ಅನ್ಯ ರಾಜ್ಯದವರಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಅವಕಾಶ ಕೊಡಬೇಡಿ

2 years ago

ಕರ್ನಾಟಕದಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ರಾಜ್ಯಸಭೆಗೆ 4 ಸ್ಥಾನಗಳು ನಮ್ಮ ವಿಧಾನಸಭೆಯ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಲಭ್ಯವಾಗುತ್ತಿದೆ.

ಆರಂಭದ ದಿನಗಳಲ್ಲಿ ಸಾಹಿತಿಗಳು ಮತ್ತು ಕಲಾವಿದರು ಹಾಗೂ ಪತ್ರಕರ್ತರು ಸಮಾಜದ ವಿವಿಧ ಪ್ರಕಾರಗಳಲ್ಲಿ ದುಡಿಯುವ ಸಮರ್ಥರನ್ನ ಪ್ರತಿಭಾವಂತರನ್ನ ರಾಜ್ಯಸಭೆಗೆ ಕಳುಹಿಸಿಕೊಡಲಾಗುತ್ತಿತ್ತು. ತದನಂತರ ಇದು ಸಂಪೂರ್ಣವಾಗಿ ರಾಜಕಾರಣಿಗಳಿಗೆ ಸೀಮಿತವಾಯಿತು.

ಇದರ ಜೊತೆಗೆ ಕಳೆದ ಕೆಲವು ದಶಕಗಳ ಹಿಂದಿನಿಂದ ಕರ್ನಾಟಕದಿಂದ ರಾಜ್ಯಸಭೆಗೆ ಹೊರರಾಜ್ಯದವರನ್ನು ಕಳುಹಿಸಿಕೊಡುವ ಸಂಪ್ರದಾಯ ಆರಂಭವಾಯಿತು. ಈ ಸಂಪ್ರದಾಯ ಒಳ್ಳೆಯದಲ್ಲ. ಅನ್ಯ ರಾಜ್ಯದವರು ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಹೋದರು ಸಹ ಅವರ ಮನಸ್ಸು ತಮ್ಮ ತಮ್ಮ ರಾಜ್ಯಗಳ ಕಡೆಯಲ್ಲೇ ಇರುತ್ತದೆ. ರಾಜ್ಯದ ಹಿತ ಬಂದಾಗ ರಾಜ್ಯದ ವಿಚಾರ ಬಂದಾಗ ಅವರು ನಮ್ಮ ರಾಜ್ಯದ ಪರವಾಗಿ ಧ್ವನಿಯನ್ನು ತೆಗೆಯುವುದು ಇಲ್ಲ; ಬೆಂಬಲವನ್ನು ನೀಡುವುದಿಲ್ಲ.

ಇನ್ನು ಅವರು ಅವರಿಗೆ ದೊರೆಯುವಂತಹ ಅನುದಾನವನ್ನು ಸಹ ನಮ್ಮ ರಾಜ್ಯದ ಅಭಿವೃದ್ಧಿಗೆ ನೀಡುವುದಿಲ್ಲ. ಇಲ್ಲಿಯೂ ಪಕ್ಷಪಾತ ಮಾಡುತ್ತಾರೆ. ಇಂಥವರನ್ನ ರಾಜ್ಯಸಭೆಗೆ ಕಳಿಸುವ ಅನಿವಾರ್ಯತೆಯಾದರೂ ಏನಿದೆ?

1987ರಲ್ಲಿ ರಾಮ್ ಜೇಠ್ಮಲಾನಿ ಇವರನ್ನು ರಾಜ್ಯಸಭೆಗೆ ಕಳುಹಿಸಿದರು. ಇವರಿಂದ ರಾಜ್ಯಕ್ಕೆ ಮೂರು ಕಾಸಿನ ಅನುಕೂಲವಾಗಲಿಲ್ಲ. ತದನಂತರ ತಮಿಳುನಾಡಿನ ರಾಮಸ್ವಾಮಿ ಅವರನ್ನು, ಆಂಧ್ರಪ್ರದೇಶದ ವೆಂಕಯ್ಯನಾಯ್ಡು ಇವರನ್ನು ಈಗ ನಿರ್ಮಲ ಸೀತಾರಾಮ್ ಅವರನ್ನು ಹಾಗೂ ರಾಜೀವ್ ಚಂದ್ರಶೇಖರ್ ಅವರನ್ನು ರಾಜ್ಯಸಭೆಗೆ ಕಳುಹಿಸಿಕೊಡಲಾಯಿತು. ವೆಂಕಯ್ಯ ನಾಯ್ಡು ಅವರು ಕೇಂದ್ರದ ಸಚಿವರಾದರು, ತದನಂತರ ಉಪರಾಷ್ಟ್ರಪತಿಯಾದರು, ನಿರ್ಮಲ ಸೀತಾರಾಮ್ ಅವರು ಕೇಂದ್ರದ ಹಣಕಾಸು ಸಚಿವರಾದರು. ಕಳೆದ ವರ್ಷ ರಾಜ್ಯ ಬರಗಾಲದಿಂದ ತತ್ತರಿಸುತ್ತಿದ್ದರು ಸಹ ಕೇಂದ್ರದಿಂದ ನ್ಯಾಯಯುತವಾಗಿ ನಮ್ಮ ರಾಜ್ಯಕ್ಕೆ ಕೊಡಬೇಕಾಗಿರುವ ವಿಪತ್ತು ಪರಿಹಾರ ನಿಧಿಯಿಂದ ನೆರವನ್ನ ಕೊಡಿಸುವಲ್ಲಿ ಸಣ್ಣ ಪ್ರಯತ್ನವನ್ನು ಮಾಡಿರುವುದಿಲ್ಲ. ರಾಜ್ಯದ ವಿಚಾರ ಬಂದಾಗ ರಾಜ್ಯದ ಪರವಾಗಿ ಮಾತನಾಡುವುದಿಲ್ಲ.

ಹೀಗಾಗಿ ಯಾವುದೇ ರಾಜಕೀಯ ಪಕ್ಷದಿಂದಲೂ ಸಹ ಅನ್ಯ ರಾಜ್ಯದವರನ್ನು ರಾಜ್ಯಸಭೆಗೆ ಕಳುಹಿಸಿಕೊಟ್ಟು ಅವರುಗಳಿಗೆ ಕರ್ನಾಟಕ ರಾಜ್ಯ ಆಶ್ರಯದಾತರಾಗಬೇಕಾದಂತಹ ಅವಶ್ಯಕತೆ ಇರುವುದಿಲ್ಲ. ಆದುದರಿಂದ ಈ ಬಾರಿಯಾದರೂ ಅನ್ಯ ರಾಜ್ಯದವರಿಗೆ ಮಣೆ ಹಾಕುವಂತಹ ಸಂಸ್ಕೃತಿಯನ್ನು ಕೈಬಿಡಬೇಕೆಂದು ಒಬ್ಬ ಜವಾಬ್ದಾರಿಯತ ನಾಗರಿಕನಾಗಿ ರಾಷ್ಟ್ರೀಯ ಪಕ್ಷಗಳಿಗೆ ಒತ್ತಾಯಿಸುತ್ತೇನೆ.

ಈ ಹಿಂದೆ ಪಾಟೀಲ ಪುಟ್ಟಪ್ಪನವರಂತಹ ವ್ಯಕ್ತಿಗಳು ನಮ್ಮ ರಾಜ್ಯವನ್ನು ಪ್ರತಿನಿಧಿಸಿದರು. ಅದೇ ರೀತಿಯಲ್ಲಿ ಕಲಾವಿದರಾದ ಬಿ.ಜಯಶ್ರೀ, ಕವಿಗಳಾದ ಎಲ್.ಹನುಮಂತಯ್ಯ ಮುಂತಾದವರು ಪ್ರತಿನಿಧಿಸಿದ ಸಮಾಧಾನ ನಮಗಿರುತ್ತದೆ.

  • ಕೆ.ಎಸ್.ನಾಗರಾಜ್, ಬಸವನಗುಡಿ

Leave a Reply