ವಿಧಾನಸಭೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ದುರುಪಯೋಗ ಕುರಿತು ಚರ್ಚೆ

10 months ago

ಬೆಂಗಳೂರು: ಸದುದ್ದೇಶದಿಂದ ಜಾರಿಗೊಳಿಸಿರುವ ಮಾಹಿತಿ ಹಕ್ಕು ಕಾಯ್ದೆಯನ್ನು ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಪಕ್ಷಭೇದ ಮರೆತು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಶ್ನೋತ್ತರದ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ಬೈಲಹೊಂಗಲದ ಕೌಜಲಗಿ ಮಹಾಂತೇಶ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಕೇಳಿ, ಮಾಹಿತಿ ಹಕ್ಕು ಕಾಯ್ದೆ ದುರುಪಯೋಗಗೊಳ್ಳುತ್ತಿದೆ. ಒಬ್ಬ ವ್ಯಕ್ತಿ ಹಲವು ಪ್ರಶ್ನೆಗಳನ್ನು ಕೇಳಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಬಿಪಿಎಲ್‌ ಅರ್ಜಿದಾರರಿಗೆ 100 ಪುಟಗಳವರೆಗೂ ಉಚಿತವಾಗಿ ಮಾಹಿತಿ ನೀಡಲಾಗುತ್ತಿದೆ. ಆನಂತರ ಪ್ರತಿಪುಟಕ್ಕೆ ಎರಡು ರೂ. ದರ ನಿಗದಿಪಡಿಸಲಾಗಿದೆ. ಇದನ್ನು ಹೆಚ್ಚು ಮಾಡಿ ಎಂದು ಆಗ್ರಹಿಸಿದರು.

ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಉತ್ತರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ಮಾಹಿತಿ ಹಕ್ಕು ಕಾಯ್ದೆ ದುರುಪಯೋಗವಾಗುತ್ತಿರುವುದನ್ನು ಒಪ್ಪಬಹುದಾದರೂ, ದೇಶದ ಆಡಳಿತ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹಾಗೂ ಪಾರದರ್ಶಕತೆಗೆ ಕಾಯ್ದೆ ಅನುಕೂಲವಾಗಿದೆ ಎಂದರು.

ಕಾಯಿದೆ ದುರುಪಯೋಗವನ್ನು ತಡೆಯಲು ನಿಯಮಗಳನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಅವಕಾಶಗಳಿವೆ. ನಿರ್ದಿಷ್ಟ ಪ್ರಕರಣಗಳನ್ನು ಉಲ್ಲೇಖಿಸಿ, ಶಾಸಕರು ಮಾಹಿತಿ ನೀಡಿದರೆ, ಸರ್ಕಾರ ಆ ಬಗ್ಗೆ ಗಮನ ಹರಿಸಲಿದೆ. ಆದರೆ, ಈವರೆಗೂ ಯಾವ ಅಧಿಕಾರಿಯು ಮಾಹಿತಿ ಹಕ್ಕು ದುರುಪಯೋಗದ ಬಗ್ಗೆ ದೂರು ನೀಡಿಲ್ಲ. ಆದರೂ ಸರ್ಕಾರ ಪರಿಶೀಲನೆ ನಡೆಸಿ 26 ಮಂದಿಯನ್ನು ಕಪ್ಪು ಪಟ್ಟಿಗೆ ಸೇರಿಸಿದೆ ಎಂದರು.

ಲೋಕಾಯುಕ್ತರ ದಾಳಿಯ ವೇಳೆ ಸಿಕ್ಕಿಬಿದ್ದಿರುವ ಮಾಹಿತಿ ಆಯುಕ್ತ ರವೀಂದ್ರ ಗುರುನಾಥ್‌ ಅವರನ್ನು ಹುದ್ದೆಯಿಂದ ವಜಗೊಳಿಸಲಾಗಿದೆ. ಮಾಹಿತಿ ನೀಡುವ ದರಗಳನ್ನು ಪರಿಷ್ಕರಣೆ ಮಾಡಲು ಪರಿಶೀಲಿಸುವುದಾಗಿ ಭರವಸೆ ನೀಡಿದರು.

Leave a Reply