ ಹಡಗಿನಂತೆ ಹಣವೂ ಮುಳುಗುತ್ತದೆ ಸಂಬಂಧವೂ ಮುಳುಗುತ್ತದೆ. ಕೊನೆಗೆ ಅಸಹಾಯಕರಾದ ನೀವು ಸಿಂಗದೂರು ಚೌಡೇಶ್ವರಿಯ ಮೊರೆ ಹೋಗುವುದು, ಬೂತಪ್ಪ ಚೌಡಮ್ಮರಿಗೆ ಹಸಿ ಖಾರದ ಪುಡಿ ಹಚ್ಚುವುದು, ಕಲ್ಲುಕುಟಿಕನಿಗೆ ಹಾಕುವುದು ಇಂಥಹ ಸ್ಥಿತಿಗೆ ಇಳಿಯುವುದು ಬೇಕಾ? ಯಾವ ದೇವರೂ ನಿಮ್ಮ ಹಣಕ್ಕೆ ಜವಾಬ್ದಾರನಲ್ಲ. ಜಾಮೀನುದಾರನೂ ಅಲ್ಲ.
ಸಾಲ ಬೇಕಾದವರು ಸಾಲ ಕೊಡುವ ಸಂಸ್ಥೆಗಳು ಬಡ್ಡಿ ವ್ಯವಹಾರದವರ ಹತ್ತಿರ ಸಾಲಾ ಪಡೆದು ಬಡ್ಡಿ ಕಟ್ಟಲಿ. ಅವರು ಮೂಗು ಹಿಡಿದು ವಸೂಲಿ ಮಾಡುತ್ತಾರೆ. ಅಂತವರೇ ಇಂತಹಾ ಅಪ್ರಾಮಾಣಿಕರಿಗೆ, ಹಿಂದಿರುಗಿಸುವ ಕ್ರಿಯಾ ಬುದ್ಧಿ ಇಲ್ಲದವರಿಗೆ ಸರಿಯಾದವರು. ಏಕೆಂದರೆ ಅವರು ಪುಕ್ಕಟೆ ಸಾಲ ಕೊಡುವುದಿಲ್ಲ. ವಸೂಲಿ ಮಾಡಲು ಯಾವೆಲ್ಲ ಆಧಾರಗಳು ಬೇಕೊ ಅವುಗಳನ್ನ ಮಡಗಿಕೊಂಡೇ ಸಾಲ ಕೊಡುತ್ತಾರೆ. ಇನ್ನೊಂದು ಸತ್ಯವೆಂದರೆ ಇಂತವರು ಅಂತವರ ಬಳಿ ಮಾತ್ರ ವ್ಯವಹಾರವನ್ನು ಚನ್ನಾಗಿ ಇಟ್ಟುಕೊಳ್ಳುತ್ತಾರೆ. ನನ್ನ ಸ್ವಂತ ಅನುಭಗಳಿಂದ ಹೀಗೆಲ್ಲಾ ಬರೆಯುತ್ತಿದ್ದೇನೆ. ನಮ್ಮ ಮೃದು ಸ್ವಭಾವ ನಮಗೆ ಮುಳ್ಳು. ಎಲ್ಲಾ ವಿಷಯಗಳಲ್ಲೂ ಅಲ್ಲ. ಇಂತಹ ವಿಷಯಗಳಲ್ಲಿ ಸತ್ಯ. ನೀವು ಸಾಲ ಕೊಡುವುದಕ್ಕಿಂತ ಅಪಾಯಕಾರಿ ಯಾವುದು ಗೊತ್ತಾ? ಬೇರೆಯವರಿಂದ ಸಾಲ ಕೊಡಿಸುವುದು. ಇದು ಗಾಣಕ್ಕೆ ಬಿದ್ದ ಮೀನಿನ ಸ್ಥಿತಿ.
ನಿಮ್ಮ ಬಳಿ ಸಾಲಗಾರ ಕೈ ಕಾಸನ್ನೇ ಪಡೆದುಕೊಂಡಿರಲಿ, ನಿಮ್ಮನ್ನು ಮರುಗಿಸಿ ಸಹಾಯ ಪಡೆಯುವುದೂ ಒಂದು ತಂತ್ರವೇ. ಆದರೆ ಅವರು ನಿಮ್ಮಲ್ಲಿಯ ಹಾಗೆ ಬೇರೆ ಯಾವ ಯಾವ ಕಡೆ ಯಾರ ಯಾರ ಕಡೆ ಎಷ್ಟು ಸಾಲ ಮಾಡಿದ್ದಾರೆ, ಯಾತಕ್ಕಾಗಿ ಸಾಲ ಮಾಡಿದ್ದಾರೆ ಎಂಬ ಯಾವ ಮಾಹಿತಿಯೂ ಇರುವುದಿಲ್ಲ. ಸಾಲ ನೀಡುವಾಗ ಈ ಯಾವ ಅಂಶಗಳನ್ನೂ ನಾವು ಗಮನಿಸೋದಿಲ್ಲ. ಭಾವುಕರಾಗಿ ಕಷ್ಟಕ್ಕೆ ಮಿಡಿಯುತ್ತೇವೆ. ನಮ್ಮ ಕಷ್ಟ ಕಾಲದಲ್ಲಿ ಅವರು ಕೈ ಕೊಡುತ್ತಾರೆ. ಇದು ಈ ಕಾಲದ ವಾಸ್ತವ. ಆತ್ಮಸಾಕ್ಷಿ ಪಾಪ ಪ್ರಜ್ಞೆ ಯಾವುದೂ ಇಲ್ಲದ ಜಮಾನಾ ಇದು. ಎಚ್ಚರವಾಗಿರಿ…
– ಸುರೇಶ ಎನ್ ಶಿಕಾರಿಪುರ, ಚಿಂತಕರು




