ಇಂದು ದಸರಾ ಕುರಿತ ಏನೇ ಚರ್ಚೆ ಮಾಡುವ ಮುನ್ನ ಒಂದು ಅಂಶವನ್ನು ನೆನಪಿಡಬೇಕಾಗುತ್ತದೆ. ಸರ್ಕಾರ ದಸರಾವನ್ನು ʼನಾಡಹಬ್ಬʼ ಎಂದು ಈತನಕ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಸಾಮಾನ್ಯ ಹುಲುಮಾನವರು ತಮ್ಮ ದೈನಂದಿನ ಬೇಸರದ ಬಾಳ್ವೆಯಲ್ಲಿ ಒಂದಷ್ಟು ಶ್ರದ್ಧೆಯನ್ನೋ, ಏಕಾಗ್ರತೆಯನ್ನೋ, ಮನರಂಜನೆಯನ್ನೋ, ಬದಲಾವಣೆಯನ್ನೋ, ಹೊಸತನವನ್ನೋ ಸಂಪಾದಿಸಿಕೊಳ್ಳಲು ಬಯಸುತ್ತಾರೆ. ಈ ಪ್ರಯತ್ನದ ಅಂಗವಾಗಿ ಅವರು ಹಬ್ಬ, ಸಂತೆ, ಜಾತ್ರೆ, ಕ್ರೀಡೆ, ಸಂಗೀತ, ಸಿನಿಮಾ ಇವೇ ಮುಂತಾದ ಕಾರ್ಯಕ್ರಮಗಳಲ್ಲಿ ತೊಡಗುತ್ತಾರೆ. ಇಂತಹ ಕಾರ್ಯಕ್ರಮಗಳು ಜನಪ್ರಿಯಗೊಂಡು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನಗಳನ್ನು ಆಕರ್ಷಿಸಲಾರಂಭಿಸಿದಾಗ ರಾಜಕಾರಿಣಿಗಳು ಅಂತಹ ಜನಜಂಗುಳಿಯ ಗರಿಷ್ಠ ಲಾಭ ಪಡೆದುಕೊಳ್ಳಲು, ಅದನ್ನು ಮತಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲು ಹವಣಿಸುತ್ತಾರೆ. ಅದಕ್ಕಾಗಿ ಸರ್ಕಾರೀ ವ್ಯವಸ್ಥೆಯನ್ನು, ಸರ್ಕಾರದ ಸಿಬ್ಬಂದಿಯನ್ನು, ಸಂವಿಧಾನದ ಪಾವಿತ್ರ್ಯವನ್ನು, ನಾಡಿನ ಏಕತೆ, ಶಾಂತಿ, ಸೌಹಾರ್ದತೆಗಳನ್ನು ಬಲಿದಾನ ನೀಡಲೂ ಹಿಂಜರಿಯುವುದಿಲ್ಲ. ಯಾವ ಪಕ್ಷದವರೂ ಇದಕ್ಕೆ ಅಪವಾದವಲ್ಲ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಚಿತ್ರರಂಗದ ನಟ-ನಟಿಯರಿಗೆ ಪೊಲೀಸ್ ಗೌರವ ನಮನ ಸಲ್ಲಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಅವರ ಸಮಾಧಿ, ಸ್ಮಾರಕಗಳನ್ನು ನಿರ್ಮಿಸುವುದು ಇವೆಲ್ಲ ಸಂವಿಧಾನದ ಆಶಯಗಳಿಗೆ ಅಪಚಾರ ಮಾಡುವ ಕೆಲಸವೆಂಬುದು ಸಾಮಾನ್ಯಜ್ಞಾನಕ್ಕೇ ತಿಳಿದು ಬರುವ ಸಂಗತಿಯಾಗಿದೆ. ಕೆಲವೇ ದಿವಸಗಳ ಹಿಂದೆ ಬೆಂಗಳೂರಿನಲ್ಲಿ ಐಪಿಎಲ್ ಕ್ರಿಕೆಟ್ ನಡೆಯಿತು. ಜನ ಸಾಗರೋಪಾದಿಯಲ್ಲಿ ಬರುವರೆಂಬ ಮಾಹಿತಿಯೂ ಸರ್ಕಾರಕ್ಕೆ ಇತ್ತು. ಆ ದಿವಸ ನಮ್ಮ ರಾಜಕಾರಿಣಿಗಳು ಶಿಸ್ತು, ಕಾನೂನು ಸುವ್ಯವಸ್ಥೆ, ಜನದಟ್ಟಣೆಯ ನಿಯಂತ್ರಣ ಇತ್ಯಾದಿ ಕರ್ತವ್ಯಗಳನ್ನು ನಿಭಾಯಿಸುವುದನ್ನು ಬಿಟ್ಟು ತಮ್ಮ ಪ್ರತಿಷ್ಠೆಯ ಪ್ರದರ್ಶನಕ್ಕೆ ಮುಂದಾದರು. ಜನಜಂಗುಳಿಯ ಮುಂದೆ ಕ್ರಿಕೆಟ್ ಆಟಗಾರರಿಗಿಂತಲೂ ಹೆಚ್ಚು ಆಕರ್ಷಕವಾಗಿ ತಾವು ಮಿಂಚಬೇಕು ಎಂಬಂತೆ ಬಾಲಿಶತನದಿಂದ ವರ್ತಿಸಿದರು. ತತ್ಪರಿಣಾಮವಾಗಿ ಕಾಲ್ತುಳಿತ ಸಂಭವಿಸಿ ಹತ್ತು ಹಲವು ಪ್ರಾಣ ಪಕ್ಷಿಗಳು ಹಾರಿ ಹೋದವು, ಹತ್ತು ಹಲವು ಮನೆಯ ನಂದಾ ದೀಪಗಳು ನಂದಿ ಹೋದವು. ಇದೊಂದು ಅನಿರೀಕ್ಷಿತವಾಗಿ ಸಂಭವಿಸಿದ ಅನಾಹುತವೆಂದು ಅವರು ಸಮಜಾಯಿಷಿ ನೀಡಬಹುದು. ಆದರೆ ಇಂತಹ ಅಚಾತುರ್ಯ ಮರುಕಳಿಸಬಾರದೆಂಬ ಕನಿಷ್ಠ ಪ್ರಜ್ಞೆಯನ್ನಾದರೂ ಇವರು ಹೊಂದಿರಬೇಡವೇ? ಆದರೆ ಜನಗಳನ್ನು ವೃಥಾ ಉದ್ರಿಕ್ತಗೊಳಿಸಿದಾಗಲೇ ಇವರ ಜೀವಗಳಿಗೆ ಆತ್ಮತೃಪ್ತಿಯಾಗುತ್ತದೆ ಎನಿಸುತ್ತದೆ.
ತಾಯಿ ಚಾಮುಂಡೇಶ್ವರಿಯ ಆರಾಧನೆ ಮತ್ತು ಉತ್ಸವ ದೇಶದ ಕೋಟ್ಯಂತರ ಆಸ್ತಿಕ ಜನಗಳ ಶ್ರದ್ಧಾಪೂರ್ಣ ಆಚರಣೆಯಾಗಿದೆ. ಆದರೆ ಸರ್ಕಾರ ಪ್ರಾಯೋಜಿಸುವ ಇಂತಹ ʼನಾಡಹಬ್ಬʼಗಳನ್ನು ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಭಿತ್ತಿಯಲ್ಲಿ ವಿಶ್ಲೇಷಿಸಬೇಕಾದ ಅವಶ್ಯಕತೆ ಇಲ್ಲ. ಅದನ್ನು ಓಲೈಕೆಯ ರಾಜಕಾರಣದ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ.
ಸ್ವಾತಂತ್ರ್ಯಪೂರ್ವದಲ್ಲಿ ನವರಾತ್ರಿಯ ಸಮಯದಲ್ಲಿ ಮೈಸೂರಿನ ಶ್ರೀಮನ್ಮಹಾರಾಜರು ತಾವೇ ಅಂಬಾರಿಯ ಮೇಲೆ ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಆದರೆ ಸ್ವತಂತ್ರ ಭಾರತದಲ್ಲಿ ಯಾವ ರಾಜಸಂಸ್ಥಾನಕ್ಕೂ ಸಾಂವಿಧಾನಿಕ ಸ್ಥಾನಮಾನ, ರಾಜಕೀಯ ಅಧಿಕಾರಗಳು ಇರುವುದಿಲ್ಲವೆಂದು ೧೯೭೧ರಲ್ಲಿ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ ಮೇಲೆ ಮಹಾರಾಜರ ಬದಲಿಗೆ ಆ ಅಂಬಾರಿಯ ಮೇಲೆ ತಾಯಿ ಚಾಮುಂಡೇಶ್ವರಿಯ ಚಿನ್ನದ ವಿಗ್ರಹವನ್ನಿಡುವ ಸಂಪ್ರದಾಯ ಪ್ರಾರಂಭವಾಯಿತು. ಆದರೆ ಈ ವ್ಯತ್ಯಾಸ ಭಕ್ತಜನಗಳ ಉತ್ಸಾಹದ ಮೇಲೆ ಪರಿಣಾಮವನ್ನೇನೂ ಬೀರಲಿಲ್ಲ. ಮೈಸೂರಿನ ದಸರಾ ಅದೇ ವೈಭವದಿಂದ, ಅದೇ ಶ್ರದ್ಧಾಭಕ್ತಿಗಳಿಂದ ಮುಂದುವರಿಯಿತು.
ನ್ಯಾಯಾಲಯದ ತೀರ್ಪಿನ ದುರ್ಲಾಭ ಪಡೆದ ರಾಜಕಾರಿಣಿಗಳು ದಸರಾವನ್ನು ʼನಾಡಹಬ್ಬʼವೆಂದು ಘೋಷಿಸಿದರು. ಪ್ರತಿವರ್ಷ ನಾನಾ ಕ್ಷೇತ್ರದ ಸಾಧಕರುಗಳನ್ನು ಆಹ್ವಾನಿಸಿ ಹಬ್ಬಕ್ಕೆ ಚಾಲನೆ ನೀಡುವ ಹೊಸ ಪರಿಪಾಟವನ್ನು ಪ್ರಾರಂಭಿಸಿದರು. ಆದರೆ ಅಂತಿಮವಾಗಿ ದಸರಾ ಒಂದು ನಿರ್ದಿಷ್ಟ ಧಾರ್ಮಿಕ ನಂಬಿಕೆಯುಳ್ಳ ಜನಸಮುದಾಯದ ಹಬ್ಬವಾಗಿದೆ. ಒಂದು ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಜಾತಿ-ಜನಾಂಗದವರ ಹಬ್ಬವನ್ನು ಇಡೀ ನಾಡಿನ ಹಬ್ಬವೆಂದು ಆಚರಿಸುವುದು ಸಂವಿಧಾನದ ಆಶಯಗಳಿಗೆ ವಿರೋಧವಾಗಿದೆ ಎಂದು ಇವರಾರೂ ಯೋಚಿಸಲೇ ಇಲ್ಲ.
ಈ ಹಿಂದೆ ನಿಷ್ಠಾವಂತ ಸಮಾಜವಾದಿಯೂ, ತೇಜಸ್ವಿಯವರ ಸಂಗಡಿಗರೂ ಆದ ಕಡಿದಾಳ್ ಶಾಮಣ್ಣನವರಿಗೆ ದಸರಾ ಉದ್ಘಾಟನೆಗೆ ಆಹ್ವಾನ ಬಂದಿದ್ದಾಗ ಇದು ಒಂದು ಧರ್ಮಕ್ಕೆ ಸೀಮಿತವಾದ, ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾದ ಆಚರಣೆಯಾಗಿದೆ ಎಂಬ ಕಾರಣಕ್ಕೆ ಅವರು ಆಹ್ವಾನವನ್ನು ನಿರಾಕರಿಸಿದ್ದರು. ನಮ್ಮ ಸಮಾಜವಾದಿಗಳು ಸರ್ವೋಚ್ಛ ನ್ಯಾಯಾಲಯದ ತೀರ್ಪು ಬರುವುದಕ್ಕೆ ಮುಂಚೆಯೂ ಸಹ ರಾಜಪ್ರಭುತ್ವದ ಮೆರವಣಿಗೆ, ಸಾರ್ವಜನಿಕ ಪ್ರದರ್ಶನಗಳನ್ನು ವಿರೋಧಿಸಿದ್ದರು. ಕಡಿದಾಳ್ ಶಾಮಣ್ಣನವರಂತೂ ಮೈಸೂರಿನಲ್ಲಿ ಜಂಬೂ ಸವಾರಿ ವೇಳೆ ಕಪ್ಪುಬಾವುಟ ಪ್ರದರ್ಶಿಸಿ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದರು. “ಆದರೆ ಶಾಮಣ್ಣ ಅದೆಷ್ಟು ಸಂಕೋಚದ ಸ್ವಭಾವದವರೆಂದರೆ ಮುಖ್ಯಮಂತ್ರಿಗಳು ತಮ್ಮ ಆಪ್ತ ಸ್ನೇಹಿತರಾದ್ದರಿಂದ ನಿಷ್ಠೂರವಾಗಿ ತಾತ್ವಿಕ ಕಾರಣವನ್ನು ನೀಡದೇ ಬರಗಾಲ, ರೈತರ ಸಂಕಷ್ಟ ಇತ್ಯಾದಿ ನೆವಗಳನ್ನು ಹೇಳಿದರು, ಬೇಕಿದ್ದರೆ ವಿಧಾನಸೌಧದಲ್ಲಿ ಕಸ ಗುಡಿಸುತ್ತೇನೆ ಆದರೆ ನನ್ನ ಕೈಲಿ ಉದ್ಘಾಟನೆ ಮಾಡಿಸಬೇಡಿ ಎಂದು ಹೇಳಿ ಹಿಂದಕ್ಕೆ ಸರಿದಿದ್ದರು” ಎಂದು ಅವರ ಸಮಾಜವಾದೀ ಸ್ನೇಹಿತರು ನೆನಪಿಸಿಕೊಂಡಿದ್ದಾರೆ (ನಮ್ಮ ಶಾಮಣ್ಣ, ಸಂ. ಡಿ.ಎಸ್. ನಾಗಭೂಷಣ, ಅಹರ್ನಿಶಿ ಪ್ರಕಾಶನ, ೨೦೧೬). “ನಾನು ವೇದಿಕೆಯನ್ನೇರುತ್ತೇನೆ; ಆದರೆ ದೀಪ ಹಚ್ಚುವುದಿಲ್ಲ” ಎಂಬ ಬಡಿವಾರದ ಮಾತುಗಳನ್ನಾಡುವ, ತಮ್ಮ ಬೌದ್ಧಿಕತೆಯನ್ನು ಆಲಂಕಾರಿಕವಾಗಿ ಪ್ರದರ್ಶಿಸಿಕೊಳ್ಳುವ, ಮಾರ್ಕ್ಸ್‌ವಾದ, ನಾಸ್ತಿಕವಾದಗಳೊಂದಿಗೆ ಸ್ಪಷ್ಟವಾಗಿ ಗುರುತಿಸಿಕೊಂಡೂ ದಸರಾ ಮೆರವಣಿಗೆಯಲ್ಲಿ ರಥದ ಮೇಲೆ ಕುಳಿತು ಸಾಗುವ ಬುದ್ಧಿಜೀವಿಗಳ ಮಧ್ಯೆ ಶಾಮಣ್ಣನಂತಹವರು ಒಂದು ಅಪರೂಪದ ಮರೀಚಿಕೆಯಂತೆ ಕಾಣಿಸುತ್ತಾರೆ.
ನಮಗಿಂದು ಬೇಕಿರುವುದು “ನಾಡಹಬ್ಬ ಸರ್ವ ಜನಾಂಗದವರಿಗೂ ಸೇರಿದ್ದು, ಸರ್ವಜನಾಂಗದ ಶಾಂತಿದೂತರೂ ಬಂದು ಇದನ್ನು ಉದ್ಘಾಟಿಸಲಿ” ಎಂಬ ಉದಾರವಾದೀ ಹಿತ ಬೋಧನೆಯಲ್ಲ ಅಥವಾ “ಹಿಂದೂ ಹಬ್ಬವನ್ನು ಅನ್ಯಕೋಮಿನವರು ಹೇಗೆ ಉದ್ಘಾಟಿಸುತ್ತಾರೆ?” ಎಂಬ ದ್ವೇಷಪೂರಿತ ಮಾತುಗಳೂ ಅಲ್ಲ. ನಾವು ಇನ್ನೂ ಸುಧಾರಿತ ನೆಲೆಯಲ್ಲಿ ಆಲೋಚಿಸಬೇಕಿದೆ. “ಒಂದು ನಿರ್ದಿಷ್ಟ ಧರ್ಮದವರ ಹಬ್ಬವನ್ನು ಸರ್ಕಾರ ಇಡೀ ನಾಡಿನ ಹಬ್ಬವೆಂದು ಆಚರಿಸುವುದು ಉಚಿತವೇ? ಸಾಮ್ರಾಜ್ಯಶಾಹೀ ಕಾಲದಲ್ಲಿ ಆಳ್ವಿಕೆ ಮಾಡುತ್ತಿದ್ದವರು ಆಚರಿಸುತ್ತಿದ್ದ ಹಬ್ಬಗಳನ್ನು ಇಂದಿನ ಪ್ರಜಾಪ್ರಭುತ್ವದ ಆಡಳಿತ ಸೂತ್ರ ಹಿಡಿದವರು ಮುಂದುವರಿಸಿಕೊಂಡು ಹೋಗಬೇಕೇ?” ಎಂಬ ಪ್ರಶ್ನೆಗಳನ್ನು ನಾವಿಂದು ಕೇಳಿಕೊಳ್ಳಬೇಕಾಗಿದೆ. ಸ್ವಾತಂತ್ರ್ಯಾನಂತರ ರಾಜ್ಯಗಳ ಪುನರ್ವಿಂಗಡಣೆಯಾಯಿತು. ಕರ್ನಾಟಕ ರಾಜ್ಯ ಉದಯವಾದ ನೆನಪಿಗೆ ನಾವು ಪ್ರತಿ ನವೆಂಬರ್ ಒಂದರಂದು ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಸರ್ವಜನಾಂಗದವರೂ ತಮ್ಮದೆಂದು ಅಪ್ಪಿಕೊಳ್ಳುವ ಈ ಕನ್ನಡದ ಹಬ್ಬವನ್ನು ನಾಡಹಬ್ಬವೆಂದು ಪರಿಗಣಿಸಿದರೆ ಸಾಲದೇ?
ನಾಳೆ ದಿವಸ ಮಹಿಷ ದಸರೆಯನ್ನು ನಾಡಹಬ್ಬವನ್ನಾಗಿ ಘೋಷಿಸಬೇಕೆಂಬ ಧ್ವನಿ ಕೇಳಿಬರಬಹುದು ಅಥವಾ ಮುಂದೊಂದು ದಿವಸ ಇತರೆ ಹತ್ತು ಹಲವು ಕೋಮಿನವರು ತಮ್ಮ ಹಬ್ಬವನ್ನೇ ನಾಡಹಬ್ಬವೆಂದು ಘೋಷಿಸತಕ್ಕದ್ದು ಎಂದು ಧ್ವನಿ ಎತ್ತಬಹುದು. ಈ ತಲೆನೋವೆಲ್ಲ ಸರ್ಕಾರಕ್ಕೆ ಬೇಕೇ? ಇಂದಿನ ಆಧುನೀಕರಣದ ಯುಗದಲ್ಲಿ ಹೊಸತಲೆಮಾರಿನವರ ಕೋಮು ಭಾವನೆಗಳು ಸೂಕ್ಷ್ಮವಾಗುತ್ತಿವೆ, ಅವರು ದಿನೇ ದಿನೇ ಹೆಚ್ಚು ಹೆಚ್ಚು ಆಕ್ರಮಣಶೀಲತೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇಂದು ಎಲ್ಲ ಕೋಮುಗಳೂ ಔದಾರ್ಯ, ಸಹನಶೀಲತೆಗಳನ್ನು ಕಳೆದುಕೊಳ್ಳುತ್ತಿವೆ. ಇಂತಹ ಸನ್ನಿವೇಶದಲ್ಲಿ ನಾಡಿನ ಹಿತವನ್ನು ಬಯಸುವ ರಾಜಕಾರಿಣಿಗಳು ಪ್ರಬುದ್ಧವಾಗಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ, ಸರ್ಕಾರಗಳು ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲ ಸಾಹಿತ್ಯ ಸಮ್ಮೇಳನದಂತಹ ಜಾತ್ರೆಗಳ ಪಾರುಪತ್ಯೆಯಿಂದಲೂ ಸಹ ಅಂತರ ಕಾಯ್ದುಕೊಳ್ಳುವುದು ಆರೋಗ್ಯಕರ ನಡೆಯಾಗಿದೆ. ತಮ್ಮ ಕಾರ್ಯನಿರ್ವಹಣೆಯನ್ನು ಕಾನೂನು ಸುವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳುವ ಮಟ್ಟಿಗೆ ಸೀಮಿತಗೊಳಿಸಿಕೊಳ್ಳುವುದು ವಿವೇಕಯುತ ನಿರ್ಧಾರವಾಗಿದೆ.
– ಡಾ. ಟಿ.ಎನ್. ವಾಸುದೇವಮೂರ್ತಿ, ಪ್ರಾಧ್ಯಾಪಕರು




