ಬೆಂಗಳೂರು: ಲಿಡ್ಕರ್ ಉತ್ಪನ್ನಗಳಿಗೆ ಖ್ಯಾತ ನಟ ಡಾಲಿ ಧನಂಜಯ ಅವರನ್ನು ರಾಯಭಾರಿಯಾಗಿ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 67ನೇ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾಲಿ ಧನಂಜಯ್ ಅವರು ಉದಯೋನ್ಮುಖ ನಟ. ಸಾಮಾಜಿಕ ಕಳಕಳಿ ಇರುವ ನಟ. ಅವರನ್ನು ರಾಯಭಾರಿಯಾಗಿ ಮಾಡಿರುವುದು ಅರ್ಥಪೂರ್ಣವಾಗಿದೆ. ಇದಕ್ಕೆ ಉಚಿತವಾಗಿ ಅವರು ರಾಯಭಾರಿ ಕೆಲಸ ಮಾಡಲಿದ್ದಾರೆ. ಇದರಿಂದಾಗಿ ಚರ್ಮೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ರಾಯಭಾರಿ ಎಂದು ಘೋಷಿಸಿದ ಬಳಿಕ ನಟ ಡಾಲಿ ಧನಂಜಯ ಮಾತನಾಡಿ, ಮೊದಲನೇ ಬಾರಿಗೆ ರಾಯಭಾರಿ ಆಗಿರುವುದು ಖುಷಿ ಇದೆ. ಅದೂ ಕೂಡ ಲಿಡ್ಕರ್ ಗೆ ರಾಯಭಾರಿ ಆಗುತ್ತಿರುವುದು ಇನ್ನೂ ಹೆಚ್ಚಿನ ಖುಷಿಯಾಗುತ್ತಿದೆ. ಸುಮಾರು 50 ಸಾವಿರ ಕುಟುಂಬಗಳು ಈ ಉದ್ಯಮದಲ್ಲಿವೆ. ಲಿಡ್ಕರ್ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿ ಕಲ್ಯಾಣಮ್ಮ ಮತ್ತು ಹರಳಯ್ಯ ಅವರ ಭಾವಚಿತ್ರ ಹಾಕಿದ್ದರು. ನಮ್ಮ ಕರ್ನಾಟಕದಲ್ಲಿ ಕಲ್ಯಾಣಮ್ಮ ಮತ್ತು ಹರಳಯ್ಯರಂತಹ ಸಾವಿರಾರು ಜನ ಕುಶಲಕರ್ಮಿಗಳಿದ್ದಾರೆ ಎಂದರು.
ಇದು ಸರ್ಕಾರದಿಂದಲೇ ಮಾಡಿರುವಂತಹ ಉತ್ಪನ್ನ. ಇದರಿಂದ ಏನೇ ಬಂದರೂ ಅಷ್ಟೂ ಕುಟುಂಬಗಳಿಗೆ ಹೋಗುತ್ತದೆ. ಈ ಸಂಸ್ಥೆಗೆ ನನ್ನನ್ನು ರಾಯಭಾರಿಯಾಗಿ ಮಾಡಿದ್ದು ಖುಷಿ ಇದೆ. ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳು ನಂದಿನಿ ಹಾಲಿನ ಬಗ್ಗೆ ಹೇಳಿದ್ದರು. ನಂದಿನಿ, ಮೈಸೂರ್ ಸಿಲ್ಕ, ಮೈಸೂರ್ ಸ್ಯಾಂಡಲ್, ಲಿಡ್ಕರ್ ಇವು ನಮ್ಮದೇ ಉದ್ಯಮ. ಇದು ಮೇಡ್ ಇನ್ ಕರ್ನಾಟಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ, ಮಾಜಿ ಸಚಿವ ಎಚ್. ಆಂಜನೇಯ ಮತ್ತಿತರರು ಉಪಸ್ಥಿತರಿದ್ದರು.



