ಬೆಂಗಳೂರು: ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳ ಪರಿಹಾರ ಮೊತ್ತ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪಶು ಸಂಗೋಪನ ಸಚಿವ ಪ್ರಭು ಚವ್ಹಾಣ್ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ನ ಬಂಡೆಪ್ಪ ಕಾಶಂಪುರ್ ಪ್ರಶ್ನೆಗೆ ಉತ್ತರಿಸಿದ ಅವರು, ಚರ್ಮಗಂಟು ರೋಗದಿಂದ ಮೃತಪಟ್ಟ ಹಸುವಿಗೆ 20 ಸಾವಿರ, ಕರುಗೆ 5 ಸಾವಿರದಂತೆ 37 ಕೋಟಿ ಪರಿಹಾರ ನೀಡಲಾಗಿದೆ. ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಪರಿಹಾರ ನೀಡಲಾಗುತ್ತಿಲ್ಲ. ನಮ್ಮ ರಾಜ್ಯದಲ್ಲಿ ನೀಡಲಾಗುತ್ತಿದೆ ಎಂದರು.
ಮಲೆನಾಡಿನ ಗಿಡ್ಡ ತಳಿಗೂ ವಿಮೆ: ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ 2022-23ನೇ ಸಾಲಿನಿಂದ ಹಾಲು ಕೊಡುವ ರಾಸುಗಳ ವಿಮೆಯೊಂದಿಗೆ ಎತ್ತು, ಹೋರಿ, ಕೋಣ, ಕುರಿ, ಮೊಲ, ಹಂದಿ ದೇಸಿ ತಳಿ ರಾಸುಗಳನ್ನು ವಿಮೆಗೆ ಒಳಪಡಿಸುವ ಸಂಬಂಧ ವಿಮಾ ಸಂಸ್ಥೆಯನ್ನು ಗುರುತಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಇದಕ್ಕಾಗಿ 14 ಕೋಟಿ ಅನುದಾನ ನಿಗದಿಪಡಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಮಲೆನಾಡಿನ ಗಿಡ್ಡ ತಳಿಯ ರಾಸುಗಳನ್ನು ವಿಮೆಗೆ ಒಳಪಡಿಸಲಾಗುವುದು ಎಂದು ಯು.ಟಿ.ಖಾದರ್ ಪರವಾಗಿ ಸಚಿವ ಪ್ರಭು ಚವ್ಹಾಣ್ ಅವರು ಅಜಯ್ ಧರ್ಮಸಿಂಗ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು.




